ನವದೆಹಲಿ: ಕೇರಳದ ತಿರುವನಂತಪುರಂನ ವಿಝಿಂಜಂ ಪ್ರದೇಶದ ಶಾಲೆಯಲ್ಲಿನ ಇಬ್ಬರು ಮಕ್ಕಳಲ್ಲಿ ನೊರೊವೈರಸ್ (Norovirus) ಪತ್ತೆಯಾಗಿದ್ದು, ವೇಗವಾಗಿ ಹರಡುವ ಈ ಸೋಂಕು ಭಾರೀ ಆತಂಕ ಮೂಡಿಸಿದೆ. ಕಲುಷಿತ ನೀರು ಮತ್ತು ಆಹಾರದ ಮೂಲಕ ವೈರಸ್ ಹರಡುವ ಕಾರಣ, ಆರೋಗ್ಯ ಇಲಾಖೆ ನೈರ್ಮಲ್ಯಕ್ಕೆ ಆದ್ಯತೆ ನೀಡುವಂತೆ ಜನರಿಗೆ ಕರೆ ನೀಡಿದೆ. ಇಬ್ಬರು ಮಕ್ಕಳಲ್ಲಿ ನೊರೊವೈರಸ್ ಸೋಂಕು ಪತ್ತೆಯಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಸದ್ಯಕ್ಕೆ ಆತಂಕ ಪಡುವ ಅಗತ್ಯವಿಲ್ಲ ಆದರೆ ಎಲ್ಲರೂ ಜಾಗರೂಕರಾಗಿರಬೇಕು ಮತ್ತು ಸ್ವಚ್ಛತೆ ಕಾಪಾಡಬೇಕು ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಹಾಗಾದರೆ, ಈ ನೊರೊವೈರಸ್ ಎಂದರೇನು? ಇದರ ಲಕ್ಷಣಗಳೇನು? ಈ ಸೋಂಕು ಹರಡಲು ಕಾರಣಗಳೇನು? ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ನೊರೊವೈರಸ್ ಕಲುಷಿತ ಆಹಾರ, ಪಾನೀಯದ ಮೂಲಕ ಹರಡುತ್ತದೆ. ಈ ಸೋಕು ತಗುಲಿದರೆ ವಾಂತಿ, ಅತಿಸಾರ, ತಲೆನೋವು ಮತ್ತು ದೇಹದ ನೋವುಗಳು ಉಂಟಾಗುತ್ತದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಕೆಲವು ಸಂದರ್ಭಗಳಲ್ಲಿ ನಿರ್ಜಲೀಕರಣ ಕೂಡ ಉಂಟಾಗಬಹುದು. ಹೀಗಾಗಿ, ಬಾತ್ರೂಂ ಅಥವಾ ಟಾಯ್ಲೆಟ್ನಿಂದ ಹೊರಬರುವಾಗ ಸಾಬೂನಿನಿಂದ ಸ್ವಚ್ಛವಾಗಿ ಕೈಗಳನ್ನು ತೊಳೆಯುವುದು ಮುಂತಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾದುದು ಅಗತ್ಯ.
ಇದನ್ನೂ ಓದಿ: Norovirus: ಕೇರಳದ ಇಬ್ಬರು ಶಾಲಾ ವಿದ್ಯಾರ್ಥಿಗಳಲ್ಲಿ ನೊರೊವೈರಸ್ ಪತ್ತೆ
ನೊರೊವೈರಸ್ ಎಂದರೇನು?:
ನೊರೊವೈರಸ್ ಅತ್ಯಂತ ಸಾಂಕ್ರಾಮಿಕ ವೈರಸ್ ಆಗಿದ್ದು, ಇದು ಅತಿಸಾರ ಮತ್ತು ವಾಂತಿಗೆ ಕಾರಣವಾಗುತ್ತದೆ. ನೊರೊವೈರಸ್ ಯಾರಿಗಾದರೂ ಸುಲಭವಾಗಿ ಮತ್ತು ವೇಗವಾಗಿ ಹರಡುಬಹುದು ಮತ್ತು ಅನಾರೋಗ್ಯ ಉಂಟುಮಾಡಬಹುದು.
ನೊರೊವೈರಸ್ ಹರಡಲು ಕಾರಣಗಳೇನು?:
ಸೋಂಕಿತ ವ್ಯಕ್ತಿಯೊಂದಿಗೆ ನೇರ ಸಂಪರ್ಕ, ಕಲುಷಿತ ಆಹಾರ ಅಥವಾ ನೀರನ್ನು ಕುಡಿಯುವುದು ಅಥವಾ ಕಲುಷಿತ ಸ್ಥಳಗಳನ್ನು ಸ್ಪರ್ಶಿಸುವುದು. ತೊಳೆಯದ ಕೈಗಳನ್ನು ನಿಮ್ಮ ಬಾಯಿಯಲ್ಲಿ ಹಾಕುವುದರಿಂದ ನೊರೊವೈರಸ್ ವೇಗವಾಗಿ ಹರಡುತ್ತದೆ.
ನೊರೊವೈರಸ್ ಲಕ್ಷಣಗಳೇನು?:
ಅತಿಸಾರ, ವಾಂತಿ, ವಾಕರಿಕೆ ಮತ್ತು ಹೊಟ್ಟೆಯ ಅಸ್ವಸ್ಥತೆಗಳು ನೊರೊವೈರಸ್ನ ಸಾಮಾನ್ಯ ಲಕ್ಷಣಗಳಾಗಿವೆ. ಜ್ವರ, ತಲೆನೋವು ಮತ್ತು ದೇಹದ ನೋವುಗಳು ಕೂಡ ಕಾಣಿಸಿಕೊಳ್ಳುತ್ತದೆ.
ನೊರೊವೈರಸ್ ಹರಡುವಿಕೆ ತಡೆಗಟ್ಟುವುದು ಹೇಗೆ?:
ನಿಮ್ಮ ಕೈಗಳನ್ನು ಆಗಾಗ ತೊಳೆಯುವುದು, ಹಣ್ಣುಗಳು ಮತ್ತು ತರಕಾರಿಗಳನ್ನು ತೊಳೆದು ಬಳಸುವುದು, ಮೀನುಗಳನ್ನು ಚೆನ್ನಾಗಿ ಬೇಯಿಸುವುದು, ಅನಾರೋಗ್ಯದಿಂದ ಬಳಲುತ್ತಿರುವಾಗ ಮತ್ತು ಈ ರೋಗ ಕಡಿಮೆಯಾದ ನಂತರವೂ ಎರಡು ದಿನಗಳ ಕಾಲ ಮನೆಯಲ್ಲಿಯೇ ಇರುವುದರಿಂದ ನೊರೊವೈರಸ್ ಹರಡುವುದನ್ನು ತಡೆಗಟ್ಟಬಹುದು.
ನವೆಂಬರ್ 2021ರಲ್ಲಿ ಕೇರಳದಲ್ಲಿ ನೊರೊವೈರಸ್ ಪ್ರಕರಣಗಳು ಮೊದಲ ಬಾರಿಗೆ ವರದಿಯಾಗಿದ್ದವು. ವಯನಾಡಿನ ಪಶುವೈದ್ಯಕೀಯ ಕಾಲೇಜಿನಲ್ಲಿ 13 ವಿದ್ಯಾರ್ಥಿಗಳಿಗೆ ನೊರೊವೈರಸ್ ದೃಢಪಟ್ಟಿತ್ತು. ಬಳಿಕ ಕೇರಳ ಸರ್ಕಾರ ತಕ್ಷಣ ಕ್ರಮ ಕೈಗೊಂಡು ನಿಯಂತ್ರಣಕ್ಕೆ ತಂದಿತ್ತು. ಅದರ ನಂತರ ಯಾವುದೇ ಹರಡುವಿಕೆ ವರದಿಯಾಗಿರಲಿಲ್ಲ. ಇದೀಗ ಮತ್ತೆ ಕೇರಳದಲ್ಲಿ 2 ನೊರೊವೈರಸ್ ಕೇಸುಗಳು ಪತ್ತೆಯಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:46 am, Mon, 6 June 22