Cherry Tomatoes: ಚೆರ್ರಿ ಟೊಮೆಟೊದಿಂದ ಅದ್ಭುತ ಆರೋಗ್ಯ ಪ್ರಯೋಜನ ಇಲ್ಲಿದೆ

ಚೆರ್ರಿ ಟೊಮೆಟೊಗಳು ಗಾತ್ರದಲ್ಲಿ ಬಹಳ ಸಣ್ಣದಾಗಿದ್ದು, ನೋಡಲು ಚೆರ್ರಿ ಹಣ್ಣಿನಂತೆ ಕಾಣುತ್ತವೆ. ಸಾಮಾನ್ಯವಾಗಿ ನಾವು ಅಡುಗೆಯಲ್ಲಿ ಬಳಸುವ ಟೊಮೆಟೊಗಳಂತೆಯೇ ಚೆರ್ರಿ ಟೊಮೆಟೊ ಕೆಂಪು ಬಣ್ಣವನ್ನು ಹೊಂದಿರುತ್ತದೆ. ಜೊತೆಗೆ ಅವು ಕೇಸರಿ, ಹಳದಿ, ಹಸಿರು ಮತ್ತು ನೇರಳೆ ಬಣ್ಣದಲ್ಲಿಯೂ ಲಭ್ಯವಿದೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆಯಂತೆ ಚೆರ್ರಿ ಟೊಮೆಟೊ ಗಾತ್ರದಲ್ಲಿ ಚಿಕ್ಕದಾಗಿದ್ದರೂ, ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಈ ಕುರಿತ ಮಾಹಿತಿ ಇಲ್ಲಿದೆ.

Cherry Tomatoes: ಚೆರ್ರಿ ಟೊಮೆಟೊದಿಂದ ಅದ್ಭುತ ಆರೋಗ್ಯ ಪ್ರಯೋಜನ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 15, 2023 | 5:43 PM

ಟೊಮೆಟೊ ಪ್ರಭೇದಗಳಲ್ಲಿ ಒಂದಾದ ಚೆರ್ರಿ ಟೊಮೆಟೊಗಳು ಗಾತ್ರದಲ್ಲಿ ಚಿಕ್ಕದಾಗಿರುತ್ತದೆ. ನೋಡಲು ಚೆರ್ರಿ ಹಣ್ಣಿನಂತೆ ಕಾಣುವ ಈ ಟೊಮೆಟೊಗಳನ್ನು ಪಿಜ್ಜಾ, ಪಾಸ್ತಾ, ಸಲಾಡ್ ಮುಂತಾದ ಖಾದ್ಯಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಆದರೆ ನೀವು ಎಂದಾದರೂ ಅದರ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿದ್ದೀರಾ? ಈ ಟೊಮೆಟೊ ರುಚಿಯ ಜೊತೆಗೆ ಆರೋಗ್ಯಕ್ಕೂ ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಹೌದು ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆಯಂತೆ ಈ ಪುಟಾಣಿ ಟೊಮೆಟೊವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ನ್ಯಾಷನಲ್ ಲೈಬ್ರೆರಿ ಆಫ್ ಮೆಡಿಸಿನ್ ಅಧ್ಯಯನದ ಪ್ರಕಾರ ಚೆರ್ರಿ ಟೊಮೆಟೊಗಳು ಅನೇಕ ಪ್ರಮುಖ ಜೀವಸತ್ವಗಳು, ಖನಿಜಗಳು, ಅಮೈನೋ ಆಮ್ಲಗಳು, ಉತ್ಕರ್ಷಣ ನಿರೋಧಕಗಳು, ಫೈಟೊಸ್ಟೆರಾಲ್ ಸಂಯುಕ್ತಗಳನ್ನು ಒಳಗೊಂಡಿರುತ್ತವೆ. ಇವೆಲ್ಲವೂ ಆರೋಗ್ಯಕ್ಕೆ ಬಹಳ ಮುಖ್ಯ. ಇದಲ್ಲದೆ ಇದು ಆರೋಗ್ಯಕರ ಕಾರ್ಬೋಹೈಡ್ರೇಟ್, ಸೋಡಿಯಂ, ವಿಟಮಿನ್ ಎ, ಸಿ, ಇ, ಕಬ್ಬಿಣಾಂಶ, ಪೊಟ್ಯಾಸಿಯಂ, ರಂಜಕ, ಮ್ಯಾಂಗನೀಸ್ ಮತ್ತು ಕ್ಯಾಲ್ಸಿಯಂ ನಂತಹ ಪ್ರಮುಖ ಪೋಷಕಾಂಶಗಳ ಅತ್ಯುತ್ತಮ ಮೂಲವಾಗಿದೆ.

ಚೆರ್ರಿ ಟೊಮೆಟೊದ ಆರೋಗ್ಯ ಪ್ರಯೋಜನಗಳು:

ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ:

ನಿಯಮಿತವಾಗಿ ಚೆರ್ರಿ ಟೊಮೆಟೊಗಳನ್ನು ಆಹಾರದಲ್ಲಿ ಸೇರಿಸುವುದರಿಂದ ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು. ವಾಸ್ತವವಾಗಿ ಈ ಟೊಮೆಟೊದಲ್ಲಿರುವ ಉತ್ಕರ್ಷಣ ನಿರೋಧಕ ಅಂಶಗಳು ನಮ್ಮ ದೇಹವನ್ನು ಫ್ರೀ ರಾಡಿಕಲ್​​ಗಳಿಂದ ರಕ್ಷಿಸುತ್ತದೆ ಇದರಿಂದಾಗಿ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು.

ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿ:

ಚೆರ್ರಿ ಟೊಮೆಟೊ ಸೇವನಯಿಂದ ಚರ್ಮದ ಸಮಸ್ಯೆಗಳು ದೂರವಾಗುತ್ತದೆ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ ಚರ್ಮವನ್ನು ಮೊಡವೆಗಳಂತಹ ಸಮಸ್ಯೆಗಳಿಂದ ದೂರವಿಡುತ್ತದೆ. ಇದಲ್ಲದೆ ವಿಟಮಿನ್ ಸಿ ಮತ್ತು ಲೈಕೋಪಿನ್ ಅಂಶ ಇದರಲ್ಲಿದೆ. ಇದು ಚರ್ಮಕ್ಕೆ ಆರೋಗ್ಯಕರವೆಂದು ಪರಿಗಣಿಸಲಾಗಿದೆ. ಕ್ಯಾರೊಟಿನಾಯ್ಡ್, ಪಾಲಿಫಿನಾಲ್ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುವ ಆಹಾರವನ್ನು ಸೇವಿಸುವ ಮೂಲಕ ಚರ್ಮದ ಮೇಲೆ ಸೂರ್ಯನ ಕಿರಣಗಳ ಹಾನಿಕಾರಕ ಪರಿಣಾಮವನ್ನು ಕಡಿಮೆ ಮಾಡಬಹುದು. ನ್ಯಾಷನಲ್ ಲೈಬ್ರೆರಿ ಆಫ್ ಮೆಡಿಸಿನ್ ಪ್ರಕಟಿಸಿದ ಅಧ್ಯಯನದ ಪ್ರಕಾರ, ಚೆರ್ರಿ ಟೊಮೆಟೊಗಳು ಈ ಎಲ್ಲಾ ಪೋಷಕಾಂಶಗಳ ಹೊಂದಿದೆ.

ಕಣ್ಣುಗಳಿಗೆ ಪ್ರಯೋಜನಕಾರಿ:

ಕಣ್ಣುಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಚೆರ್ರಿ ಟೊಮೆಟೊಗಳನ್ನು ತಿನ್ನಿರಿ. ಇದರಲ್ಲಿರುವ ವಿಟಮಿನ್ ಎ ಪೋಷಕಾಂಶ ಕಣ್ಣಿನ ದೃಷ್ಟಿಯನ್ನು ಹೆಚ್ಚಿಸಲು ಮತ್ತು ರಕ್ಷಿಸಲು ಸಹಕಾರಿಯಾಗಿದೆ. ನಿಯಮಿತವಾಗಿ ಆಹಾರದಲ್ಲಿ ಇವುಗಳನ್ನು ಸೇರಿಸುವುದರಿಂದ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಇದನ್ನೂ ಓದಿ: ಮಕ್ಕಳಿಗೆ ಜಂಕ್ ಫುಡ್ ತಿನ್ನಲು ಉತ್ತೇಜಿಸುವ ಜಾಹೀರಾತುಗಳನ್ನು ನಿಯಂತ್ರಿಸುವುದು ಉತ್ತಮ: ವೈದ್ಯರ ಸಲಹೆ

ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ:

ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿರುವ ಚೆರ್ರಿ ಟೊಮೆಟೊಗಳನ್ನು ಆಹಾರದಲ್ಲಿ ಸೇರಿಸುವುವ ಮೂಲಕ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸಬಹುದು. ಬಲವಾದ ರೋಗನಿರೋಧಕ ಶಕ್ತಿಯು ನಿಮ್ಮ ದೇಹವು ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ:

ಆಗಾಗ್ಗೆ ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಹೊಂದಿರುವ ಜನರು ಚೆರ್ರಿ ಟೊಮೆಟೊಗಳನ್ನು ಆಹಾರದಲ್ಲಿ ಸೇರಿಸುವುದು ತುಂಬಾ ಒಳ್ಳೆಯದು. ಏಕೆಂದರೆ ಚೆರ್ರಿ ಟೊಮೆಟೊಗಳು ಸಾಕಷ್ಟು ಪ್ರಮಾಣದ ಪೊಟ್ಯಾಸಿಯಂ ಅಂಶವನ್ನು ಒಳಗೊಂಡಿರುತ್ತದೆ. ಇದು ಅಧಿಕರಕ್ತದೊತ್ತಡ ಸಮಸ್ಯೆಗೆ ಪರಿಹಾರ ನೀಡುತ್ತದೆ.

ಮೂಳೆಗಳನ್ನು ಬಲಪಡಿಸುತ್ತದೆ:

ಚೆರ್ರಿ ಟೊಮೆಟೊಗಳಲ್ಲಿರುವ ಲೈಕೋಪೀನ್ ಮೂಳೆಯ ಆರೋಗ್ಯವನ್ನು ಉತ್ತೇಜಿಸುತ್ತದೆ. ವಿಶೇಷವಾಗಿ ಮಹಿಳೆಯರಲ್ಲಿ, ಆಸ್ಟಿಯೊಪೊರೋಸಿಸ್ ಅಪಾಯವು ಹೆಚ್ಚು, ಈ ಸಂದರ್ಭದಲ್ಲಿ ಇದರ ಸೇವನೆಯು ಈ ಸಮಸ್ಯೆಯನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ. ಚೆರ್ರಿ ಟೊಮೆಟೊಗಳನ್ನು ನಿಯಮಿತವಾಗಿ ಸೇವಿಸುವ ವ್ಯಕ್ತಿಯು ಇತರರಿಗಿಂತ ಮೂಳೆ ಸಾಂದ್ರತೆಯ ನಷ್ಟದ ಅಪಾಯವನ್ನು ಕಡಿಮೆ ಹೊಂದಿರುತ್ತಾನೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ