
ಚಹಾ, ಕಾಫಿ ಸೇರಿದಂತೆ ಹಲವು ಪಾನೀಯಗಳಿಗೆ ಸಿಹಿ ಸೇರಿಸಲು ಬಳಸುವ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಲು ಅನೇಕರು ಪ್ರಯತ್ನಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮಾಂಕ್ ಫ್ರೂಟ್ ಸ್ವೀಟನರ್ ಹೆಚ್ಚು ಗಮನ ಸೆಳೆಯುತ್ತಿದೆ. ಇದನ್ನು ನೈಸರ್ಗಿಕ ಸಿಹಿಕಾರಕ, ಕಡಿಮೆ ಕ್ಯಾಲರಿ ಹೊಂದಿರುವ ಪರ್ಯಾಯ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಕಡಿಮೆ ಪರಿಣಾಮ ಬೀರುವ ಉತ್ಪನ್ನ ಎಂದು ಹೇಳಲಾಗುತ್ತಿದೆ. ಆದರೆ, ಮಾಂಕ್ ಫ್ರೂಟ್ ನಿಜಕ್ಕೂ ಸಾಮಾನ್ಯ ಸಕ್ಕರೆಗಿಂತ ಉತ್ತಮವೇ, ಇದನ್ನು ಬಳಸುವ ಮೊದಲು ಕೆಲವು ವಿಚಾರಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
ಸಾಮಾನ್ಯವಾಗಿ ಮಾಂಕ್ ಫ್ರೂಟ್ ದಕ್ಷಿಣ ಚೀನಾದಲ್ಲಿ ಬೆಳೆಯುವ ಹಣ್ಣು. ಇದನ್ನು ಲುವೊ ಹಾನ್ ಗುವೊ ಎಂದೂ ಕರೆಯಲಾಗುತ್ತದೆ. ಇದರ ಸಾರದಲ್ಲಿರುವ ಮೊಗ್ರೋಸೈಡ್ಗಳು ಸಿಹಿಯನ್ನು ನೀಡುತ್ತವೆ. ಈ ಸಿಹಿಕಾರಕವನ್ನು ಸಾಮಾನ್ಯವಾಗಿ ಸಕ್ಕರೆಗೆ ಪರ್ಯಾಯವಾಗಿ ಬಳಸಲಾಗುತ್ತದೆ. ಆದರೆ, ಇದರಿಂದ ದೇಹಕ್ಕೆ ಹೆಚ್ಚಿನ ವಿಟಮಿನ್ಗಳು ಅಥವಾ ಖನಿಜಾಂಶಗಳು ದೊರೆಯುತ್ತವೆ ಎಂದು ಭಾವಿಸಬಾರದು.
ಮಾಂಕ್ ಫ್ರೂಟ್ನ ಶುದ್ಧ ಸಾರದಲ್ಲಿ ಸಾಮಾನ್ಯ ಸಕ್ಕರೆಯ ಪ್ರಮಾಣ ಕಡಿಮೆ ಅಥವಾ ಇಲ್ಲದಿರಬಹುದು. ಆದರೆ, ಮಾರುಕಟ್ಟೆಯಲ್ಲಿ ಸಿಗುವ ಎಲ್ಲ ಉತ್ಪನ್ನಗಳು ಶುದ್ಧ ಮಂಕ್ ಫ್ರೂಟ್ ಸಾರದಿಂದಲೇ ತಯಾರಾಗಿರುವುದಿಲ್ಲ. ಕೆಲವು ಉತ್ಪನ್ನಗಳಲ್ಲಿ ಎರಿಥ್ರಿಟಾಲ್, ಡೆಕ್ಸ್ಟ್ರೋಸ್ ಅಥವಾ ಇತರ ಸಿಹಿಕಾರಕ ಮತ್ತು ಭರ್ತಿ ಪದಾರ್ಥಗಳನ್ನು ಸೇರಿಸಿರಬಹುದು. ಹೀಗಾಗಿ, ಪ್ಯಾಕೆಟ್ ಮೇಲಿನ ಜಾಹೀರಾತುಗಳನ್ನು ಮಾತ್ರ ನಂಬದೆ ಪದಾರ್ಥಗಳ ಪಟ್ಟಿ, ಕ್ಯಾಲರಿ, ಕಾರ್ಬೊಹೈಡ್ರೇಟ್ ಮತ್ತು ಸಕ್ಕರೆಯ ಪ್ರಮಾಣವನ್ನು ಪರಿಶೀಲಿಸಬೇಕು.
ಇದನ್ನೂ ಓದಿ: ಸಿನಿಮಾ ನೋಡುವಾಗ ಚಿಪ್ಸ್, ಕೂಲ್ ಡ್ರಿಂಕ್ಸ್ ತಿನ್ನುವ ಅಭ್ಯಾಸವಿದೆಯೇ? ಈ ವಿಷಯ ತಿಳಿಯಿರಿ
ಸಕ್ಕರೆಯ ಬದಲಿಗೆ ಕಡಿಮೆ ಕ್ಯಾಲರಿ ಹೊಂದಿರುವ ಮಂಕ್ ಫ್ರೂಟ್ ಉತ್ಪನ್ನವನ್ನು ಬಳಸುವುದರಿಂದ ಒಟ್ಟು ಕ್ಯಾಲರಿ ಸೇವನೆ ಕಡಿಮೆಯಾಗಬಹುದು. ಆದರೆ, ಇದು ನೇರವಾಗಿ ತೂಕ ಇಳಿಸುವುದಿಲ್ಲ. ಸಮತೋಲಿತ ಆಹಾರ, ದೈಹಿಕ ಚಟುವಟಿಕೆ ಮತ್ತು ಒಟ್ಟು ಕ್ಯಾಲರಿ ಸೇವನೆಯ ನಿಯಂತ್ರಣವೂ ಅಗತ್ಯ. ದುಬಾರಿ ಸಿಹಿಕಾರಕ ಖರೀದಿಸುವ ಬದಲು ಸಕ್ಕರೆಯ ಬಳಕೆಯನ್ನು ಕ್ರಮೇಣ ಕಡಿಮೆ ಮಾಡುವುದು ಕೂಡ ಉತ್ತಮ ಆಯ್ಕೆಯಾಗಿದೆ.
ಮಾಂಕ್ ಫ್ರೂಟ್ ಶುದ್ಧ ಸಾರವು ಸಾಮಾನ್ಯ ಸಕ್ಕರೆಯಂತೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲ್ಲ. ಆದರೂ, ಮಿಶ್ರಿತ ಉತ್ಪನ್ನಗಳಲ್ಲಿರುವ ಇತರ ಪದಾರ್ಥಗಳು ಪರಿಣಾಮ ಬೀರಬಹುದು. ಮಧುಮೇಹ ನಿಯಂತ್ರಣಕ್ಕೆ ಆಹಾರ ಕ್ರಮ, ವ್ಯಾಯಾಮ ಮತ್ತು ವೈದ್ಯರು ಸೂಚಿಸಿದ ಔಷಧಿಗಳೇ ಮುಖ್ಯ.
ಕೆಲವು ಮಿಶ್ರಿತ ಸಿಹಿಕಾರಕ ಉತ್ಪನ್ನಗಳಿಂದ ಕೆಲವರಿಗೆ ಹೊಟ್ಟೆ ಉಬ್ಬರ, ಗ್ಯಾಸ್ ಅಥವಾ ಅತಿಸಾರದಂತಹ ತೊಂದರೆಗಳು ಉಂಟಾಗಬಹುದು. ಮಾಂಕ್ ಫ್ರೂಟ್ನ ದೀರ್ಘಕಾಲೀನ ಬಳಕೆಯ ಕುರಿತು ಮಾನವರಲ್ಲಿನ ಸಂಶೋಧನೆ ಇನ್ನೂ ಸೀಮಿತವಾಗಿದೆ. ಮಾಂಕ್ ಫ್ರೂಟ್ ಸಕ್ಕರೆಗೆ ಪರ್ಯಾಯವಾಗಬಹುದು; ಆದರೆ ಅದನ್ನು ಆರೋಗ್ಯ ಉತ್ಪನ್ನವೆಂದು ಪರಿಗಣಿಸಬಾರದು. ಉತ್ಪನ್ನದ ಪದಾರ್ಥಗಳನ್ನು ಪರಿಶೀಲಿಸಿ, ನಿಮ್ಮ ಆಹಾರ ಪದ್ಧತಿ ಮತ್ತು ಆರೋಗ್ಯದ ಅಗತ್ಯಗಳಿಗೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ