ಕ್ಯಾಲ್ಸಿಯಂ, ಕಬ್ಬಿಣದ ಸಪ್ಲಿಮೆಂಟ್ ಒಟ್ಟಿಗೇ ಯಾಕೆ ತಿನ್ನಬಾರದು?
ಮಾನವನ ದೇಹವು ಸರಿಯಾಗಿ ಕಾರ್ಯ ನಿರ್ವಹಿಸಲು ಕಬ್ಬಿಣ ಮತ್ತು ಕ್ಯಾಲ್ಸಿಯಂ ಎರಡೂ ಅವಶ್ಯಕ. ಹಿಮೋಗ್ಲೋಬಿನ್ ಉತ್ಪಾದನೆಯಲ್ಲಿ ಕಬ್ಬಿಣವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಹಾಗೇ, ಆರೋಗ್ಯಕರ ಮೂಳೆಗಳು ಮತ್ತು ಹಲ್ಲುಗಳಿಗೆ ಕ್ಯಾಲ್ಸಿಯಂ ಅತ್ಯಗತ್ಯ. ಹೀಗಾಗಿ, ಗರ್ಭಿಣಿಯರಿಗೆ ಕ್ಯಾಲ್ಸಿಯಂ ಮತ್ತು ಐರನ್ ಸಪ್ಲಿಮೆಂಟ್ಗಳನ್ನು ನೀಡಲಾಗುತ್ತದೆ. ಆದರೆ, ಈ ಎರಡೂ ಮಾತ್ರೆಗಳನ್ನು ಎಂದಿಗೂ ಒಟ್ಟಿಗೇ ತಿನ್ನಬಾರದು. ಯಾಕೆ ಗೊತ್ತಾ?
ಕ್ಯಾಲ್ಸಿಯಂ ಮತ್ತು ಐರನ್ ಎರಡೂ ನಮ್ಮ ದೇಹಕ್ಕೆ ಅತ್ಯಗತ್ಯವಾದ ಸಪ್ಲಿಮೆಂಟ್ಗಳಾಗಿವೆ. ಕಬ್ಬಿಣ (Iron Supplements) ಹಾಗೂ ಕ್ಯಾಲ್ಸಿಯಂ (Calcium Supplements) ಮಗುವಿನ ದೇಹ ರಚನೆಗೆ ಅತ್ಯಗತ್ಯವಾದ ಅಂಶಗಳಾಗಿರುವುದರಿಂದ ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ಈ ಎರಡೂ ಸಪ್ಲಿಮೆಂಟ್ಗಳನ್ನು ನೀಡಲಾಗುತ್ತದೆ. ಇದರಿಂದ ಭ್ರೂಣದಲ್ಲಿರುವ ಮಗುವಿನ ಮೂಳೆಯ ಬೆಳವಣಿಗೆ ಚೆನ್ನಾಗಿ ಆಗುತ್ತದೆ. ಹಾಗೇ, ಮಗು ಹುಟ್ಟಿದ ಬಳಿಕವೂ ಮಗುವಿಗೆ ಹಾಲುಣಿಸುವಾಗ ಕ್ಯಾಲ್ಸಿಯಂ ಮಾತ್ರೆಗಳನ್ನು ನೀಡಲಾಗುತ್ತದೆ. ಇದರಿಂದ ಮಗುವಿನ ಬೆಳವಣಿಗೆ ಚೆನ್ನಾಗಿ ಆಗುತ್ತದೆ ಎಂಬುದು ಮುಖ್ಯ ಕಾರಣ. ಆದರೆ, ಎಂದಿಗೂ ಕ್ಯಾಲ್ಸಿಯಂ ಮತ್ತು ಐರನ್ ಮಾತ್ರೆಗಳನ್ನು ಒಟ್ಟಾಗಿ ತಿನ್ನುವಂತಿಲ್ಲ. ಇದಕ್ಕೆ ಕಾರಣವೇನು ಗೊತ್ತಾ?
ಗರ್ಭಾವಸ್ಥೆಯಲ್ಲಿ, ಹಾಲುಣಿಸುವ ಸಮಯದಲ್ಲಿ ಮತ್ತು ಋತುಬಂಧದ ಸಮಯದಲ್ಲಿ ತಜ್ಞರು ಕ್ಯಾಲ್ಸಿಯಂ ಮತ್ತು ಐರನ್ ಸಪ್ಲಿಮೆಂಟ್ಗಳನ್ನು ಸೇವಿಸಲು ಸೂಚಿಸುತ್ತಾರೆ. ಆದರೆ, ನೀವು ಈ ಎರಡು ಸಪ್ಲಿಮೆಂಟ್ಗಳನ್ನು ಒಟ್ಟಿಗೇ ತೆಗೆದುಕೊಳ್ಳುವಂತಿಲ್ಲ ಎಂದು ಕೂಡ ಸೂಚಿಸುತ್ತಾರೆ. ಅದಕ್ಕೆ ಕಾರಣ ಏನಿರಬಹುದು ಎಂದು ಯೋಚಿಸಿದ್ದೀರಾ? ಗರಿಷ್ಠ ಪ್ರಯೋಜನಗಳು ಮತ್ತು ಉತ್ತಮ ಹೀರಿಕೊಳ್ಳುವಿಕೆಗಾಗಿ ಕ್ಯಾಲ್ಸಿಯಂ ಮತ್ತು ಐರನ್ ಮಾತ್ರೆಗಳೆರಡನ್ನೂ ಬೇರೆ ಬೇರೆ ಅವಧಿಯಲ್ಲಿ ಸೇವಿಸಬೇಕು. ಸಂಶೋಧನೆಯ ಪ್ರಕಾರ, ಕ್ಯಾಲ್ಸಿಯಂ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು 40% ರಿಂದ 60%ರಷ್ಟು ಕಡಿಮೆ ಮಾಡುತ್ತದೆ. ಆದ್ದರಿಂದ, ಕ್ಯಾಲ್ಸಿಯಂ ಸಪ್ಲಿಮೆಂಟ್ಗಳನ್ನು ಕಬ್ಬಿಣದ ಸಪ್ಲಿಮೆಂಟ್ಗಳೊಂದಿಗೆ ಸೇವಿಸುವುದು ಒಳ್ಳೆಯದಲ್ಲ.
ಇದನ್ನೂ ಓದಿ: ಮೂಳೆಗಳ ಆರೋಗ್ಯಕ್ಕೆ ಅತ್ಯಗತ್ಯವಾದ 6 ಸಸ್ಯಾಹಾರಿ ಆಹಾರಗಳಿವು
ಖಾಲಿ ಹೊಟ್ಟೆಯಲ್ಲಿ ಕಬ್ಬಿಣವು ಉತ್ತಮವಾಗಿ ಹೀರಲ್ಪಡುತ್ತದೆ. ಆದ್ದರಿಂದ, ನೀವು ಊಟಕ್ಕೆ ಮುಂಚಿತವಾಗಿ ಅವುಗಳನ್ನು ತೆಗೆದುಕೊಳ್ಳಬಹುದು. ಅಲ್ಲದೆ, ಕಬ್ಬಿಣದ ಸಪ್ಲಿಮೆಂಟ್ಗಳು ನಿಮ್ಮ ಜೀರ್ಣಕಾರಿ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಕಬ್ಬಿಣ ಮತ್ತು ಕ್ಯಾಲ್ಸಿಯಂ ಒಂದಕ್ಕೊಂದು ಉತ್ತಮ ಸಂಬಂಧವನ್ನು ಹೊಂದಿವೆ. ಅವೆರಡನ್ನೂ ಒಟ್ಟಿಗೇ ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಪ್ರಯೋಜನವಾಗದೆ ಇರಬಹುದು.
ಇದನ್ನೂ ಓದಿ: ಮೂಳೆಯನ್ನು ಸದೃಢಗೊಳಿಸುವ ಕ್ಯಾಲ್ಸಿಯಂ ಸಮೃದ್ಧವಾದ ಡ್ರೈಫ್ರೂಟ್ಗಳಿವು
ನೀವು ಈ ಎರಡು ಸಪ್ಲಿಮೆಂಟ್ಗಳನ್ನು ಕಡಿಮೆಯೆಂದರೂ 6 ಗಂಟೆಗಳ ಅಂತರದಲ್ಲಿ ಸೇವಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಕಬ್ಬಿಣದ ಸಪ್ಲಿಮೆಂಟ್ಗಳನ್ನು ತೆಗೆದುಕೊಳ್ಳುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ಇತರ ವಿಷಯಗಳು ಹೀಗಿವೆ. ನೀವು ಕಬ್ಬಿಣದ ಸಪ್ಲಿಮೆಂಟ್ ತೆಗೆದುಕೊಳ್ಳುತ್ತಿದ್ದರೆ, ಹಾಲು, ಚೀಸ್, ಮೊಸರು, ಪಾಲಕ್, ಚಹಾ, ಕಾಫಿ ಮತ್ತು ಸಿರಿಧಾನ್ಯಗಳನ್ನು ಸೇವಿಸುವ ಮೊದಲು ಕನಿಷ್ಠ 2 ಗಂಟೆಗಳ ಅಂತರವನ್ನು ಇಟ್ಟುಕೊಳ್ಳಿ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ