Kama kasturi: ಬೇಸಿಗೆ ಕಾಲ ಬರುತ್ತಿದೆ, ಉರಿ ಮೂತ್ರ ಕಾಡಿದರೆ ಇದನ್ನು ಬಳಸಿ ನಿಶ್ಚಿಂತೆಯಿಂದ ಇರಿ!
Lust musk: ಮಾಂಸಖಂಡಗಳ ನೋವಿಗೆ ಐದಾರು ಕಾಮ ಕಸ್ತೂರಿ ಎಲೆಗಳು, ಅರ್ಧ ಟೀ ಚಮಚ ಅಶ್ವಗಂಧ ಪೌಡರ್, ಒಣ ಶುಂಠಿ ಪೌಡರ್ ಸೇರಿಸಿ ಕಾಢೆ ಮಾಡಿ ಕುಡಿಯಬೇಕು. ಮಲಬದ್ಧತೆ, ಮೂಲವ್ಯಾಧಿ ಕಾಡುತ್ತಿದ್ದರೆ ಕಾಮ ಕಸ್ತೂರಿ ಬೀಜಗಳನ್ನು ರಾತ್ರಿ ನೆನೆಸಿಟ್ಟು ಬೆಳಗ್ಗೆ ಕಲ್ಲು ಸಕ್ಕರೆ ಸೇರಿಸಿ ಶರಬತ್ತು ತಯಾರಿಸಿ ಕುಡಿಯಬೇಕು.
ಇನ್ನೇನು ಬೇಸಿಗೆ ಕಾಲ ಶುರುವಾಗಿದೆ. ನೀರಿನ ದಾಹ, ದೇಹದ ಉಷ್ಣತೆ, ಉರಿಮೂತ್ರ ನಿವಾರಿಸಲು ಎಲ್ಲರೂ ಉಪಯೋಗಿಸಬಹುದಾದ, ಎಲ್ಲರಿಗೂ ಚಿರಪರಿಚಿತವಾದ ಅಹ್ಲಾದಕರವಾದ ಸುಗಂಧ ಪರಿಮಳ ಬೀರುವ ಈ ಗಿಡಕ್ಕೆ ಕಾಮ ಕಸ್ತೂರಿ (Lust musk), ಭೂ ತುಳಸಿ (sabja seeds), ಗ್ರಾಮೀಣ ಭಾಷೆಯಲ್ಲಿ ಸಬ್ಜಲ್ ಗಿಡ ಎಂದೂ ಕರೆಯುತ್ತಾರೆ. ಹಿಂದಿ ಹಾಗೂ ಉರ್ದು ಭಾಷೆಯಲ್ಲಿ ಸಬ್ಜಾ ಎನ್ನುತ್ತಾರೆ.
ತುಳಸಿ ಪ್ರಭೇದಕ್ಕೆ ಸೇರಿದ ಕಾಮ ಕಸ್ತೂರಿ ಸಸ್ಯದ ಎಲೆಗಳು ಮಿಥೈಲ್ ಸಿನ್ನಾಮೇಟ ಮತ್ತು ಟರ್ಫಿನಿನ್ ಉಳ್ಳ ಅವಶ್ಯಕ ಎಣ್ಣೆ ಅಂಶ ಹೊಂದಿವೆ. ಕಾಮ ಕಸ್ತೂರಿ ಸಸ್ಯವು (Kamakasturi) ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಇದರ ಬೀಜಗಳಲ್ಲಿ ಅತ್ಯಧಿಕ ಪೊಟ್ಯಾಷಿಯಂ ಜೊತೆಗೆ ಕ್ಯಾಲ್ಸಿಯಂ, ಮೆಗ್ನೀಷಿಯಂ, ಐರನ್, ವಿಟಮಿನ್ ಎ, ವಿಟಮಿನ್ ಬಿ6 ಇವೆ. ಮನೆಯ ಮುಂದೆ ಅಂಗಳದಲ್ಲಿ ಈ ಕಾಮ ಕಸ್ತೂರಿ ಗಿಡಗಳು ಇದ್ದರೆ ಗಿಡಗಳ ಪಕ್ಕ ಹಾಯ್ದು ಹೋಗುವಾಗ ಸುಗಂಧ ಪರಿಮಳ ಬೀರುತ್ತವೆ. ಹಾವುಗಳು ಕೂಡ ಮನೆಯೊಳಗೆ ಬರುವುದಿಲ್ಲ. ದನ ಕರುಗಳು ಈ ಗಿಡವನ್ನು ತಿನ್ನುವುದಿಲ್ಲ. ಇನ್ನೂ ಇವೆ ಈ ಭೂ ತುಳಸಿಯ (Basil Seeds) ಪ್ರಯೋಜನಗಳು:
- ಕಾಮ ಕಸ್ತೂರಿ ಬೀಜಗಳನ್ನು ಶರಬತ್ತು, ದೂದ್ ಕೂಲ್ ಡ್ರಿಂಕ್ಸ್ (Doodh Cool Drinks) ರಾಯಲ್ ಫಾಲುದಾಗಳಲ್ಲಿ (Royal Faluda) ಬಳಸುತ್ತಾರೆ. ಉರಿ ಮೂತ್ರ ನಿವಾರಣೆಗೆ ಕಾಮ ಕಸ್ತೂರಿ ಬೀಜಗಳನ್ನು ನೀರಿನಲ್ಲಿ ನೆನೆಸಿ, ಬೆಳಗ್ಗೆ ನೀರಿನಲ್ಲಿ ಎರಡು ಟೀ ಚಮಚ ಬೀಜ ಹಾಕಿ ಕುಡಿಯಬಹುದು.
- ಕಾಮ ಕಸ್ತೂರಿ ತೂಕ ಇಳಿಸಲು ಸಹಕಾರಿಯಾಗಿದೆ. ಕಾಮ ಕಸ್ತೂರಿ ಎಲೆಗಳನ್ನು ಚಹಾ ಮಾಡುವಾಗ ಬಳಸಬಹುದು. ಮಕ್ಕಳ ಹೊಟ್ಟೆಯ ಹುಳುಗಳಿಗೆ ಎಂಟು ಹತ್ತು ಹನಿ ಕಾಮ ಕಸ್ತೂರಿ ಎಲೆ ರಸವನ್ನು ಕುಡಿಸಬೇಕು.
- ಪುದಿನಾ ತರಹ ಕಾಮ ಕಸ್ತೂರಿ ಎಲೆಗಳು ಹಾಗೂ ಹಸಿ ಶುಂಠಿ ಸೇರಿಸಿ ಚಟ್ನಿ ತಯಾರಿಸಿ ತಿಂದರೆ ಅಜೀರ್ಣತೆ ನಿವಾರಣೆಯಾಗುತ್ತದೆ. ನೆಗಡಿ ಕೆಮ್ಮಿಗೆ ಕಾಮ ಕಸ್ತೂರಿಯ ಐದಾರು ಎಲೆಗಳ ಜೊತೆಗೆ ಹಸಿ ಶುಂಠಿ ಲವಂಗ ಸೇರಿಸಿ ಕಾಡೆ ಕಷಾಯ (KaDe) ಮಾಡಿ ಕುಡಿಯಬಹುದು.
- ಬಾಯಿಯ ದುರ್ಗಂಧ, ವಸಡುಗಳ ನೋವಿಗೆ ಕಾಮ ಕಸ್ತೂರಿ ಎಲೆಗಳನ್ನು ತಿನ್ನಬಹುದು ಅಥವಾ ಕಾಮ ಕಸ್ತೂರಿ ಎಲೆಗಳ ಕಷಾಯ ಮಾಡಿ ಉಪ್ಪು ಸೇರಿಸಿ ಮುಕ್ಕಳಿಸಬೇಕು.
- ಮಾಂಸಖಂಡಗಳ ನೋವಿಗೆ ಐದಾರು ಕಾಮ ಕಸ್ತೂರಿ ಎಲೆಗಳು, ಅರ್ಧ ಟೀ ಚಮಚ ಅಶ್ವಗಂಧ ಪೌಡರ್, ಒಣ ಶುಂಠಿ ಪೌಡರ್ ಸೇರಿಸಿ ಕಾಢೆ ಮಾಡಿ ಕುಡಿಯಬೇಕು. ಮಲಬದ್ಧತೆ, ಮೂಲವ್ಯಾಧಿ ಕಾಡುತ್ತಿದ್ದರೆ ಕಾಮ ಕಸ್ತೂರಿ ಬೀಜಗಳನ್ನು ರಾತ್ರಿ ನೆನೆಸಿಟ್ಟು ಬೆಳಗ್ಗೆ ಕಲ್ಲು ಸಕ್ಕರೆ ಸೇರಿಸಿ ಶರಬತ್ತು ತಯಾರಿಸಿ ಕುಡಿಯಬೇಕು. (ಬರಹ -ಎಸ್ಹೆಚ್ ನದಾಫ್)