
ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಆರೋಗ್ಯಕ್ಕೆ ಸಂಬಂಧಿಸಿದ ಹೊಸ ಟ್ರೆಂಡ್‌ವೊಂದು ವೈರಲ್ ಆಗಿದೆ. ಊಟ ಮಾಡುವ 15 ನಿಮಿಷಗಳ ಮೊದಲು ಒಂದು ಚಮಚ ಆಲಿವ್ ಎಣ್ಣೆ ಕುಡಿದರೆ, ಊಟದ ನಂತರ ರಕ್ತದಲ್ಲಿನ ಸಕ್ಕರೆ ಪ್ರಮಾಣ ವೇಗವಾಗಿ ಏರುವುದಿಲ್ಲ ಎಂಬುದು ಈ ಟ್ರೆಂಡ್‌ನಲ್ಲಿರುವ ಪ್ರಮುಖ ಹೇಳಿಕೆ. ಕೆಲವರು ಇದನ್ನು ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಸುಲಭ ಉಪಾಯವೆಂದೂ ಹೇಳುತ್ತಿದ್ದಾರೆ. ಆದರೆ ನಿಜವಾಗಿಯೂ ಆಲಿವ್ ಎಣ್ಣೆ ಕುಡಿಯುವುದರಿಂದ ಮಧುಮೇಹ ನಿಯಂತ್ರಣವಾಗುತ್ತದೆಯೇ ಈ ಬಗ್ಗೆ ವೈದ್ಯರು ಹೇಳುವುದೇನು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
2026ರ ಅಕ್ಟೋಬರ್‌ನಲ್ಲಿ ವೈದ್ಯಕೀಯ ಜರ್ನಲ್ ‘ಡಯಾಬಿಟಿಸ್’ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ವಿಜ್ಞಾನಿಗಳು ಇಲಿಗಳ ಮೇಲೆ ಆಲಿವ್ ಎಣ್ಣೆಯ ಪರಿಣಾಮವನ್ನು ಪರಿಶೀಲಿಸಿದ್ದಾರೆ. ಗ್ಲೂಕೋಸ್ ನೀಡುವ 15 ನಿಮಿಷಗಳ ಮೊದಲು ಇಲಿಗಳಿಗೆ ಆಲಿವ್ ಎಣ್ಣೆ ನೀಡಲಾಗಿತ್ತು. ಆರಂಭದ 15ರಿಂದ 30 ನಿಮಿಷಗಳ ಅವಧಿಯಲ್ಲಿ ಅವುಗಳ ರಕ್ತದಲ್ಲಿನ ಸಕ್ಕರೆ ಪ್ರಮಾಣ ತುಲನಾತ್ಮಕವಾಗಿ ಕಡಿಮೆ ಇರುವುದು ಕಂಡುಬಂದಿತ್ತು. ಇದಕ್ಕೆ ಒಂದು ಕಾರಣ ಹೊಟ್ಟೆಯಿಂದ ಆಹಾರವು ಸಣ್ಣ ಕರುಳಿಗೆ ಸಾಗುವ ಪ್ರಕ್ರಿಯೆ ನಿಧಾನವಾಗಿರುವುದು ಎಂದು ಸಂಶೋಧಕರು ವಿವರಿಸಿದ್ದಾರೆ. ಕೊಬ್ಬಿನ ಅಂಶವು ಆಹಾರ ಹೊಟ್ಟೆಯಿಂದ ಮುಂದೆ ಸಾಗುವ ವೇಗವನ್ನು ನಿಧಾನಗೊಳಿಸಬಹುದು. ಇದರಿಂದ ಗ್ಲೂಕೋಸ್ ಹೀರಿಕೊಳ್ಳುವಿಕೆ ತಡವಾಗಬಹುದು. ಆದರೆ ಇದು ಪ್ರಾಣಿಗಳ ಮೇಲಿನ ಅಧ್ಯಯನವಾಗಿದ್ದು, ಇದೇ ಪರಿಣಾಮ ಮನುಷ್ಯರಲ್ಲೂ ಆಗುತ್ತದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.
ಆಲಿವ್ ಎಣ್ಣೆಯಲ್ಲಿ ಮೊನೊಅನ್‌ಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳು (MUFA) ಇವೆ. ಇವು ಆರೋಗ್ಯಕರ ಕೊಬ್ಬಿನ ಮೂಲವೆಂದು ಪರಿಗಣಿಸಲಾಗುತ್ತದೆ. ಕೊಬ್ಬಿನ ಸೇವನೆಯಿಂದ ಹೊಟ್ಟೆ ಖಾಲಿಯಾಗುವ ಪ್ರಕ್ರಿಯೆ ನಿಧಾನವಾಗಬಹುದು. ಇದರಿಂದ ಊಟದ ನಂತರ ರಕ್ತದಲ್ಲಿನ ಸಕ್ಕರೆಯ ಗರಿಷ್ಠ ಮಟ್ಟ ತಲುಪುವ ಸಮಯ ಬದಲಾಗಬಹುದು. ಆದರೆ 2026ರ ಫೆಬ್ರವರಿಯಲ್ಲಿ ‘ನ್ಯೂಟ್ರಿಷನ್ ರಿವ್ಯೂಸ್’ ಜರ್ನಲ್‌ನಲ್ಲಿ ಪ್ರಕಟವಾದ 51 ನಿಯಂತ್ರಿತ ಅಧ್ಯಯನಗಳ ಮೆಟಾ-ವಿಶ್ಲೇಷಣೆಯಲ್ಲಿ 4,334 ಜನರ ಮಾಹಿತಿಯನ್ನು ಪರಿಶೀಲಿಸಲಾಗಿದೆ. ಆಲಿವ್ ಎಣ್ಣೆ ಸೇವನೆಯಿಂದ ರಕ್ತದಲ್ಲಿನ ಗ್ಲೂಕೋಸ್, ಇನ್ಸುಲಿನ್ ಅಥವಾ HbA1c ಮಟ್ಟಗಳಲ್ಲಿ ಒಟ್ಟಾರೆಯಾಗಿ ಗಮನಾರ್ಹ ಸುಧಾರಣೆ ಕಂಡುಬಂದಿಲ್ಲ. ಹೀಗಾಗಿ ಇದನ್ನು ಮಧುಮೇಹ ನಿಯಂತ್ರಣ ಮಾಡುತ್ತದೆ ಎಂದು ಪರಿಗಣಿಸಲು ಸಾಕಷ್ಟು ವೈಜ್ಞಾನಿಕ ಪುರಾವೆಗಳಿಲ್ಲ.
ಇದನ್ನೂ ಓದಿ: ಸದಾ ಸುಸ್ತು, ಕೈಕಾಲುಗಳಲ್ಲಿ ಜುಮ್ಮೆನಿಸುತ್ತಾ? ಹಾಗಿದ್ರೆ ಈ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬೇಡಿ!
ಒಂದು ದೊಡ್ಡ ಚಮಚ ಆಲಿವ್ ಎಣ್ಣೆಯಲ್ಲಿ ಸುಮಾರು 120 ಕ್ಯಾಲೊರಿ ಮತ್ತು 13.5 ಗ್ರಾಂ ಕೊಬ್ಬು ಇರುತ್ತದೆ. ದಿನಕ್ಕೆ ಮೂರು ಬಾರಿ ಊಟಕ್ಕೂ ಮೊದಲು ಇದನ್ನು ಕುಡಿದರೆ ಹೆಚ್ಚುವರಿಯಾಗಿ ಸುಮಾರು 360 ಕ್ಯಾಲೊರಿಗಳು ದೇಹಕ್ಕೆ ಸೇರುತ್ತವೆ.ಆಹಾರದಲ್ಲಿ ಈಗಾಗಲೇ ಅಡುಗೆ ಎಣ್ಣೆ ಮತ್ತು ತುಪ್ಪದ ಬಳಕೆ ಇರುತ್ತದೆ. ಹೀಗಾಗಿ ಅವುಗಳ ಜೊತೆಗೆ ಹೆಚ್ಚುವರಿಯಾಗಿ ಆಲಿವ್ ಎಣ್ಣೆ ಕುಡಿಯುವುದರಿಂದ ಕ್ಯಾಲೊರಿ ಪ್ರಮಾಣ ಹೆಚ್ಚಾಗಬಹುದು. ಆಲಿವ್ ಎಣ್ಣೆ ಬಳಸಬೇಕೆಂದಿದ್ದರೆ ಈಗ ಬಳಸುತ್ತಿರುವ ಎಣ್ಣೆ ಅಥವಾ ತುಪ್ಪದ ಬದಲಿಗೆ ಮಿತವಾಗಿ ಬಳಸುವುದು ಉತ್ತಮ.
ಆಲಿವ್ ಎಣ್ಣೆಯನ್ನು ನೇರವಾಗಿ ಕುಡಿಯುವ ಬದಲು ಸಲಾಡ್, ತರಕಾರಿ ಅಥವಾ ಇತರ ಆಹಾರಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬಳಸಬಹುದು. ಜೊತೆಗೆ ಆಹಾರದಲ್ಲಿ ನಾರಿನಾಂಶ ಮತ್ತು ಪ್ರೋಟೀನ್ ಇರುವಂತೆ ನೋಡಿಕೊಳ್ಳಬೇಕು. ಸೌತೆಕಾಯಿ, ಟೊಮೆಟೊ, ಕ್ಯಾರೆಟ್, ಮೂಲಂಗಿ ಮತ್ತು ಹಸಿರು ತರಕಾರಿಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಿ. ಬೇಳೆ, ಕಡಲೆ, ಮೊಸರು, ಪನೀರ್ ಮತ್ತು ಮೊಟ್ಟೆಯಂತಹ ಪ್ರೋಟೀನ್ ಮೂಲಗಳನ್ನೂ ಸೇವಿಸಿ. ಊಟದ ನಂತರ ಸ್ವಲ್ಪ ಹೊತ್ತು ನಡೆಯುವುದು ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಸಹಾಯ ಮಾಡಬಹುದು. ಒಟ್ಟಿನಲ್ಲಿ, ಆಲಿವ್ ಎಣ್ಣೆ ಸಮತೋಲಿತ ಆಹಾರದ ಭಾಗವಾಗಬಹುದು. ಆದರೆ ಅದನ್ನು ಕುಡಿಯುವುದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ ಅಥವಾ ತೂಕ ಇಳಿಯುತ್ತದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿಲ್ಲ. ಮಧುಮೇಹ ಇರುವವರು ವೈದ್ಯರು ಸೂಚಿಸಿದ ಔಷಧಿ ಅಥವಾ ಇನ್ಸುಲಿನ್ ನಿಲ್ಲಿಸಿ ಈ ವೈರಲ್ ಟ್ರೆಂಡ್ ಅನುಸರಿಸಬಾರದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ