ನೀವು ಹೆಚ್ಚು ಉಪ್ಪು ತಿನ್ನುತ್ತೀರಾ? ಕ್ಯಾನ್ಸರ್ ಉಂಟಾದೀತು ಎಚ್ಚರ
ಉಪ್ಪು ಹಾಕದ ಅಡುಗೆಯನ್ನು ತಿನ್ನಲು ಸಾಧ್ಯವೇ ಇಲ್ಲದಷ್ಟು ನಾವು ಉಪ್ಪಿನ ರುಚಿಗೆ ಒಗ್ಗಿಹೋಗಿದ್ದೇವೆ. ಆದರೆ, ಉಪ್ಪು ಎಷ್ಟು ರುಚಿಕರವೋ ಅದರಿಂದ ಆರೋಗ್ಯಕ್ಕೆ ಅಷ್ಟೇ ಹಾನಿಕರವೂ ಇದೆ. ಹೀಗಾಗಿ, ಉಪ್ಪು ಬಳಸುವ ಮುನ್ನ ಅದರಿಂದ ಆಗುವ ಅಡ್ಡಪರಿಣಾಮಗಳ ಬಗ್ಗೆಯೂ ತಿಳಿದಿರುವುದು ಅಗತ್ಯ.
ನವದೆಹಲಿ: ನಮ್ಮ ದೇಹಕ್ಕೆ ಉಪ್ಪು ಅಥವಾ ಸೋಡಿಯಂ ಅತ್ಯಗತ್ಯ ಖನಿಜವಾಗಿದ್ದು, ಉಪ್ಪು ದೇಹದಲ್ಲಿ ದ್ರವ ಸಮತೋಲನವನ್ನು ನಿಯಂತ್ರಿಸುತ್ತದೆ. ಇದು ಆಹಾರದ ಪರಿಮಳವನ್ನು ಹೆಚ್ಚಿಸುವುದರ ಜೊತೆಗೆ ಸ್ನಾಯುಗಳ ಉತ್ತಮ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ. ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಉಪ್ಪು ಪ್ರಮುಖ ಪೋಷಕಾಂಶವಾಗಿದ್ದರೂ ಸಹ ಉಪ್ಪನ್ನು ಹೆಚ್ಚಾಗಿ ಸೇವಿಸುವುದರಿಂದ ಬಿಪಿ ಮಾತ್ರವಲ್ಲದೆ ಹೊಟ್ಟೆಯ ಕ್ಯಾನ್ಸರ್ ಕೂಡ ಉಂಟಾಗುವ ಸಾಧ್ಯತೆಯಿದೆ ಎಂಬ ಆತಂಕಕಾರಿ ಮಾಹಿತಿಯೊಂದು ಬಯಲಾಗಿದೆ.
ಉಪ್ಪಿನಲ್ಲಿರುವ ಅಧಿಕ ಸೋಡಿಯಂ ಅಧಿಕ ರಕ್ತದೊತ್ತಡ ಮತ್ತು ಕ್ಯಾನ್ಸರ್ ಸೇರಿದಂತೆ ಪ್ರತಿಕೂಲ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಬಹುದು. ಹೆಚ್ಚಿನ ಉಪ್ಪು ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಹೆಲಿಕೋಬ್ಯಾಕ್ಟರ್ ಪೈಲೋರಿ ಅಥವಾ H. ಪೈಲೋರಿ ಅಂಶವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನಗಳು ಹೇಳಿವೆ. ಇದು ಹೊಟ್ಟೆ ಅಥವಾ ಗ್ಯಾಸ್ಟ್ರಿಕ್ ಕ್ಯಾನ್ಸರ್ಗೆ ಕಾರಣವಾಗುತ್ತದೆ.
ಇತ್ತೀಚಿನ ಸಂಶೋಧನೆಯು 10 ಗ್ರಾಂಗಿಂತ ಹೆಚ್ಚು ಉಪ್ಪನ್ನು ತಿನ್ನುವುದು ಹೊಟ್ಟೆಯ ಕ್ಯಾನ್ಸರ್ಗೆ ಕಾರಣವಾಗಬಹುದು ಎಂದು ತಿಳಿಸಿದೆ. ಈ ಬಗ್ಗೆ ಇಲಿಗಳ ಮೇಲೆ ಒಂದು ಅಧ್ಯಯನವನ್ನು ನಡೆಸಲಾಯಿತು. ಇದು ಹೆಚ್ಚು ಉಪ್ಪು ಸೇವನೆಯಿಂದ ಹೊಟ್ಟೆಯ ಒಳಪದರವನ್ನು ರೂಪಾಂತರಿಸುವ ಮೂಲಕ ಕ್ಯಾನ್ಸರ್ಗೆ ಕಾರಣವಾಗುತ್ತದೆ ಎಂದು ಬಹಿರಂಗಪಡಿಸಿತು.
ಇದನ್ನೂ ಓದಿ: ಶೇ.59ರಷ್ಟು ಮಹಿಳೆಯರಿಗೆ ಸ್ತನ ಕ್ಯಾನ್ಸರ್; ಈ 5 ಲಕ್ಷಣಗಳನ್ನು ನಿರ್ಲಕ್ಷ್ಯಿಸಬೇಡಿ
ಇದರ ನಂತರ ಜಪಾನ್, ಚೀನಾ, ಅಮೆರಿಕ ಮತ್ತು ಸ್ಪೇನ್‌ನ ಹಲವಾರು ಅಧ್ಯಯನಗಳು ಉಪ್ಪು ಸೇವನೆಯು ಗ್ಯಾಸ್ಟ್ರಿಕ್ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ದೃಢಪಡಿಸಿದೆ. ಉಪ್ಪಿನಂಶವಿರುವ ತರಕಾರಿಗಳು, ಉಪ್ಪನ್ನು ಹಾಕಿದ ಮೀನು, ಉಪ್ಪುಸಹಿತ ಚಿಪ್ಸ್, ಉಪ್ಪುಸಹಿತ ಕಡಲೆಕಾಯಿಗಳು, ಸಂಸ್ಕರಿಸಿದ ಮಾಂಸ, ಇತ್ಯಾದಿ ಆಹಾರಗಳ ಸೇವನೆಯನ್ನು ಕಡಿಮೆ ಮಾಡಬೇಕು. ಇವು ನಮ್ಮ ಉಪ್ಪಿನ ಸೇವನೆಯನ್ನು ದಿನಕ್ಕೆ 16 ಗ್ರಾಂವರೆಗೆ ಹೆಚ್ಚಿಸುತ್ತವೆ.
ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ ಪ್ರಕಾರ, ನಿಮ್ಮ ಆಹಾರದಲ್ಲಿ ಸೋಡಿಯಂ ಪ್ರಮಾಣವನ್ನು ದಿನಕ್ಕೆ 2,300 ಮಿಲಿಗ್ರಾಂಗಳಿಗಿಂತ ಕಡಿಮೆ ಮಾಡಬೇಕು. ಟೇಬಲ್ ಸಾಲ್ಟ್ ಸೋಡಿಯಂ ಅನ್ನು ಒಳಗೊಂಡಿರುವ ಸಾಮಾನ್ಯ ಆಹಾರವಾಗಿದೆ. ಒಂದು ಟೀಚಮಚ ಉಪ್ಪು 2,300 ಮಿಲಿ ಗ್ರಾಂ ಸೋಡಿಯಂ ಅನ್ನು ಹೊಂದಿರುತ್ತದೆ. ಹೊಟ್ಟೆಯ ಕ್ಯಾನ್ಸರ್ ವಿಶ್ವದಲ್ಲಿ ನಾಲ್ಕನೇ ಅತ್ಯಂತ ಸಾಮಾನ್ಯವಾಗಿದೆ. ಈ ಕ್ಯಾನ್ಸರ್ನಿಂದ ವರ್ಷಕ್ಕೆ 7,76,000 ಸಾವುಗಳು ಸಂಭವಿಸುತ್ತವೆ.
ಉಪ್ಪಿನಂಶ ಕಡಿಮೆ ಸೇವಿಸಲು ಏನು ಮಾಡಬೇಕು?:
ತಾಜಾ ಆಹಾರವನ್ನು ಸೇವಿಸಿ:
ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುವುದು ಬಹಳ ಮುಖ್ಯ. ಪಿಜ್ಜಾ, ಫಾಸ್ಟ್ ಫುಡ್, ಪ್ಯಾಕ್ ಮಾಡಿದ ಫುಡ್ ಮಿಕ್ಸ್ ಮತ್ತು ರೆಡಿ ಟು ಈಟ್ ಸೂಪ್ ಅಥವಾ ರೆಡಿಮೇಡ್ ಸಾರುಗಳಂತಹ ಹೆಚ್ಚಿನ ಸೋಡಿಯಂ ಅಂಶಗಳಿರುವ ಆಹಾರದ ಬಳಕೆಯನ್ನು ಬಿಟ್ಟುಬಿಡುವುದು ಅಥವಾ ಮಿತಿಗೊಳಿಸುವುದು ಮುಖ್ಯವಾಗಿದೆ.
ಹೆಚ್ಚು ಗಿಡಮೂಲಿಕೆಗಳನ್ನು ಬಳಸಿ:
ಗಿಡಮೂಲಿಕೆಗಳು, ಮಸಾಲೆಗಳು, ನಿಂಬೆ, ವಿನೆಗರ್, ಸೋಯಾ ಸಾಸ್, ಮಸಾಲೆ ಮಿಶ್ರಣಗಳು ಅಥವಾ ಸೂಪ್ ಮಿಶ್ರಣಗಳಂತಹ ಉಪ್ಪು ಮಸಾಲೆಗಳ ಬದಲಿಗೆ ಉಪ್ಪುಮುಕ್ತ ಮಸಾಲೆ ಮಿಶ್ರಣಗಳನ್ನು ಬಳಸಿ.
ನಿಮ್ಮ ದೇಹವನ್ನು ಹೈಡ್ರೇಟ್ ಮಾಡಿ:
ದೇಹ ಹೈಡ್ರೇಟ್ ಆಗಿರುವುದು ಅತ್ಯಂತ ಮುಖ್ಯವಾಗಿದೆ. ಸಾಕಷ್ಟು ನೀರನ್ನು ಸೇವಿಸುವುದರಿಂದ ನಿಮ್ಮ ದೇಹದಿಂದ ಹೆಚ್ಚುವರಿ ಸೋಡಿಯಂ ಅನ್ನು ತೆಗೆದುಹಾಕಬಹುದು.
ಇದನ್ನೂ ಓದಿ: ವಾಯು ಮಾಲಿನ್ಯದಿಂದ ಕ್ಯಾನ್ಸರ್, ಹೃದಯಾಘಾತ ಹೆಚ್ಚಳ; ಏನಿದು ಶಾಕಿಂಗ್ ವಿಷಯ?
ಪೊಟ್ಯಾಸಿಯಮ್ ಸೇವನೆಯನ್ನು ಹೆಚ್ಚಿಸಿ:
ದ್ರವ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಪೊಟ್ಯಾಸಿಯಮ್ ಪ್ರಮುಖ ಪಾತ್ರ ವಹಿಸುತ್ತದೆ. ಸೋಡಿಯಂನ ಪರಿಣಾಮಗಳನ್ನು ಕಡಿಮೆ ಮಾಡುವ ಮೂಲಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುವ ಆಲೂಗಡ್ಡೆ ಮತ್ತು ಆವಕಾಡೊಗಳಂತಹ ಪೊಟ್ಯಾಸಿಯಮ್ ಹೊಂದಿರುವ ಹೆಚ್ಚಿನ ಆಹಾರವನ್ನು ಸೇವಿಸಿ.
ಹೊಟ್ಟೆಯ ಕ್ಯಾನ್ಸರ್‌ನ ಲಕ್ಷಣಗಳೇನು?:
ಹೊಟ್ಟೆಯ ಕ್ಯಾನ್ಸರ್‌ನ ಲಕ್ಷಣಗಳು ಹೀಗಿವೆ. ನುಂಗಲು ತೊಂದರೆ, ಹೊಟ್ಟೆ ನೋವು, ತಿಂದ ನಂತರ ಹೊಟ್ಟೆ ಉಬ್ಬರಿಸುವುದು, ಅಲ್ಪ ಪ್ರಮಾಣದ ಆಹಾರವನ್ನು ತಿಂದರೂ ಹೊಟ್ಟೆ ತುಂಬಿದ ಅನುಭವ, ಹಸಿವಾಗದಿರುವುದು, ಎದೆಯುರಿ, ಅಜೀರ್ಣ, ವಾಕರಿಕೆ, ವಾಂತಿ, ತೂಕ ಕಳೆದುಕೊಳ್ಳುವುದು, ತುಂಬಾ ದಣಿದ ಭಾವನೆ, ಕಪ್ಪು ಮಲ ವಿಸರ್ಜನೆ ಹೊಟ್ಟೆ ಕ್ಯಾನ್ಸರ್‌ನ ಪ್ರಮುಖ ಲಕ್ಷಣಗಳು.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ