ತೆಂಗನ್ನು ಕಲ್ಪವೃಕ್ಷ ಎಂದು ಕರೆಯಲಾಗುತದೆ. ಏಕೆಂದರೆ ಈ ವೃಕ್ಷ ಪ್ರತಿಯೊಂದು ಭಾಗವೂ ಉಪಯೋಗಗಕ್ಕೆ ಬರುತ್ತದೆ. ಮಾತ್ರವಲ್ಲದೆ ತೆಂಗಿನಕಾಯಿ, ತೆಂಗಿನೆಣ್ಣೆಯನ್ನು ವಿವಿಧ ಭಕ್ಷ್ಯಗಳನ್ನು ತಯಾರಿಸಲು ಹಾಗೂ ತ್ವಚೆ ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡಲು ಪ್ರತಿನಿತ್ಯ ಬಳಕೆ ಮಾಡಲಾಗುತ್ತದೆ. ಜೊತೆಗೆ ಎಳನೀರನ್ನು ಕೂಡಾ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು. ಕೇವಲ ತೆಂಗಿನೆಣ್ಣೆ, ಎಳನೀರು ಮಾತ್ರವಲ್ಲದೆ ಹಸಿ ತೆಂಗಿನಕಾಯಿ ಸೇವನೆ ಮಾಡುವುದರಿಂದಲೂ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ತೆಂಗಿನಕಾಯಿ ಫೈಬರ್, ಕಬ್ಬಿಣ, ರಂಜಕ, ಸೆಲೆನಿಯಮ್, ವಿಟಮಿನ್ ಸಿ ಮತ್ತು ಇ, ಪೊಟ್ಯಾಸಿಯಂ, ಮೆಗ್ನೇಸಿಯಂ ಮತ್ತು ಕ್ಯಾಲ್ಸಿಯಂ ನಂತಹ ಅನೇಕ ಖನಿಜಗಳು ಮತ್ತು ಪೋಷಕಾಂಶಗಳಿಂದ ಕೂಡಿದೆ. ಈ ಎಲ್ಲಾ ಪೋಷಕಾಂಶಗಳು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಹಾಗಿದ್ದರೆ ವಿಶ್ವ ತೆಂಗು ದಿನವಾದ ಇಂದು (ಸೆ.02) ಪೋಷಕಾಂಶಗಳಿಂದ ಸಮೃದ್ಧವಾಗಿರುವ ಹಸಿ ಕೊಬ್ಬರಿ ಸೇವನೆಯಿಂದ ಲಭಿಸುವ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯೋಣ.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ:
ತೆಂಗಿನಕಾಯಿಯಲ್ಲಿ ಹಲವಾರು ಔಷಧೀಯ ಗುಣಗಳಿದ್ದು, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಇದು ಆಂಟಿವೈರಲ್, ಆಂಟಿ ಫಂಗಲ್, ಆಂಟಿ ಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿದ್ದು, ಇದು ನಮ್ಮ ದೇಹವನ್ನು ಸೋಂಕುಗಳು ಮತ್ತು ಅನೇಕ ರೀತಿಯ ಕಾಯಿಲೆಗಳಿಂದ ರಕ್ಷಿಸುತ್ತದೆ. ಹೀಗೆ ಪ್ರತಿದಿನ ಹಸಿ ತೆಂಗಿನಕಾಯಿ ತಿರುಳನ್ನು ತಿನ್ನುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು.
ಮಲಬದ್ಧತೆಯಿಂದ ಪರಿಹಾರ:
ಕಡಿಮೆ ಫೈಬರ್ ಅಂಶವನ್ನು ಹೊಂದಿರುವ ಆಹಾರವನ್ನು ಸೇವನೆ ಮಾಡುವುದರಿಂದ ಅದು ಮಲಬದ್ಧತೆಗೆ ಕಾರಣವಾಗುತ್ತದೆ. ಈ ತೊಂದರೆಯಿಂದ ಹಸಿ ತೆಂಗಿನಕಾಯಿ ನಿಮಗೆ ಪರಿಹಾರ ನೀಡುತ್ತದೆ. ಇದರಲ್ಲಿ ಉತ್ತಮ ಪ್ರಮಾಣದ ನಾರಿನಾಂಶವಿದ್ದು, ಇದು ಮಲಬದ್ಧತೆಯಿಂದ ಪರಿಹಾರವನ್ನು ನೀಡುತ್ತದೆ. ರಾತ್ರಿ ಮಲಗುವ ಮುನ್ನ ಹಸಿ ತೆಂಗಿನಕಾಯಿ ತಿರುಳನ್ನು ಸೇವನೆ ಮಾಡುವ ಮೂಲಕ ಮಲಬದ್ಧತೆ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ:
ಹಸಿ ತೆಂಗಿನಕಾಯಿಯನ್ನು ಹೃದಯದ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ ಏಕೆಂದರೆ ತೆಂಗಿನಕಾಯಿಯಲ್ಲಿರುವ ಕೊಬ್ಬು, ಆರೋಗ್ಯಕರ ಕೊಬ್ಬಾಗಿದ್ದು, ಇದು ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ ಮತ್ತು ಹೃದಯದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಉತ್ತಮ ನಿದ್ರೆಗೆ ಸಹಕಾರಿ:
ಮಲಗುವ ಸ್ಪಲ್ಪ ಸಮಯದ ಮೊದಲು ಹಸಿ ಕೊಬ್ಬರಿ ತಿನ್ನುವುದರಿಂದ ಉತ್ತಮ ನಿದ್ರೆಯನ್ನು ಪಡೆಯಬಹುದು. ಹಸಿ ತೆಂಗಿಕಾಯಿಯಲ್ಲಿ ಮೆಗ್ನೇಸೀಯಮ್ ಮತ್ತು ಪೊಟ್ಯಾಸಿಯಮ್ ಉತ್ತಮ ಪ್ರಮಾಣದಲ್ಲಿದ್ದು, ಇದು ಸ್ನಾಯುಗಳಿಗೆ ಪ್ರಯೋಜನ ನೀಡುತ್ತದೆ ಮತ್ತು ಉತ್ತಮ ನಿದ್ರೆಯನ್ನು ಪಡೆಯಲು ಸಹಕಾರಿಯಾಗಿದೆ.
ಚರ್ಮಕ್ಕೆ ಸಹ ಪ್ರಯೋಜನಕಾರಿ:
ತೆಂಗಿನಕಾಯಿಯಲ್ಲಿರುವ ಕೊಬ್ಬಿನಾಂಶವು ಚರ್ಮವನ್ನು ಪೋಷಿಸುತ್ತದೆ. ಚರ್ಮವನ್ನು ತೇವಾಭರಿತವಾಗಿ ಇಡುತ್ತದೆ ಮತ್ತು ಚರ್ಮವನ್ನು ಮೃದುಗೊಳಿಸುತ್ತದೆ. ಅಲ್ಲದೆ ಇದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಫಂಗಲ್ ಗುಣಲಕ್ಷಣಗಳು ಮೊಡವೆಗಳಂತಹ ಸಮಸ್ಯೆಗಳಿಂದ ಚರ್ಮವನ್ನು ರಕ್ಷಿಸುತ್ತದೆ.
ತೂಕ ನಷ್ಟಕ್ಕೆ ಸಹಾಯಕ:
ಹಸಿ ತೆಂಗಿನಕಾಯಿಯಲ್ಲಿರುವ ಫೈಬರ್ ಅಂಶ ದೇಹದಿಂದ ಹೆಚ್ಚುವರಿ ಕೊಬ್ಬನ್ನು ಸುಡುವಲ್ಲಿ ಬಹಳಷ್ಟು ಸಹಾಯ ಮಾಡುತ್ತದೆ. ಇದಲ್ಲದೆ ಹಸಿ ತೆಂಗಿನಕಾಯಿ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಜೀರ್ಣಕ್ರಿಯೆಗೆ ಸಹಕಾರಿ:
ಹಸಿ ತೆಂಗಿನಕಾಯಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸಲು ಸಹಕಾರಿಯಾಗಿದೆ. ಇದರಲ್ಲಿ ಕಂಡುಬರುವ ಗುಣಲಕ್ಷಣಗಳು ಆಹಾರವನ್ನು ವೇಗವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಮತ್ತು ಇದು ಉತ್ತಮ ಹೊಟ್ಟೆಯ ಆರೋಗ್ಯ ಮತ್ತು ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: