ಹೆಚ್ಚುತ್ತಿದೆ ಕೊವಿಡ್ ರೂಪಾಂತರಿ; ಒಮಿಕ್ರಾನ್ ಬಗ್ಗೆ ಇರಲಿ ಎಚ್ಚರ!
ಕೊವಿಡ್ ಬಗ್ಗೆ ತೆಗೆದುಕೊಳ್ಳಬೇಕಾದ ಮಾರ್ಗಸೂಚಿಗಳನ್ನು ಸರ್ಕಾರ ಈಗಾಗಲೇ ಹೊರಡಿಸಿದ್ದು, ಹಿರಿಯರು, ಗರ್ಭಿಣಿಯರು ಮತ್ತು ಮಕ್ಕಳು ಮಾಸ್ಕ್ ಧರಿಸುವುದು ಮತ್ತು ಸ್ಯಾನಿಟೈಸರ್ ಬಳಕೆ ಮಾಡುವುದನ್ನು ಪಾಲಿಸುವುದು ಒಳಿತು. ಪ್ರಸ್ತುತ ಕೊವಿಡ್ ರೂಪಾಂತರಿ ಪ್ರಕರಣಗಳು ಗಂಭೀರವಾಗಿಲ್ಲದಿದ್ದರೂ ಸಹ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವುದು ಅಗತ್ಯ ಎಂಬುದು ತಜ್ಞರ ಅಭಿಪ್ರಾಯ.

ಬೆಂಗಳೂರು, ಜೂನ್ 21: ಭಾರತ ದೇಶಾದ್ಯಂತ ದಿನೇದಿನೆ ಮತ್ತೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಕುರಿತು ವರದಿಯಾಗುತ್ತಿದೆ. ಕೊವಿಡ್ ರೂಪಾಂತರಿ (Covid Variant) ಪ್ರಕರಣಗಳು ಹೆಚ್ಚಾಗಿ ಹರಡುತ್ತಿದೆ, ಆದರೆ ಅದರ ತೀವ್ರತೆ ಹೆಚ್ಚಾಗಿರುವುದಿಲ್ಲ. ಹೀಗಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದ್ದು, ಭಯ ಪಡುವ ಅಗತ್ಯವಿಲ್ಲ. ಪ್ರಸ್ತುತವಾಗಿ ಏರಿಕೆಯಾಗುತ್ತಿರುವ ಒಮಿಕ್ರಾನ್ ಜೆಎನ್.೧ ರೂಪಾಂತರಿಯು ಭಾರತ ಸೇರಿದಂತೆ ಸಿಂಗಾಪುರ, ಹಾಂಗ್ ಕಾಂಗ್ ಮತ್ತು ಚೀನಾದಂತಹ ದೇಶಗಳಲ್ಲಿಯೂ ಏರಿಕೆಯಾಗುತ್ತಿದೆ. ಈ ರೂಪಾಂತರಿ ಪ್ರಕರಣಗಳು ಹೆಚ್ಚು ಬೇಗನೆ ಹರಡುತ್ತಿದ್ದು, ಅದರ ತೀವ್ರತೆ ಅಷ್ಟಾಗಿ ಕಂಡುಬರುತ್ತಿಲ್ಲ ಎನ್ನುತ್ತಾರೆ ತಜ್ಞ ವೈದ್ಯರು.
ಕೊವಿಡ್‌ನ ಮೊದಲೆರಡು ಅಲೆಗಳಲ್ಲಿ ರೋಗಿಗಳು ಸಾಮಾನ್ಯವಾಗಿ ರುಚಿ ಗುರುತು ಹಿಡಿಯದಿರುವುದು ಮತ್ತು ಮೂಗಿಗೆ ವಾಸನೆ ತಗುಲದಿರುವುದು ಈ ರೀತಿಯ ರೋಗಲಕ್ಷಣಗಳನ್ನು ಅನುಭವಿಸುತ್ತಿದ್ದರು. ಆದರೆ, ಪ್ರಸ್ತುತ ರೂಪಾಂತರಿಯು ಅಂತಹ ರೋಗಲಕ್ಷಣಗಳನ್ನು ಉಂಟು ಮಾಡುತ್ತಿಲ್ಲ. ಕೆಲವು ರೋಗಿಗಳು ಮಾತ್ರ ಅತಿಸಾರವನ್ನು ಅನುಭವಿಸುತ್ತಿದ್ದಾರೆ. ಇದೀಗ ಮಳೆಗಾಲ ಎದುರಾಗಿರುವುದರಿಂದ ಜ್ವರ, ಶೀತದ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಕೋವಿಡ್ ಹಾಗೂ ಸಾಮಾನ್ಯ ಆರೋಗ್ಯ ಸಮಸ್ಯೆಯ ನಡುವಿನ ವ್ಯತ್ಯಾಸ ಗುರುತಿಸಲು ಸಾಧ್ಯವಾಗುತ್ತಿಲ್ಲ. ಆದ ಕಾರಣ ರೋಗಿಗಳು ಯಾವುದೇ ಸ್ವಯಂ ಔಷಧ ತೆಗೆದುಕೊಳ್ಳದೇ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಒಳಿತು ಎನ್ನುತ್ತಾರೆ ಬೆಂಗಳೂರಿನ ವಾಸವಿ ಆಸ್ಪತ್ರೆಯ ತಜ್ಞರಾದ ಡಾ. ವಿನಯ್ ಹೊಸದುರ್ಗ.
ಇದನ್ನೂ ಓದಿ: ಭಾರತದಲ್ಲಿ 5000 ದಾಟಿದ ಕೊವಿಡ್ ಪ್ರಕರಣಗಳು; ಅತಿ ಹೆಚ್ಚು ಸೋಂಕಿರುವ ಕೇರಳದಲ್ಲಿ ಹೈ ಅಲರ್ಟ್
ಕೊವಿಡ್ ಬಗ್ಗೆ ತೆಗೆದುಕೊಳ್ಳಬೇಕಾದ ಮಾರ್ಗಸೂಚಿಗಳನ್ನು ಸರ್ಕಾರವು ಈಗಾಗಲೇ ಹೊರಡಿಸಿದ್ದು, ಅದರ ಅನುಸಾರವಾಗಿ ಹಿರಿಯರು, ಗರ್ಭಿಣಿಯರು ಮತ್ತು ಮಕ್ಕಳು ಮಾಸ್ಕ್ ಧರಿಸುವುದು ಮತ್ತು ಸ್ಯಾನಿಟೈಸರ್ ಬಳಕೆ ಮಾಡುವುದನ್ನು ಪಾಲಿಸುವುದು ಒಳಿತು. ಪ್ರಸ್ತುತ ಪ್ರಕರಣಗಳು ಗಂಭೀರವಾಗಿಲ್ಲದಿದ್ದರೂ ಸಹ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವುದು ಅಗತ್ಯ. ಒಂದು ವೇಳೆ ರೋಗಲಕ್ಷಣಗಳು ತೀವ್ರವಾಗಿದ್ದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಎಂದು ಬೆಂಗಳೂರಿನ ವಾಸವಿ ಆಸ್ಪತ್ರೆಯ ತಜ್ಞರಾದ ತಜ್ಞ ಡಾ. ವಿನಯ್ ಹೊಸದುರ್ಗ ಸಲಹೆ ನೀಡಿದ್ದಾರೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




