ನಗುವುದು ಒಂದು ಕಲೆ. ಪ್ರತಿಯೊಬ್ಬರೂ ಕೂಡಾ ನಗುವಿನ ಮೂಲಕ ತಮ್ಮ ಸಂತೋಷವನ್ನು ಹೊರಹಾಕುತ್ತಾರೆ. ಅದೆಷ್ಟೋ ಮನಸ್ಸುಗಳನ್ನು ಗೆಲ್ಲಲು ನಗುವೇ ಕಾರಣವಾಗಿದೆ. ಪ್ರತಿಯೊಂದು ಸ್ನೇಹವೂ ಕೂಡಾ ತುಟಿಯಂಚಿಗೆ ಮೂಡುವ ಆ ನಗುವಿನಿಂದಲೇ ಆರಂಭಗೊಂಡಿದೆ. ಪ್ರೀತಿ, ಸ್ನೇಹದ ಜತೆಗೆ ಆರೋಗ್ಯವೂ ಕೂಡಾ ಸುಧಾರಿಸಿಕೊಳ್ಳಲು ನಗು ಸಹಾಯಕವಾಗಿದೆ. ಮನಸ್ಸು ಬಿಚ್ಚಿ ಬಾಯ್ತುಂಬ ನಗುವುದರ ಮೂಲಕ ಪ್ರಯೋಜನಗಳೇ ಇದೆ ಹೊರತು ಯಾವುದೇ ಹಾನಿ ಇಲ್ಲ. ಹಾಗಾಗಿ ಮುಖ ಗಂಟು ಹಾಕಿಕೊಳ್ಳದೇ ಒಳ್ಳೆಯ ನಗುವಿನ ಮೂಲಕ ಆರೋಗ್ಯವನ್ನು ಸುಧಾರಿಸಿಕೊಳ್ಳಿ.
ಒಬ್ಬೊಬ್ಬರು ಒಂದೊಂದು ರೀತಿಯ ನಗುವಿನ ಶೈಲಿಯನ್ನು ಹೊಂದಿರುತ್ತಾರೆ. ಆ ಮೂಲಕ ತಮ್ಮ ಸಂತೋಷವನ್ನು ಹೊರಹಾಕುತ್ತಾರೆ. ಕೆಲವರು ನಗುವಿನ ಮೂಲಕ ಧ್ವನಿಯನ್ನೂ ಹೊರಡಿಸುತ್ತಾರೆ. ಇನ್ನು ಕೆಲವರು ಧ್ವನಿಯಿಲ್ಲದೇ ಮುಖದ ಭಾವನೆಯೊಂದಿಗೆ ತೋರ್ಪಡಿಸುತ್ತಾರೆ. ಹೀಗಿರುವಾಗ ನಗುವುದರಿಂದ ಪ್ರಯೋಜನಗಳೇನು? ಎಂಬುದರ ಮಾಹಿತಿ ಇಲ್ಲಿದೆ.
ನಮ್ಮ ದೇಹದಲ್ಲಿ ಸುಮಾರು ಶೇ. 70ರಷ್ಟು ರೋಗಗಳು ಒತ್ತಡದಿಂದ ಉಂಟಾಗುತ್ತದೆ. ಮಧುಮೇಹ, ರಕ್ತದೊತ್ತಡ, ಖಿನ್ನತೆ, ನಿದ್ರಾಹೀನತೆ ಮತ್ತು ಮೈಗ್ರೇನ್ನಂತಹ ಸಮಸ್ಯೆಗಳು ಉಂಟಾಗುತ್ತದೆ. ಹಾಗಿರುವಾಗ ಮನಸ್ಸು ಬಿಚ್ಚಿ ನಗುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ. ಮುಖ ಗಂಟು ಮಾಡಿಕೊಂಡು ಒಬ್ಬರೊಂದಿಗೂ ಮಾತನಾಡದೇ ಉಳಿಯುವುದು ಇನ್ನಷ್ಟು ದೇಹಕ್ಕೆ ಒತ್ತಡವನ್ನು ನೀಡುವುದರ ಮೂಲಕ ಸಮಸ್ಯೆಗಳನ್ನು ತಂದೊಡ್ಡುತ್ತದೆ.
ಯಾವಾಗಲೂ ನಗುತ್ತಿರುವವರಿಗೆ ಅಧಿಕ ಆಯುಷ್ಯ ಲಭಿಸುತ್ತದೆ ಎಂಬುದನ್ನು ಕೇಳಿಯೇ ಇರುತ್ತೀರಿ. ಒಬ್ಬಂಟಿಯಾಗಿ ಕುಳಿತಿರುವ ವ್ಯಕ್ತಿಗೆ ಹಾಗೂ ಎಲ್ಲರೊಂದಿಗೆ ಮಾತನಾಡುತ್ತಾ ಮೋಜು ಮಾಡುತ್ತಿರುವ ವ್ಯಕ್ತಿಗೆ ತುಂಬಾ ವ್ಯತ್ಯಾಸವಿದೆ. ಜತೆಗೆ ಆರೋಗ್ಯದ ಮೇಲೂ ಕೂಡಾ ಪರಿಣಾಮ ಬಿರುತ್ತದೆ. ನಗುತ್ತಿರುವುದು ಹೃದಯಾಘಾತ ಅಪಾಯವನ್ನು ಕಡಿಮೆ ಮಾಡುತ್ತದೆ. ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಹಾಗೂ ಶ್ವಾಸಕೋಶ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ನಗುವು ಇತರರನ್ನು ಆಕರ್ಷಿಸುತ್ತದೆ. ಸೃಜನಶೀಲತೆಯನ್ನು ಹೆಚ್ಚಿಸುತ್ತದೆ ಹಾಗೂ ಮನಸ್ಸು ಯಾವಾಗಲೂ ಚೈತನ್ಯದಿಂದ ಕೂಡಿರಲು ಸಹಾಯ ಮಾಡುತ್ತದೆ. ಏಕಾಗ್ರತೆಯನ್ನು ಸುಧಾರಿಸಿಕೊಳ್ಳಲು ನಗು ಸಹಾಯ ಮಾಡುತ್ತದೆ. ಹೆಚ್ಚಿನ ಜನರು ಬೆಳಿಗ್ಗೆ ಎದ್ದ ತಕ್ಷಣ ನಗುವಿನ ಮೂಲಕ ಯೋಗವನ್ನು ಪ್ರಾರಂಭಿಸುತ್ತಾರೆ. ಇದು ಆರೋಗ್ಯವನ್ನು ಸುಧಾರಿಸಿಕೊಳ್ಳಲು ಒಳ್ಳೆಯ ಚಿಕಿತ್ಸೆಯಾಗಿದೆ.
ದಿನಕ್ಕೆ ಕನಿಷ್ಟ 10-20 ನಿಮಿಷಗಳ ಕಾಲ ನಗುವಿಗಾಗಿಯೇ ನಿಮ್ಮ ಸಮಯವನ್ನು ಮೀಸಲಿಡಿ. ಮೆದುಳನ್ನು ಸಕ್ರಿಯವಾಗಿರಿಸಲು ನಗು ಸಹಾಯಕ. ಜತೆಗೆ ಮಾನಸಿಕ ಒತ್ತಡದಂತಹ ಸಮಸ್ಯೆಯಿಂದ ದೂರವಿರಬಹುದು. ಯಾರನ್ನೂ ಕೂಡಾ ದ್ವೇಷದಿಂದ ಗೆಲ್ಲದೇ ನಗುವಿನ ಮೂಲಕ ಗೆಲ್ಲಲು ಪ್ರಯತ್ನಿಸಿ.
ಇದನ್ನೂ ಓದಿ:
Health Tips: ನೀವು ಮೈಗ್ರೇನ್ನಿಂದ ಬಳಲುತ್ತಿದ್ದೀರಾ? ಚಿಂತೆ ಬೇಡ
Health Tips: ಆಸಿಡಿಟಿ ನಿವಾರಣೆಗೆ ಯೋಗಾಭ್ಯಾಸ; ಯಾವ ಯೋಗ ಭಂಗಿ ಸೂಕ್ತ?