ಚಹಾ ಕುಡಿಯುತ್ತಾ ಸಿಗರೇಟ್ ಸೇದುವ ಅಭ್ಯಾಸ ನಿಮಗೂ ಇದ್ರೆ ತಪ್ಪದೆ ಈ ಸ್ಟೋರಿ ಓದಿ

ಧೂಮಪಾನ ಮಾಡುವುದನ್ನು ಕೂಡ ಕೆಲವರು ಆನಂದಿಸುತ್ತಾರೆ. ಉಂಗುರ ಬೆರಳಿನಲ್ಲಿ ಸಿಗರೇಟ್ ಹಿಡಿದುಕೊಂಡು ಸ್ಟೈಲ್ ಆಗಿ ಹೊಗೆ ಬಿಡುತ್ತಾರೆ. ಇನ್ನು ಕೆಲವರಂತೂ ಒಂದು ಕೈಯಲ್ಲಿ ಸಿಗರೇಟ್ ಹಿಡಿದು ಇನ್ನೊಂದು ಕೈನಲ್ಲಿ ಚಹಾ ಹೀರುತ್ತಾ ನಿಲ್ಲುತ್ತಾರೆ. ಅತಿಯಾಗಿ ಧೂಮಪಾನ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ತಿಳಿದಿದ್ದರೂ ಕೂಡ ಆ ಅಭ್ಯಾಸವನ್ನು ಬಿಡುವುದಕ್ಕೆ ಸಾಧ್ಯವಾಗುವುದಿಲ್ಲ. ಅದರಲ್ಲಿಯೂ ಅದರ ಜೊತೆಗೆ ಚಹಾ ಕುಡಿಯುವ ಅಭ್ಯಾಸ ನಿಮಗೆ ಅರಿವಿಲ್ಲದಂತೆ ಕೆಲವು ಸಮಸ್ಯೆಗಳಿಗೆ ಅಹ್ವಾನ ನೀಡುತ್ತದೆ. ಹಾಗಾದರೆ ಇದರಿಂದ ಯಾವ ರೀತಿಯ ತೊಂದರೆಗಳಾಗುತ್ತವೆ ಎಂಬುದು ತಿಳಿದಿದೆಯೇ? ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಚಹಾ ಕುಡಿಯುತ್ತಾ ಸಿಗರೇಟ್ ಸೇದುವ ಅಭ್ಯಾಸ ನಿಮಗೂ ಇದ್ರೆ ತಪ್ಪದೆ ಈ ಸ್ಟೋರಿ ಓದಿ
Smoking While Drinking Tea

Updated on: Aug 28, 2025 | 5:15 PM

ಧೂಮಪಾನ (Smoking) ಮಾಡುವುದು ಕೆಲವರಿಗೆ ಅಭ್ಯಾಸವಾಗಿರುತ್ತದೆ. ಒಂದು ದಿನ ಅದನ್ನು ಬಿಟ್ಟರೆ ಏನೋ ಕಳೆದುಕೊಂಡಂತೆ ಭಾಸವಾಗುತ್ತದೆ. ಅದರಲ್ಲಿಯೂ ಕೆಲವರು ಸಿಗರೇಟ್ ಗಳನ್ನು ಉಂಗುರದ ಬೆರಳಿನ ಮಧ್ಯೆ ಇಟ್ಟುಕೊಂಡು ಸ್ಟೈಲಿಶ್ ಆಗಿ ಹೊಗೆ ಬಿಡುತ್ತಾ ನಿಂತುಕೊಂಡಿರುತ್ತಾರೆ. ಕೆಲವರಿಗೆ ಇಂತಹ ಅಭ್ಯಾಸ ಅಪಾಯಕಾರಿ ಎಂಬುದು ತಿಳಿದಿದ್ದರೂ ಕೂಡ ಅದನ್ನು ಒಮ್ಮೆಲೇ ಬಿಡಲು ಹಿಂಜರಿಯುತ್ತಾರೆ. ಅದರಲ್ಲಿಯೂ ಕೆಲವರು ಧೂಮಪಾನ ಮಾಡುತ್ತಾ ಸಂತೋಷದಿಂದ ಚಹಾ (Tea) ಹೀರುತ್ತಾರೆ. ಈ ಅಭ್ಯಾಸ ಧೂಮಪಾನ ಮಾಡುವ ಅರ್ಧಕ್ಕಿಂತ ಹೆಚ್ಚು ಜನರಿಗಿದೆ. ಆದರೆ ಇದರಿಂದ ಯಾವ ರೀತಿಯ ತೊಂದರೆಗಳಾಗುತ್ತವೆ ಎಂಬುದು ತಿಳಿದಿದೆಯೇ? ಈ ಅಭ್ಯಾಸ ಎಷ್ಟು ಆರೋಗ್ಯ ಸಮಸ್ಯೆಗೆ ಆಹ್ವಾನ ನೀಡುತ್ತದೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹೃದಯಾಘಾತವಾಗುವ ಸಾಧ್ಯತೆ ಹೆಚ್ಚು

ನಿಮಗೆ ತಿಳಿದಿರಬಹುದು ಅತಿಯಾದ ಧೂಮಪಾನವು ಶ್ವಾಸಕೋಶ, ಯಕೃತ್ತು ಮತ್ತು ಹೃದಯದ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಅದರಲ್ಲಿಯೂ ಹೃದಯಾಘಾತದ ಸಾಧ್ಯತೆ ಹೆಚ್ಚಾಗಿರುತ್ತದೆ ತಜ್ಞರು ಕೂಡ ಇದನ್ನೇ ಹೇಳುತ್ತಾರೆ. ಮಾತ್ರವಲ್ಲ ಹೃದಯಕ್ಕೆ ರಕ್ತ ಪೂರೈಸುವ ಅಪಧಮನಿಗಳಲ್ಲಿ ಸಂಕೋಚನ ಉಂಟಾಗುತ್ತದೆ, ಇದು ರಕ್ತಹೀನತೆಗೆ ಕಾರಣವಾಗುತ್ತದೆ. ಇನ್ನು ಟೀ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಾದರೂ ಕೂಡ ತಜ್ಞರು ಹೇಳುವ ಪ್ರಕಾರ, ಒಂದು ಅಥವಾ ಎರಡು ಬಾರಿ ಕುಡಿಯುವುದರಿಂದ ಯಾವುದೇ ರೀತಿಯ ಹಾನಿಯಾಗುವುದಿಲ್ಲ. ಆದರೆ ಅದಕ್ಕಿಂತ ಹೆಚ್ಚು ಬಾರಿ ಸೇವನೆ ಮಾಡಿದರೆ ಹೃದಯಾಘಾತವಾಗುವ ಸಾಧ್ಯತೆ ಖಂಡಿತ ಇರುತ್ತದೆ. ಅದರಲ್ಲಿಯೂ ಹಾಲಿನ ಟೀ ಆರೋಗ್ಯಕ್ಕೆ ಒಳ್ಳೆಯದಲ್ಲ.

ಇದನ್ನೂ ಓದಿ: ಧೂಮಪಾನ ಮಾತ್ರವಲ್ಲ ಈ ಕೆಲವು ಅಂಶಗಳೂ ಶ್ವಾಸಕೋಶಕ್ಕೆ ಹಾನಿ ಉಂಟುಮಾಡಬಲ್ಲವು

ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು

ಇತ್ತೀಚಿಗೆ ನಡೆಸಿದಂತಹ ಹಲವಾರು ಅಧ್ಯಯನಗಳು ಚಹಾದ ಜೊತೆಗೆ ಸಿಗರೇಟ್ ಸೇದುವುದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಶೇಕಡಾ 30 ರಷ್ಟು ಹೆಚ್ಚಾಗುತ್ತದೆ ಎಂಬುದನ್ನು ತಿಳಿಸಿದೆ. ಚಹಾದಲ್ಲಿರುವ ವಿಷಕಾರಿ ವಸ್ತುಗಳು ಸಿಗರೇಟ್ ಹೊಗೆಯೊಂದಿಗೆ ಬೆರೆತಾಗ ಅದು ಕ್ಯಾನ್ಸರ್‌ಗೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ. ಮಾತ್ರವಲ್ಲ ಈ ಎರಡರ ಸಂಯೋಜನೆಯು ಬಂಜೆತನ, ಹೊಟ್ಟೆಯ ಹುಣ್ಣು, ಜೀರ್ಣಕಾರಿ ಸಮಸ್ಯೆಗಳು, ಉಸಿರಾಟದ ತೊಂದರೆ, ಸ್ಮರಣಶಕ್ತಿ ನಷ್ಟ ಮತ್ತು ಪಾರ್ಶ್ವವಾಯುವಿನ ಅಪಾಯವನ್ನು ಹೆಚ್ಚಿಸುತ್ತದೆ ಎಂಬುದು ತಿಳಿದುಬಂದಿದೆ. ಧೂಮಪಾನ ಮಾಡುವುದು ಒಳ್ಳೆಯದಲ್ಲ ಅದರಲ್ಲಿಯೂ ಚಹಾದ ಜೊತೆಗೆ ಸಿಗರೇಟ್ ಸೇದುವ ಅಭ್ಯಾಸ ಮತ್ತಷ್ಟು ಅಪಾಯ ಹೆಚ್ಚಳಕ್ಕೆ ಕಾರಣವಾಗುತ್ತದೆ. ಹಾಗಾಗಿ ಆರೋಗ್ಯ ಕಾಪಾಡಿಕೊಳ್ಳಲು ಮತ್ತು ಇರುವ ಆರೋಗ್ಯವನ್ನು ಸರಿಯಾಗಿ ಇಟ್ಟುಕೊಳ್ಳುವುದಕ್ಕೆ ಇಂತಹ ಅಭ್ಯಾಸಗಳನ್ನು ತ್ಯಜಿಸುವುದು ಬಹಳ ಒಳ್ಳೆಯದು. ಇಲ್ಲವಾದಲ್ಲಿ ನಿಮ್ಮ ದೇಹ ಚಿತೆಗೆ ಹತ್ತಿರವಾಗುತ್ತಾ ಹೋಗುತ್ತದೆ. ಹಾಗಾಗಿ ಆದಷ್ಟು ಎಚ್ಚರಿಕೆ ವಹಿಸಿ. ಆರೋಗ್ಯವನ್ನು ಕಾಪಾಡಿಕೊಳ್ಳಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ