
ಕಣ್ಣುಗಳಿಂದ ನೀರು ಬರುವುದು ಸಾಮಾನ್ಯವಾಗಿ ಕಂಡುಬರುವ ಸಮಸ್ಯೆ. ಧೂಳು, ಹೊಗೆ, ಗಾಳಿ, ತೀವ್ರ ಬೆಳಕು ಅಥವಾ ಕಣ್ಣಿಗೆ ಯಾವುದಾದರೂ ಸಣ್ಣ ಕಸ ಹೋಗುವುದರಿಂದ ಕೆಲವೊಮ್ಮೆ ಕಣ್ಣೀರು ಹೆಚ್ಚಾಗಬಹುದು. ಕಣ್ಣಿನಲ್ಲಿ ಉರಿ ಅಥವಾ ಆಯಾಸವಾದಾಗಲೂ ಕಣ್ಣುಗಳು ತಮ್ಮನ್ನು ರಕ್ಷಿಸಿಕೊಳ್ಳಲು ಹೆಚ್ಚು ಕಣ್ಣೀರು ಉತ್ಪಾದಿಸಬಹುದು. ಆದರೆ ಕಣ್ಣುಗಳಿಂದ ಪದೇಪದೇ ಅಥವಾ ನಿರಂತರವಾಗಿ ನೀರು ಬರುತ್ತಿದ್ದರೆ, ಅದನ್ನು ಸಾಮಾನ್ಯ ಸಮಸ್ಯೆ ಎಂದು ನಿರ್ಲಕ್ಷಿಸಬಾರದು. ಡ್ರೈ ಐ, ಅಲರ್ಜಿ, ಸೋಂಕು ಅಥವಾ ಕಣ್ಣೀರಿನ ನಾಳಿಯಲ್ಲಿ ಅಡಚಣೆ ಸೇರಿದಂತೆ ಹಲವು ಕಾರಣಗಳು ಇದಕ್ಕೆ ಕಾರಣವಾಗಿರಬಹುದು. ಹಾಗಾದರೆ ಕಣ್ಣುಗಳಿಂದ ನೀರು ಬರುವುದಕ್ಕೆ ಪ್ರಮುಖ ಕಾರಣಗಳೇನು, ಯಾವ ಲಕ್ಷಣಗಳು ಕಂಡುಬಂದರೆ ಕಣ್ಣಿನ ವೈದ್ಯರನ್ನು ಸಂಪರ್ಕಿಸಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಡ್ರೈ ಐ ಸಿಂಡ್ರೋಮ್: ಕಣ್ಣುಗಳಲ್ಲಿ ಸಾಕಷ್ಟು ತೇವಾಂಶ ಇಲ್ಲದಿದ್ದಾಗ ಡ್ರೈ ಐ ಸಿಂಡ್ರೋಮ್ (Dry Eye Syndrome) ಉಂಟಾಗಬಹುದು. ಇದರಿಂದ ಕಣ್ಣಿನಲ್ಲಿ ಉರಿ ಅಥವಾ ಕಿರಿಕಿರಿ ಉಂಟಾಗಿ, ಅದಕ್ಕೆ ಪ್ರತಿಕ್ರಿಯೆಯಾಗಿ ಕಣ್ಣುಗಳು ಹೆಚ್ಚಿನ ಪ್ರಮಾಣದಲ್ಲಿ ಕಣ್ಣೀರನ್ನು ಉತ್ಪಾದಿಸಬಹುದು.
ಅಲರ್ಜಿ ಮತ್ತು ಸೋಂಕು: ಧೂಳು, ಪರಾಗಕಣಗಳು ಅಥವಾ ಇತರ ಅಲರ್ಜಿಕಾರಕಗಳಿಂದ ಕಣ್ಣಿನಲ್ಲಿ ಅಲರ್ಜಿ ಉಂಟಾದಾಗ ನೀರು ಬರುವುದು, ತುರಿಕೆ ಮತ್ತು ಕೆಂಪಾಗುವಿಕೆ ಕಾಣಿಸಬಹುದು. ಕಣ್ಣಿನ ಸೋಂಕು ಕೂಡ ಹೆಚ್ಚಿನ ಕಣ್ಣೀರಿಗೆ ಕಾರಣವಾಗಬಹುದು.
ಕಣ್ಣೀರಿನ ನಾಳಿಯಲ್ಲಿ ಅಡಚಣೆ: ಕೆಲವರಲ್ಲಿ ಕಣ್ಣೀರನ್ನು ಹೊರಹಾಕುವ ನಾಳಿಯಲ್ಲಿ ಅಡಚಣೆ ಉಂಟಾಗಬಹುದು. ಇದರಿಂದ ಕಣ್ಣೀರು ಸರಿಯಾಗಿ ಹೊರಹೋಗದೆ ಕಣ್ಣಿನಿಂದ ಹರಿಯುವ ಸಾಧ್ಯತೆ ಇರುತ್ತದೆ.
ಗಾಳಿ, ಧೂಳು ಮತ್ತು ಹೊಗೆಯಿಂದಲೂ ಕಣ್ಣು ನೀರಾಗಬಹುದು: ತೀವ್ರ ಗಾಳಿ, ತಂಪಾದ ಗಾಳಿ, ಹೊಗೆ, ಧೂಳು ಅಥವಾ ಅತಿಯಾದ ಬೆಳಕು ಕಣ್ಣಿಗೆ ಕಿರಿಕಿರಿ ಉಂಟುಮಾಡಬಹುದು. ಇಂತಹ ಸಂದರ್ಭಗಳಲ್ಲಿ ಕಣ್ಣುಗಳು ರಕ್ಷಣಾತ್ಮಕವಾಗಿ ಹೆಚ್ಚಿನ ಕಣ್ಣೀರನ್ನು ಉತ್ಪಾದಿಸಬಹುದು.
ಕಣ್ಣಿನ ಗಾಯ ಅಥವಾ ಕೆಲವು ಔಷಧಿಗಳ ಪರಿಣಾಮ: ಕಣ್ಣಿಗೆ ಗಾಯವಾದ ನಂತರವೂ ನೀರು ಬರಬಹುದು. ಕೆಲವು ಔಷಧಿಗಳ ಪರಿಣಾಮ ಅಥವಾ ನಿರ್ದಿಷ್ಟ ವೈದ್ಯಕೀಯ ಚಿಕಿತ್ಸೆಗಳ ಸಂದರ್ಭದಲ್ಲಿಯೂ ಕಣ್ಣೀರಿನ ಪ್ರಮಾಣದಲ್ಲಿ ಬದಲಾವಣೆ ಕಾಣಿಸಬಹುದು.
ಒಂದೆರಡು ಬಾರಿ ನೀರು ಬರುವುದು ಸಾಮಾನ್ಯವಾಗಿರಬಹುದು. ಆದರೆ ಸಮಸ್ಯೆ ಪದೇಪದೇ ಕಾಣಿಸಿಕೊಳ್ಳುತ್ತಿದ್ದರೆ ಅಥವಾ ಹಲವು ದಿನಗಳವರೆಗೆ ಮುಂದುವರಿದರೆ, ಕಣ್ಣಿನ ತಜ್ಞರನ್ನು ಸಂಪರ್ಕಿಸುವುದು ಉತ್ತಮ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ