International Yoga Day: ಈ ವರ್ಷದ ಯೋಗ ದಿನದ ಧ್ಯೇಯ ವಾಕ್ಯ ಮಾನವತೆಗಾಗಿ ಯೋಗ; ಇಡೀ ವಿಶ್ವವನ್ನೇ ಕುಟುಂಬ ಸಮಾನವಾಗಿಸುವಲ್ಲಿ ಯೋಗದ ಪಾತ್ರ
ಪ್ರಾಚೀನ ಯೋಗ ವಿಧಾನಗಳು ಮತ್ತು ಅವುಗಳ ವ್ಯಾಪಕ ಪ್ರಭಾವವನ್ನು ಗೌರವಿಸುವುದು ಮತ್ತು ಆಚರಿಸುವುದು ಹಾಗೂ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರೇರೇಪಿಸುವುದು ಮುಖ್ಯವೆನಿಸುತ್ತದೆ ಎಂದು ಹೇಳುವ ಖ್ಯಾತ ಯೋಗ ತಜ್ಞ ಡಾ ಹೃಷಿಕೇಶ ಪಿ ಅವರು ಯೋಗದ ಕುರಿತು ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಅಂತರರಾಷ್ಟ್ರೀಯ ಯೋಗ ದಿನಾಚರಣೆಯು (International Yoga Day 2023) ಪ್ರತಿ ವರ್ಷ ಜೂನ್ 21ರಂದು ವಿಶ್ವ ಮಟ್ಟದಲ್ಲಿ ಯೋಗಕ್ಕೆ ಮುಡಿಪಾಗಿಟ್ಟಿರುವ ದಿನ ಮತ್ತು ಯೋಗದ ಮೂಲಕ ಆರೋಗ್ಯ ವೃದ್ಧಿಗೆ (Health) ವಿಶೇಷವಾಗಿರುವ ದಿನ. ಈ ಶುಭ ದಿನದಲ್ಲಿ, ಪ್ರಾಚೀನ ಯೋಗ ವಿಧಾನಗಳು ಮತ್ತು ಅವುಗಳ ವ್ಯಾಪಕ ಪ್ರಭಾವವನ್ನು ಗೌರವಿಸುವುದು ಮತ್ತು ಆಚರಿಸುವುದು ಹಾಗೂ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರೇರೇಪಿಸುವುದು ಮುಖ್ಯವೆನಿಸುತ್ತದೆ ಎಂದು ಹೇಳುವ ಖ್ಯಾತ ಯೋಗ ತಜ್ಞ ಡಾ ಹೃಷಿಕೇಶ ಪಿ (Dr Hrushikesh P) ಅವರು ಯೋಗದ ಕುರಿತು ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.
2015ರಲ್ಲಿ ನಮ್ಮ ನೆಚ್ಚಿನ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ ಇಚ್ಛಾ ಶಕ್ತಿಯಿಂದ ಪ್ರಾರಂಭವಾಗಿದ್ದ ಈ ದಿನಾಚರಣೆಗೆ ವಿಶೇಷ ಪ್ರಸಾರ ಮತ್ತು ಪ್ರಚಾರವು ಬಂದಿದೆ. ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯಕ್ಕೆ ಯೋಗದಂತೆ ಅದ್ಭುತ ಪ್ರಭಾವವನ್ನು ಬೀರುವ ಬೇರೆ ಸಾಧನೆಗಳಿಲ್ಲ ಎಂಬುದು ಯೋಗಾಭ್ಯಾಸಿ ಜನರು ಅರಿತುಕೊಂಡಂತಹ ಸತ್ಯ. ಈ ಬಾರಿ “ಮಾನವತೆಗಾಗಿ ಯೋಗ” ಎಂಬ ಧ್ಯೇಯವನ್ನಿಟ್ಟುಕೊಂಡು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಈ ಯೋಗ ದಿನದ ಪ್ರಾಮುಖ್ಯತೆ ಏನು?
ಭಾರತ ದೇಶಕ್ಕೆ ಯೋಗ ಹೊಸದೇನೂ ಅಲ್ಲ. ಆದರೆ, ಒಂದು ಕಾಲದ ಭಾರತೀಯ ಜನ ಜೀವನದಲ್ಲಿ ಹಾಸುಹೊಕ್ಕಾಗಿದ್ದ ಯೋಗವು 20 ನೇ ಶತಮಾನಕ್ಕೆ ಬರುವಾಗ ಕೆಲವೇ ಕೆಲವು ಮಂದಿ ಅಭ್ಯಾಸ ಮಾಡುವ , ಅಭ್ಯಸಿಸುವವರನ್ನು ಮೂದಲಿಸುವ, ವ್ಯಂಗ್ಯ ಮಾಡುವಂತಹ ವಿಚಾರ ಆಗಿತ್ತು. ಅಂತಹ ಸಮಯದಲ್ಲಿ ಯೋಗಾಚಾರ್ಯ ಪರಮಗುರು ದಿ. ಶ್ರೀ ತಿರುಮಲೆ ಕೃಷ್ಣಮಾಚಾರ್ಯ ಅವರ ನೇತೃತ್ವದಲ್ಲಿ ನಮ್ಮ ಹಳೆಯ ಮೈಸೂರು ಸಂಸ್ಥಾನದ ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಂಕಲ್ಪದಂತೆ ಯೋಗ ಶಾಲೆಯನ್ನು ಆರಂಭಿಸಿ ಯೋಗ ಶಾಸ್ತ್ರ ಅಧ್ಯಯನ ಮತ್ತು ಅಭ್ಯಾಸವು ಪುನಃ ಗುರುಕುಲ ಪದ್ಧತಿಯಲ್ಲಿ ಕಲಿಯುವ ಅವಕಾಶವಾಯಿತು. ಈ ವಿಚಾರಕ್ಕೆ ಯೋಗಾಚಾರ್ಯರಿಗೆ ನವ ಯೋಗಾಭ್ಯಾಸ ಪದ್ಧತಿಯ ಪಿತಾಮಹ ಅಂತಲೂ ಕರೆಯುತ್ತಾರೆ. ಆದ್ಧರಿಂದ ಕೀರ್ತಿಶೇಷ ಯೋಗಾಚಾರ್ಯರಿಗೂ ಮತ್ತು ನಮ್ಮ ಮೈಸೂರು ಅರಸರಿಗೂ ನಾವೆಲ್ಲರೂ ಚಿರಋಣಿಗಳಾಗಿರಬೇಕಾದ್ದು ನಮೆಲ್ಲರ ಆದ್ಯ ಕರ್ತವ್ಯ.
21ನೇ ಶತಮಾನಕ್ಕೆ ಬರುವಾಗ ಯೋಗಾಭ್ಯಾಸವು ಸಾವಿರ ಪಟ್ಟು ಪ್ರಚಾರ ಗಳಿಸಿದ್ದು ನಮ್ಮ ಪ್ರಧಾನಿಗಳಾದ ನರೇಂದ್ರ ಮೋದಿಯವರಿಂದಲೇ. ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಮೂಲಕವಾಗಿ ಯೋಗವು ಮನೆ ಮನೆಗೆ ತಲುಪಲು ನಮ್ಮ ಪ್ರಧಾನಿಗಳೇ ಕಾರಣೀಭೂತರು. ಅವರ ದೃಢ ಸಂಕಲ್ಪದಿಂದ 2014 ರ ಡಿಸೆಂಬರ್ನಲ್ಲಿ ನಡೆದ ಸಂಯುಕ್ತ ರಾಷ್ಟ್ರಗಳ ಸಭೆಯಲ್ಲಿ 177 ದೇಶಗಳ ಸಹಮತದೊಂದಿಗೆ ಪ್ರತಿ ವರ್ಷ ಜೂನ್ 21 ರಂದು ವಿಶ್ವ ಯೋಗ ದಿನಚರಣೆಯಾಗಿ ಅಚರಿಸುವಂತಾಯಿತು. ಇದರಿಂದ ಯೋಗ ಶಾಸ್ತ್ರಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ಸಿಕ್ಕಂತಾಯಿತು ಮತ್ತು ಪ್ರತಿಯೊಬ್ಬನಿಗೂ ಯೋಗ ಎಂಬ ಶಬ್ದ ಚಿರಪರಿಚಿತವಾಗಲು ಕಾರಣವಾಯಿತು. ಈ ವರ್ಷ ಮಾನವತೆಗಾಗಿ ಯೋಗ ಎಂಬ ಧ್ಯೇಯವನ್ನಿಟ್ಟುಕೊಂಡು ಜನರ ಮತ್ತು ಸಮೂಹದ ನಡುವೆ ಸಾಮರಸ್ಯ, ಏಕತೆ ಮತ್ತು ಸಹಾನುಭೂತಿಯನ್ನು ಹೆಚ್ಚಿಸಿಕೊಳ್ಳುವಲ್ಲಿ ಯೋಗದಿಂದಾಗುವ ಪ್ರಯೋಜನವನ್ನು ಎತ್ತಿ ಹಿಡಿಯಲಾಗಿದೆ.
ಮಾನವತೆಗಾಗಿ ಯೋಗ
ಯೋಗ ಸಿದ್ಧಾಂತಗಳು ಭಾರತದಲ್ಲಿ ಹುಟ್ಟಿ ಸಹಸ್ರಾರು ವರ್ಷಗಳೇ ಆದರೂ ಇತ್ತೀಚೆಗೆ ದೇಶ ವಿದೇಶಗಳಲ್ಲೂ ಸಾಂಸ್ಕೃತಿಕ ಹಾಗೂ ಭೌಗೋಳಿಕ ಎಲ್ಲೆಯನ್ನೂ ಮೀರಿ ಹಬ್ಬಿದೆ. ಇದಕ್ಕೆ ಕಾರಣ ಯೋಗಾಭ್ಯಾಸದಿಂದ ಆಗುವಂತಹ ಉನ್ನತ ಮಟ್ಟದ ಶಾರೀರಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಬದಲಾವಣೆಗಳು. ಅಭ್ಯಾಸಿಯ ಸರ್ವಾಂಗೀಣ ಅಭಿವೃದ್ಧಿಗೆ ಬೇಕಾದಂತಹ ಎಲ್ಲ ಮಾರ್ಗದರ್ಶನಗಳನ್ನು ಯೋಗ ಶಾಸ್ತ್ರವು ಅಭ್ಯಾಸಿಗೆ ಒದಗಿಸಿಕೊಡುತ್ತದೆ. ಯಮ-ನಿಯಮಗಳ ಅನುಸರಣೆ ಯೋಗಾಭ್ಯಾಸಕ್ಕೆ ಮೊದಲ ಮೆಟ್ಟಿಲು. ಯೋಗದಲ್ಲಿ ಅತ್ಯುತ್ತಮ ಪ್ರಯೋಜನ ಸಿಗಬೇಕೆಂದರೆ ಯಮ-ನಿಯಮಗಳಿಲ್ಲದೆ ಅದು ಸಾಧ್ಯವಾಗಲಾರದು.
ಇದನ್ನೂ ಓದಿ: ಕೇಂದ್ರ ಉದ್ಯೋಗಿಗಳಿಗೆ ಕುರ್ಚಿಯಲ್ಲಿ ಯೋಗ ಮಾಡಲು ಹೊಸ ಯೋಗ ಪ್ರೋಟೋಕಾಲ್ ಪರಿಚಯಿಸಿದ ಆಯುಷ್ ಸಚಿವಾಲಯ
ನಂತರ ಬರುವ ಆಸನಗಳು ದೇಹವನ್ನು ಸ್ಥಿರವಾಗಿಯೂ, ಆರೋಗ್ಯಪೂರ್ಣವಾಗಿಯೂ ಇಟ್ಟುಕೊಳ್ಳುವಲ್ಲಿ ಸಹಾಯಕವಾಗಿದೆ. ಹಾಗೆಯೇ, ಪ್ರಾಣಯಾಮ, ಬಂಧ-ಮುದ್ರೆಗಳು, ಧ್ಯಾನ ಇವೆಲ್ಲ ಮಾನಸಿಕವಾಗಿ ಸಧೃಢವಾಗಲು, ಮಾನವ ಪ್ರಜ್ಞೆಯನ್ನು ಉನ್ನತೀಕರಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಸುಶ್ರುತ ಸಂಹಿತೆಯಲ್ಲಿ ಹೇಳಿದಂತೆ ಪ್ರಸನ್ನವಾಗಿರುವ ಆತ್ಮ, ಇಂದ್ರಿಯ ಹಾಗೂ ಮನಸ್ಸು ಇದ್ದರೆ ಮಾತ್ರ ನಮ್ಮನು ನಾವು ಪರಿಪೂರ್ಣ ಆರೋಗ್ಯವಂತರು ಎಂದು ಕರೆದುಕೊಳ್ಳಬಹುದು.
ಎಲ್ಲರ ಮನಸ್ಸು ಶುಚಿ – ಸುಸ್ಥಿರವಾಗಿದ್ದಾಗ ಸಾಮಾಜಿಕ ಆರೋಗ್ಯ ತಾನಾಗಿಯೇ ಉಂಟಾಗುತ್ತದೆ. ವಿಶ್ವಸಂಸ್ಥೆಯೂ ಕೂಡ ಈ ವಿಚಾರವನ್ನು ಒಪ್ಪಿ ತನ್ನ ಆರೋಗ್ಯದ ವ್ಯಾಖ್ಯಾನದಲ್ಲಿ ಮಾನಸಿಕ ಮತ್ತು ಸಾಮಾಜಿಕ ಯೋಗಕ್ಷೇಮದ ಬಗ್ಗೆ ಉಲ್ಲೇಖಿಸಿದೆ. ಹಾಗಾಗಿ ಯಾವಾಗ ನಾವು ಪ್ರತಿಯೊಬ್ಬರೂ ಯೋಗ ಶಾಸ್ತ್ರದ ಎಲ್ಲಾಅಂಶಗಳನ್ನು ಸಾಧ್ಯವಾದ ಮಟ್ಟಿಗೆ ಜೀವನದಲ್ಲಿ ಅಳವಡಿಸುತ್ತ ಬಂದರೆ ಒಂದು ಉತ್ತಮ ವ್ಯಕ್ತಿ, ವ್ಯಕ್ತಿತ್ವದ ನಿರ್ಮಾಣ ಸಾಧ್ಯ. ಅಂತಹ ವ್ಯಕ್ತಿತ್ವದ ಒಂದು ಸಮೂಹವೇ ಉತ್ತಮ ಸಮಾಜ. ಉತ್ತಮ ಸಮಾಜದಿಂದ ರಾಮ ರಾಜ್ಯ ಹಾಗೂ ರಾಮ ರಾಜ್ಯದಿಂದ ಇಡೀ ಪ್ರಪಂಚವೇ ಒಂದು ಕುಟುಂಬ ಸಮಾನವಾಗಿಸುವಲ್ಲಿ ಯೋಗದ ಪಾತ್ರ ಅತಿ ಮುಖ್ಯವಾದದ್ದು. ಇದನ್ನೇ ಭಾರತೀಯ ಪದ್ಧತಿಯಲ್ಲಿ ವಸುಧೈವ ಕುಟುಂಬಕಂ ಅಂದಿದ್ದಾರೆ ಪ್ರಾಜ್ಞರು.
ಈ ವರ್ಷದ ಅಂತಾರಾಷ್ಟ್ರೀಯ ಯೋಗ ದಿನದ ಧ್ಯೇಯ ವಾಕ್ಯವಾದ ಮಾನವತೆಗಾಗಿ ಯೋಗ ಎಂಬುದು ಜಾಗತಿಕ ಮಟ್ಟದಲ್ಲಿ ಉತ್ತಮ ಸಂದೇಶ ಸಾರಲಿ. ಎಲ್ಲರೂ ಈ ಶುಭ ದಿನದಂದು ಪ್ರತೀದಿನ ಯೋಗದ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಸಂಕಲ್ಪವನ್ನು ಮಾಡಿ ಅದರಂತೆ ನಡೆದು ಮಾನವತೆಯನ್ನು ಎತ್ತಿ ಹಿಡಿಯುವಲ್ಲಿ ಸಹಕಾರಿಯಾಗಲಿ ಎಂದು ಹಾರೈಕೆ. ಇಡೀ ವಿಶ್ವಕ್ಕೆ 8 ನೇ ಯೋಗ ದಿನಾಚರಣೆಯ ಶುಭಾಶಯಗಳನ್ನು ಡಾ. ಹೃಷಿಕೇಶ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಅಂತರಾಷ್ಟ್ರೀಯ ಯೋಗ ದಿನ: ಯೋಗ ದಿನದ ಇತಿಹಾಸ, ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ
ಡಾ. ಹೃಷಿಕೇಶ ಪಿ ಪ್ರಸಿದ್ಧ ಯೋಗ ತಜ್ಞರಾಗಿದ್ದು, ಜೆಪಿ ನಗರದಲ್ಲಿ ತ್ರಿಪುರಾ ಯೋಗ ಥೆರಪಿ ಕೇಂದ್ರವನ್ನು ನಡೆಸುತ್ತಿದ್ದಾರೆ. ಯೋಗ ಚಿಕಿತ್ಸಾ ಕ್ಷೇತ್ರದಲ್ಲಿ 12+ ವರ್ಷಗಳ ಅನುಭವವನ್ನು ಹೊಂದಿರುವ, ಮಂಗಳೂರು ವಿಶ್ವವಿದ್ಯಾನಿಲಯದಿಂದ ಯೋಗ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿ, 2018 ರಲ್ಲಿ, CD4 ಎಣಿಕೆಗಳು ಮತ್ತು HIV- ಸೋಂಕಿತರ ದೇಹದ ತೂಕದ ಮೇಲೆ ಯೋಗ ಚಿಕಿತ್ಸೆಯ ಪರಿಣಾಮದ ಅಧ್ಯಯನಕ್ಕಾಗಿ ತಮ್ಮ ಡಾಕ್ಟರೇಟ್ ಪದವಿಯನ್ನು ಪಡೆದರು.
ಈ ಹಿಂದೆ ಡಾ. ಹೃಷಿಕೇಶ ಯೋಗ ವಿಜ್ಞಾನ ಅಧ್ಯಾಪಕರಾಗಿ, ಬೆಂಗಳೂರಿನ ಜಿಂದಾಲ್ ನೇಚರ್‌ಕ್ಯೂರ್ ಇನ್‌ಸ್ಟಿಟ್ಯೂಟ್‌ನಲ್ಲಿ ಯೋಗ ಚಿಕಿತ್ಸಕರಾಗಿ ಹಾಗು ಸಿಂಗಾಪುರದಲ್ಲೂ ಯೋಗ ಶಿಕ್ಷಕರಾಗಿ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9113893928 ಕರೆ ಮಾಡಿ ಅಥವಾ ತ್ರಿಪುರಾ ಯೋಗ ಥೆರಪಿ, 894, 10ನೇ ಎ ಈಸ್ಟ್ ಕ್ರಾಸ್ ರೋಡ್, ಆರ್‌ಬಿಐ ಲೇಔಟ್, ಜೆಪಿ ನಗರ 7ನೇ ಹಂತ, ಬೆಂಗಳೂರು-78 ಕ್ಕೆ ಭೇಟಿ ನೀಡಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ;
Published On - 4:49 pm, Tue, 13 June 23