
ಆರೋಗ್ಯ ವಲಯದಲ್ಲೂ ಎಐ (AI ) ಹೆಚ್ಚು ಪ್ರಯೋಜನಕಾರಿ ಎಂಬುದು ಸಾಬೀತಾಗುತ್ತಿದೆ. ಇದರ ಸಹಾಯದಿಂದ, ಕಡಿಮೆ ಸಮಯದಲ್ಲಿ ರೋಗಗಳನ್ನು ಪತ್ತೆಹಚ್ಚಲು ಸಹಾಯ ಮಾಡುವ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಕೆಮ್ಮಿನಿಂದಲೇ ಉಸಿರಾಟಕ್ಕೆ ಸಂಬಂಧಪಟ್ಟ ಕಾಯಿಲೆಗಳನ್ನು ಪತ್ತೆಹಚ್ಚುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದ್ದು, ಕೆಮ್ಮಿನ ಶಬ್ದವನ್ನು ಕೇಳುವ ಮೂಲಕ ಉಸಿರಾಟಕ್ಕೆ ಸಂಬಂಧ ಪಟ್ಟ ಕಾಯಿಲೆಗಳನ್ನು ಗುರುತಿಸುತ್ತದೆ. ಈ ಸ್ವಾಸ ಎಂಬ ಎಐ ಅಪ್ಲಿಕೇಶನ್ (AI Tool) ನಿಮಿಷಗಳಲ್ಲಿಯೇ ರಿಪೋರ್ಟ್ ನೀಡುವುದರಿಂದ ರೋಗಗಳನ್ನು ಬೇಗ ಪತ್ತೆ ಹಚ್ಚಬಹುದಾಗಿದೆ. ಈ ತಂತ್ರಜ್ಞಾನವನ್ನು ಏಮ್ಸ್ ಸಹ ಅನುಮೋದಿಸಿದೆ. ಹಾಗಾದರೆ ಈ ಅಪ್ಲಿಕೇಶನ್ ಹೇಗೆ ಕಾರ್ಯನಿರ್ವಹಿಸುತ್ತದೆ, ಇದರಿಂದ ಯಾವ ರೀತಿಯ ಉಪಯೋಗವಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.
ಈ ಎಐ ಆಧಾರಿತ ಅಪ್ಲಿಕೇಶನ್ ಅನ್ನು ಮೊಬೈಲ್ ಫೋನ್ ಮೂಲಕವೇ ಬಳಸಬಹುದಾಗಿದ್ದು, ಫೋನ್ ಮುಂದೆ ಎರಡರಿಂದ ಮೂರು ಬಾರಿ ಕೆಮ್ಮಬೇಕಾಗುತ್ತದೆ. ಅಪ್ಲಿಕೇಶನ್ ಕೆಮ್ಮಿನ ಶಬ್ದವನ್ನು ದಾಖಲಿಸಿ ಎಐ ಅಲ್ಗಾರಿದಮ್ ಬಳಸಿ ಅದನ್ನು ಪತ್ತೆ ಮಾಡುತ್ತದೆ. ಸುಮಾರು 8 ನಿಮಿಷಗಳಲ್ಲಿ ವರದಿಯನ್ನು ಸಿದ್ಧಪಡಿಸುತ್ತದೆ, ಉಸಿರಾಟದ ಕಾಯಿಲೆಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ.
ಇದನ್ನೂ ಓದಿ: ಮುಖ ನೋಡಿದ್ರೆ ಸಾಕು ನಿಮಗಿರುವ ರೋಗ ಹೇಳುತ್ತೆ ಈ ಯಂತ್ರ!
ಡಾ. ಹರ್ಷಲ್ ರಮೇಶ್ ಸಾಲ್ವೆ ಹೇಳುವಂತೆ ಏಮ್ಸ್ ನಲ್ಲಿ ಸುಮಾರು 460 ರೋಗಿಗಳ ಮೇಲೆ ಈ ಪ್ರಯೋಗವನ್ನು ನಡೆಸಲಾಗಿದ್ದು, ಈ ಅಪ್ಲಿಕೇಶನ್ ಆರಂಭಿಕ ಹಂತದ ಆಸ್ತಮಾ ಮತ್ತು ದೀರ್ಘಕಾಲದ ಶ್ವಾಸಕೋಶಕ್ಕೆ ಸಂಬಂಧ ಪಟ್ಟ ಕಾಯಿಲೆಯನ್ನು ಸುಲಭವಾಗಿ ಪತ್ತೆ ಮಾಡುತ್ತದೆ ಎಂಬುದು ಸಂಶೋಧನೆಯಿಂದ ದೃಢಪಟ್ಟಿದೆ. ಕೇವಲ ಕೆಮ್ಮುವಿಕೆಯ ಮೂಲಕ, ರೋಗಿಗೆ ಯಾವ ಉಸಿರಾಟದ ಕಾಯಿಲೆ ಇದೆ ಮತ್ತು ಯಾವ ಮಟ್ಟದಲ್ಲಿದೆ ಎಂಬುದನ್ನು ನಿರ್ಧರಿಸಬಹುದು. ಸಾಮಾನ್ಯವಾಗಿ ಈಗ ನಾವು ಉಸಿರಾಟದ ಕಾಯಿಲೆಗಳನ್ನು ಪತ್ತೆಹಚ್ಚಲು ಎಕ್ಸ್- ರೇ ಮತ್ತು ಸಿಟಿ ಸ್ಕ್ಯಾನ್‌ಗಳನ್ನು ಮಾಡಿಸುತ್ತೇವೆ. ಆದರೆ ಈ ಅಪ್ಲಿಕೇಶನ್‌ನ ಸಹಾಯದಿಂದ, ರೋಗಗಳ ಆರಂಭಿಕ ಹಂತಗಳನ್ನು ಸುಲಭವಾಗಿ ಗುರುತಿಸಬಹುದು. ಸ್ಪೈರೋಮೆಟ್ರಿಯಂತಹ ರೋಗನಿರ್ಣಯ ತಂತ್ರಗಳು ಲಭ್ಯವಿಲ್ಲದ ಪ್ರದೇಶಗಳಲ್ಲಿ ಈ ತಂತ್ರಜ್ಞಾನವು ಸಹಾಯಕವಾಗಿರುತ್ತದೆ. ಭವಿಷ್ಯದಲ್ಲಿ ಇದು ಕ್ಷಯರೋಗವನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ