ಚಿಕ್ಕ ಮಕ್ಕಳಿರುವ ಮನೆಯನ್ನು ನೀವು ನೋಡಿರಬಹುದು. ಊಟ -ತಿಂಡಿ ಮಾಡಿಸಲು ಮನೆಯವರ ಒದ್ದಾಟ, ಬಹುಶಃ ಅವರು ಬೆಳೆದು ದೊಡ್ಡವರಾಗುವವರೆಗೂ ಮುಗಿಯುವುದಿಲ್ಲ. ಇನ್ನು ಕೆಲವು ಪೋಷಕರಿಗೆ, ತಮ್ಮ ಮಕ್ಕಳು ಆರೋಗ್ಯಕರ ಆಹಾರವನ್ನು ತಿನ್ನುವುದಿಲ್ಲ ಎಂಬುದೇ ದೊಡ್ಡ ಸಮಸ್ಯೆಯಾಗಿರುತ್ತದೆ. ಮಕ್ಕಳು ಪೌಷ್ಟಿಕವಾದ ಆಹಾರದ ಬಗ್ಗೆ ದ್ವೇಷ ಬೆಳೆಸಿಕೊಂಡಿರುತ್ತಾರೆ. ಆದರೆ ಈ ಸಮಸ್ಯೆ ನಮ್ಮ ಮನೆಯಲ್ಲಿ ಮಾತ್ರ ಎಂದು ನಾವು ಅಂದುಕೊಳ್ಳುತ್ತೇವೆ ಆದರೆ ಹೆಚ್ಚಿನ ಮನೆಗಳಲ್ಲಿ ಇದೆ ಸಮಸ್ಯೆ ಸಾಮಾನ್ಯವಾಗಿರಬಹುದು ಎಂದು ಸಂಶೋಧನೆ ತೋರಿಸುತ್ತದೆ. ತಮ್ಮ ಮಗು ತರಕಾರಿಗಳು ಅಥವಾ ಹಣ್ಣುಗಳನ್ನು ನಿರಾಕರಿಸಿದಾಗ ಪೋಷಕರು ನಿರಾಶೆ ಅಥವಾ ಕಾಳಜಿ ವಹಿಸುವುದು ಸುಲಭವಾದರೂ, ಈ ನಡವಳಿಕೆಯು ಮಕ್ಕಳ ಬೆಳವಣಿಗೆಯಲ್ಲಿ ಸಾಮಾನ್ಯವಾಗಿದೆ ಇದು ಕ್ಷಣಿಕ ಎಂಬುದನ್ನು ನೆನಪಿನಲ್ಲಿಡುವುದು ಮುಖ್ಯ. ತಟ್ಟೆಯಲ್ಲಿ ಬಗೆ ಬಗೆಯ, ರುಚಿ ರುಚಿಯಾಗಿ, ಹೊಚ್ಚ ಹೊಸ ವಿನ್ಯಾಸ ಮಾಡುವ ಮೂಲಕ, ಊಟದ ಪ್ರಕ್ರಿಯೆಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವ ಮೂಲಕ, ಚಿಕ್ಕ ವಯಸ್ಸಿನಿಂದಲೇ ಆರೋಗ್ಯಕರ ಆಹಾರದ ಬಗ್ಗೆ ಉತ್ಸಾಹವನ್ನು ಬೆಳೆಸಿಕೊಳ್ಳುವುದರಿಂದ, ಮಗುವಿನಲ್ಲಿ ಆರೋಗ್ಯಕರ ಆಹಾರ ಪದ್ಧತಿಯನ್ನು ಬೆಳೆಸಿದ ಹಾಗಾಗುತ್ತದೆ. ಜೊತೆಗೆ ಮಕ್ಕಳ ಬೆಳವಣಿಗೆ ಸಹಾಯ ಮಾಡುತ್ತದೆ.
ಮಗುವು ಸಮತೋಲಿತ ಆಹಾರವನ್ನು ಸೇವಿಸಲು ಪೋಷಕರು ತೆಗೆದುಕೊಳ್ಳಬಹುದಾದ ಕೆಲವು ಪ್ರಮುಖ ಆಹಾರ ಕ್ರಮಗಳ ಅಥವಾ ಸಲಹೆ ಬಗ್ಗೆ ಇಲ್ಲಿದೆ ಮಾಹಿತಿ. ಸಮತೋಲಿತ ಆಹಾರವನ್ನು ಸೇವಿಸಲು ಮಗುವನ್ನು ಹೇಗೆ ಪ್ರೋತ್ಸಾಹಿಸಬಹುದು?
1. ಮಕ್ಕಳಿಗೆ ಆಹಾರ ಪದ್ಧತಿಯನ್ನು ಆಯೋಜಿಸಿ:
ಸೂಕ್ತ ಪೌಷ್ಠಿಕಾಂಶವನ್ನು ಕಾಪಾಡಿಕೊಳ್ಳಲು ಮತ್ತು ಮಕ್ಕಳಲ್ಲಿ ಮನಸ್ಥಿತಿಯ ಬದಲಾವಣೆಗಳನ್ನು ತಡೆಗಟ್ಟಲು, ಪ್ರತಿ ಮೂರರಿಂದ ನಾಲ್ಕು ಗಂಟೆಗಳಿಗೊಮ್ಮೆ ಅಂದರೆ ಮೂರು ರೀತಿಯ ಊಟ, ಎರಡು ರೀತಿಯ ತಿಂಡಿಗಳು ಮತ್ತು ಸಾಕಷ್ಟು ದ್ರವ ಪದಾರ್ಥದ ಸೇವನೆಯನ್ನು ಒಳಗೊಂಡ ಆಹಾರ ದಿನಚರಿಯನ್ನು ರಚಿಸುವುದು ಬಹಳ ಮುಖ್ಯ. ಈ ನಿಯಮಿತ ಪೋಷಣೆಯು ನಿಮ್ಮ ಮಗುವಿನ ಆಹಾರವು ಸಮತೋಲಿತವಾಗಿರಲು ನೋಡಿಕೊಳ್ಳುತ್ತದೆ ಮತ್ತು ಮಕ್ಕಳು ಮಾಡುವ ಗದ್ದಲವನ್ನು ಕಡಿಮೆ ಮಾಡುತ್ತದೆ.
2. ಸಮತೋಲಿತ ಆಹಾರವನ್ನು ತಯಾರಿಸಿ:
ನಿಮ್ಮ ಮಗುವಿಗೆ ಊಟ ತಿಂಡಿ ನೀಡಬೇಕೆಂದು ಒತ್ತಡಕ್ಕೆ ಒಳಗಾಗಬೇಡಿ, ಬದಲಿಗೆ ಸಮತೋಲನವನ್ನು ಸಾಧಿಸುವತ್ತ ಗಮನ ಹರಿಸಿ. ಬ್ರೆಡ್, ಅಕ್ಕಿ, ತರಕಾರಿಗಳು ಮತ್ತು ಚೀಸ್ ಅಥವಾ ಬೀನ್ಸ್ ನಂತಹ ಪ್ರೋಟೀನ್ ಜೊತೆಗೆ ಧಾನ್ಯದ ಆಯ್ಕೆಗಳನ್ನು ಸೇರಿಸಿಕೊಳ್ಳಿ. ಇದನ್ನು ಮಗುವಿಗೆ ಗೊತ್ತಾಗದಂತೆ ಆಹಾರದಲ್ಲಿ ಸೇರಿಸಿ ಅಥವಾ ಮಗು ಇಷ್ಟ ಪಡುವ ಆಹಾರದ ಜೊತೆಯಲ್ಲಿಯೇ ಸೇರಿಸಿ ಕೊಡಿ.
3. ನಿಮ್ಮ ಮಕ್ಕಳ ತಿನ್ನುವ ಬಗ್ಗೆ ತೀರ್ಪು ನೀಡುವುದನ್ನು ತಪ್ಪಿಸಿ:
ಮಕ್ಕಳು ಸೇವಿಸುವ ಆಹಾರದ ಪ್ರಕಾರಗಳು ಅಥವಾ ಪ್ರಮಾಣಗಳ ಬಗ್ಗೆ ಟೀಕೆಗಳನ್ನು ಮಾಡುವುದನ್ನು ತಪ್ಪಿಸಿ. ಪೌಷ್ಟಿಕ ಆಹಾರವನ್ನು ಬಡಿಸುವ ಮೂಲಕ ಪೋಷಕರಾಗಿ ನಿಮ್ಮ ಜವಾಬ್ದಾರಿಯನ್ನು ನೀವು ಸರಿಯಾಗಿ ಪೂರೈಸಿದ್ದೀರಿ ಎಂಬುದನ್ನು ಎಂದಿಗೂ ನೆನಪಿಡಿ, ಮತ್ತು ಅವರು ಏನು ತಿನ್ನುತ್ತಾರೆ ಎಂಬುದನ್ನು ನಿರ್ಧರಿಸುವುದು ನಿಮ್ಮ ಮಕ್ಕಳಿಗೆ ಬಿಟ್ಟದ್ದು. ಅವರು ಇದೆ ತರಕಾರಿ ತಿನ್ನಬೇಕು ಎಂದು ನಿರಂತರವಾಗಿ ಸೂಚನೆ ನೀಡುತ್ತಿದ್ದರೇ, ನಿಮ್ಮ ಮಗುವಿನಿಂದ ನೀವು ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಹಾಗಾಗಿ ಯಾವುದಕ್ಕೂ ಒತ್ತಾಯ ಮಾಡಬೇಡಿ. ತುಂಬಾ ಚಿಕ್ಕ ಮಗು ತಿಳಿಯುವುದಿಲ್ಲ ಎಂಬ ಸಂದರ್ಭದಲ್ಲಿ ಮಾತ್ರ ತರಕಾರಿಗಳನ್ನು ದ್ರವ ರೂಪದಲ್ಲಿ ಕೊಡಲು ಪ್ರಯತ್ನಿಸಿ.
ಇದನ್ನೂ ಓದಿ: ಚೆರ್ರಿ ಟೊಮೆಟೊದಿಂದ ಅದ್ಭುತ ಆರೋಗ್ಯ ಪ್ರಯೋಜನ ಇಲ್ಲಿದೆ
4. ಮಕ್ಕಳಿಗೆ ಹೊಸ ಆಹಾರಗಳಿಗೆ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ:
ಮಕ್ಕಳು ಅಪರಿಚಿತ ರುಚಿಗಳನ್ನು ಇಷ್ಟಪಡುವುದು ಸಹಜ. ಕೆಲವೊಮ್ಮೆ ಆಹಾರಗಳ ರುಚಿಯನ್ನು ಮೆಚ್ಚುವ ಮೊದಲು ಹೊಂದಿಕೊಳ್ಳಲು ಕೆಲವರಿಗೆ ಸಮಯ ಬೇಕಾಗುತ್ತದೆ ಎಂಬುದನ್ನು ಮಕ್ಕಳಿಗೆ ನೆನಪಿಸಬೇಕು. ಮಗು ಸಾಕಷ್ಟು ಪೋಷಕಾಂಶಗಳನ್ನು ಪಡೆಯುತ್ತಿಲ್ಲ ಎಂದು ನಿಮಗೆ ಪದೇ ಪದೇ ಅನಿಸುತ್ತಿದ್ದರೇ, ತಕ್ಷಣ ನಿಮ್ಮ ಮಕ್ಕಳನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿ ಅವರ ಬಳಿ ಚರ್ಚಿಸಿ.
5. ಮಕ್ಕಳಿಗೆ ಆಹಾರದ ಬಗ್ಗೆ ಹೆಚ್ಚಿನ ಉತ್ಸಾಹ ಬರುವಂತೆ ಮಾಡಿ:
ಪೌಷ್ಟಿಕ ಆಹಾರ ತಿನ್ನಲು ಮಕ್ಕಳಿಗೆ ಹೆಚ್ಚಿನ ಉತ್ಸಾಹ ಬರುವಂತೆ ಮಾಡಿ. ಆಗ ಮಕ್ಕಳು ಸಂತೋಷವಾಗಿರುತ್ತಾರೆ ಮತ್ತು ಬಳಿಕ ಆರೋಗ್ಯಕರ ಆಹಾರವನ್ನು ಸೇವಿಸುವಲ್ಲಿ ತೊಡಗುತ್ತಾರೆ. ಮಕ್ಕಳ ಜೊತೆ ವಾದ ಮಾಡದೆಯೇ ಆ ತರಕಾರಿಯ ಪ್ರಯೋಜನಗಳ ಬಗ್ಗೆ ತಿಳಿಸಿ. ಆ ತರಕಾರಿ ಅಥವಾ ಹಣ್ಣಿನಿಂದ ಬಾಯಿ ಚಿಪ್ಪರಿಸುವ ಅಡಿಗೆ ಮಾಡಿ ಒಂದು ಬಾರಿ ತಿನ್ನಿಸಿ. ಸಾಧ್ಯವಾದರೆ ಅದು ಯಾವುದರಿಂದ ಮಾಡಿದ್ದು ಎಂಬುದನ್ನು ಹೇಳಬೇಡಿ. ತಿಂದ ಬಳಿಕ ಹೇಳಿ.
6. ಅಡುಗೆಯಲ್ಲಿಯೂ ಆಸಕ್ತಿ ಬರುವಂತೆ ಮಾಡಿ:
ನಿಮ್ಮ ಮಕ್ಕಳು ಊಟವನ್ನು ಆಯ್ಕೆ ಮಾಡುವ ಅಥವಾ ತಯಾರಿಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ, ಅವರು ಮಾಡಿದ್ದನ್ನು ಅಥವಾ ಅವರು ಸಹಾಯ ಮಾಡಿದ್ದನ್ನು ಅವರಿಗೆ ಸೇವಿಸಲು ಕೊಡುವ ಮೂಲಕ ಅವರ ಆಸಕ್ತಿ ಬೆಳೆಸಿ. ಅಥವಾ ನೀವು ಸೂಪರ್ ಮಾರ್ಕೆಟ್ಗಳಿಗೆ ಹೋಗುವಾಗ ಅವರನ್ನು ಕರೆದುಕೊಂಡು ಹೋಗಿ. ಅಲ್ಲಿ ಅವರು ತಮಗೆ ಬೇಕಾದ ತರಕಾರಿ, ಹಣ್ಣು, ತಿಂಡಿಯನ್ನು ಕೈಯಿಂದ ಆರಿಸಿಕೊಳ್ಳಬಹುದು. ಅವರು ಸೂಕ್ತ ವಯಸ್ಸಿನವರಾಗಿದ್ದರೆ, ತರಕಾರಿಗಳನ್ನು ಕತ್ತರಿಸಿ ಸಲಾಡ್ನಲ್ಲಿ ಸೇರಿಸಲು ಅವರಿಗೆ ಅವಕಾಶ ನೀಡಿ. ಈ ರೀತಿಯಾಗಿ, ಅವರು ಅಡುಗೆ ಮತ್ತು ತಿನ್ನುವ ವಿಷಯದಲ್ಲಿ ಆಸಕ್ತಿಯನ್ನು ಜೊತೆಯಾಗಿ ಬೆಳೆಸಿಕೊಳ್ಳುತ್ತಾರೆ.
7. ಅವರ ನೆಚ್ಚಿನ ಆಹಾರಗಳನ್ನು ತಿನ್ನಲು ನೀಡಿ:
ಪಿಜ್ಜಾ, ಬರ್ಗರ್, ಫ್ರೈಸ್, ಚಿಪ್ಸ್ ಅಥವಾ ಕೇಕ್ಗಳಂತಹ ತಮ್ಮ ನೆಚ್ಚಿನ ಆಹಾರಗಳನ್ನು ಒಮ್ಮೆ ತಿನ್ನಲು ಅವರಿಗೆ ಅವಕಾಶ ನೀಡಬೇಕು. ಬಳಿಕ ಚೆನ್ನಾಗಿ ತಿನ್ನುವ ಬಗ್ಗೆ ಸಕಾರಾತ್ಮಕ ವಿಧಾನವನ್ನು ಬೆಳೆಸಿಕೊಳ್ಳಲು, ಜೊತೆಗೆ ಪೋಷಕರಾದವರು ಮಕ್ಕಳಿಗೆ ಹೇಗೆ ಸಹಾಯ ಮಾಡಬೇಕು ಎಂಬುದರ ಕುರಿತು ನಿಮಗೆ ಮಾರ್ಗದರ್ಶನ ನೀಡುವ ತಜ್ಞರ ಸಹಾಯವನ್ನು ತೆಗೆದುಕೊಳ್ಳಿ.
ಈ ಸಲಹೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ನಿಮ್ಮ ಮಗುವಿಗೆ ಉತ್ತಮ ಆಹಾರ ಪದ್ಧತಿಯನ್ನು ಬೆಳೆಸಿಕೊಳ್ಳಲು ನೀವು ಸಹಾಯ ಮಾಡಬಹುದು. ನಿಮ್ಮ ಮಗು ಇನ್ನೂ ಆರೋಗ್ಯಕರವಾಗಿ ತಿನ್ನದಿದ್ದರೆ, ಮೂಲ ಸಮಸ್ಯೆ ಇದೆಯೇ ಎಂದು ಪರೀಕ್ಷಿಸಲು ಮಕ್ಕಳ ತಜ್ಞರನ್ನು ಸಂಪರ್ಕಿಸಿ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: