ಹಲ್ಲುಗಳು ಹಳದಿಯಾಗಿದೆ ಎಂಬ ಚಿಂತೆ ಯಾಕೆ? ಬಿಳಿಬಿಳಿ ಸ್ವಚ್ಛ ಹಲ್ಲಿಗಾಗಿ ಮನೆಯಲ್ಲೇ ಹೀಗೆ ಮಾಡಬಹುದು

| Updated By: ganapathi bhat

Updated on: Apr 05, 2022 | 1:04 PM

ಹಲ್ಲನ್ನು ಸ್ವಚ್ಛ, ಶುಭ್ರವಾಗಿ ಇರಿಸಿಕೊಳ್ಳುವುದು ಹೇಗೆ? ಯಾವ ಆಹಾರ ಸೇವಿಸಿದರೆ ಹಲ್ಲಿಗೆ ಉತ್ತಮ? ಈ ಪ್ರಶ್ನೆಗಳು ನಿಮ್ಮನ್ನು ಕಾಡಿರಬಹುದು. ಹಲ್ಲುಗಳನ್ನು ನೈಸರ್ಗಿಕ ವಿಧಾನದ ಮೂಲಕ ಹೊಳೆಯುವಂತೆ ಮಾಡುವುದು ಹೇಗೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಹಲ್ಲುಗಳು ಹಳದಿಯಾಗಿದೆ ಎಂಬ ಚಿಂತೆ ಯಾಕೆ? ಬಿಳಿಬಿಳಿ ಸ್ವಚ್ಛ ಹಲ್ಲಿಗಾಗಿ ಮನೆಯಲ್ಲೇ ಹೀಗೆ ಮಾಡಬಹುದು
ಸಾಂದರ್ಭಿಕ ಚಿತ್ರ
Follow us on

ಹಲ್ಲು ದೇಹದ ಸೌಂದರ್ಯ ಕಾಪಾಡುವ ಬಹುಮುಖ್ಯ ಅಂಗ. ನಾವು ಸುಂದರವಾಗಿ ಕಾಣುವಲ್ಲಿ ಹಲ್ಲುಗಳೂ ಮುಖ್ಯಪಾತ್ರ ವಹಿಸುತ್ತದೆ. ಆದರೆ, ಕೆಲವೊಮ್ಮೆ, ಕೆಲವೊಬ್ಬರ ಹಲ್ಲುಗಳು ತಮ್ಮ ಶುಭ್ರತೆಯನ್ನು ಕಳೆದುಕೊಳ್ಳುತ್ತವೆ. ಬಿಳಿ ಬಣ್ಣವು ಕಳೆಗುಂದುತ್ತದೆ. ಇದನ್ನು ಕಡಿಮೆ ಮಾಡುವುದು ಹೇಗೆ? ಹಲ್ಲನ್ನು ಸ್ವಚ್ಛ, ಶುಭ್ರವಾಗಿ ಇರಿಸಿಕೊಳ್ಳುವುದು ಹೇಗೆ? ಯಾವ ಆಹಾರ ಸೇವಿಸಿದರೆ ಹಲ್ಲಿಗೆ ಉತ್ತಮ? ಈ ಪ್ರಶ್ನೆಗಳು ನಿಮ್ಮನ್ನು ಕಾಡಿರಬಹುದು. ಹಲ್ಲುಗಳನ್ನು ನೈಸರ್ಗಿಕ ವಿಧಾನದ ಮೂಲಕ ಹೊಳೆಯುವಂತೆ ಮಾಡುವುದು ಹೇಗೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ತೈಲದಿಂದ ಬಾಯಿ ಮುಕ್ಕಳಿಸುವುದನ್ನು (Oil Pulling) ಅಭ್ಯಾಸ ಮಾಡಿ
ತೈಲದಿಂದ ಬಾಯಿ ಮುಕ್ಕಳಿಸುವುದು ಭಾರತೀಯ ಸಾಂಪ್ರದಾಯಿಕ ಪದ್ಧತಿಯಾಗಿದೆ. ಇದರಿಂದ ಬಾಯಿಯ ಸ್ವಚ್ಛತೆ, ಆರೋಗ್ಯ ವೃದ್ಧಿಸುತ್ತದೆ. ಅಷ್ಟೇ ಅಲ್ಲದೆ ದೇಹದಿಂದ ವಿಷಾಂಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ತೈಲದಿಂದ ಬಾಯಿ ಮುಕ್ಕಳಿಸಲು ಸೂರ್ಯಕಾಂತಿ ಎಣ್ಣೆ, ಎಳ್ಳೆಣ್ಣೆ ಬಳಸಬಹುದು. ತೆಂಗಿನ ಎಣ್ಣೆ/ ಕೊಬ್ಬರಿ ಎಣ್ಣೆಯನ್ನೂ ಬಳಸಬಹುದಾಗಿದೆ. ತೆಂಗಿನ ಎಣ್ಣೆ ಸುವಾಸಿತವೂ, ಸಹಜ ರುಚಿಯನ್ನೂ ಹೊಂದಿರುತ್ತದೆ. ಅಧ್ಯಯನಗಳ ಪ್ರಕಾರ ತಿಳಿದು ಬಂದಿರುವ ಅಂಶದಂತೆ ತೈಲದಿಂದ ಬಾಯಿಮುಕ್ಕಳಿಸುವುದರಿಂದ ಬಾಯಿಯಲ್ಲಿನ ಬ್ಯಾಕ್ಟೀರಿಯಾಗಳು ಕಡಿಮೆಯಾಗುತ್ತದೆ.

ತೈಲದಿಂದ ಬಾಯಿ ಮುಕ್ಕಳಿಸಲು 1 ಟೇಬಲ್ ಸ್ಪೂನ್​ನಷ್ಟು ಎಣ್ಣೆ ತೆಗೆದುಕೊಳ್ಳಬೇಕು. ಅದನ್ನು ಬಾಯಿಗೆ ಹಾಕಿ ಚೆನ್ನಾಗಿ ಬಾಯಿ ಮುಕ್ಕಳಿಸಬೇಕು. ಸುಮಾರು 10-15 ನಿಮಿಷಗಳ ಕಾಲ ಹೀಗೆ ಮಾಡಬೇಕು. ಬಳಿಕ ಅದನ್ನು ಬಾಯಿಯಿಂದ ಹೊರಚೆಲ್ಲಬೇಕು.

ಅಡುಗೆ ಸೋಡಾದಲ್ಲಿ ಹಲ್ಲುಗಳನ್ನು ಉಜ್ಜಿ
ಬೇಕಿಂಗ್ ಸೋಡಾ ಅಥವಾ ಅಡುಗೆ ಸೋಡದಲ್ಲಿ ಹಲ್ಲುಗಳನ್ನು ಬಿಳಿಯಾಗಿಸುವ ನೈಸರ್ಗಿಕ ಅಂಶಗಳಿರುತ್ತದೆ. ಹಾಗಾಗಿ, ಇದನ್ನು ಟೂಥ್​ಪೇಸ್ಟ್​ಗಳಲ್ಲಿ ಕೂಡ ಬಳಸಲಾಗುತ್ತದೆ. ಅಡುಗೆ ಸೋಡದಿಂದ ಹಲ್ಲುಜ್ಜುವುದರಿಂದ ಹಲ್ಲಿನ ಮೇಲಿನ ಕಲೆಗಳು ದೂರವಾಗುತ್ತದೆ. ಅಷ್ಟೇ ಅಲ್ಲದೆ, ಅಡುಗೆ ಸೋಡ ಬಾಯಿಯಲ್ಲಿನ ಬ್ಯಾಕ್ಟೀರಿಯಾಗಳನ್ನು ಕೂಡ ತೊಡೆದುಹಾಕುತ್ತದೆ.

ಹೀಗೆ ಅಡುಗೆ ಸೋಡದಿಂದ ಹಲ್ಲು ತಿಕ್ಕುವುದರಿಂದ ರಾತ್ರಿ ಬೆಳಗಾಗುವುದರೊಳಗೆ ಹಲ್ಲುಗಳು ಬಿಳಿಯಾಗುತ್ತವೆ ಎಂದು ನಿರೀಕ್ಷಿಸುವುದು ಸರಿಯಲ್ಲ. ಆದರೆ, ಈ ಕ್ರಮದಿಂದ ಕ್ರಮೇಣವಾಗಿ ಹಲ್ಲುಗಳು ಶುಭ್ರವಾಗುತ್ತವೆ. ಕೇವಲ ಅಡುಗೆ ಸೋಡದಿಂದ ಹಲ್ಲುಗಳು ಬಿಳಿಯಾಗುತ್ತವೆ ಎಂಬುದಕ್ಕೆ ಯಾವುದೇ ಪುರಾವೆ ಲಭ್ಯವಿಲ್ಲ. ಆದರೆ, ಬೇಕಿಂಗ್ ಸೋಡ ಅಂಶ ಹೊಂದಿರುವ ಟೂಥ್​ಪೇಸ್ಟ್​ಗಳಿಂದ ಹಲ್ಲುಗಳು ಶುಭ್ರವಾಗುವವು.

1 ಸಣ್ಣ ಚಮಚದಷ್ಟು ಅಡುಗೆ ಸೋಡವನ್ನು 2 ಸಣ್ಣ ಚಮಚದಷ್ಟು ನೀರಿಗೆ ಬೆರೆಸಿ, ಪೇಸ್ಟ್ ಜೊತೆಗೆ ಹಲ್ಲುಜ್ಜಬೇಕು. ವಾರದ ಕೆಲವು ದಿನಗಳಲ್ಲಿ ಹೀಗೆ ಮಾಡುವುದರಿಂದ ಹಲ್ಲುಗಳ ಕಲೆ ಕಳೆಯಬಹುದು.

ಹಣ್ಣು, ತರಕಾರಿ ಸೇವಿಸಿ
ದಿನನಿತ್ಯದ ಆಹಾರದಲ್ಲಿ ಹಣ್ಣು, ತರಕಾರಿ ಸೇವಿಸುವುದರಿಂದ ದೇಹ ಮತ್ತು ಹಲ್ಲಿನ ಆರೋಗ್ಯವೂ ಉತ್ತಮವಾಗುತ್ತದೆ. ಸ್ಟ್ರಾಬೆರಿ ಹಾಗೂ ಅನನಾಸು ಹಣ್ಣುಗಳನ್ನು ಸೇವಿಸುವುದು ಹಲ್ಲು ಶುಭ್ರವಾಗಲು ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ. ಇದರ ಹೊರತಾಗಿ ಹಲ್ಲುಜ್ಜುವುದು, ಬಾಯಿ ಮುಕ್ಕುಳಿಸುವುದನ್ನು ಮರೆಯಬೇಡಿ. ಅಥವಾ ಅದನ್ನು ನಿರ್ಲ್ಯಕ್ಷವೂ ಮಾಡಬೇಡಿ. ದಿನನಿತ್ಯ ಚೆನ್ನಾಗಿ ಹಲ್ಲುಜ್ಜಿ, ಆಗಾಗ ಬಾಯಿ ಮುಕ್ಕಳಿಸುತ್ತಿರಿ. ಸಾಧ್ಯವಾದರೆ ಎರಡು ಬಾರಿ ಹಲ್ಲು ತಿಕ್ಕಿ.

ಇನ್ನುಳಿದ ಕೆಲವು ವಿಧಾನಗಳು
ಇದ್ದಿಲು ಚೂರುಗಳಿಂದ ಅಥವಾ ಇದ್ದಲು ಪುಡಿಯಿಂದ ಹಲ್ಲುಜ್ಜುವುದು, ಕಿತ್ತಳೆ, ಲಿಂಬು ಅಥವಾ ಬಾಳೆಹಣ್ಣು ಸಿಪ್ಪೆಯಿಂದ ಹಲ್ಲುಗಳನ್ನು ತಿಕ್ಕುವುದು ಇತ್ಯಾದಿ ಹಲ್ಲುಗಳನ್ನು ಬಿಳಿಯಾಗಿಸುತ್ತದೆ. ಬಾಯಿಯನ್ನು ಸ್ವಚ್ಛಗೊಳಿಸುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇವ್ಯಾವುವೂ ವೈಜ್ಞಾನಿಕವಾಗಿ ಒಪ್ಪಿತವಾಗಿಲ್ಲ.

ಇದನ್ನೂ ಓದಿ: Health Tips: ರಾತ್ರಿ ಮಲಗುವ ಮುಂಚೆ ಎಂಥಾ ಆಹಾರ ಸೇವಿಸಬೇಕು? ಇಲ್ಲಿದೆ ಮಾಹಿತಿ

ಇದನ್ನೂ ಓದಿ: Health Tips: ಬೊಜ್ಜು ಕರಗಿಸಲು ಮೆಂತ್ಯ ಉಪಯೋಗಿಸಿ; ಆರೋಗ್ಯಕರ ಜೀವನಕ್ಕೆ ಮನೆಯಲ್ಲೇ ಮದ್ದು

Published On - 10:26 pm, Tue, 30 March 21