ಹೊಟ್ಟೆ ಮತ್ತು ಕರುಳನ್ನು ಪರೀಕ್ಷಿಸಲು ಮಾತ್ರೆಯಂತಹ ವಿಭಿನ್ನ ಸಾಧನವನ್ನು ಕಂಡುಹಿಡಿದ ವಿಜ್ಞಾನಿಗಳು
ಹೊಟ್ಟೆ ಮತ್ತು ಕರುಳನ್ನು ಪರೀಕ್ಷಿಸಲು ಸಾಮಾನ್ಯವಾಗಿ ಎಂಡೋಸ್ಕೋಪಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಇದು ರೋಗಿಗೆ ಬಹಳಷ್ಟು ನೋವು ಮತ್ತು ಅಸ್ವಸ್ಥತೆಯನ್ನು ಉಂಟುಮಾಡುತ್ತದೆ. ಆದರೆ ಇದರಿಂದ ಮುಕ್ತಿ ನೀಡಲು ಐಐಟಿ ದೆಹಲಿ ಮತ್ತು ಏಮ್ಸ್‌ನ ವಿಜ್ಞಾನಿಗಳು ಅಕ್ಕಿಯ ಧಾನ್ಯಕ್ಕಿಂತಲೂ ಚಿಕ್ಕದಾದ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ. ಅದು ಕರುಳಿನೊಳಗೆ ಹೋಗಿ ವ್ಯಕ್ತಿಯಿಂದ ಮಾದರಿಗಳನ್ನು ತೆಗೆದುಕೊಂಡು ಮಲದಿಂದ ಹೊರಬರುತ್ತದೆ. ಹಾಗಾಗಿ ಈ ಸಾಧನ ಆರೋಗ್ಯ ಕ್ಷೇತ್ರಕ್ಕೆ ಉತ್ತಮ ಕೊಡುಗೆಯಾಗಿದೆ. ಆದರೆ ಇದನ್ನು ಹೇಗೆ ಬಳಸುತ್ತಾರೆ, ಯಾವ ರೀತಿ ಕಾರ್ಯನಿರ್ವಹಿಸುತ್ತದೆ ಎಂಬಿತ್ಯಾದಿ ಮಾಹಿತಿಯನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹೊಟ್ಟೆ ಮತ್ತು ಕರುಳನ್ನು ಪರೀಕ್ಷಿಸಲು ಸಾಮಾನ್ಯವಾಗಿ ಎಂಡೋಸ್ಕೋಪಿ (Endoscopy) ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂಬುದು ತಿಳಿದಂತಹ ವಿಚಾರ. ಆದರೆ ಇದು ರೋಗಿಗೆ ಬಹಳಷ್ಟು ನೋವು ಮತ್ತು ಅಸ್ವಸ್ಥತೆಯನ್ನು ಉಂಟುಮಾಡುತ್ತಿತ್ತು, ಹಾಗಾಗಿ ಪರೀಕ್ಷೆ ಮಾಡಿಸಿಕೊಳ್ಳಲು ಜನ ಹಿಂದೇಟು ಹಾಕುತ್ತಿದ್ದರು. ಈಗ ಇಂತಹ ಸಮಸ್ಯೆಗಳಿಗೆ ಐಐಟಿ ದೆಹಲಿ ಮತ್ತು ಏಮ್ಸ್‌ನ ವಿಜ್ಞಾನಿಗಳು ಪರಿಹಾರ ಕಂಡುಕೊಂಡಿದ್ದಾರೆ. ಹೌದು, ಅಕ್ಕಿಯ ಧಾನ್ಯಕ್ಕಿಂತಲೂ ಚಿಕ್ಕದಾದ ಒಂದು ಸಾಧನವನ್ನು (swallowable microdevice) ಅಭಿವೃದ್ಧಿಪಡಿಸಿದ್ದು ಅದು ಕರುಳಿನೊಳಗೆ ಹೋಗಿ ವ್ಯಕ್ತಿಯಿಂದ ಮಾದರಿಗಳನ್ನು ತೆಗೆದುಕೊಳ್ಳುತ್ತದೆ ಎನ್ನಲಾಗಿದೆ. ಈ ರೀತಿಯ ನೂತನ ಆವಿಷ್ಕಾರ ನಿಜಕ್ಕೂ ಮುಖ್ಯವಾಗಿತ್ತು. ಏಕೆಂದರೆ ಇಲ್ಲಿಯವರೆಗೆ, ಎಂಡೋಸ್ಕೋಪಿ ಅಥವಾ ಮಲ ಪರೀಕ್ಷೆಗಳು ರೋಗಿಗೆ ಬಹಳ ನೋವು ಕೊಡುವಂತಹ ವಿಧಾನವಾಗಿದ್ದು ಅಷ್ಟು ಮಾಡಿದರೂ ಕೂಡ ಕರುಳಿನ ಒಳಭಾಗದ ಬಗ್ಗೆ ನಿಖರವಾದ ಮಾಹಿತಿ ಸಿಗುತ್ತಿರಲಿಲ್ಲ. ಹಾಗಾಗಿ ಈ ಸಾಧನ ಆರೋಗ್ಯ ಕ್ಷೇತ್ರಕ್ಕೆ ಉತ್ತಮ ಕೊಡುಗೆಯಾಗಿದೆ. ಆದರೆ ಇದನ್ನು ಹೇಗೆ ಬಳಸುತ್ತಾರೆ, ಯಾವ ರೀತಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಅಕ್ಕಿ ಗಾತ್ರದ ಚಿಪ್ ಹೇಗೆ ಕಾರ್ಯನಿರ್ವಹಿಸುತ್ತದೆ?
ಐಐಟಿ ದೆಹಲಿಯ ಪ್ರಾಧ್ಯಾಪಕ ಸರ್ವೇಶ್ ಕುಮಾರ್ ಶ್ರೀವಾಸ್ತವ ಅವರ ಪ್ರಕಾರ, ಬಾಹ್ಯಾಕಾಶವನ್ನು ಅರ್ಥಮಾಡಿಕೊಳ್ಳಲು ನಾವು ರೋವರ್‌ಗಳನ್ನು ಕಳುಹಿಸುವಂತೆಯೇ, ದೇಹದೊಳಗಿನ ಒಂದು ಪ್ರಪಂಚವನ್ನು ಅರ್ಥಮಾಡಿಕೊಳ್ಳಲು, ಇಂತಹ ಸಣ್ಣ ಸಾಧನದ ಅಗತ್ಯವಿದೆ. ಈ ಸೂಕ್ಷ್ಮ ಸಾಧನವನ್ನು ನುಂಗಿದಾಗ, ಅದು ಸಣ್ಣ ಕರುಳಿನ ನಿರ್ದಿಷ್ಟ ಭಾಗಗಳಿಂದ ಬ್ಯಾಕ್ಟೀರಿಯಾವನ್ನು ಸ್ವಯಂಚಾಲಿತವಾಗಿ ಸಂಗ್ರಹಿಸುತ್ತದೆ, ಬಳಿಕ ಬ್ಯಾಕ್ಟೀರಿಯಾಗಳನ್ನು ನಿಖರವಾಗಿ ಗುರುತಿಸಲು ಅನುವು ಮಾಡಿಕೊಡುತ್ತದೆ, ಈ ಕ್ಯಾಪ್ಸುಲ್ ಹೊಟ್ಟೆಯಲ್ಲಿ ಮುಚ್ಚಿಕೊಂಡಿದ್ದು ಕರುಳನ್ನು ತಲುಪಿದಾಗ ಮಾತ್ರ ತೆರೆಯುತ್ತದೆ. ಮಾದರಿಯನ್ನು ತೆಗೆದುಕೊಂಡ ನಂತರ, ಅದು ಮತ್ತೆ ಮುಚ್ಚಿ ಮಲದೊಂದಿಗೆ ಹೊರಬರುತ್ತದೆ. ಇದರೊಳಗಿನ ಮಾದರಿ ಸಾಧನದೊಳಗೆ ಸುರಕ್ಷಿತವಾಗಿ ಉಳಿಯುತ್ತದೆ, ಹಾಗಾಗಿ ಅದು ಹೊರಬಂದ ನಂತರ, ಅದನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಬಹುದು. ಈ ಸಾಧನದ ಗಾತ್ರವು ಅಕ್ಕಿಯ ಧಾನ್ಯಕ್ಕಿಂತಲೂ ಚಿಕ್ಕದಾಗಿದೆ. ವಿಜ್ಞಾನಿಗಳು ಇದನ್ನು ಪ್ರಾಣಿಗಳ ಮೇಲೆ ಯಶಸ್ವಿಯಾಗಿ ಪರೀಕ್ಷಿಸಿದ್ದು ಅದಕ್ಕೆ ಪೇಟೆಂಟ್ ಅನ್ನು ಸಹ ಸಲ್ಲಿಸಿದ್ದಾರೆ. ಭವಿಷ್ಯದಲ್ಲಿ, ಅಗತ್ಯ ಅನುಮೋದನೆಗಳನ್ನು ಪಡೆದ ನಂತರ, ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಈ ತಂತ್ರಜ್ಞಾನವನ್ನು ಬಳಕೆ ಮಾಡಬಹುದು.
ಇದನ್ನೂ ಓದಿ: ಸಕ್ಕರೆ ಕಾಯಿಲೆ ಇರುವವರಿಗೆ ಸಿಹಿ ಸುದ್ದಿ! ಗ್ಲೂಕೋಸ್ ಮಟ್ಟವನ್ನು ಪರಿಶೀಲಿಸಲು ಕಡಿಮೆ ಬೆಲೆಗೆ ಹೊಸ ಸಾಧನ
ಈ ಸಂಶೋಧನೆಯು ಅಂತರಾಷ್ಟ್ರೀಯ ಜರ್ನಲ್ ಸ್ಮಾಲ್‌ನಲ್ಲಿ ಪ್ರಕಟವಾಗಿದೆ. ಈ ಅಧ್ಯಯನದಲ್ಲಿ ಅನ್ಶುಲ್ ನೇಮಾ, ದೇಬ್ಜಿತ್ ಧಾರ್, ವೆಂಕಟ್ ಸಾಯಿ ರೆಡ್ಡಿ, ಕುಮಾರಿ ಪ್ರಿಯಮ್, ಸಮಗ್ರ ಅಗರವಾಲ್ ಮತ್ತು ಪ್ರೊ. ಸರ್ವೇಶ್ ಶ್ರೀವಾಸ್ತವ ಸೇರಿದ್ದಾರೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
