ಗರ್ಭಿಣಿಯರು ಸೇವಿಸುವ ಆಹಾರ ಅವರ ಮಗುವಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ, ಉತ್ತಮ ಪೌಷ್ಟಿಕಾಂಶಗಳಿರುವ ಆಹಾರವನ್ನು ಸೇವಿಸಲು ಗರ್ಭಿಣಿಯರಿಗೆ ಸೂಚಿಸಲಾಗುತ್ತದೆ. ಗರ್ಭಾವಸ್ಥೆಯಲ್ಲಿ, ಮಹಿಳೆಯರು ತಮ್ಮ ಆಹಾರ ಮತ್ತು ಒಟ್ಟಾರೆ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವನ್ನು ನೀಡುತ್ತಾರೆ. ಸರಿಯಾದ ಆಹಾರದ ಆಯ್ಕೆಯು ತಾಯಿ ಮತ್ತು ಬೆಳೆಯುತ್ತಿರುವ ಮಗುವಿನ ಯೋಗಕ್ಷೇಮದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಗರ್ಭಾವಸ್ಥೆಯಲ್ಲಿ ಮಹಿಳೆಯರು ಸೇವಿಸಲೇಬೇಕಾದ ಆಹಾರಗಳಲ್ಲಿ ಖರ್ಜೂರ ಕೂಡ ಒಂದು. ಇದು ಗರ್ಭಿಣಿಯರಿಗೆ ಹಲವಾರು ಪ್ರಯೋಜನಗಳನ್ನು ನೀಡಬಲ್ಲದು.
ಖರ್ಜೂರದಲ್ಲಿ ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿವೆ. ಇದರಲ್ಲಿ ಫೈಬರ್ ಅಂಶ ಹೆಚ್ಚಾಗಿರುತ್ತದೆ. ಹೀಗಾಗಿ, ಗರ್ಭಿಣಿಯರನ್ನು ಕಾಡುವ ಮಲಬದ್ಧತೆ ಸಮಸ್ಯೆಗೆ ಪರಿಹಾರ ನೀಡುತ್ತದೆ. ಖರ್ಜೂರ ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಕಬ್ಬಿಣದಂತಹ ಪ್ರಮುಖ ಖನಿಜಗಳ ಉತ್ತಮ ಮೂಲವಾಗಿದೆ. ಇದು ಆರೋಗ್ಯಕರ ರಕ್ತದೊತ್ತಡಕ್ಕೆ ಸಹಾಯಕ ಹಾಗೂ ರಕ್ತಹೀನತೆಯನ್ನು ತಡೆಯುತ್ತದೆ.
ಗರ್ಭಾವಸ್ಥೆಯಲ್ಲಿ ಫೋಲಿಕ್ ಆ್ಯಸಿಡ್ ಬಹಳ ಅತ್ಯಗತ್ಯ. ಫೋಲಿಕ್ ಆಮ್ಲದ ನೈಸರ್ಗಿಕ ಮೂಲವನ್ನು ಫೋಲೇಟ್ ಎಂದೂ ಕರೆಯುತ್ತಾರೆ. ಖರ್ಜೂರ ಮಗುವಿನ ನರ ಕೊಳವೆಯ ಆರಂಭಿಕ ಬೆಳವಣಿಗೆಯನ್ನು ಬೆಂಬಲಿಸುವ ಮೂಲಕ ಹಲವು ಸಮಸ್ಯೆಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಕ್ಯಾಲ್ಸಿಯಂ ಮತ್ತು ವಿಟಮಿನ್ ಬಿ6 ಮತ್ತು ಕೆ ಇರುವಿಕೆಯಿಂದ ಖರ್ಜೂರದ ಪೌಷ್ಟಿಕಾಂಶದ ಮೌಲ್ಯ ಮತ್ತಷ್ಟು ಹೆಚ್ಚಾಗಿದೆ.
ಇದನ್ನೂ ಓದಿ: Pregnancy Diet: ಆಯುರ್ವೇದದಲ್ಲಿ ಸೂಚಿಸಲಾದ ಪ್ರಕಾರ ಗರ್ಭಾವಸ್ಥೆಯ ಒಂಬತ್ತು ತಿಂಗಳು ಆಹಾರಕ್ರಮ ಹೇಗಿರಬೇಕು ಗೊತ್ತಾ?
ನಿಮ್ಮ ಶಕ್ತಿಯನ್ನು ಹೆಚ್ಚಿಸಲು ನೈಸರ್ಗಿಕ ಮತ್ತು ಆರೋಗ್ಯಕರ ವಿಧಾನವೆಂದರೆ ಖರ್ಜೂರ ಸೇವಿಸುವುದು. ಅವು ನೈಸರ್ಗಿಕವಾಗಿ ಕಂಡುಬರುವ ಫ್ರಕ್ಟೋಸ್, ಸುಕ್ರೋಸ್ ಮತ್ತು ಗ್ಲೂಕೋಸ್‌ನಂತಹ ಸಕ್ಕರೆ ಅಂಶಗಳನ್ನು ಹೊಂದಿದ್ದು, ಸಂಸ್ಕರಿಸಿದ ಸಕ್ಕರೆಯ ಋಣಾತ್ಮಕ ಪರಿಣಾಮಗಳಿಲ್ಲದೆಯೇ ನಿಮಗೆ ತಕ್ಷಣ ಶಕ್ತಿಯ ವರ್ಧಕವನ್ನು ಒದಗಿಸುತ್ತದೆ. ಗರ್ಭಧಾರಣೆಗೆ ಸಂಬಂಧಿಸಿದ ಆಲಸ್ಯವನ್ನು ನಿವಾರಿಸಲು ಖರ್ಜೂರವನ್ನು ಸ್ಮೂಥಿಗಳಿಗೆ ಸೇರಿಸಬಹುದು. ಅಥವಾ ಆಗಾಗ ಇಡಿಯಾಗಿ ಖರ್ಜೂರವನ್ನು ಸೇವಿಸಬಹುದು.
ಗರ್ಭಾವಸ್ಥೆಯಲ್ಲಿ ಅಜೀರ್ಣ ಮತ್ತು ಮಲಬದ್ಧತೆಯಂತಹ ಜೀರ್ಣಕಾರಿ ಸಮಸ್ಯೆಗಳು ಸಾಮಾನ್ಯವಾಗಿವೆ. ಫೈಬರ್ ಅಂಶ ಹೆಚ್ಚಾಗಿರುವ ಖರ್ಜೂರ ಮಲಬದ್ಧತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಖರ್ಜೂರದಲ್ಲಿ ಟ್ಯಾನಿನ್ ಕೂಡ ಇರುತ್ತದೆ, ಇದು ಜಠರಗರುಳಿನ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಗರ್ಭಾವಸ್ಥೆಯಲ್ಲಿ ತಾಯಿ ಮತ್ತು ಹುಟ್ಟಲಿರುವ ಮಗುವಿನ ಆರೋಗ್ಯಕ್ಕಾಗಿ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ಅವಶ್ಯಕ. ಪೋಷಕಾಂಶಗಳು ಸಮೃದ್ಧವಾಗಿರುವ ಖರ್ಜೂರವು ಗರ್ಭಾವಸ್ಥೆಯಲ್ಲಿ ಆರೋಗ್ಯಕರ ತೂಕ ಹೆಚ್ಚಳವನ್ನು ಉತ್ತೇಜಿಸುತ್ತದೆ. ಗರ್ಭಿಣಿಯಾಗಿದ್ದಾಗ ಖರ್ಜೂರವನ್ನು ತಿನ್ನುವುದರಿಂದ ಹೆರಿಗೆ ಸುಲಭವಾಗುತ್ತದೆ.
ಇದನ್ನೂ ಓದಿ: 65 ವರ್ಷ ವಯಸ್ಸಿನಲ್ಲೂ ಗರ್ಭಿಣಿಯಾಗುತ್ತಾರೆ ಈ ಬುಡಕಟ್ಟಿನ ಮಹಿಳೆಯರು!
ಅಧ್ಯಯನಗಳ ಪ್ರಕಾರ, ಹೆರಿಗೆಯ ಮೊದಲ ಕೆಲವು ವಾರಗಳಲ್ಲಿ ಖರ್ಜೂರವನ್ನು ತಿನ್ನುವುದರಿಂದ ಗರ್ಭಕಂಠದ ವಿಸ್ತರಣೆ ಆಗುತ್ತದೆ. ಖರ್ಜೂರವನ್ನು ತಿನ್ನುವುದರಿಂದ ಡೆಲಿವರಿಗೆ ಸಿದ್ಧವಾಗಲು ಸಹಾಯ ಮಾಡುತ್ತದೆ ಎಂದು ಅನೇಕ ಮಹಿಳೆಯರು ದೃಢವಾಗಿ ನಂಬುತ್ತಾರೆ. ಆದರೆ ಈ ವಿಷಯದ ಬಗ್ಗೆ ಹೆಚ್ಚುವರಿ ಅಧ್ಯಯನದ ಅಗತ್ಯವಿದೆ.
ಖರ್ಜೂರವನ್ನು ಹೇಗೆ ಸೇವಿಸಬೇಕು?:
– ಖರ್ಜೂರವನ್ನು ಸ್ವೀಟ್ ಮತ್ತು ಆರೋಗ್ಯಕರ ತಿಂಡಿಯಾಗಿ ಸೇವಿಸಿ.
– ನೀವು ಕುಡಿಯುವ ಸ್ಮೂಥಿಗೆ ಖರ್ಜೂರವನ್ನು ಮಿಕ್ಸ್ ಮಾಡಿಕೊಳ್ಳಿ.
– ಎನರ್ಜಿ ಬಾರ್‌ಗಳು ಅಥವಾ ಓಟ್‌ಮೀಲ್ ಕುಕೀಗಳಂತಹ ಮನೆಯಲ್ಲಿ ತಯಾರಿಸಿದ ಸಿಹಿತಿಂಡಿಗಳನ್ನು ತಯಾರಿಸಲು ಖರ್ಜೂರವನ್ನು ಸಕ್ಕರೆಯ ಬದಲು ಬಳಸಿ.
– ಬಾದಾಮಿ ಅಥವಾ ಕಡಲೆಕಾಯಿ ಬೆಣ್ಣೆಯೊಂದಿಗೆ ಸ್ಟಫ್ ಮಾಡಿದ ಖರ್ಜೂರವನ್ನು ಸೇವಿಸಿ ನೋಡಿ.
– ಬೆಲ್ಲ, ಸಕ್ಕರೆಯ ಬದಲು ಎಲ್ಲ ಸಿಹಿತಿಂಡಿಗಳಿಗೆ ಖರ್ಜೂರದ ಪೇಸ್ಟ್ ಮಾಡಿಟ್ಟುಕೊಂಡು ಬಳಸಬಹುದು.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ