
ತಾವರೆ ಬೀಜಗಳ ಬಗ್ಗೆ ನೀವು ಕೇಳಿರಬಹುದು. ಇದರ ಆರೋಗ್ಯ ಪ್ರಯೋಜನಗಳು ಸಾಕಷ್ಟಿದೆ. ಇನ್ನು, ಪಿಎಂ-ಕಿಸಾನ್ ನ 19ನೇ ಕಂತನ್ನು ಬಿಡುಗಡೆ ಮಾಡಲು ಬಿಹಾರದ ಭಾಗಲ್ಪುರಕ್ಕೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ(PM Modi) ಅವರಿಗೆ ಬಿಹಾರದ ಬಿಜೆಪಿ ನಾಯಕರು ಅವರಿಗಿಷ್ಟವಾದ ಅದರಲ್ಲಿಯೂ ಬಿಹಾರದಲ್ಲಿ ವ್ಯಾಪಕವಾಗಿ ಬೆಳೆಯುವ ಮಖಾನದಿಂದ ಮಾಡಿದ ಬೃಹತ್ ಹಾರವನ್ನು ಹಾಕಿ ಸನ್ಮಾನಿಸಿರುವುದನ್ನು ನೀವು ನೋಡಿರಬಹುದು. ಲೋಟಸ್ ಅಥವಾ ಫಾಕ್ಸ್ ಸೀಡ್ಸ್(Makhana) ಎಂದು ಕರೆಯಲ್ಪಡುವ ಈ ತಾವರೆ ಬೀಜಗಳನ್ನು ಪ್ರತಿದಿನವೂ ಪ್ರಧಾನ ಮೋದಿ ಅವರು ಸೇವನೆ ಮಾಡುತ್ತಾರೆ. ಜೊತೆಗೆ ಅವರು ಮಖಾನವನ್ನು ಸೂಪರ್ ಫುಡ್ ಎಂದು ಕರೆದಿದ್ದಾರೆ. ವರ್ಷದಲ್ಲಿ 300 ದಿನವೂ ಅವರು ಮಖಾನವನ್ನು ಸೇವನೆ ಮಾಡುತ್ತಾರೆ ಎಂಬುದು ಇನ್ನು ವಿಶೇಷ. ಈ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರುವ ಬಿಹಾರದ ಭಾಗಲ್ಪುರದಲ್ಲಿ ಮಾತನಾಡಿದ ಪ್ರಧಾನಿ ಮೋದಿ “ತಾವರೆ ಬೀಜಗಳ ಆರೋಗ್ಯ ಪ್ರಯೋಜನಗಳಿಂದಾಗಿ ನಾನು ಪ್ರತಿದಿನ ಸೇವಿಸುತ್ತೇನೆ” ಎಂದು ಹೇಳಿದ್ದಾರೆ. ಹಾಗಾದರೆ ಎಲ್ಲರೂ ಹೆಚ್ಚಾಗಿ ಇಷ್ಟ ಪಡುವ ಈ ಲೋಟಸ್ ಸೀಡ್ಸ್ ಅಥವಾ ಮಖಾನದಲ್ಲಿರುವ ಆರೋಗ್ಯ ಪ್ರಯೋಜನಗಳೇನು ಎಂಬುದನ್ನು ತಿಳಿದುಕೊಳ್ಳಿ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಳ ಇಷ್ಟವಾಗಿರುವ, ಪ್ರತಿನಿತ್ಯ ಅವರು ಸೇವನೆ ಮಾಡುವ ಮಖಾನಾ ಈಗ ದೇಶಾದ್ಯಂತ ಬಹಳ ಪ್ರಸಿದ್ದಿ ಪಡೆದುಕೊಳ್ಳುತ್ತಿದೆ. ಇದರ ಬೆಲೆ ಸ್ವಲ್ಪ ದುಬಾರಿ ಎನಿಸಿದರೂ ಇದರಲ್ಲಿರುವ ಅಸಂಖ್ಯಾತ ಆರೋಗ್ಯ ಪ್ರಯೋಜನಗಳ ಮುಂದೆ ಅದು ನಶ್ವರ ಎನಿಸಿಕೊಳ್ಳುತ್ತದೆ. ಎಷ್ಟೋ ನಗರಗಳಲ್ಲಿ ಇದು ಬೆಳಗ್ಗಿನ ತಿಂಡಿಯಾಗಿದೆ. ಮಕ್ಕಳಿಗೆ ಸಂಜೆಯ ಸ್ನಾಕ್ಸ್ ಆಗಿದೆ. ಹೀಗೆ ಇದರ ಉಪಯೋಗ ಹಲವಾರು. ಅದಕ್ಕಾಗಿಯೇ ಈ ವರ್ಷದ ಬಜೆಟ್ ನಲ್ಲಿಯೂ ಇದು ಸ್ಥಾನ ಗಿಟ್ಟಿಸಿಕೊಂಡಿದ್ದು ಅಂತರಾಷ್ಟ್ರೀಯ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದೆ. ಮಖಾನಾ ರೈತರ ಅಭಿವೃದ್ಧಿಗಾಗಿ ಪ್ರತ್ಯೇಕವಾಗಿ ಮಖಾನಾ ಮಂಡಳಿಯನ್ನು ಸ್ಥಾಪಿಸುವುದಾಗಿ ಕೂಡ ಸರ್ಕಾರ ಘೋಷಿಸಿದೆ. ಅದು ಏನೇ ಇರಲಿ, ಇಷ್ಟೆಲ್ಲಾ ಉಪಯೋಗವಿರುವ ಈ ತಾವರೆ ಬೀಜಗಳನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಯಾವ ರೀತಿಯ ಪ್ರಯೋಜನಗಳು ಸಿಗುತ್ತವೆ? ಯಾರೆಲ್ಲಾ ಸೇವನೆ ಮಾಡಬಹುದು ಎಂಬುದನ್ನು ತಿಳಿದುಕೊಳ್ಳಿ.
ಮಖಾನಾದಲ್ಲಿನ ಪೋಷಕಾಂಶಗಳು: ಇದರಲ್ಲಿ ಪ್ರೋಟೀನ್, ಫೈಬರ್ ಮತ್ತು ಕಾರ್ಬೋಹೈಡ್ರೇಟ್ಗಳು ಸಮೃದ್ಧವಾಗಿವೆ. ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣ, ರಂಜಕದಂತಹ ಪೋಷಕಾಂಶಗಳೊಂದಿಗೆ, ಇದು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ.
ಡಯಟ್ ಮಾಡುವವರಿಗೆ ಒಳ್ಳೆಯದು: ಮಖಾನಾದಲ್ಲಿ ಪ್ರೋಟೀನ್ ಮತ್ತು ಫೈಬರ್ ಸಮೃದ್ಧವಾಗಿದೆ. ಡಯಟ್ ಮಾಡಿ ದೇಹದ ತೂಕ ಕರಗಿಸಿಕೊಳ್ಳುವ ವ್ಯಕ್ತಿಗಳಿಗೆ ಉಪವಾಸದ ಸಮಯದಲ್ಲಿ ಇವುಗಳು ಸಹಾಯಕ್ಕೆ ಬರುತ್ತವೆ. ಕಡಿಮೆ ಕ್ಯಾಲೊರಿಗಳನ್ನು ಹೊಂದಿರುವುದರಿಂದ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಈ ಆಹಾರ ಉತ್ತಮ ಆಯ್ಕೆಯಾಗಿದೆ. ಬೆಳಗಿನ ಸಮಯದಲ್ಲಿ ಒಂದು ಹಿಡಿ ಮಖಾನ ಬೀಜಗಳನ್ನು ಸೇವಿಸಿದರೆ ಇಡೀ ದಿನ ಹಸಿವಾಗುವುದಿಲ್ಲ. ಇದರಿಂದ ತೂಕ ಕಡಿಮೆ ಆಗುವುದಲ್ಲದೆ ಬೊಜ್ಜಿನ ನಿಯಂತ್ರಣವಾಗುತ್ತದೆ.
ಮಧುಮೇಹ: ಮಖಾನಾ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿದೆ. ಮಧುಮೇಹಿಗಳಿಗೆ ಇದು ತುಂಬಾ ಸೂಕ್ತವಾದ ಆಹಾರವಾಗಿದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮಖಾನಾ ಸಹಾಯ ಮಾಡುತ್ತದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.
ಹೃದಯದ ಆರೋಗ್ಯ ಕಾಪಾಡುತ್ತದೆ: ಮಖಾನಾದಲ್ಲಿ ಪೊಟ್ಯಾಸಿಯಮ್ ಅಂಶವು ಅಧಿಕವಾಗಿರುತ್ತದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಫ್ರೀ ರಾಡಿಕಲ್ ಗಳಿಂದ ಮುಕ್ತಿ ನೀಡುತ್ತದೆ: ಮಖಾನಾ ನೈಸರ್ಗಿಕ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಅವು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಮತ್ತು ದೇಹದಲ್ಲಿನ ಹಾನಿಕಾರಕ ಫ್ರೀ ರಾಡಿಕಲ್ಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತವೆ. ಇದು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ: ಬೊಜ್ಜಿನ ಸಮಸ್ಯೆ ತಡೆಯಲು ಉತ್ತಮ ಅಡುಗೆ ಎಣ್ಣೆಯನ್ನು ಆಯ್ಕೆ ಮಾಡುವುದು ಹೇಗೆ?
ನಿಮ್ಮ ದೈನಂದಿನ ಆಹಾರದಲ್ಲಿ ಮಖಾನಾವನ್ನು ಸೇರಿಸುವುದು ತುಂಬಾ ಸುಲಭ. ಲಘು ಆಹಾರವಾಗಿ, ನೀವು ತುಪ್ಪದಲ್ಲಿ ಸ್ವಲ್ಪ ಹುರಿದ ತಿನ್ನಬಹುದು. ಸಿಹಿತಿಂಡಿಗಳಿಗೆ ಮಖಾನಾ ಬೆರೆಸುವುದರಿಂದ ಅವುಗಳ ಪೌಷ್ಠಿಕಾಂಶದ ಮೌಲ್ಯ ಮತ್ತಷ್ಟು ಹೆಚ್ಚಾಗುತ್ತದೆ. ಇದನ್ನು ಸಲಾಡ್ಗಳಲ್ಲಿಯೂ ಸೇರಿಸಿಕೊಳ್ಳಬಹುದು. ಹೆಚ್ಚುವರಿ ಪೋಷಕಾಂಶಗಳನ್ನು ಪಡೆಯಲು ಮಖಾನಾವನ್ನು ಸ್ಮೂಥಿಗಳೊಂದಿಗೆ ಸಂಯೋಜನೆ ಮಾಡಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:24 pm, Thu, 27 February 25