Weight Loss Diet: ಮಾವಿನ ಹಣ್ಣು ತಿನ್ನುವುದರಿಂದ ದೇಹ ತೂಕ ಹೆಚ್ಚಾಗುತ್ತದೆಯೇ? ತಜ್ಞರ ಅಭಿಪ್ರಾಯ?

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 14, 2023 | 1:41 PM

ಮಾವಿನ ಹಣ್ಣನ್ನು ತಿನ್ನುವುದರಿಂದ ದೇಹ ತೂಕ ಹೆಚ್ಚಾಗುತ್ತದೆ ಎಂದು ಅನೇಕ ಜನರು ಭಾವಿಸುತ್ತಾರೆ. ಈ ಮಿಥ್ಯದ ಬಗ್ಗೆ ಪೌಷ್ಟಿಕತಜ್ಞೆ ಸಿಮ್ರುನ್ ಚೋಪ್ರಾ ಹಂಚಿಕೊಂಡಿರುವ ಮಾಹಿತಿ ಇಲ್ಲಿದೆ.

Weight Loss Diet: ಮಾವಿನ ಹಣ್ಣು ತಿನ್ನುವುದರಿಂದ ದೇಹ ತೂಕ ಹೆಚ್ಚಾಗುತ್ತದೆಯೇ? ತಜ್ಞರ ಅಭಿಪ್ರಾಯ?
ಸಾಮದರ್ಭಿಕ ಚಿತ್ರ
Follow us on

ಹಣ್ಣುಗಳ ರಾಜ ಮಾವು ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಎಲ್ಲರೂ ಬಾಯಿ ಚಪ್ಪರಿಸಿಕೊಂಡು ಈ ಹಣ್ಣನ್ನು ತಿನ್ನುತ್ತಾರೆ. ಅದರಲ್ಲೂ ಈ ಸುಡು ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸಲು ಮಾವಿನ ಹಣ್ಣನ್ನು ತಿನ್ನಲು ಹೆಚ್ಚಿನವರು ಬಯಸುತ್ತಾರೆ. ಆದರೆ ಇನ್ನೂ ಕೆಲವರು ಮಾವಿನಹಣ್ಣನ್ನು ತಿನ್ನುವುದಿಂದ ತೂಕ ಹೆಚ್ಚಾಗುತ್ತದೆ ಎಂಬ ಕಾರಣದಿಂದ ಅದನ್ನು ತಿನ್ನಲು ಹಿಂಜರಿಯುತ್ತಾರೆ. ಎಲ್ಲರೂ ಮಾವಿನ ಹಣ್ಣನ್ನು ತಿನ್ನುವುದು ಸರಿಯೇ? ಈ ಹಣ್ಣು ತಿನ್ನುವುದರಿಂದ ದೇಹ ತೂಕ ಹೆಚ್ಚಾಗುತ್ತದೆ ಎನ್ನುವ ಅನೆಕ ತಪ್ಪು ಕಲ್ಪನೆಗಳಿವೆ. ನೀವು ತೂಕ ಇಳಿಸಿಕೊಳ್ಳುವ ಆಹಾರಕ್ರಮವನ್ನು ಪಾಲಿಸುತ್ತಿದ್ದರೆ, ನೀವು ಮಾವಿನ ಹಣ್ಣನ್ನು ಸೇವಿಸಬಹುದುದೇ ಅಥವಾ ಇಲ್ಲವೇ ಎಂಬ ಬಗ್ಗೆ ನಿಮ್ಮಲ್ಲಿ ಕೆಲವು ಗೊಂದಲಗಳು ಮೂಡಬಹುದು. ಈ ಮಾವಿನ ಹಣ್ಣಿನ ಬಗ್ಗೆ ಇರುವ ಅನೇಕ ಮಿಥ್ಯಗಳ ಬಗ್ಗೆ ಪೌಷ್ಟಿಕತಜ್ಞೆ ಸಿಮ್ರುನ್ ಚೋಪ್ರಾ ಅವರು ತಮ್ಮ ಇನ್ಟಾಗ್ರಾಮ್ ರೀಲ್ಸ್​​ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ತೂಕ ನಷ್ಟಕ್ಕೆ ಮಾವು ಉತ್ತಮವೇ?

ಮಾವಿನ ಹಣ್ಣುಗಳು ನಮ್ಮ ದೇಹಕ್ಕೆ ಸಾಕಷ್ಟು ಪ್ರಯೋಜನಗಳನ್ನು ನೀಡಬಲ್ಲವು ಮತ್ತು ಕೆಲವು ಸಂದರ್ಭಗಳಲ್ಲಿ ತೂಕ ನಷ್ಟಕ್ಕೂ ಕೂಡಾ ಇದು ಸಹಾಯ ಮಾಡಬಹುದು.

ಹೆಚ್ಚು ಮಾವಿನ ಹಣ್ಣು ಅಥವಾ ಬಾಳೆಹಣ್ಣುಗಳನ್ನು ಸೇವಿಸುವುದರಿಂದ ಸ್ಥೂಲಕಾಯತೆ ಅಥವಾ ತೂಕ ಹೆಚ್ಚಾಗುವುದಿಲ್ಲ. ನೀವು ಕ್ಯಾಲೋರಿಗಳನ್ನು ಸುಡುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲೋರಿಗಳನ್ನು ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ ಎಂದು ಪೌಷ್ಟಿಕ ತಜ್ಞರು ಹೇಳುತ್ತಾರೆ. ಮಾವಿನ ಹಣ್ಣಿನಲ್ಲಿ ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಪೈಬರ್ ಅಂಶಗಳಿವೆ. ಇದು ಹಸಿವಿನ ಸಂಕಟವನ್ನು ದೂರವಿರಿಸುತ್ತದೆ ಮತ್ತು ಹೆಚ್ಚು ಕಾಲ ನಿಮ್ಮ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಮತ್ತು ಮಾವಿನ ಹಣ್ಣುಗಳು ತುಲನಾತ್ಮಕವಾಗಿ ಹೆಚ್ಚಿನ ಪ್ರಮಾಣದ ನೈಸರ್ಗಿಕ ಸಕ್ಕರೆಯನ್ನು ಹೊಂದಿರುತ್ತವೆ. ಜೊತೆಗೆ ಮಾವಿನ ಹಣ್ಣಿನಲ್ಲಿರುವ ಫೈಬರ್ ಅಂಶವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ತೂಕ ನಷ್ಟಕ್ಕೆ ಮಾವಿನಹಣ್ಣನ್ನು ತಿನ್ನಲು ಉತ್ತಮ ಸಮಯ ಯಾವುದು?

ಅನೇಕರು ಊಟದ ನಂತರ ಮಾವಿನ ಹಣ್ಣನ್ನು ಸೇವಿಸುತ್ತಾರೆ. ಈ ಅಬ್ಯಾಸ ಒಳ್ಳೆಯದಕ್ಕಿಂತ ಹೆಚ್ಚು ಹಾನಿಯನ್ನು ಉಂಟುಮಾಡುತ್ತದೆ. ಊಟದ ನಂತರ ಮಾವಿನಹಣ್ಣನ್ನು ಸೇವಿಸುವುದನ್ನು ತಪ್ಪಿಸಬೇಕು. ಏಕೆಂದರೆ ಇದು ತೂಕ ಹೆಚ್ಚಾಗಲು ಕಾರಣವಾಗಬಹುದು. ವಿಶೇಷವಾಗಿ ನೀವು ತೂಕವನ್ನು ಇಳಿಸಿಕೊಳ್ಳುವ ಆಹಾರ ಕ್ರಮವನ್ನು ಅನುಸರಿಸುತ್ತಿದ್ದರೆ, ಮಾವಿಹಣ್ಣನ್ನು ಬೆಳಗ್ಗೆ ಅಥವಾ ಸಂಜೆಯ ಲಘು ಆಹಾರವಾಗಿ ತಿನ್ನಲು ತಜ್ಞರು ಸಲಹೆಯನ್ನು ನೀಡುತ್ತಾರೆ.

ಮಾವಿನಹಣ್ಣು ಆರೋಗ್ಯಕರವೇ? ಮಾವಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು:

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:

ಮಾವಿನಹಣ್ಣುಗಳು ಉತ್ಕರ್ಷಣ ನಿರೋಧಕಗಳು, ವಿಟಮಿನ್‌ಗಳು, ಖನಿಜಗಳು, ಫೈಬರ್‌ಗಳು ಮತ್ತು ಫೈಟೊನ್ಯೂಟ್ರಿಯಂಟ್‌ಗಳಿಂದ ಸಮೃದ್ಧವಾಗಿದೆ ಎಂದು ಸಿಮ್ರುನ್ ಹೇಳುತ್ತಾರೆ. ಮಾವಿನ ಹಣ್ಣುಗಳು ವಿಶೇಷವಾಗಿ ವಿಟಮಿನ್ ಸಿ ಅಂಶದಿಂದ ತುಂಬಿರುತ್ತದೆ. ಇದು ನಮ್ಮ ದೇಹವನ್ನು ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಹಾಗೂ ಇದು ವಿಟಮಿನ್ ಕೆ, ಇ ಮತ್ತು ಬಿ ಯ ಜೊತೆಗೆ ತಾಮ್ರ ಮತ್ತು ಫೋಲೇಟ್ ಅಂಶವನ್ನು ಹೊಂದಿರುತ್ತದೆ. ಇದು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಗೆ ಸಹಾಯ ಮಾಡುತ್ತದೆ.

ಇದು ನಿಮ್ಮ ಕಣ್ಣುಗಳಿಗೆ ಒಳ್ಳೆಯದು:

ಮಾವಿನಹಣ್ಣಿನಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಎ ಅಂಶವಿದೆ. ಇದು ನಿಮ್ಮ ದೃಷ್ಟಿಯನ್ನು ಸುಧಾರಿಸಲು ಮತ್ತು ಇರುಳು ಕುರುಡಿನಂತಹ ಅಪಾಯಕಾರಿ ಪರಿಸ್ಥಿತಿ ಬರದೆ ಇರಲು ಸಹಾಯ ಮಾಡುತ್ತದೆ. ಜೊತೆಗೆ ಇದು ಇತರ ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ.

ಇದನ್ನೂ ಓದಿ: Weight Loss Diets: ತೂಕ ಇಳಿಸಲು ಇಲ್ಲಿವೆ 5 ಉತ್ತಮ ಡಯಟ್ ಪ್ಲಾನ್

ಹೃದಯದ ಆರೋಗ್ಯವನ್ನು ಬೆಂಬಲಿಸುತ್ತದೆ:

ಮಾವಿನಹಣ್ಣಿನಲ್ಲಿರುವ ಮೆಗ್ನೇಸಿಯಮ್ ಮತ್ತು ಪೊಟ್ಯಾಸಿಯಮ್ ಅಂಶವು ರಕ್ತದ ಹರಿವು ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಾಗೂ ಮಾವಿನಹಣ್ಣು ಇತರ ಹಲವಾರು ಸಂಯುಕ್ತಗಳು ಮತ್ತು ಉತ್ಕರ್ಷಣ ನಿರೋಧಕ ಅಂಶಗಳನ್ನು ಹೊಂದಿದೆ. ಇದು ಆರೋಗ್ಯಕರ ಹೃಯದವನ್ನು ಮಾತ್ರವಲ್ಲದೆ ಕೊಲೆಸ್ಟಾಲ್ ಮಟ್ಟವನ್ನು ಕೂಡಾ ನಿಯಂತ್ರಣದಲ್ಲಿಡುತ್ತದೆ.

ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ:

ಪೌಷ್ಟಿಕತಜ್ಞರ ಪ್ರಕಾರ, ಮಾವಿನಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ನೀರು ಮತ್ತು ಫೈಬರ್ ಅಂಶ ಇರುವುದರಿಂದ ಅದು ಕರುಳಿನ ಆರೋಗ್ಯವನ್ನು ಬೆಂಬಲಿಸುತ್ತದೆ. ಮಾವಿನ ಹಣ್ಣಿನಲ್ಲಿ ಅಮೈಲೇಸ್ ಎಂಬ ಜೀರ್ಣಕಾರಿ ಕಿಣ್ವಗಳಿವೆ. ಇದು ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳ ವಿಭಜನೆಗೆ ಸಹಾಯ ಮಾಡುತ್ತದೆ ಮತ್ತು ಸುಗಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

 

 

Published On - 1:40 pm, Fri, 14 April 23