ಸಾಮಾನ್ಯವಾಗಿ ತುರಿಕೆ ದೊಡ್ಡ ಸಮಸ್ಯೆಯಲ್ಲ ಎಂದು ಎನಿಸಬಹುದು ಆದರೆ ಇದರಿಂದ ಉಂಟಾಗುವ ಕಿರಿಕಿರಿ ಮಾತ್ರ ಯಾರಿಗೂ ಬೇಡ. ಇದನ್ನು ಹಲವಾರು ರೀತಿಯ ಔಷಧಗಳನ್ನು ಮಾಡಿ ಗುಣಪಡಿಸಿಕೊಳ್ಳುವ ಬದಲು ಮನೆಯಲ್ಲಿಯೇ ಸರಳವಾದ ಪದಾರ್ಥಗಳನ್ನು ಬಳಸಿಕೊಂಡು ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದು. ಹಾಗಾದರೆ ದೇಹದ ಯಾವುದೇ ಭಾಗದಲ್ಲಿಯಾದರೂ ತುರಿಕೆ ಕಂಡು ಬಂದರೆ ಏನು ಮಾಡಬಹುದು? ಇಲ್ಲಿದೆ ಸರಳ ಮನೆಮದ್ದು.
ಇತ್ತೀಚಿನ ದಿನಗಳಲ್ಲಿ ನಾನಾ ರೀತಿಯ ಚರ್ಮ ಸಮಸ್ಯೆಗಳು ಕಂಡು ಬರುತ್ತಿದ್ದು ಇದರಿಂದ ತುರಿಕೆ ಜಾಸ್ತಿಯಾಗುತ್ತಿದೆ, ಚರ್ಮ ಕೆಂಪಗಾಗುತ್ತದೆ, ದದ್ದುಗಳು ಕಂಡು ಬರುತ್ತದೆ. ಈ ರೀತಿಯ ನೆವೆ ಅಥವಾ ತುರಿಕೆಗೆ ಕಂಡು ಬರಲು ಕೆಲವೊಮ್ಮೆ ಕಾರಣಗಳು ಇರುವುದಿಲ್ಲ. ಗಾಳಿಯಲ್ಲಿರುವ ರೋಗಾಣುಗಳಿಂದಲೂ ಈ ರೀತಿಯ ಸಮಸ್ಯೆ ಕಂಡು ಬರಬಹುದು. ಹಾಗಾಗಿ ಇದನ್ನು ತಡೆಯಲು ಡಾ. ಗೌರಿ ಸುಬ್ರಹ್ಮಣ್ಯ ಅವರು ಖಾಸಗಿ ವಾಹಿನಿಯೊಂದರಲ್ಲಿ, ಸರಳವಾದ ಮನೆ ಮದ್ದನ್ನು ತಿಳಿಸಿದ್ದು ಇದನ್ನು ಉಪಯೋಗಿಸುವುದರಿಂದ ಚರ್ಮಕ್ಕೆ ಸಂಬಂಧಿಸಿದ ನಾನಾ ರೀತಿಯ ಸಮಸ್ಯೆಗಳನ್ನು ತಡೆಯಬಹುದು ಜೊತೆಗೆ ಚರ್ಮವನ್ನು ಆರೋಗ್ಯವಾಗಿ ಇರಿಸಿಕೊಳ್ಳಬಹುದು.
ಮೊದಲು ಮೂರು ಸೊಪ್ಪುಗಳನ್ನು ಹುರಿದುಕೊಂಡು ಅದನ್ನು ನುಣ್ಣಗೆ ರುಬ್ಬಿಕೊಳ್ಳಿ, ಬಳಿಕ ಒಲೆಯ ಮೇಲೆ ಸ್ವಲ್ಪ ಕೊಬ್ಬರಿ ಎಣ್ಣೆ ಹಾಕಿ ಅದಕ್ಕೆ ರುಬ್ಬಿರುವ ಮಿಶ್ರಣವನ್ನು ಸೇರಿಸಿಕೊಂಡು ಅದಕ್ಕೆ ಅರಿಶಿನ ಸೇರಿಸಿ, ಬಳಿಕ ಶ್ರೀಗಂಧವನ್ನು ಸ್ವಲ್ಪ ತೈದು ಅದನ್ನು ಕೂಡ ಮಿಶ್ರಣಕ್ಕೆ ಸೇರಿಸಿಕೊಳ್ಳಿ. ಬಳಿಕ ಅದರ ತೇವಾಂಶ ಹೋಗುವವರೆಗೆ ಚೆನ್ನಾಗಿ ಕುದಿಸಿ ಒಂದು ಗಾಜಿನ ಬಾಟಲ್ ಹಾಕಿ ಇಟ್ಟುಕೊಳ್ಳಿ.
ಇಲ್ಲಿ ಉಪಯೋಗಿಸಿದ ಮೂರು ಸೊಪ್ಪುಗಳು ಕೂಡ ಚರ್ಮಕ್ಕೆ ತುಂಬಾ ಒಳ್ಳೆಯದು. ಗರಿಕೆ ಅತ್ಯಂತ ಶ್ರೇಷ್ಠವಾದ ಹುಲ್ಲು. ಇದರಿಂದ ನೀವು ಸೋರಿಯಾಸಿಸ್ ನಂತಹ ಸಮಸ್ಯೆಗಳನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದು. ಇನ್ನು ಜಾಜಿ ಎಲೆ ಮತ್ತು ತುಂಬೆ ಎಲೆಗಳು ಕೂಡ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳನ್ನು ಒಳಗೊಂಡಿದೆ. ಇನ್ನು ಅರಿಶಿನ, ಶ್ರೀಗಂಧ ಮತ್ತು ಕೊಬ್ಬರಿ ಎಣ್ಣೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ದೂರ ಮಾಡುತ್ತದೆ. ಇಲ್ಲಿ ಹೇಳಿರುವ ಔಷಧಿಯನ್ನು ತಲೆಯಲ್ಲಿನ ಹೊಟ್ಟಿನ ಸಮಸ್ಯೆ, ತುರಿಕೆ, ಚರ್ಮದಲ್ಲಿ ಅಲ್ಲಲ್ಲಿ ಆಗುವಂತಹ ಗುಳ್ಳೆಗಳು ಅಥವಾ ಗಾಯಗಳಂತಹ ಸಮಸ್ಯೆಗಳಿಗೆ ಮತ್ತು ವಿಪರೀತ ಹುಣ್ಣುಗಳಾಗುತ್ತಿದ್ದವರಿಗೆ ಈ ಎಣ್ಣೆಯನ್ನು ಬಳಸಬಹುದು. ಚಿಕ್ಕ ಮಕ್ಕಳಿಗೂ ಇದನ್ನು ಬಳಸಬಹುದು.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ