ಕೊವಿಶೀಲ್ಡ್ ಲಸಿಕೆ ಪಡೆದ ಬಳಿಕ ಈ ಸಮಸ್ಯೆಗಳು ಕಂಡುಬಂದರೆ ಎಚ್ಚರವಹಿಸಿ; ಕೇಂದ್ರ ಆರೋಗ್ಯ ಇಲಾಖೆ ಸೂಚನೆ

ಈ ಸಮಸ್ಯೆ ಅತಿವಿರಳ ಆಗಿರುವ ಕಾರಣ ಮತ್ತು ಲಸಿಕೆಯಿಂದ ಉಂಟಾದ ಸಮಸ್ಯೆಗಿಂತ ಲಾಭಾಂಶ ಅಧಿಕವಾಗಿ ಇರುವುದರಿಂದ ಲಸಿಕೆಯ ಅಪಾಯವನ್ನು ಕಡೆಗಣಿಸಲಾಗುತ್ತಿದೆ.

ಕೊವಿಶೀಲ್ಡ್ ಲಸಿಕೆ ಪಡೆದ ಬಳಿಕ ಈ ಸಮಸ್ಯೆಗಳು ಕಂಡುಬಂದರೆ ಎಚ್ಚರವಹಿಸಿ; ಕೇಂದ್ರ ಆರೋಗ್ಯ ಇಲಾಖೆ ಸೂಚನೆ
ಕೋವಿಶೀಲ್ಡ್ ಲಸಿಕೆ

ದೆಹಲಿ: ಕೊವಿಶೀಲ್ಡ್ ಲಸಿಕೆ ಪಡೆದ ಬಳಿಕ ರಕ್ತ ಹೆಪ್ಪುಗಟ್ಟುವಿಕೆ ವಿಚಾರವಾಗಿ ಕೇಂದ್ರ ಆರೋಗ್ಯ ಇಲಾಖೆ ಮಾರ್ಗಸೂಚಿ ಹೊರಡಿಸಿದೆ. ಈ ಬಗ್ಗೆ ತಕ್ಷಣವೇ ಆಸ್ಪತ್ರೆಗಳಿಗೆ ಮಾಹಿತಿ ನೀಡಬೇಕು ಎಂದು ಆರೋಗ್ಯ ಕಾರ್ಯಕರ್ತರಿಗೆ ಕೇಂದ್ರದ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ರಕ್ತ ಹೆಪ್ಪುಗಟ್ಟಿದ ಪ್ರಕರಣಗಳ ಬಗ್ಗೆ ಜಾಗೃತಿ ಇರಲಿ. ಕೊವಿಶೀಲ್ಡ್ ಲಸಿಕೆ ಪಡೆದ 20 ದಿನದೊಳಗೆ ಈ ಸಮಸ್ಯೆ ಕಂಡುಬರಬಹುದು ಎಂದು ಕೇಂದ್ರದ ಆರೋಗ್ಯ ಇಲಾಖೆ ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ಕೊರೊನಾ ವಿರುದ್ಧ ಕೊವಿಶೀಲ್ಡ್ ಲಸಿಕೆಪಡೆದ ಬಳಿಕ ಕೆಲವರಲ್ಲಿ ರಕ್ತ ಹೆಪ್ಪುಗಟ್ಟುವ ಲಕ್ಷಣಗಳು ಕಂಡುಬರುತ್ತಿವೆ. ಆದರೆ, ಈ ಸಮಸ್ಯೆ ಅತಿವಿರಳ ಆಗಿರುವ ಕಾರಣ ಮತ್ತು ಲಸಿಕೆಯಿಂದ ಉಂಟಾದ ಸಮಸ್ಯೆಗಿಂತ ಲಾಭಾಂಶ ಅಧಿಕವಾಗಿ ಇರುವುದರಿಂದ ಲಸಿಕೆಯ ಅಪಾಯವನ್ನು ಕಡೆಗಣಿಸಲಾಗುತ್ತಿದೆ.

ಕೊರೊನಾ ವಿರುದ್ಧದ ಲಸಿಕೆ ಕೊವಿಶೀಲ್ಡ್ ಹಾಕಿಸಿಕೊಳ್ಳುವುದರಿಂದ ಕೆಲವು ಮಂದಿಯಲ್ಲಿ ಮಾತ್ರ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಕಂಡುಬರುತ್ತಿದೆ. ಯುರೋಪ್​ನಲ್ಲಿ ಕಂಡುಬಂದ ಹತ್ತರಲ್ಲಿ ಒಂದರಷ್ಟು ರಕ್ತ ಹೆಪ್ಪುಗಟ್ಟುವ ಪ್ರಕರಣಗಳು ಮಾತ್ರ ಇಲ್ಲಿ ಕಾಣಿಸಿಕೊಳ್ಳುತ್ತಿವೆ. ಆದರೆ, ಈ ಬಗ್ಗೆ ನಿಗಾ ಇಡುವುದು ಅನಿವಾರ್ಯವಾಗಿದೆ. ಅದಕ್ಕಾಗಿ ಹೊಸ ಸಲಹಾ ಮಂಡಳಿ ರಚಿಸಲಾಗುವುದು ಎಂದು ಸರ್ಕಾರದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಈ ಲಕ್ಷಣಗಳ ಬಗ್ಗೆ ಗಮನವಿರಿಸಿ
ಲಸಿಕೆ ಪಡೆದವರು ಅತಿಯಾದ ತಲೆನೋವು, ವಾಂತಿ, ಹೊಟ್ಟೆನೋವು ಹಾಗೂ ಉಸಿರುಗಟ್ಟುವಿಕೆಯಂಥ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕಾಗಿದೆ. ಲಸಿಕೆ ಹಾಕಿಸಿಕೊಂಡ ಬಳಿಕ ಇಂಥಾ ಯಾವುದಾದರೂ ತೊಂದರೆ ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.

ಡಿಸೆಂಬರ್ ಅಂತ್ಯದೊಳಗೆ ದೇಶದ ಎಲ್ಲರಿಗೂ ಲಸಿಕೆ
ಕೊರೊನಾ ಎರಡನೇ ಅಲೆ ಊಹೆಗೂ ಮೀರಿ ಹಾನಿ ಮಾಡಿದೆ. ವೇಗವಾಗಿ ಹರಡಿ ಬಹಳಷ್ಟು ನೋವಿಗೆ ಕಾರಣವಾಗಿದೆ. ಈ ಮಧ್ಯೆ ಕೊವಿಡ್-19 ಮೂರನೇ ಅಲೆ ಎದುರಾಗಲಿರುವ ಬಗ್ಗೆಯೂ ತಜ್ಞರು ಮಾಹಿತಿ ಕೊಟ್ಟಿದ್ದಾರೆ. ಅದಕ್ಕೂ ಮೊದಲೇ ದೇಶದ ಎಲ್ಲಾ ಜನರಿಗೂ ಲಸಿಕೆ ನೀಡಲು ಸರ್ಕಾರ ತಯಾರಿ ಮಾಡಿದೆ.

ದೇಶಾದ್ಯಂತ ಲಸಿಕೆ ನೀಡಿಕೆಗೆ ಯೋಜನೆ ಸಿದ್ಧವಾಗುತ್ತಿದೆ ಎಂದು ತಿಳಿದುಬಂದಿದೆ. ತಜ್ಞರ ಜತೆ ಕೇಂದ್ರ ಸರ್ಕಾರದ ನಿರಂತರ ಸಂಪರ್ಕದಲ್ಲಿದೆ. ಕೊವ್ಯಾಕ್ಸಿನ್, ಕೊವಿಶೀಲ್ಡ್ ಜೊತೆ ಇನ್ನೂ 3 ಲಸಿಕೆ ಮಾರುಕಟ್ಟೆಗೆ ಬರಲಿದೆ. ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿರುವ ವ್ಯಾಕ್ಸಿನ್‌ಗಳು ಕೊರೊನಾ ತಡೆಗೆ ಸಹಕಾರಿಯಾಗಲಿದೆ.

ರಷ್ಯಾದ ಸ್ಪುಟ್ನಿಕ್ ಲಸಿಕೆ ಉತ್ಪಾದನೆಗೆ ಖಾಸಗಿ ವಲಯಕ್ಕೂ ಅವಕಾಶ ನೀಡುವ ಸಾಧ್ಯತೆ ಇದೆ. ಖಾಸಗಿ ವಲಯಕ್ಕೂ ಅವಕಾಶ ನೀಡಲು ಕೇಂದ್ರ ಚಿಂತನೆ ನಡೆಸಿದೆ. ಮಾಡರ್ನಾ ಲಸಿಕೆಯೂ ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ ಕೊಡಲಿದೆ. ಜಾನ್ಸನ್ & ಜಾನ್ಸನ್ ಸಂಸ್ಥೆಯ ಮಾಡರ್ನಾ ಲಸಿಕೆ ಭಾರತ ಪ್ರವೇಶಿಸಲಿದೆ.

ಡಿಆರ್​ಡಿಒ ಸಂಸ್ಥೆ ಲಸಿಕೆ ಬದಲು ಮಾತ್ರೆ ಮಾದರಿ ಔಷಧ ಬಿಡುಗಡೆಗೊಳಿಸಿದೆ. ಡಿಸೆಂಬರ್ ಅಂತ್ಯದೊಳಗೆ ದೇಶದ ಎಲ್ಲರಿಗೂ ಲಸಿಕೆ ನೀಡಲು ಕೇಂದ್ರ ಕ್ಯಾಲೆಂಡರ್ ಆಫ್ ಇವೆಂಟ್ಸ್ ಸಿದ್ಧಪಡಿಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಡಿಸೆಂಬರ್ ಅಂತ್ಯಕ್ಕೆ 3ನೇ ಅಲೆ ಸೂಚನೆ ನೀಡಿದೆ. ಅದರೊಳಗೆ ಎಲ್ಲರಿಗೂ ಲಸಿಕೆ ನೀಡಲು ಕೇಂದ್ರ ತಯಾರಿ ನಡೆಸುತ್ತಿದೆ.

ಇದನ್ನೂ ಓದಿ: Fact Check: ಚಹಾ ಕುಡಿದರೆ ಕೊರೊನಾ ಸೋಂಕು ಬರುವುದಿಲ್ಲ ಎಂಬ ಮಾಹಿತಿ ನಿಜವೇ?

ಡಿಸೆಂಬರ್ ಅಂತ್ಯದೊಳಗೆ ದೇಶದ ಎಲ್ಲರಿಗೂ ಲಸಿಕೆ; ಕ್ಯಾಲೆಂಡರ್ ಆಫ್ ಇವೆಂಟ್ಸ್ ಸಿದ್ಧಪಡಿಸುತ್ತಿರುವ ಕೇಂದ್ರ