
ಹೆರಿಗೆ ನಂತರ ಹೆಣ್ಣಿಗೆ ತಾಯಿಯ ಪಟ್ಟ ದೊರೆತಿರುತ್ತದೆ. ಇದು ಅವಳಿಗೆ ಒಂದು ರೀತಿಯ ಮರುಜನ್ಮವಿದ್ದಂತೆ. ಹೆರಿಗೆಯ ನಂತರ ದೇಹಕ್ಕೆ ಹೆಚ್ಚಿನ ಶಕ್ತಿಯ ಅವಶ್ಯಕತೆ ಇರುತ್ತದೆ. ಅದರಲ್ಲಿಯೂ ಸಿಸೇರಿಯನ್ ಹೆರಿಗೆಯಲ್ಲಿ (cesarean delivery) ಹೆಚ್ಚಿನ ಪ್ರಮಾಣದಲ್ಲಿ ಶಕ್ತಿ ನಷ್ಟವಾಗಿರುತ್ತದೆ. ಹೀಗಾಗಿ ಪ್ರಸವದ ಬಳಿಕ ಮಗುವಿನ ಆರೈಕೆಯ ಜೊತೆಗೆ ತಾಯಿಯೂ ಕೂಡ ತನ್ನ ದೇಹವನ್ನು ಆರೋಗ್ಯವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಹೀಗಾಗಿ ಹೆರಿಗೆಯ ಬಳಿಕ ತಾಯಿಯಾದವಳಿಗೆ ಪ್ರೋಟೀನ್, ಪೋಷಕಾಂಶಯುಕ್ತ ಆಹಾರ ಸೇವನೆ ಅಗತ್ಯವಾಗಿರುತ್ತದೆ. ಅಲ್ಲದೆ ಸಿಸೇರಿಯನ್ ಹೆರಿಗೆಯ ನಂತರ, ಮಹಿಳೆಯರ ಆರೋಗ್ಯ ಮತ್ತು ಮನಸ್ಥಿತಿ ಎರಡೂ ಸರಿಯಾಗಿ ಇರದ ಕಾರಣ, ಈ ಎರಡನ್ನೂ ಸರಿದೂಗಿಸುವ ಸರಿಯಾದ ಆಹಾರಗಳನ್ನು ಸೇವಿಸುವುದು ಅತೀ ಮುಖ್ಯ. ಹಾಗಾದರೆ ಬಾಳಂತಿ ಯಾವೆಲ್ಲಾ ರೀತಿಯ ಆಹಾರಗಳನ್ನು ಸೇವನೆ ಮಾಡಬಹುದು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ಆಪರೇಷನ್ ಆದ ನಂತರ ತಾಯಿಯು ಮಗುವಿನ ಆರೈಕೆಯ ಜೊತೆಗೆ ತನ್ನ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮಹತ್ವವಾಗಿರುತ್ತದೆ. ಈ ಸಮಯದಲ್ಲಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತವೆ. ವೈದ್ಯರು ಹೇಳುವ ಪ್ರಕಾರ ಹೊಟ್ಟೆಯ ಭಾಗದ ಗಾಯ ವಾಸಿಯಾಗಲು ಕನಿಷ್ಠ 40 ದಿನಗಳದರೂ ಬೇಕಾಗುತ್ತದೆ ಹೀಗಾಗಿ ಹೆಚ್ಚು ವಿಶ್ರಾಂತಿ ಅಗತ್ಯವಿರುತ್ತದೆ. ಇದಕ್ಕಾಗಿ ಪ್ರಸವಾನಂತರ ದೇಹವನ್ನು ಮಸಾಜ್ ಮಾಡುವುದರಿಂದ ಬೇಗನೆ ಚೇತರಿಸಿಕೊಳ್ಳಬಹುದು. ಆದರೆ ಹೊಟ್ಟೆಯ ಮೇಲಿನ ಗಾಯ ಗುಣ ಆಗುವವರೆಗೆ ಆ ಭಾಗದಲ್ಲಿ ಮಸಾಜ್ ಮಾಡಬಾರದು. ವೈದ್ಯರನ್ನು ಸಂಪರ್ಕಿಸಿ ಆ ಬಳಿಕ ಮಸಾಜ್ ಮಾಡುವುದರ ಬಗ್ಗೆ ಯೋಚಿಸಬೇಕು.
ಸಿಸೇರಿಯನ್ ಹೆರಿಗೆಯ ಬಳಿಕ ಫ್ರೋಟೀನ್ ಭರಿತ ಆಹಾರಗಳು ಬೇಗನೆ ಚೇತರಿಸಿಕೊಳ್ಳಲು ಸಹಾಯ ಮಾಡುತ್ತವೆ. ಅಲ್ಲದೆ ಸ್ನಾಯುಗಳನ್ನು ಬಲಪಡಿಸುತ್ತವೆ. ಹೀಗಾಗಿ ಮೀನು, ಕೋಳಿ, ಮೊಟ್ಟೆ, ಬೀನ್ಸ್, ಹಾಲು, ಬಟಾಣಿಯನ್ನು ತಿನ್ನಬಹುದು. ಸತು, ಒಮೆಗಾ 3 ಕೊಬ್ಬಿನಾಮ್ಲಗಳಂತಹ ಅಂಶಗಳಿರುವ ಆಹಾರಗಳನ್ನು ಸೇವಿಸುವುದು ಒಳ್ಳೆಯದು. ಇನ್ನು ಹಾನಿಯಾದ ಅಂಗಾಂಶಗಳನ್ನು ಸರಿಪಡಿಸಲು ಉತ್ಕರ್ಷಣ ನಿರೋಧಕಗಳು ಅವಶ್ಯಕ. ಆದ್ದರಿಂದ ಜೀವಸತ್ವಗಳನ್ನು ಸಾಕಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಇವುಗಳು ಕಾಲಜನ್ ಅನ್ನು ಉತ್ಪಾದಿಸಲು ಸಹಾಯ ಮಾಡುತ್ತವೆ. ಈ ಮೂಲಕ ಗಾಯವನ್ನು ಬೇಗನೆ ವಾಸಿ ಮಾಡುತ್ತದೆ. ಅದಕ್ಕಾಗಿ ಕಲ್ಲಂಗಡಿ, ಕಿತ್ತಳೆ, ಪಪ್ಪಾಯಿ, ಸ್ಟ್ರಾಬೆರಿಗಳು, ದ್ರಾಕ್ಷಿ, ಟೊಮೆಟೊ, ಸಿಹಿ ಆಲೂಗಡ್ಡೆ ಮತ್ತು ಕೋಸುಗಡ್ಡೆ, ವಿಟಮಿನ್ ಸಿ ಹೆಚ್ಚಿನ ಪ್ರಮಾಣಲ್ಲಿರುವ ಆಹಾರವನ್ನು ಸೇವನೆ ಮಾಡುವುದು ಒಳ್ಳೆಯದು.
ಇದನ್ನೂ ಓದಿ: ಬಂದಿದೆ ಮತ್ತೊಂದು ಹೊಸ ವೈರಸ್! 48 ಗಂಟೆಗಳಲ್ಲಿ 50 ಕ್ಕೂ ಹೆಚ್ಚು ಸಾವು
ಸಿಸೇರಿಯನ್ ಹೆರಿಗೆ ಸಂದರ್ಭದಲ್ಲಿ ಸಾಕಷ್ಟು ಪ್ರಮಾಣದ ರಕ್ತ ನಷ್ಡವಾಗಿರುತ್ತದೆ. ಹೀಗಾಗಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಿಸಲು ಕಬ್ಬಿಣಾಂಶಯುಕ್ತ ಆಹಾರಗಳ ಸೇವನೆ ಮುಖ್ಯವಾಗಿರುತ್ತದೆ. ಉದಾಹರಣೆಗೆ ಬೆಲ್ಲ, ತುಪ್ಪ, ಹಣ್ಣುಗಳು ಸೇವನೆ, ಒಣಗಿದ ಹಣ್ಣುಗಳು, ಅಂಜೂರದ ಸೇವನೆ ಮಾಡಬಹುದು. ಹೆರಿಗೆಯ ಬಳಿಕ ಸ್ತನ ಪಾನದಿಂದ ನಿಮಗೆ ಹೆಚ್ಚು ಬಾಯಾರಿಕೆ ಕಾಡಬಹುದು. ಹೀಗಾಗಿ ಆದಷ್ಟು ದ್ರವ ಪದಾರ್ಥಗಳನ್ನು ಸೇವಿಸುತ್ತಿರಿ. ಇದರಿಂದ ಎದೆ ಹಾಲಿನ ಉತ್ಪತ್ತಿ ಕೂಡ ಆಗುತ್ತದೆ. ಇದರ ಹೊರತಾಗಿ ಉಗುರು ಬೆಚ್ಚಗಿನ ನೀರು, ಕಷಾಯ, ಹಾಲು, ಮಜ್ಜಿಗೆ, ಜೀರಿಗೆ ಕಷಾಯ, ಬೆಲ್ಲದ ಕಷಾಯ, ಎಳನೀರಿನ ಸೇವನೆಯನ್ನು ಮಾಡಬಹುದು. ಆದರೆ ಇವುಗಳನ್ನು ಸೇವನೆ ಮಾಡುವ ಮೊದಲು ನಿಮ್ಮ ವೈದ್ಯರ ಸಲಹೆ ಪಡೆದುಕೊಳ್ಳುವುದು ಒಳ್ಳೆಯದು. ಏಕೆಂದರೆ ಎಲ್ಲರ ದೇಹ ಪ್ರಕೃತಿ ಒಂದೇ ತರನಾಗಿ ಇರುವುದಿಲ್ಲ. ಹಾಗಾಗಿ ವೈದ್ಯರ ಸಲಹೆ ಅನುಸರಿಸುವುದು ಒಳ್ಳೆಯದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:34 pm, Wed, 26 February 25