
ಮೂತ್ರಪಿಂಡಗಳು (ಕಿಡ್ನಿಗಳು) ನಮ್ಮ ದೇಹದ ಅತ್ಯಂತ ಪ್ರಮುಖ ಅಂಗಗಳಲ್ಲಿ ಒಂದಾಗಿವೆ. ಇವು ದಿನಕ್ಕೆ ಸುಮಾರು 180 ರಿಂದ 200 ಲೀಟರ್ ರಕ್ತವನ್ನು ಶುದ್ಧೀಕರಿಸಿ, ದೇಹದಲ್ಲಿನ ವಿಷಕಾರಿ ತ್ಯಾಜ್ಯಗಳನ್ನು ಹಾಗೂ ಹೆಚ್ಚುವರಿ ದ್ರವವನ್ನು ಹೊರಹಾಕುವ ಕೆಲಸ ಮಾಡುತ್ತವೆ. ಕಿಡ್ನಿಗಳ ಆರೋಗ್ಯ ಹದಗೆಟ್ಟರೆ ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಸಮಸ್ಯೆಗಳು ಸೇರಿದಂತೆ ಹಲವು ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ. ಆದ್ದರಿಂದ ಕಿಡ್ನಿ ಆರೋಗ್ಯ (Kidneys) ಕಾಪಾಡುವುದು ಬಹಳ ಮುಖ್ಯ. ಹಾಗಾದರೆ ಯಾವ ರೀತಿಯ ಅಭ್ಯಾಸಗಳನ್ನು ಕಿಡ್ನಿ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಪ್ರತಿದಿನ ವ್ಯಾಯಾಮ ಮಾಡಿ: ನಿಯಮಿತವಾಗಿ ವಾಕಿಂಗ್ ಮಾಡುವುದು, ವ್ಯಾಯಾಮ ಅಥವಾ ಈಜುವುದರಿಂದ ರಕ್ತದೊತ್ತಡ ಮತ್ತು ತೂಕ ನಿಯಂತ್ರಣದಲ್ಲಿರುತ್ತದೆ. ದಿನಕ್ಕೆ ಕನಿಷ್ಠ 30 ನಿಮಿಷಗಳ ಚಟುವಟಿಕೆ ಕಿಡ್ನಿ ಆರೋಗ್ಯಕ್ಕೆ ಸಹಕಾರಿ.
ಸಕ್ಕರೆ ಸೇವನೆಯನ್ನು ಕಡಿಮೆ ಮಾಡಿ: ದೀರ್ಘಕಾಲದ ಮಧುಮೇಹವು ಕಿಡ್ನಿ ವೈಫಲ್ಯದ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಆದ್ದರಿಂದ ಸಿಹಿ ಪದಾರ್ಥಗಳು ಮತ್ತು ಸಕ್ಕರೆ ಪಾನೀಯಗಳ ಸೇವನೆಯನ್ನು ಮಿತಿಗೊಳಿಸುವುದು ಅಗತ್ಯ.
ಇದನ್ನೂ ಓದಿ: ಸಂಜೆ ಸಮಯದಲ್ಲಿ ಕಾಲಿನಲ್ಲಿ ಕಂಡು ಬರುವ ಈ ಲಕ್ಷಣವನ್ನು ನಿರ್ಲಕ್ಷಿಸಬೇಡಿ, ಇದು ಕಿಡ್ನಿ ಡ್ಯಾಮೇಜ್ ಆಗಿರುವ ಸೂಚನೆ
ರಕ್ತದೊತ್ತಡವನ್ನು ನಿಯಂತ್ರಿಸಿ: ಅಧಿಕ ರಕ್ತದೊತ್ತಡ ಕಿಡ್ನಿಗಳ ಮೇಲೆ ಹೆಚ್ಚುವರಿ ಒತ್ತಡ ಉಂಟುಮಾಡುತ್ತದೆ. ನಿಯಮಿತವಾಗಿ ಬಿಪಿ ಪರೀಕ್ಷೆ ಮಾಡಿಸಿಕೊಳ್ಳಿ ಮತ್ತು ಅಗತ್ಯವಿದ್ದರೆ ವೈದ್ಯರ ಸಲಹೆ ಪಡೆಯಿರಿ.
ಆರೋಗ್ಯಕರ ಆಹಾರ ಸೇವಿಸಿ: ತರಕಾರಿ, ಹಣ್ಣುಗಳು, ಧಾನ್ಯಗಳು ಮತ್ತು ಬೇಳೆಕಾಳುಗಳನ್ನು ಆಹಾರದಲ್ಲಿ ಸೇರಿಸಿ. ಸಮತೋಲನ ಆಹಾರವು ದೇಹದ ತೂಕ ನಿಯಂತ್ರಿಸಿ ಕಿಡ್ನಿಗಳನ್ನು ರಕ್ಷಿಸುತ್ತದೆ.
ಉಪ್ಪಿನ ಪ್ರಮಾಣ ಕಡಿಮೆ ಮಾಡಿ: ಹೆಚ್ಚು ಉಪ್ಪು ಸೇವಿಸುವುದರಿಂದ ದೇಹದಲ್ಲಿ ಸೋಡಿಯಂ ಪ್ರಮಾಣ ಹೆಚ್ಚಾಗಿ ರಕ್ತದೊತ್ತಡ ಏರಬಹುದು. ಸಂಸ್ಕರಿತ ಆಹಾರಗಳನ್ನು ಕಡಿಮೆ ಮಾಡಿ, ಬದಲಿಗೆ ನಿಂಬೆ, ಬೆಳ್ಳುಳ್ಳಿ ಮತ್ತು ನೈಸರ್ಗಿಕ ಸುವಾಸನೆ ಪದಾರ್ಥಗಳನ್ನು ಬಳಸಿ.
ಕಿಡ್ನಿ ಆರೋಗ್ಯವಾಗಿದ್ದರೆ ದೇಹವೂ ಆರೋಗ್ಯವಾಗಿರುತ್ತದೆ. ಸರಿಯಾದ ಆಹಾರ, ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ಜೀವನಶೈಲಿಯ ಮೂಲಕ ಕಿಡ್ನಿ ಸಮಸ್ಯೆಗಳನ್ನು ದೂರವಿಡಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:58 pm, Wed, 24 June 26