Health Tips: ಬೆಳಿಗ್ಗೆ ಎದ್ದು ಜೇನುತುಪ್ಪಕ್ಕೆ ಈ ಬೀಜಗಳನ್ನು ಸೇರಿಸಿ ಸೇವನೆ ಮಾಡಿ, ಹೃದಯ ಆರೋಗ್ಯವಾಗಿರುತ್ತೆ
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ವಿವಿಧ ರೋಗಗಳು ಕಾಡುತ್ತಿವೆ. ಕೆಲವು ಮನೆಮದ್ದುಗಳಿಂದ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಬಹುದು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 8- 10 ಕಲೋಂಜಿ ಬೀಜಗಳನ್ನು ಪುಡಿ ಮಾಡಿ ಒಂದು ಚಮಚ ಜೇನುತುಪ್ಪದೊಂದಿಗೆ ಸೇವಿಸಿದರೆ, ಅದು ದೇಹಕ್ಕೆ ಹಲವಾರು ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಹಾಗಾದರೆ ಇದನ್ನು ಸೇವನೆ ಮಾಡುವುದರಿಂದ ಯಾವ ರೀತಿಯ ಲಾಭಗಳಿವೆ? ಇಲ್ಲಿದೆ ಮಾಹಿತಿ.
ಬೆಳಿಗ್ಗೆ ಪ್ರಾರಂಭವಾಗುವುದು ಚಹಾ ಅಥವಾ ಕಾಫಿಯಿಂದ. ಇದು ಒಂದೆರಡು ಮನೆಗಳ ಕಥೆಯಲ್ಲ. ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿಯೂ ದಿನ ಪ್ರಾರಂಭವಾಗುವುದು ಅಡುಗೆ ಮನೆಯಿಂದ ಬರುವ ಟೀ, ಕಾಫಿ ಪರಿಮಳದಿಂದ. ಆದರೆ ಕೆಲವರು ಮಾತ್ರ ನೀರಿಗೆ ಜೇನುತುಪ್ಪ ಹಾಕಿ, ನಿಂಬೆ ರಸ ಬೆರೆಸಿಕೊಂಡು ಕುಡಿಯುತ್ತಾರೆ. ಇದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಹಾಗಾಗಿ ತೂಕ ನಿಯಂತ್ರಿಸಿಕೊಳ್ಳುವುದು ಸೇರಿದಂತೆ ವಿವಿಧ ರೀತಿಯ ಲಾಭಗಳಿಗಾಗಿ ಇದನ್ನು ಪ್ರತಿದಿನ ಕುಡಿಯುವವರಿದ್ದಾರೆ. ಇದರಿಂದ ಸಿಗುವ ಪ್ರಯೋಜನಗಳ ಬಗ್ಗೆ ನಿಮಗೂ ತಿಳಿದಿರಬಹುದು. ಆದರೆ ಜೇನುತುಪ್ಪದ ಜೊತೆ ಕಪ್ಪು ಜೀರಿಗೆ (ಕಲೋಂಜಿ) ಒಟ್ಟಿಗೆ ಸೇರಿಸಿ ಸೇವನೆ ಮಾಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿದೆಯೇ? ಇದನ್ನು ಕಾಲಾ ಜೀರಾ/ ಕಲೋಂಜಿ/ ಕಪ್ಪು ಜೀರಿಗೆ (Kalonji Seeds or Black Cumin) ಹೀಗೆ ನಾನಾ ಹೆಸರುಗಳಿಂದ ಕರೆಯಲಾಗುತ್ತದೆ. ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 8- 10 ಕಲೋಂಜಿ ಬೀಜಗಳನ್ನು ಪುಡಿ ಮಾಡಿ ಒಂದು ಚಮಚ ಜೇನುತುಪ್ಪದೊಂದಿಗೆ ಸೇವಿಸಿದರೆ, ಅದು ದೇಹಕ್ಕೆ ಹಲವಾರು ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಹಾಗಾದರೆ ಇದನ್ನು ಸೇವನೆ ಮಾಡುವುದರಿಂದ ಯಾವ ರೀತಿಯ ಲಾಭಗಳಿವೆ? ಇಲ್ಲಿದೆ ಮಾಹಿತಿ.
ಹೃದಯಕ್ಕೆ ಪ್ರಯೋಜನಕಾರಿ:
ಜೇನುತುಪ್ಪ ಮತ್ತು ಕಪ್ಪು ಜೀರಿಗೆ ಬೀಜಗಳಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ಇತರ ಪೋಷಕಾಂಶಗಳು ಹೃದಯದ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಇದು ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಸಹ ಕಡಿಮೆ ಮಾಡುತ್ತದೆ. ಜೊತೆಗೆ ಹೃದಯಾಘಾತ ಮತ್ತು ಇತರ ಹೃದಯ ಸಂಬಂಧಿತ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ದೇಹಕ್ಕೆ ಶಕ್ತಿ ನೀಡುತ್ತದೆ:
ಬೆಳಿಗ್ಗೆ ಎದ್ದಾಗ ದಣಿವಾಗಿ ಆಲಸ್ಯದ ಭಾವನೆ ನಿಮ್ಮನ್ನು ಕಾಡುತ್ತಿದ್ದರೆ, ಜೇನುತುಪ್ಪ ಮತ್ತು ಕಪ್ಪು ಜೀರಿಗೆ ಸೇವನೆಯು ತುಂಬಾ ಪ್ರಯೋಜನಕಾರಿಯಾಗಿದೆ, ಏಕೆಂದರೆ ಇದರಲ್ಲಿ ನೈಸರ್ಗಿಕ ಗ್ಲೂಕೋಸ್ ಮತ್ತು ಪೋಷಕಾಂಶಗಳಿರುತ್ತವೆ. ಅಲ್ಲದೆ ಇವು ದೈಹಿಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ:
ಸಕ್ಕರೆ ಸೇರಿಸಿ ಚಹಾ ಅಥವಾ ಕಾಫಿ ಕುಡಿಯುವ ಬದಲು, ನೀವು ಕಪ್ಪು ಜೀರಿಗೆ ಒಣಗಿಸಿ ಒಂದು ಚಮಚ ಜೇನುತುಪ್ಪದೊಂದಿಗೆ ಸೇವಿಸಿದರೆ, ಅದು ಮಧುಮೇಹಕ್ಕೆ ಪರಿಹಾರ ನೀಡುತ್ತದೆ. ಏಕೆಂದರೆ ಇದರಲ್ಲಿ ನೈಸರ್ಗಿಕ ಗ್ಲೂಕೋಸ್ ಇರುತ್ತದೆ. ಇದಲ್ಲದೆ, ಈ ಬೀಜಗಳು ಇನ್ಸುಲಿನ್ ಸೂಕ್ಷ್ಮತೆಯನ್ನು ಸಹ ಸುಧಾರಿಸುತ್ತವೆ. ಅದಕ್ಕಾಗಿಯೇ ಈ ಎರಡು ಪದಾರ್ಥಗಳನ್ನು ಒಟ್ಟಿಗೆ ತಿನ್ನುವುದು ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.
ಇದನ್ನೂ ಓದಿ: ಹೆಚ್ಚು ನೀರು ಕುಡಿದರೆ ತೂಕ ಕಡಿಮೆಯಾಗುತ್ತದೆಯೇ?
ತೂಕ ಇಳಿಸಿಕೊಳ್ಳಲು ಪ್ರಯೋಜನಕಾರಿ:
ಈ ಬೀಜಗಳನ್ನು ಸೇವಿಸುವುದರಿಂದ ಹಸಿವು ಕಡಿಮೆಯಾಗುತ್ತದೆ. ಜೇನುತುಪ್ಪವು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಅವುಗಳನ್ನು ಒಟ್ಟಿಗೆ ಸೇವನೆ ಮಾಡುವುದರಿಂದ ದೀರ್ಘಕಾಲದ ವರೆಗೆ ಹಸಿವನ್ನು ತಡೆದುಕೊಳ್ಳಬಹುದು. ಅಲ್ಲದೆ ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಜೊತೆಗೆ ಸುಲಭವಾಗಿ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.
ಮೆದುಳಿಗೆ ಪ್ರಯೋಜನಕಾರಿ:
ಈ ಬೀಜಗಳು ನ್ಯೂರೋಪ್ರೊಟೆಕ್ಟಿವ್ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿವೆ. ಅಲ್ಲದೆ ಜೇನುತುಪ್ಪವು ನಿಮ್ಮ ಮೆದುಳಿಗೆ ಉತ್ತಮ ಶಕ್ತಿಯನ್ನು ನೀಡುತ್ತದೆ. ನಿಮ್ಮ ದೃಷ್ಟಿಯನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಸ್ಮರಣ ಶಕ್ತಿ ದುರ್ಬಲಗೊಳ್ಳದಂತೆ ತಡೆಯಲು ಪ್ರತಿದಿನ ಇವುಗಳನ್ನು ಸೇವನೆ ಮಾಡುವುದು ಉತ್ತಮ ಎಂದು ತಜ್ಞರು ಕೂಡ ಸೂಚಿಸುತ್ತಾರೆ.
(ಸೂಚನೆ: ಇಲ್ಲಿರುವ ವಿಷಯಗಳು ಮಾಹಿತಿಗಾಗಿ ಮಾತ್ರ. ಯಾವುದೇ ರೀತಿಯ ಸಂದೇಹಗಳಿದ್ದರೂ, ತಜ್ಞರನ್ನು ಸಂಪರ್ಕಿಸಿ.)
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ