ಹಣ್ಣು ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ಕೆಲವು ಹಣ್ಣುಗಳು ರುಚಿ ಇಲ್ಲದ ಕಾರಣ ಕೆಲವರು ಇಷ್ಟ ಪಡುವುದಿಲ್ಲ. ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿ ಪೇರಲೆ ಹಣ್ಣನ್ನು ಬೆಳೆಯುತ್ತಾರೆ. ಇಷ್ಟಪಟ್ಟು ತಿನ್ನುವ ಹಣ್ಣು ಕೂಡಾ ಹೌದು. ಚಿಕ್ಕವರಿಂದ ಹಿಡಿದು ವಯಸ್ಕರವೆರೆಗೂ ಸಹ ಈ ಹಣ್ಣನ್ನು ಸವಿಯುತ್ತಾರೆ. ಆದರೆ ಅತಿಯಾಗಿ ತಿಂದರೆ ಅಮೃತವೂ ವಿಷ ಎಂಬಂತೆ ಪೇರಲೆ ಹಣ್ಣಿನ ಅತಿಯಾದ ಸೇವನೆ ಆರೋಗ್ಯ ದೃಷ್ಟಿಯಿಂದ ಹಾನಿಕಾರಕ.
ಪೇರಲೆ ಹಣ್ಣು ವಿಟಮಿನ್ ಸಿ, ಉತ್ಕರ್ಷಣ ನಿರೋಧಕಗಳು, ಕ್ಯಾರೋಟಿನ್ ಮತ್ತು ಪೊಟ್ಯಾಷಿಯಮ್ಗಳಿಂದ ತುಂಬಿರುತ್ತದೆ. ಸುಮಾರು ಶೇ.80ರಷ್ಟು ನೀರಿನ ಪ್ರಮಾಣವನ್ನು ಹೊಂದಿರುತ್ತದೆ. ನಿಮ್ಮ ದೇಹವನ್ನು ಹೈಡ್ರೇಟ್ ಆಗಿಡಲು ಇದು ಸಹಾಯ ಮಾಡುತ್ತದೆ. ಹಣ್ಣಿನ ಒಂದು ಭಾಗವನ್ನು ತಿನ್ನುವುದರಿಂದ 112 ಕ್ಯಾಲೋರಿ, 23 ಗ್ರಾಂ ಕಾರ್ಬೋಹೈಡ್ರೇಟ್ ಮತ್ತು 9 ಗ್ರಾಂ ಫೈಬರ್ ಅಂಶ ಸಿಗುತ್ತದೆ.
ಪೇರಲೆ ಹಣ್ಣನ್ನು ಯಾರು ಸೇವಿಸಬಾರದು?
ಹೊಟ್ಟೆ ಉಬ್ಬುವ ಸಮಸ್ಯೆಯಿಂದ ಬಳಲುತ್ತಿರುವವರು ಪೇರಲೆ ಹಣ್ಣನ್ನು ಸೇವಿಸಬಾರದು. ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಫ್ರಕ್ಟೋಸ್ ಸಮೃದ್ಧವಾಗಿರುವದರಿಂದ ದೇಹವು ಈ ಪೋಷಕಾಂಶಗಳನ್ನು ಹೀರಿಕೊಳ್ಳಲು ಕಷ್ಟವಾಗುತ್ತದೆ. ಇದು ಹೊಟ್ಟೆ ಉಬ್ಬುವ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.
ಜೀರ್ಣಕ್ರಿಯೆ, ಮಲಬದ್ಧತೆ ಸಮಸ್ಯೆಯಿಂದ ನರಳುತ್ತಿರುವವರು ಪೇರಲೆ ಹಣ್ಣಿನ ಸೇವನೆ ಮಾಡಬಾರದು. ಪೇರಲೆ ಹಣ್ಣು ಅತಿಯಾದ ಸೇವನೆಯಿಂದ ಮಲಬದ್ಧತೆ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಮತ್ತು ಜೀರ್ಣ ವ್ಯವಸ್ಥೆಯನ್ನು ಮತ್ತಷ್ಟು ಕುಗ್ಗಿಸುತ್ತದೆ.
ಶೀತ ಮತ್ತು ಕೆಮ್ಮಿನ ಸಮಸ್ಯೆಯಿಂದ ಬಳಲುತ್ತಿರುವವರು ಪೇರಲೆ ಹಣ್ಣನ್ನು ಸೇವಿಸಬಾರದು. ಜತೆಗೆ ರಾತ್ರಿ ಮಲಗುವ ವೇಳೆ ಪೇರಲೆ ಹಣ್ಣನ್ನು ಸೇವಿಸದಿರುವುದು ಉತ್ತಮ. ಏಕೆಂದರೆ ಇದು ಜೀರ್ಣ ಶಕ್ತಿಯನ್ನು ಕುಂಠಿತಗೊಳಿಸುವುದರಿಂದ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ.
ಇದನ್ನೂ ಓದಿ:
Health Tips: ಈ ಹಣ್ಣು, ತರಕಾರಿಗಳ ಸಿಪ್ಪೆಯನ್ನು ಎಂದಿಗೂ ಎಸೆಯಬೇಡಿ
Health Tips: ಈ ಹಣ್ಣುಗಳನ್ನು ಸೇವಿಸಿ, ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಿ