
ದಿನ ಕಳೆದಂತೆ ಸೂರ್ಯನ ಪ್ರಖರತೆ ಏರುತ್ತಲೇ ಇದೆ. “ಇಂದು ಮಳೆ ಬರಬಹುದು, ನಾಳೆ ಬರಬಹುದು” ಎಂಬ ನಿರೀಕ್ಷೆ ಎಲ್ಲರಲ್ಲೂ ಸಹಜ. ಇತ್ತೀಚೆಗೆ ಶಿರಸಿಯಂತಹ ಮಲೆನಾಡಿನ ಭಾಗದಲ್ಲೂ ನೆರಳಿನಲ್ಲೇ ಸುಮಾರು 35°C ಉಷ್ಣಾಂಶ ದಾಖಲಾಗುತ್ತಿರುವುದು ಬಿಸಿಲಿನ ತೀವ್ರತೆಗೆ ಸಾಕ್ಷಿ. ಹಿಂದಿನ ಕಾಲದಲ್ಲಿ 33°C ದಾಟಿದರೆ ಮಳೆ ಬರುತ್ತದೆ ಎಂಬ ನಂಬಿಕೆಯಿತ್ತು, ಆದರೆ ಈಗಿನ ಹವಾಮಾನ ಬದಲಾವಣೆ ನಮಗೆ ಹೆಚ್ಚಿನ ಎಚ್ಚರಿಕೆಯನ್ನು ನೀಡುತ್ತಿದೆ. ಬಿಸಿಲಿನ ಧಗೆಯಿಂದ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳಲು ಇಲ್ಲಿವೆ ಕೆಲವು ಪ್ರಮುಖ ಸಲಹೆಗಳು:
ಸಾಮಾನ್ಯವಾಗಿ ಮಧ್ಯಾಹ್ನ 11:30 ರಿಂದ ಸಂಜೆ 4:00ರವರೆಗೆ ಬಿಸಿಲಿನ ತೀವ್ರತೆ ಗರಿಷ್ಠವಾಗಿರುತ್ತದೆ. ಸಾಧ್ಯವಾದಷ್ಟು ಈ ಸಮಯದಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಿ. ಅನಿವಾರ್ಯ ಕೆಲಸಗಳಿದ್ದರೆ ಬೆಳಿಗ್ಗೆ ಅಥವಾ ಸಂಜೆ 4 ಗಂಟೆಯ ನಂತರ ಮುಗಿಸಿಕೊಳ್ಳುವುದು ಒಳಿತು.
ಬಿಸಿಲಿನಲ್ಲಿ ಹೋಗಲೇಬೇಕಾದ ಸಂದರ್ಭ ಬಂದಾಗ ಹತ್ತಿ ಬಟ್ಟೆ ಟೋಪಿ ಬಳಸಿ. ಇದು ತಲೆಯನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ. ಇದಲ್ಲದೇ ಅಂಪೈರ್ ಕ್ಯಾಪ್ (Umpire Cap) ಸಾಮಾನ್ಯ ಪಿ-ಕ್ಯಾಪ್‌ಗಿಂತ ಇದು ಮುಖ ಮತ್ತು ಕುತ್ತಿಗೆಗೆ ಹೆಚ್ಚು ರಕ್ಷಣೆ ನೀಡುತ್ತದೆ. ಗಾಢ ಬಣ್ಣದ ಬಟ್ಟೆಗಳು ಶಾಖವನ್ನು ಹೀರಿಕೊಳ್ಳುತ್ತವೆ. ಆದ್ದರಿಂದ ಬಿಳಿ ಅಥವಾ ತಿಳಿ ಬಣ್ಣದ ಟೋಪಿಗಳನ್ನು ಧರಿಸುವುದು ಹೆಚ್ಚು ಆರಾಮದಾಯಕ.
ಬಿಸಿಲಿನಲ್ಲಿ ದೇಹವು ಬೇಗನೆ ನೀರಿನಾಂಶವನ್ನು ಕಳೆದುಕೊಳ್ಳುತ್ತದೆ. ಹಾಗಾಗಿ ಸಾಮಾನ್ಯಕ್ಕಿಂತ ಹೆಚ್ಚು ನೀರನ್ನು ಕುಡಿಯಿರಿ. ಬಿಸಿಲಿಗೆ ಹೋಗುವ ಮೊದಲು 1 ಲೀಟರ್ ನೀರಿಗೆ 6 ಚಮಚ ಸಕ್ಕರೆ ಮತ್ತು 1 ಚಮಚ ಉಪ್ಪು ಸೇರಿಸಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಇದು ದೇಹದ ಶಕ್ತಿಯನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಮೌತ್ ಕಾಂಡೋಮ್ ಎಂದರೇನು? ಇದು ಓರಲ್ ಕ್ಯಾನ್ಸರ್‌ನಿಂದ ರಕ್ಷಣೆ ನೀಡುತ್ತದೆಯೇ?
ಉತ್ತರ ಕನ್ನಡದಲ್ಲಿ ಜನಪ್ರಿಯವಾಗಿರುವ ಲಾವಂಚ (ಮಡಿವಾಳ ಬೇರು) ಬಿಸಿಲಿಗೆ ಅತ್ಯುತ್ತಮ ಮದ್ದು. ಒಂದು ಅಡಿಕೆಯ ಗಾತ್ರದಷ್ಟು ಲಾವಂಚ ಬೇರನ್ನು ಮಣ್ಣಿಲ್ಲದಂತೆ ಚೆನ್ನಾಗಿ ತೊಳೆದು ಕುಡಿಯುವ ನೀರಿನ ಡ್ರಂಗೆ ಹಾಕಿ. ಒಮ್ಮೆ ಬಳಸಿದ ಬೇರನ್ನು 3-4 ದಿನಗಳವರೆಗೆ ಬಳಸಬಹುದು. ಈ ನೀರು ದೇಹಕ್ಕೆ ನೈಸರ್ಗಿಕ ತಂಪು ನೀಡುವುದಲ್ಲದೆ, ಮನಸ್ಸಿಗೆ ಹಿತವಾದ ಸುಗಂಧವನ್ನೂ ನೀಡುತ್ತದೆ.
ಪ್ರವಾಸ ಮಾಡುವವರಿಗೆ ಅಥವಾ ಹೆಚ್ಚು ನೀರು ಕುಡಿಯಲು ಸಾಧ್ಯವಾಗದವರಿಗೆ ಇದು ರಾಮಬಾಣ. 1 ಲೀಟರ್ ನೀರಿಗೆ 20 ಗ್ರಾಂ ಕೊತ್ತಂಬರಿ ಪುಡಿ ಹಾಕಿ 15-20 ನಿಮಿಷ ಕುದಿಸಿ. ನಂತರ 6 ಚಮಚ ಸಕ್ಕರೆ ಮತ್ತು 2 ಚಮಚ ಉಪ್ಪು ಸೇರಿಸಿ.
ಲೇಖನ: ಡಾ. ರವಿಕಿರಣ್ ಪಟವರ್ಧನ, ಪಟವರ್ಧನ ಆಯುರ್ವೇದ ಕ್ಲಿನಿಕ್, ಶಿರಸಿ (9242122874)
ಆರೋಗ್ಯಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:45 am, Sat, 18 April 26