
ಗರ್ಭಾವಸ್ಥೆ (Pregnancy) ಯಲ್ಲಿ ಹಲವಾರು ರೀತಿಯ ಆರೋಗ್ಯ (Health) ಸಮಸ್ಯೆಗಳು ಕಂಡುಬರುವುದು ಸಾಮಾನ್ಯ. ಅದರಲ್ಲಿ ಮಲಬದ್ಧತೆಯೂ (Constipation) ಒಂದು. ಈ ರೀತಿ ಸಮಸ್ಯೆ ಸಾಮಾನ್ಯವಾಗಿ ಮೊದಲ ತ್ರೈಮಾಸಿಕದಲ್ಲಿ ಕಂಡುಬರುತ್ತದೆಯಾದರೂ, ಕೆಲವರಲ್ಲಿ ಇದು ಯಾವುದೇ ತ್ರೈಮಾಸಿಕದಲ್ಲಿಯಾದರೂ ಆರಂಭವಾಗಬಹುದು. ಆದರೆ ಇದನ್ನು ಅಲಕ್ಷ್ಯ ಮಾಡುವಂತಿಲ್ಲ. ಏಕೆಂದರೆ ಸಮರ್ಪಕವಾಗಿ ಚಿಕಿತ್ಸೆ ನೀಡದಿದ್ದರೆ, ಇದು ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾದರೆ ಮಲಬದ್ಧತೆ ಸಮಸ್ಯೆ ಗರ್ಭಾವಸ್ಥೆಯಲ್ಲಿ ಕಂಡುಬರುವುದಕ್ಕೆ ಕಾರಣವೇನು? ಇದರಿಂದ ಪರಿಹಾರ ಪಡೆದುಕೊಳ್ಳಲು ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಇಲ್ಲಿದೆ.
ಗರ್ಭಾವಸ್ಥೆಯಲ್ಲಿ ಮಲಬದ್ಧತೆಯ ಸಮಸ್ಯೆ ಸಾಮಾನ್ಯವಾಗಿ ಹೆಚ್ಚಿನ ಮಹಿಳೆಯರಲ್ಲಿ ಕಂಡುಬರುತ್ತದೆ. ಇದಕ್ಕೆ ಪ್ರಮುಖ ಕಾರಣ ಹಾರ್ಮೋನುಗಳ ಬದಲಾವಣೆ. ಆದರೆ, ಈ ರೀತಿ ದೇಹದಲ್ಲಿ ಆಗುವಂತಹ ಬದಲಾವಣೆಗೆ ಚಿಕಿತ್ಸೆ ನೀಡುವಲ್ಲಿ ಎಚ್ಚರಿಕೆ ವಹಿಸಬೇಕು. ಏಕೆಂದರೆ ಈ ಸಮಸ್ಯೆಯನ್ನು ಔಷಧಿಗಳ ಮೂಲಕ ಕಡಿಮೆ ಮಾಡಲು ಪ್ರಯತ್ನಿಸಿದರೆ, ಮುಂದೆ ಹುಟ್ಟಲಿರುವ ಮಗುವಿನ ಮೇಲೆ ಪರಿಣಾಮ ಬೀರುವ ಅಪಾಯವಿರುತ್ತದೆ. ಹಾಗಾಗಿ ಗರ್ಭಾವಸ್ಥೆಯಲ್ಲಿ ಮಲಬದ್ಧತೆಯ ಸಮಸ್ಯೆ ಇದ್ದರೆ, ಯಾವುದೇ ರೀತಿಯ ಔಷಧಿಗಳನ್ನು ತೆಗೆದುಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ. ನಿಮ್ಮಿಷ್ಟದ ಔಷಧಿಗಳನ್ನು ತೆಗೆದುಕೊಳ್ಳುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆ.
ಗರ್ಭಾವಸ್ಥೆಯಲ್ಲಿ ಹಾರ್ಮೋನುಗಳ ಬದಲಾವಣೆಗಳಿಂದ ಮಲಬದ್ಧತೆ ಉಂಟಾಗುತ್ತದೆ. ಹೆಚ್ಚುವರಿಯಾಗಿ, ದೇಹಕ್ಕೆ ಒಗ್ಗದ ಆಹಾರ, ಜೊತೆಗೆ ಫೈಬರ್ ಅಂಶ ಕಡಿಮೆ ಇರುವ ಆಹಾರಗಳ ಸೇವನೆಯು ಈ ಸಮಸ್ಯೆಗೆ ಕಾರಣವಾಗುತ್ತದೆ. ಬೆಳೆಯುತ್ತಿರುವ ಭ್ರೂಣವು ಕರುಳಿನ ಮೇಲೆ ಒತ್ತಡವನ್ನುಂಟು ಮಾಡುತ್ತದೆ, ಇದರಿಂದಾಗಿ ಮಲವು ದೇಹದಿಂದ ಹೊರಹೋಗುವುದು ಕಷ್ಟ. ಕೆಲವೊಮ್ಮೆ, ದೇಹದಲ್ಲಿ ಕಬ್ಬಿಣದ ಅಂಶ ಹೆಚ್ಚಾಗುವುದರಿಂದಲೂ, ನೀರಿನಾಂಶ ಕೊರತೆಯೂ ಕೂಡ ಮಲಬದ್ಧತೆಗೆ ಕಾರಣವಾಗಬಹುದು. ಹಾಗಾಗಿ ಈ ಸಮಸ್ಯೆಯನ್ನು ತಡೆಗಟ್ಟಲು, ವೈದ್ಯರು ಆರಂಭದಿಂದಲೇ ಕೆಲವು ಪರಿಹಾರಗಳನ್ನು ಸೂಚಿಸುತ್ತಾರೆ. ಅವುಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕಾಗುತ್ತದೆ.
ಇದನ್ನೂ ಓದಿ: ಕಣ್ಣುಗಳಲ್ಲಿ ಕಂಡುಬರುವ ತುರಿಕೆ ಈ ರೋಗದ ಆರಂಭಿಕ ಹಂತವಾಗಿರಬಹುದು!
ಗರ್ಭಾವಸ್ಥೆಯಲ್ಲಿ ಮಲಬದ್ಧತೆ ಸಮಸ್ಯೆ ಕಂಡು ಬಂದರೆ ನಿಮ್ಮ ಆಹಾರದಲ್ಲಿ ಫೈಬರ್ ಭರಿತ ಆಹಾರಗಳ ಸೇವನೆಯನ್ನು ಹೆಚ್ಚಿಸಿಕೊಳ್ಳಬೇಕು. ಹೆಚ್ಚುವರಿಯಾಗಿ, ದ್ರವ ರೂಪದ ಆಹಾರಗಳ ಸೇವನೆ ಮಾಡಬೇಕು. ನೀವು ದಿನವಿಡೀ 8 ರಿಂದ 12 ಕಪ್ ನೀರು ಕುಡಿಯಬೇಕು. ವೈದ್ಯರನ್ನು ಸಂಪರ್ಕಿಸದೆ ಮಲಬದ್ಧತೆಯಿಂದ ಪರಿಹಾರ ಪಡೆಯುವುದಕ್ಕೆ ಯಾವುದೇ ರೀತಿಯ ಔಷಧಗಳನ್ನು ಬಳಸಬಾರದು. ಮನೆಮದ್ದುಗಳ ಸೇವನೆ ಮಾಡುವುದನ್ನು ತಪ್ಪಿಸಬೇಕು. ಏಕೆಂದರೆ ವೈದ್ಯರ ಸಲಹೆ ಇಲ್ಲದೆ ಔಷಧಗಳ ಸೇವನೆ ಮಾಡುವುದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಈ ರೀತಿ ಸಮಸ್ಯೆಗಳನ್ನು ತಪ್ಪಿಸಲು ನಿಮ್ಮ ದಿನಚರಿಯಲ್ಲಿ ಒಳ್ಳೆಯ ಆಹಾರಗಳ ಸೇವನೆ, ಲಘು ವ್ಯಾಯಾಮ ಮಾಡುವುದನ್ನು ಮರೆಯಬೇಡಿ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ