
ಬೆಂಗಳೂರು, ಜೂನ್ 28: ಹೃದಯದ ಆರೋಗ್ಯದ ಮಹತ್ವ ಮತ್ತು ಹೃದಯಾಘಾತದಂತಹ (Heart Attack) ತುರ್ತು ಪರಿಸ್ಥಿತಿಗಳನ್ನು ತಡೆಗಟ್ಟುವ ಬಗ್ಗೆ ಬೆಂಗಳೂರಿನ ಅಪೋಲೋ ಆಸ್ಪತ್ರೆಯ ಎಂಡಿ, ಮಕ್ಕಳ ಹೃದ್ರೋಗ ತಜ್ಞ ಡಾ. ಗಿರೀಶ್ ಬಿ ನವಸುಂಡಿ (Dr Girish B Navasundi) ‘ಟಿವಿ9’ ಜತೆ ಮಾತನಾಡಿದ್ದು, ವಿವರವಾದ ಮಾಹಿತಿ ನೀಡಿದ್ದಾರೆ. ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು ಹೃದಯದ ಆರೋಗ್ಯಕ್ಕೆ ಅತ್ಯಗತ್ಯ. ಇದರಲ್ಲಿ ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ ಮತ್ತು ಸಾಕಷ್ಟು ನಿದ್ರೆ ಸೇರಿವೆ. ಧೂಮಪಾನ, ಮದ್ಯಪಾನ ಮತ್ತು ಒತ್ತಡದಂತಹ ಅಂಶಗಳು ಹೃದಯದ ಆರೋಗ್ಯವನ್ನು (Heart Health) ದುರ್ಬಲಗೊಳಿಸಬಹುದು. ಅತಿಯಾಗಿ ತಿನ್ನುವುದು ಮತ್ತು ಅನಾರೋಗ್ಯಕರ ಆಹಾರಗಳ ಸೇವನೆಯು ಹೃದಯಕ್ಕೆ ಹಾನಿಯಾಗಬಹುದು ಎಂದು ಅವರು ಹೇಳಿದ್ದಾರೆ.
ಹೃದಯ ಸಂಬಂಧಿ ಸಮಸ್ಯೆಗಳ ಲಕ್ಷಣಗಳನ್ನು ಗುರುತಿಸುವುದು ಅತಿ ಮುಖ್ಯ. ಎದೆನೋವು, ಉಸಿರಾಟದ ತೊಂದರೆ, ತಲೆತಿರುಗುವಿಕೆ ಮತ್ತು ವಾಂತಿಯಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಹೃದಯದ ಎದೆನೋವನ್ನು ಅಸಿಡಿಟಿ ಅಥವಾ ಗ್ಯಾಸ್ಟ್ರಿಕ್ ಎಂದು ತಪ್ಪಾಗಿ ಭಾವಿಸಬಾರದು. ವೈದ್ಯರನ್ನು ಸಂಪರ್ಕಿಸುವ ಮೊದಲು ಸ್ವಯಂ ಚಿಕಿತ್ಸೆ ಪಡೆಯುವುದು ಅಪಾಯಕಾರಿ. ವೈದ್ಯರು ಸರಿಯಾದ ರೋಗನಿರ್ಣಯ ಮಾಡಲು ನಿಮ್ಮ ಅನುಭವಗಳನ್ನು ನಿಖರವಾಗಿ ವಿವರಿಸುವುದು ಅಗತ್ಯ. ಅದರ ಬದಲು ನೀವೇ ಅಸಿಡಿಟಿ, ಗ್ಯಾಸ್ಟ್ರಿಕ್ ಅಂದುಬಿಡಬಾರದು ಎಂದು ಡಾ. ಗಿರೀಶ್ ಬಿ ನವಸುಂಡಿ ಸಲಹೆ ನೀಡಿದ್ದಾರೆ.
ನಿಯಮಿತ ಆರೋಗ್ಯ ತಪಾಸಣೆಯ ಮಹತ್ವವನ್ನು ಅವರು ಒತ್ತಿ ಹೇಳುತ್ತಾರೆ. ವರ್ಷಕ್ಕೊಮ್ಮೆ ಕೊಲೆಸ್ಟ್ರಾಲ್, ರಕ್ತದೊತ್ತಡ ಮತ್ತು ರಕ್ತದ ಸಕ್ಕರೆ ಪರೀಕ್ಷೆಗಳನ್ನು ಮಾಡಿಸುವುದು ಅವಶ್ಯಕ. ಇಸಿಜಿ, ಎಕೋ ಕಾರ್ಡಿಯೋಗ್ರಾಮ್ ಮತ್ತು ಟ್ರೆಡ್ಮಿಲ್ ಪರೀಕ್ಷೆಗಳು ಹೃದಯದ ಆರೋಗ್ಯವನ್ನು ನಿರ್ಣಯಿಸಲು ಸಹಾಯ ಮಾಡುತ್ತವೆ. ಈ ಪರೀಕ್ಷೆಗಳ ಮೂಲಕ ಹೃದಯ ಸಂಬಂಧಿ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಿ ಚಿಕಿತ್ಸೆ ಪಡೆಯುವುದರಿಂದ ಹೃದಯದ ಮೇಲಾಗುವ ಹಾನಿಯನ್ನು ತಡೆಯಬಹುದು. ಆರೋಗ್ಯಕರ ಜೀವನಶೈಲಿ ಮತ್ತು ನಿಯಮಿತ ಆರೋಗ್ಯ ತಪಾಸಣೆಯ ಮೂಲಕ ಆರೋಗ್ಯಕರ ಹೃದಯವನ್ನು ಕಾಪಾಡಿಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:50 pm, Sat, 28 June 25