Health Tips: ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ತಾಯಂದಿರಿಗಾಗಿ ಒಂದಿಷ್ಟು ಸಲಹೆಗಳು

| Updated By: Skanda

Updated on: May 26, 2021 | 8:45 AM

ತಾಯ್ತನ ಎಂಬುದನ್ನು ಅನುಭವಿಸಿಯೇ ತಿಳಿಯಬೇಕು. ಕೇವಲ ಮಾತಿನಲ್ಲಿ ವರ್ಣಿಸಲು ಸಾಧ್ಯವಿಲ್ಲ. ಅದೆಷ್ಟೋ ನೋವುಗಳನ್ನು ನುಂಗಿ ತಾಯಿ ಮಗುವಿಗೆ ಜನ್ಮ ನೀಡುತ್ತಾಳೆ. ಹಾಗಾಗಿ ಗರ್ಭಿಣಿಯರಿಗಾಗಿ ಮತ್ತು ಹಾಲುಣಿಸುವ ತಾಯಂದಿರಿಗಾಗಿ ಒಂದಿಷ್ಟು ಸಲಹೆಗಳು.

Health Tips: ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ತಾಯಂದಿರಿಗಾಗಿ ಒಂದಿಷ್ಟು ಸಲಹೆಗಳು
ಪ್ರಾತಿನಿಧಿಕ ಚಿತ್ರ
Follow us on

ತಾಯ್ತನ ಎಂಬುದನ್ನು ಅನುಭವಿಸಿಯೇ ತಿಳಿಯಬೇಕು. ಕೇವಲ ಮಾತಿನಲ್ಲಿ ವರ್ಣಿಸಲು ಸಾಧ್ಯವಿಲ್ಲ. ಅದೆಷ್ಟೋ ನೋವುಗಳನ್ನು ನುಂಗಿ ತಾಯಿ ಮಗುವಿಗೆ ಜನ್ಮ ನೀಡುತ್ತಾಳೆ. ಮಗುವಿಗೆ ಜನ್ಮವಿತ್ತಾಗ ಮಗುವಿನ ಮೊದಲ ಧ್ವನಿಯನ್ನು ತಾಯಿ ಆನಂದಿಸುತ್ತಾಳೆ. ಧ್ವನಿ ತಾಯಿಯ ಕಿವಿಗೆ ತಾಕಿದಾಕ್ಷಣ ತನ್ನೆಲ್ಲಾ ನೋವುಗಳನ್ನು ಮರೆತು ಬಿಡುತ್ತಾಳೆ. ಆ ಅನುಭವ ಅವರ್ಣನೀಯ. ಗರ್ಭಿಣಿಯರಿದ್ದಾಗ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ತನ್ನ ಆರೋಗ್ಯದ ಜತೆಗೆ ಹೊಟ್ಟೆಯಲ್ಲಿರುವ ಮಗುವಿನ ಆರೈಕೆ ಮಾಡಬೇಕು. ತಾಯಿ ಆರೋಗ್ಯವಿದ್ದಲ್ಲಿ ಮಾತ್ರ, ಮಗುವು ಆರೋಗ್ಯವಾಗಿರಲು ಸಾಧ್ಯ. ಹಾಗಾಗಿ ಗರ್ಭಿಣಿಯರಿಗಾಗಿ ಮತ್ತು ಹಾಲುಣಿಸುವ ತಾಯಂದಿರಿಗಾಗಿ ಒಂದಿಷ್ಟು ಸಲಹೆಗಳು.

ಆರೋಗ್ಯಕರ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವುದರ ಮೂಲಕ ಹೆಚ್ಚಿನ ಪೋಷಕಾಂಶವನ್ನು ಪಡೆಯಬಹುದು. ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ಸಂಜೆಯ ವೇಳೆ ತಿಂಡಿ, ರಾತ್ರಿ ಊಟವನ್ನು ಸರಿಯಾಗಿ ಮಾಡಿ. ಹೆಚ್ಚು ಪೋಷಕಾಂಶಯುಕ್ತ ಆಹಾರವೇ ನಿಮ್ಮದಾಗಿರಲಿ. ಜತೆಗೆ ಆಹಾರ ಪದ್ಧತಿ ಸಮತೋಲನವಾಗಿರಲಿ.

ಆರೋಗ್ಯಕರ ಜೀವನ ಶೈಲಿ
ಸಮತೋಲನ ಆಹಾರ
ಸೂಕ್ತ ಮಿಟಮಿನ್​ ಸೇವನೆ
ನಿಯಮಿತ ವ್ಯಾಯಾಮ (ವೈದ್ಯರ ಸಲಹೆಯ ಮೇರೆಗೆ)

ಆಹಾರದಲ್ಲಿರಬೇಕಾದ ಪೋಷಕಾಂಶಗಳು
ಕಬ್ಬಿಣ
ರೋಗಗಳ ವಿರುದ್ಧ ಹೋರಾಡಲು ರೋಗನಿರೋಧಕ ಶಕ್ತಿಯ ಅವಶ್ಯಕತೆ ಇದೆ. ಹಾಗಾಗಿ ದೇಹಕ್ಕೆ ಕಬ್ಬಿಣದ ಖನಿಜಾಂಶ ಬೇಕು. ಕಬ್ಬಿಣದ ಕೊರತೆಯು ರಕ್ತಹೀನತೆಗೆ ಕಾರಣವಾಗುತ್ತದೆ. ರಕ್ತಹೀನತೆ ಮಗುವಿನ ತೂಕವನ್ನು ಕಡಿಮೆ ಮಾಡುತ್ತದೆ. ಹಾಗೂ ಅಕಾಲಿಕ ಜನನಕ್ಕೆ ಕಾರಣವಾಗುತ್ತದೆ. ಆದ್ದರಿಂದ ಕಬ್ಬಿಣದ ಅಂಶ ದೇಹದಲ್ಲಿರುವಂತೆ ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳಿ.

ಹಸಿರು ಸೊಪ್ಪು, ದ್ವಿದಳ ಧಾನ್ಯಗಳು, ಡ್ರೈ ಫ್ರುಟ್ಸ್​, ಮೊಟ್ಟೆಯಂತಹ ಕಬ್ಬಿಣದ ಅಂಶ ಹೊಂದಿರುವ ಆಹಾರ ಪದಾರ್ಥವನ್ನು ಸೇವಿಸಿ. ಪೇರಲೆ, ಕಿತ್ತಳೆ, ನಿಂಬೆ ಮುಂತಾದ ಹಣ್ಣುಗಳನ್ನು ಸೇವಿಸಿ. ಇದರ ಮೂಲಕ ನಿಮ್ಮಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಜತೆಗೆ ಮಿಟಮಿನ್​ ಸಿ ಪೋಷಕಾಂಶವನ್ನು ಹೊಂದಬಹುದು.

ಕ್ಯಾಲ್ಸಿಯಂ
ನಿಮಗೆ ಮತ್ತು ನಿಮ್ಮ ಮಗುವಿಗೆ ಮೂಳೆಗಳು ಸದೃಢವಾಗಿರಲು ಮತ್ತು ಹಲ್ಲುಗಳು ಸದೃಢವಾಗಿರಲು ಕ್ಯಾಲ್ಸಿಯಂನ ಅವಶ್ಯಕತೆ ತುಂಬಾ ಇದೆ. ರಕ್ತಪರಿಚಲನೆ, ಸ್ನಾಯು ಮತ್ತು ನರಮಂಡಲ ಸರಿಯಾಗಿ ಕಾರ್ಯ ನಿರ್ವಹಿಸಲು ಕ್ಯಾಲ್ಸಿಯಂ ಅಂಶ ಬೇಕು. ಹಾಗಾಗಿ ಹಾಲು-ಮೊಸರು, ಹಸಿರು ತರಕಾರಿಗಳು, ಮಜ್ಜಿಗೆಯನ್ನು ಸೇವಿಸಿ. ಮಾಂಸಹಾರಿಗಳು ವೈದ್ಯರ ಸಲಹೆಯ ಮೇರೆಗೆ ಮೀನಿನಿಂದ ತಯಾರಿಸಿದ ಆಹಾರವನ್ನು ಸೇವಿಸಬಹುದು.

ಪ್ರೋಟೀನ್​
ನಿಮ್ಮ ಮಗುವಿನ ಅಂಗಾಂಗಗಳು ಸದೃಢವಾಗಲು ಪ್ರೋಟೀನ್​ಯುಕ್ತ ಆಹಾರ ಮುಖ್ಯ. ಗರ್ಭಧಾರಣೆ ಸರಿಯಾಗಿ ಆಗಲು ಪ್ರೋಟೀನ್​ಯುಕ್ತ ಆಹಾರ ನಿಮ್ಮ ದೇಹಕ್ಕೆ ಬೇಕು. ಹಾಗಾಗಿ ತೆಳ್ಳಿಗಿನ ಮಾಂಸ, ಕೋಳಿ, ಮೀನು, ಮೊಟ್ಟೆ, ದ್ವಿದಳ ಧಾನ್ಯಗಳು, ಬಟಾಣಿ, ಬೀನ್ಸ್​, ಹಾಲು-ಮೊಸರು ಈ ರೀತಿಯ ಆಹಾರ ಪದಾರ್ಥ ನಿಮ್ಮದಾಗಿರಲಿ.

ಆದಷ್ಟು ಬೀದಿಯಲ್ಲಿ ಸಿಗುವ ಜಂಕ್​ಫುಡ್​ಗಳನ್ನು ಸೇವನೆಯನ್ನು ತಪ್ಪಿಸಿ. ಹೆಚ್ಚು ನೀರು ಕುಡಿಯಿರಿ. ಪದೇ ಪದೇ ಕಾಫಿ-ಟೀ ಕುಡಿಯುವ ರೂಢಿಯನ್ನು ತಪ್ಪಿಸಿಕೊಳ್ಳಿ. ಆರೋಗ್ಯದಲ್ಲಿ ಕೊಂಚ ಬದಲಾವಣೆ ಕಂಡುಬಂದರೂ ಹತ್ತಿರದ ವೈದ್ಯರನ್ನು ಆದಷ್ಟು ಬೇಗ ಭೇಟಿಯಾಗಿ. ಇವುಗಳನ್ನು ಪಾಲಿಸುತ್ತ ಜತೆಗೆ ಮಗುವಿನ ಉತ್ತಮ ಬೆಳವಣಿಗೆಯ ಮೂಲಕ ನಿಮ್ಮ ಆರೊಗ್ಯವನ್ನು ಕಾಪಾಡಿಕೊಳ್ಳುವ ಆಹಾರ ಪದ್ಧತಿ ರೂಢಿಸಿಕೊಳ್ಳಿ.

ಇದನ್ನೂ ಓದಿ:

ಕೊಪ್ಪಳ: 50ಕ್ಕೂ ಹೆಚ್ಚು ಸೋಂಕಿತ ಗರ್ಭಿಣಿಯರಿಗೆ ಯಶಸ್ವಿ ಹೆರಿಗೆ

Health Tips: ಮಕ್ಕಳಿಂದ ವಯಸ್ಕರವರೆಗೂ ಇಷ್ಟಪಡುವ ಖರ್ಜೂರದ ಪ್ರಯೋಜನಗಳೇನು?