
40 ವರ್ಷ ದಾಟಿದ ಪುರುಷರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಅಗತ್ಯ. ಉದ್ಯೋಗದ ಒತ್ತಡ, ಕುಟುಂಬದ ಜವಾಬ್ದಾರಿಗಳು, ಮೊಬೈಲ್ ಬಳಕೆ ಸೇರಿದಂತೆ ಹಲವು ಕಾರಣಗಳಿಂದ ರಾತ್ರಿ ಮಲಗುವ ಸಮಯದಲ್ಲಿ ಬದಲಾವಣೆಗಳಾಗುತ್ತವೆ. ಕೆಲವರು ಒಂದು ದಿನ ರಾತ್ರಿ 10 ಗಂಟೆಗೆ ಮಲಗಿದರೆ, ಮತ್ತೊಂದು ದಿನ ಮಧ್ಯರಾತ್ರಿ ಅಥವಾ ಅದಕ್ಕಿಂತ ತಡವಾಗಿ ಮಲಗುತ್ತಾರೆ. ಪ್ರತಿದಿನ 7– 8 ಗಂಟೆ ನಿದ್ರೆ ಮಾಡಿದರೂ ಮಲಗುವ ಸಮಯದಲ್ಲಿ ಇಂತಹ ಏರುಪೇರುಗಳು ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಅಧ್ಯಯನವೊಂದು ಸೂಚಿಸಿದೆ.
BMC Cardiovascular Disorders ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಸುಮಾರು 46 ವರ್ಷ ವಯಸ್ಸಿನ 3,231 ಜನರ ನಿದ್ರೆಯ ಸಮಯವನ್ನು ಸಂಶೋಧಕರು ಪರಿಶೀಲಿಸಿದ್ದಾರೆ. ಅವರ ನಿದ್ರೆ ಮತ್ತು ಎಚ್ಚರಗೊಳ್ಳುವ ಸಮಯಗಳನ್ನು ದಾಖಲಿಸಿ, ನಂತರ ಸುಮಾರು 10 ವರ್ಷಗಳ ಕಾಲ ಆರೋಗ್ಯದ ಮಾಹಿತಿಯನ್ನು ಗಮನಿಸಿದ್ದಾರೆ. ಈ ಅವಧಿಯಲ್ಲಿ 128 ಜನರಲ್ಲಿ ಗಂಭೀರ ಹೃದಯ ಸಂಬಂಧಿತ ಸಮಸ್ಯೆಗಳು ಕಂಡುಬಂದಿವೆ. ಹೃದಯಾಘಾತ, ಸ್ಟ್ರೋಕ್, ಹೃದಯ ವೈಫಲ್ಯ ಸೇರಿದಂತೆ ಹಲವು ಸಮಸ್ಯೆಗಳು ವರದಿಯಾಗಿವೆ. ನಿದ್ರೆಯ ಸಮಯದಲ್ಲಿ ಹೆಚ್ಚು ಏರುಪೇರು ಹೊಂದಿದ್ದವರಲ್ಲಿ ಹೃದಯ ಸಂಬಂಧಿ ಅಪಾಯ ಹೆಚ್ಚಿರುವುದನ್ನು ಸಂಶೋಧಕರು ಗಮನಿಸಿದ್ದಾರೆ.
ವಿಶೇಷವಾಗಿ ಪ್ರತಿದಿನ ಒಂದೇ ಸಮಯಕ್ಕೆ ಮಲಗದೆ, ಕೆಲ ದಿನ ಬೇಗ ಹಾಗೂ ಇನ್ನು ಕೆಲವು ದಿನ ತಡವಾಗಿ ಮಲಗುವ ಅಭ್ಯಾಸ ಹೊಂದಿರುವವರಲ್ಲಿ ಅಪಾಯದ ಸಂಬಂಧ ಕಂಡುಬಂದಿದೆ. ದಿನಕ್ಕೆ 8 ಗಂಟೆಗಿಂತ ಕಡಿಮೆ ನಿದ್ರೆ ಮತ್ತು ಅನಿಯಮಿತ ಮಲಗುವ ಸಮಯ ಎರಡೂ ಇದ್ದಾಗ ಅಪಾಯ ಹೆಚ್ಚಿರುವುದಾಗಿ ಅಧ್ಯಯನ ಸೂಚಿಸಿದೆ.
ನಮ್ಮ ದೇಹವು ಸಿರ್ಕಾಡಿಯನ್ ರಿದಮ್ ಎಂಬ ಆಂತರಿಕ ಜೈವಿಕ ಗಡಿಯಾರದ ಮೂಲಕ ಕಾರ್ಯನಿರ್ವಹಿಸುತ್ತದೆ. ಇದು ನಿದ್ರೆ, ಎಚ್ಚರಿಕೆ, ಹಾರ್ಮೋನುಗಳ ಚಟುವಟಿಕೆ, ದೇಹದ ಉಷ್ಣತೆ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಮಲಗುವ ಸಮಯ ಬದಲಾಗುತ್ತಿದ್ದರೆ ದೇಹದ ಈ ಗಡಿಯಾರದ ಲಯಕ್ಕೆ ಅಡ್ಡಿಯಾಗಬಹುದು. ಇದರಿಂದ ಹಾರ್ಮೋನುಗಳ ಸಮತೋಲನ, ಹೃದಯದ ಬಡಿತ ಮತ್ತು ರಕ್ತದೊತ್ತಡದ ನಿಯಂತ್ರಣದ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆಯಿದೆ. ದೀರ್ಘಕಾಲ ಇಂತಹ ನಿದ್ರೆಯ ಅಭ್ಯಾಸ ಮುಂದುವರಿದರೆ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.
ಒಟ್ಟಿನಲ್ಲಿ, 40 ವರ್ಷ ದಾಟಿದ ಪುರುಷರು ನಿದ್ರೆಯ ಅವಧಿಯ ಜೊತೆಗೆ ಅದರ ಸಮಯ ಮತ್ತು ನಿಯಮಿತತೆಯ ಮೇಲೂ ಗಮನ ಹರಿಸಬೇಕು. ಉತ್ತಮ ನಿದ್ರೆಯ ಅಭ್ಯಾಸವು ಹೃದಯದ ಆರೋಗ್ಯ ಸೇರಿದಂತೆ ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ನೆರವಾಗಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ