ಧನ್ಯಕಾ, ಛತ್ರ, ಕುಸ್ತಂಬರ್, ವಿತುನಿಕ, ವಿಷನಗ್ರ, ಹೃದಯ ಗಂಧ, ಧನಿಯ, ಕೊತ್ತಮಿಲ್ಲಿ, ಕೊತ್ತಿಮಿರಿ, ಹವೀಜ, ಬುರುಡೆ ಬೀಜ (Coriander) ಎಂಬ ಹೆಸರುಗಳಿಂದ ಕರೆಯುತ್ತಾರೆ. ಕೊತ್ತುಂಬರಿ ಸೊಪ್ಪಿಗೆ 3,000 ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ, ನಿತ್ಯವೂ ಆಹಾರದಲ್ಲಿ ಬಳಸುವ ರುಚಿಕರ ಹಾಗೂ ಅತ್ಯಂತ ಸುವಾಸನೆಯುಕ್ತ ಮೂಲಿಕೆ ಇದಾಗಿದೆ. ಇದು ಅಡುಗೆ ಮನೆಯಲ್ಲಿ ಕಾಯಂ ಸ್ಥಾನ ಪಡೆದುಕೊಂಡಿದೆ. ಇದರ ಒಡಲಲ್ಲಿ ಅಪಾರ ಔಷಧೀಯ ಗುಣಗಳು ತುಂಬಿವೆ. ಇದನ್ನು ಪ್ರಪಂಚದಲ್ಲಿ ಎಲ್ಲಾ ಕಡೆ ಅಡುಗೆಯಲ್ಲಿ ಬಳಸುತ್ತಾರೆ. ಪ್ರತಿ ದಿನವು ಕೊತ್ತುಂಬರಿ ಸೊಪ್ಪನ್ನು ಅಡುಗೆಯಲ್ಲಿ (Kitchen) ಬಳಸುವುದರಿಂದ ಅನೇಕ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಒಂದು ಲೋಟ ಮಜ್ಜಿಗೆಯಲ್ಲಿ 1 ಚಮಚ ಕೊತ್ತುಂಬರಿ ಸೊಪ್ಪಿನ ರಸ, 1/4 ಚಮಚ ಜೀರಿಗೆ ಚೂರ್ಣ, 1/4 ಚಮಚ ಕರಿಮೆಣಸಿನ ಚೂರ್ಣ, ಚಿಟಿಕೆ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ, ದೇಹಕ್ಕೆ ಬೇಕಾಗಿರುವ ವಿಟಮಿನ್ ಮತ್ತು ಪೋಷಕಾಂಶಗಳು ಹೇರಳವಾಗಿ ದೊರೆಯುತ್ತವೆ (Coriander health benefits).
ಜೀರ್ಣಕ್ರಿಯೆ ಸುಗುಮಗೊಂಡು, ದೇಹವನ್ನು ತಂಪಾಗಿಡುತ್ತೆ: ಗರ್ಭಿಣಿ ಸ್ತ್ರೀಯರು ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ 2 ಚಮಚ ಕೊತ್ತುಂಬರಿ ಸೊಪ್ಪಿನ ರಸ, 1 ಚಮಚ ನಿಂಬೆ ಹಣ್ಣಿನ ರಸ, ಚಿಟಿಕೆ ಉಪ್ಪು ಕಲಸಿ ಕುಡಿದರೆ ವಾಕರಿಕೆ, ಹೊಟ್ಟೆ ತೊಳಸುವಿಕೆ, ಮಲಬದ್ಧತೆಯಂತಹ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.
ಒಂದು ಲೋಟ ಮೊಸರಲ್ಲಿ 2-3 ಚಮಚ ಕೊತ್ತುಂಬರಿ ಸೊಪ್ಪಿನ ರಸವನ್ನು ಕಲಸಿ ಕುಡಿದರೆ ಹೊಟ್ಟೆಯಲ್ಲಿನ ಉರಿ, ಸಂಕಟ ಶಮನವಾಗುತ್ತೆ. ಕೊತ್ತಂಬರಿ ಸೊಪ್ಪಿನ ಎಲೆಗಳನ್ನು ಜಗಿದು ತಿನ್ನುವುದರಿಂದ ಬಾಯಿ ಹುಣ್ಣು, ದುರ್ವಾಸನೆ ಹೋಗಲಾಡಿಸಬಹುದು. ದೇಹದಲ್ಲಿನ ಕೆಟ್ಟ ಕೊಬ್ಬನ್ನು
ಕರಗಿಸಿ ದೇಹದ ತೂಕವನ್ನು ಕಡಿಮೆ ಮಾಡುತ್ತೆ.
ದಿನವೂ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 50 ಎಂ.ಎಲ್. ಕೊತ್ತುಂಬರಿ ಸೊಪ್ಪಿನ ರಸವನ್ನು ಕುಡಿದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗಿ, ಮಧುಮೇಹ ಹತೋಟಿಗೆ ಬರುತ್ತೆ. ಮಲಬದ್ಧತೆ ನಿವಾರಣೆಯಾಗುತ್ತೆ. ಮೂತ್ರಪಿಂಡದಲ್ಲಿನ ಕಲ್ಲುಗಳು ಕರಗುತ್ತೆ. ಮೂತ್ರ ಸಮಸ್ಯೆಗಳು ದೂರವಾಗುತ್ತೆ. ಕೊತ್ತುಂಬರಿ ಸೊಪ್ಪಿನ ಕಷಾಯ ಮಾಡಿ ಕುಡಿದರೂ ಮಧುಮೇಹ ಹತೋಟಿಗೆ ಬರುತ್ತೆ. ಕೊತ್ತುಂಬರಿ ಸೊಪ್ಪಿನ ರಸಕ್ಕೆ ಶುಂಠಿ ರಸ ಕಲಸಿ ಕುಡಿದರೆ ಶ್ವಾಸಕೋಶ ಸಮಸ್ಯೆಗಳು ದೂರವಾಗುತ್ತೆ. ಮಲ ಮೂತ್ರಗಳ ವಿಸರ್ಜನೆ ಸುಗುಮವಾಗುತ್ತೆ.
1 ಚಮಚ ಧನಿಯ ಪುಡಿಗೆ 1 ಚಮಚ ಕೆಂಪು ಕಲ್ಲು ಸಕ್ಕರೆ ಹಾಕಿ ಸೇವಿಸಿದರೆ ವಾತ ಪಿತ್ತ ಕಫ ನಿವಾರಣೆಯಾಗುತ್ತೆ. ಧನಿಯ ನೆನಸಿದ ನೀರನ್ನು ಕುಡಿಯುವುದರಿಂದ ಪಿತ್ತ ನಿವಾರಣೆಯಾಗುತ್ತೆ.
ಧನಿಯ ಚೂರ್ಣ 1/2 ಚಮಚ, ಒಣ ಶುಂಠಿ ಚೂರ್ಣ 1/2 ಚಮಚ, ನಾಟಿ ಹಸುವಿನ ತುಪ್ಪ 1 ಚಮಚವನ್ನು ಅನ್ನದಲ್ಲಿ ಕಲಸಿ ತಿಂದರೆ ಹೊಟ್ಟೆಯಲ್ಲಿನ ಗ್ಯಾಸ್ ನಿವಾರಣೆಯಾಗುತ್ತೆ. ಮಲಬದ್ಧತೆ ದೂರವಾಗಿ ಮಲ ಸರಾಗವಾಗ ವಿಸರ್ಜನೆಯಾಗುತ್ತದೆ. ಧನಿಯ ಚೂರ್ಣ ಒಂದು ಭಾಗ, ಎರಡು ಭಾಗ ಜೀರಿಗೆ ಚೂರ್ಣಕ್ಕೆ ಸಮನಾಗಿ ಬೆಲ್ಲ ಸೇರಿಸಿ, ಒಂದು ದಪ್ಪ ತಳದ ಪಾತ್ರೆಗೆ ಹಾಕಿ, ಅದಕ್ಕೆ ನೀರನ್ನು ಹಾಕಿ ಒಲೆಯ ಮೇಲಿಟ್ಟು, ಲೇಹ್ಯ ಮಾಡಿಕೊಂಡು, ಬೆಳಗ್ಗೆ ಸಂಜೆ ಊಟಕ್ಕೆ 1/2 ಗಂಟೆ ಮೊದಲು 1 ಚಮಚದಂತೆ ಸೇವಿಸಿದರೆ ಅಧಿಕ ರಕ್ತದೊತ್ತಡ ಕಡಿಮೆಯಾಗುತ್ತೆ.
ಧನಿಯ ಬೀಜದ ಕಷಾಯವನ್ನು ಸಕ್ಕರೆ ಬೆರಸಿದ ಹಾಲಿನಲ್ಲಿ ಕಲಸಿ ಕುಡಿದರೆ ಸುಖದಾಯಕ ನಿದ್ರೆ ಬರುತ್ತೆ. ಧನಿಯ 1/2 ಚಮಚ, ಗಸಗಸೆ 1 ಚಮಚ, ಬಾದಾಮಿ 3-4 ಇವಿಷ್ಟನ್ನೂ ರಾತ್ರಿಯೆಲ್ಲ ನೀರಿನಲ್ಲಿ ನೆನಸಿಟ್ಟು, ಬೆಳಗ್ಗೆ (ಬಾದಾಮಿ ಸಿಪ್ಪೆ ಸುಲಿದು) ನುಣ್ಣಗೆ ಅರೆದು ಉಗುರು ಬೆಚ್ಚಗಿನ ಒಂದು ಲೋಟ ಹಸುವಿನ ಹಾಲಿನಲ್ಲಿ ಕಲಸಿ, ಅದಕ್ಕೆ ಒಂದು ಚಮಚ ಜೇನು ತುಪ್ಪ ಅಥವಾ ಕಲ್ಲು ಸಕ್ಕರೆ ಕಲಸಿ ಕುಡಿದರೆ, ಪುರುಷರಲ್ಲಿ ವೀರ್ಯಾಣು ವೃದ್ಧಿಯಾಗಿ ನಪುಂಸಕತ್ವ ನಿವಾರಣೆಯಾಗಿ, ಲೈಂಗಿಕ ಶಕ್ತಿ ಹೆಚ್ಚುತ್ತದೆ.
ಗಂಟಲು ನೋವಿದ್ದಾಗ ಬಾಯಲ್ಲಿ ಧನಿಯ ಹಾಕಿಕೊಂಡು ಜಗಿದು ರಸ ನುಂಗುತ್ತಿದ್ದರೆ, ಗಂಟಲು ನೋವು ನಿವಾರಣೆಯಾಗುತ್ತೆ. ಧನಿಯ ಹಾಗೂ ಲಾವಂಚದ ಬೇರನ್ನು ಚೂರ್ಣ ಮಾಡಿ ನೀರಲ್ಲಿ ಹಾಕಿ ಚೆನ್ನಾಗಿ ಕುದಿಸಿ ಉಗುರು ಬೆಚ್ಚಗಾದಾಗ ಸೋಸಿ ಕುಡಿದರೆ ಅತಿಸಾರ ಭೇದಿ ನಿಲ್ಲುತ್ತದೆ. ಇತಿ ಕೊತ್ತುಂಬರಿ ಮಹಿಮೆ ಸಂಪೂರ್ಣಂ! (ನಿತ್ಯಸತ್ಯ -ಸಂಗ್ರಹ)
Also Read:
ವೈರಲ್ ಆಡಿಯೋ: ಮಾದೇಗೌಡ ವಿರುದ್ಧ ಅವಹೇಳನಕಾರಿ ಮಾತು ನನ್ನದೇ ಎಂದ ಶಿವರಾಮೇಗೌಡ -ಶಿಸ್ತುಕ್ರಮಕ್ಕೆ ಜೆಡಿಎಸ್ ತೀರ್ಮಾನ?
Also Read:
Health Benefits: ಕೊತ್ತಂಬರಿ ಕಾಳಿನ ವಿಶೇಷತೆಯ ಬಗ್ಗೆ ನೀವು ತಿಳಿದರೆ, ಪ್ರತಿದಿನ ಸೇವಿಸುವ ಅಭ್ಯಾಸ ಮಾಡಿಕೊಳ್ಳುವಿರಿ