AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳೆಯರೇ… ಗರ್ಭಪಾತದ ನಂತರ, ಯಾವುದೇ ಕಾರಣಕ್ಕೂ ಈ ಕೆಲಸಗಳನ್ನು ಮಾಡಬೇಡಿ

ಗರ್ಭಪಾತದ ನಂತರ, ಮಹಿಳೆಯರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಅವಶ್ಯಕವಾಗಿರುತ್ತದೆ. ಆರೋಗ್ಯ ತಜ್ಞರು ಕೂಡ ಈ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದು, ಮಾಡಲೇಬಾರದಂತಹ ಕೆಲವು ಕೆಲಸಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಏಕೆಂದರೆ ಅವು ಆರೋಗ್ಯವನ್ನು ಹದಗೆಡಿಸಬಹುದು. ಹಾಗಾಗಿ ಈ ಸಮಯದಲ್ಲಿ ಕೆಲವು ಆರೋಗ್ಯಕರ ಸಲಹೆಗಳನ್ನು ಪಾಲಿಸುವುದು ಬಹಳ ಮುಖ್ಯವಾಗುತ್ತದೆ. ಹಾಗಾದರೆ ಬೇಗ ಚೇತರಿಸಿಕೊಳ್ಳಲು ಮತ್ತು ಮುಂದಿನ ಗರ್ಭಧಾರಣೆಗೆ ಸಂಪೂರ್ಣವಾಗಿ ಸದೃಢರಾಗಲು ಏನು ಮಾಡಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮಹಿಳೆಯರೇ... ಗರ್ಭಪಾತದ ನಂತರ, ಯಾವುದೇ ಕಾರಣಕ್ಕೂ ಈ ಕೆಲಸಗಳನ್ನು ಮಾಡಬೇಡಿ
Miscarriage
ಪ್ರೀತಿ ಭಟ್​, ಗುಣವಂತೆ
|

Updated on: Oct 27, 2025 | 4:42 PM

Share

ಗರ್ಭಾವಸ್ಥೆ ಎನ್ನುವಂತದ್ದು ಹೆಣ್ಣಿನ ಜೀವನದ ಪ್ರಮುಖ ಘಟ್ಟ. ಹೆಣ್ಣಾದವಳಿಗೆ ಮಾತ್ರ ಮತ್ತೊಂದು ಜೀವಕ್ಕೆ ಜನ್ಮ ನೀಡುವ ಅವಕಾಶವಿರುತ್ತದೆ. ಅದಕ್ಕಾಗಿಯೇ ಆಕೆಯನ್ನು ದೇವರ ಸ್ವರೂಪ ಎನ್ನಲಾಗುತ್ತದೆ. ಇದೆಲ್ಲಾ ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಈ ಗರ್ಭಾವಸ್ಥೆ ಯಾವುದೇ ಅಡೆತಡೆಗಳಿಲ್ಲದೆ ಸಾಗಬೇಕು ಎಂದರೆ ಹಲವಾರು ರೀತಿಯಲ್ಲಿ ಪ್ರಯತ್ನ ಪಡಬೇಕಾಗುತ್ತದೆ. ಇದು ಎಲ್ಲರಿಗೂ ಸಾಧ್ಯವಿಲ್ಲ, ಕೆಲವೊಮ್ಮೆ ಗರ್ಭಪಾತವಾಗಿಬಿಡುತ್ತದೆ. ಈ ರೀತಿಯ ಸಂದರ್ಭಗಲ್ಲಿ ಧೃತಿಗೆಡದೆ ಮನಸ್ಸು ಗಟ್ಟಿ ಮಾಡಿಕೊಳ್ಳಬೇಕು ಮಾತ್ರವಲ್ಲ, ಆರೋಗ್ಯ ತಜ್ಞರು ಇಲ್ಲಿ ನೀಡಿರುವ ಸಲಹೆಗಳನ್ನು ತಪ್ಪದೆ ಪಾಲಿಸಬೇಕು. ಅಂದರೆ ಸಾಮಾನ್ಯವಾಗಿ ಗರ್ಭಪಾತದ (Miscarriage) ನಂತರ, ಮಹಿಳೆಯರು ಅಪ್ಪಿತಪ್ಪಿಯೂ ಕೆಲವು ಕೆಲಸಗಳನ್ನು ಮಾಡಬಾರದು. ಏಕೆಂದರೆ ಅವು ಆರೋಗ್ಯವನ್ನು ಹದಗೆಡಿಸಬಹುದು. ಹಾಗಾಗಿ ಈ ಸಮಯದಲ್ಲಿ ಕೆಲವು ಆರೋಗ್ಯಕರ ಸಲಹೆಗಳನ್ನು ಪಾಲಿಸುವುದು ಬಹಳ ಮುಖ್ಯವಾಗುತ್ತದೆ. ಹಾಗಾದರೆ ಬೇಗ ಚೇತರಿಸಿಕೊಳ್ಳಲು ಮತ್ತು ಮುಂದಿನ ಗರ್ಭಧಾರಣೆಗೆ ಸಂಪೂರ್ಣವಾಗಿ ಸದೃಢರಾಗಲು ಏನು ಮಾಡಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಗರ್ಭಪಾತ ಎಂದರೇನು?

ನಿಮಗೆ ತಿಳಿದಿರಬಹುದು ಗರ್ಭಾವಸ್ಥೆಯ 20 ವಾರಗಳ ಒಳಗೆ ಗರ್ಭದಲ್ಲಿಯೇ ಭ್ರೂಣ ಸತ್ತರೆ, ಅದನ್ನು ಗರ್ಭಪಾತ ಎನ್ನಲಾಗುತ್ತದೆ. ಇಂತಹ ಪರಿಸ್ಥಿತಿ ಯಾವುದೇ ಮಹಿಳೆಗೂ ಬರಬಾರದು ಎಂದು ಬೇಡಿಕೊಳ್ಳಲಾಗುತ್ತದೆ. ಆದರೆ ಕೆಲವರಲ್ಲಿ ಈ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಅಂತಹ ಸಮಯದಲ್ಲಿ ಈ ಪರಿಸ್ಥಿತಿಯಿಂದ ಬಹಳ ಬೇಗ ಚೇತರಿಸಿಕೊಳ್ಳಲು ಜೊತೆಗೆ ಮುಂದಿನ ಗರ್ಭಧಾರಣೆಗೆ ಸಹಾಯವಾಗುವ ನಿಟ್ಟಿನಲ್ಲಿ ಆರೋಗ್ಯ ತಜ್ಞರು ನೀಡಿರುವ ಸಲಹೆಗಳನ್ನು ಚಾಚೂತಪ್ಪದೆ ಪಾಲಿಸಬೇಕಾಗುತ್ತದೆ. ಗರ್ಭಪಾತ ಎನ್ನುವುದು ಹಲವಾರು ಕಾರಣಗಳಿಂದ ಆಗಬಹುದು. ಕೆಲವರಲ್ಲಿ ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿ ಆದಂತಹ ಬದಲಾವಣೆ, ಅನಾರೋಗ್ಯ ಅಥವಾ ದೈಹಿಕ ಸಮಸ್ಯೆ ಹೀಗೆ ವಿವಿಧ ಕಾರಣಗಳು ಗರ್ಭಪಾತಕ್ಕೆ ಕಾರಣವಾಗಿರಬಹುದು.

ಅಷ್ಟೇ ಅಲ್ಲ. ಈ ಗರ್ಭಪಾತ ಮಹಿಳೆಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ತುಂಬಾ ಬಳಲಿಕೆಯನ್ನುಂಟುಮಾಡುತ್ತದೆ. ಈ ಪರಿಸ್ಥಿತಿಯನ್ನು ನಿಭಾಯಿಸುವುದು ತುಂಬಾ ಕಷ್ಟಕರ ಆದರೆ ಕೆಲವು ವಿಷಯಗಳನ್ನು ನೆನಪಿನಲ್ಲಿಡಿ. ಇದು ನಿಮ್ಮ ಚೇತರಿಕೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ. ಹಾಗಾದರೆ ಗರ್ಭಪಾತದ ನಂತರ ಮಾಡಬಾರದ ಕೆಲಸಗಳೇನು? ಯಾಕೆ ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.

ಇದನ್ನೂ ಓದಿ: ಪದೇ ಪದೇ ಗರ್ಭಪಾತವಾಗುವುದಕ್ಕೆ ಕಾರಣವೇನು? ಅದನ್ನು ತಡೆಯಲು ಈ ರೀತಿ ಮಾಡಿ

ಗರ್ಭಪಾತದ ನಂತರ ಮಾಡಬಾರದ ಕೆಲಸಗಳು;

  • ಗರ್ಭಪಾತವಾದಾಗ ಕಂಡು ಬರುವ ಮೊದಲ ಲಕ್ಷಣವೇ ರಕ್ತಸ್ರಾವ. ಇದು ಆರಂಭಿಕ ಲಕ್ಷಣಗಳಲ್ಲಿ ಒಂದಾಗಿದೆ. ಇಂತಹ ಸಮಯದಲ್ಲಿ, ಮಹಿಳೆಯರು ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು. ಈ ಸಮಯದಲ್ಲಿ ಬೇರೆಯವರ ಮಾತುಗಳನ್ನು ಕೇಳಬಾರದು ಜೊತೆಗೆ ವೈದ್ಯರ ಸಲಹೆ ಇಲ್ಲದೆ ಯಾವುದೇ ಮಾತ್ರೆ, ಔಷಧಿ ಅಥವಾ ಇನ್ನಿತರ ಮದ್ದುಗಳ ಸೇವನೆಯನ್ನು ಕೂಡ ಮಾಡಬಾರದು.
  • ಗರ್ಭಪಾತದ ನಂತರ ಕೆಲವರಲ್ಲಿ ದೀರ್ಘಕಾಲದ ವರೆಗೆ ರಕ್ತಸ್ರಾವ ಕಂಡುಬರುತ್ತದೆ. ಆದರೆ ಈ ಸಮಯದಲ್ಲಿ, ಟ್ಯಾಂಪೂನ್‌ಗಳನ್ನು ಬಳಸಬಾರದು. ಆದಷ್ಟು ಇವುಗಳನ್ನು ಬಳಸುವುದನ್ನು ತಪ್ಪಿಸಿ. ಇದರ ಬದಲಿಗೆ ಸಾಮಾನ್ಯವಾಗಿ ಬಳಕೆ ಮಾಡುವ ಪ್ಯಾಡ್‌ಗಳನ್ನು ಬಳಸಿ.
  • ಗರ್ಭಪಾತದ ನಂತರ, ಸ್ವಲ್ಪ ಸಮಯದ ವರೆಗೆ ಲೈಂಗಿಕ ಸಂಭೋಗದಿಂದ ದೂರವಿರಿ, ಏಕೆಂದರೆ ಈ ಸಮಯದಲ್ಲಿ ಮಹಿಳೆಯರು ಹೆಚ್ಚು ದುರ್ಬಲರಾಗಿರುತ್ತಾರೆ. ಮಾತ್ರವಲ್ಲ ಇದು ಸೋಂಕಿನ ಅಪಾಯವನ್ನು ಕಡಿಮೆ ಮಾಡುವುದಲ್ಲದೆ, ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮಗಳಾಗುವುದನ್ನು ತಡೆಯುತ್ತದೆ. ಈ ಸಮಯದಲ್ಲಿ ಮಹಿಳೆಯರು ಆದಷ್ಟು ವಿಶ್ರಾಂತಿ ಪಡೆಯಬೇಕು. ಹಾಗಾಗಿ ವೈದ್ಯರನ್ನು ಸಂಪರ್ಕಿಸಿದ ನಂತರವೇ ಲೈಂಗಿಕ ಚಟುವಟಿಕೆಯನ್ನು ಆರಂಭಿಸುವುದು ಉತ್ತಮ.
  • ಗರ್ಭಪಾತದ ನಂತರ, ಮಹಿಳೆಯರು ಈಜು ಮುಂತಾದ ಯಾವುದೇ ರೀತಿಯ ಭಾರೀ ವ್ಯಾಯಾಮವನ್ನು ಮಾಡಬಾರದು. ಏಕೆಂದರೆ ಗರ್ಭಪಾತದ ನಂತರ, ದೇಹವು ಅಷ್ಟು ಸಾಮರ್ಥ್ಯವನ್ನು ಹೊಂದಿರುವುದಿಲ್ಲ.
  • ಗರ್ಭಿಣಿಗೆ ಹಠಾತ್ ಗರ್ಭಪಾತವಾದರೆ, ಆ ಪ್ರಯಾಣ ಸುಲಭವಲ್ಲ ಎಂಬುದನ್ನು ನೆನಪಿನಲ್ಲಿಡಿ. ಗರ್ಭಪಾತದ ನಂತರ, ಮಹಿಳೆಯ ದೇಹವು ಸುಲಭವಾಗಿ ಚೇತರಿಸಿಕೊಳ್ಳುವುದಿಲ್ಲ. ಸರಿಯಾಗಿ ಗುಣಮುಖರಾಗಲು, ಆರೋಗ್ಯಕರ ಆಹಾರವನ್ನು ಅನುಸರಿಸುವುದು ಮುಖ್ಯ. ಹಾಗಾಗಿ ಇದರ ಬಗ್ಗೆ ತಜ್ಞರೊಂದಿಗೆ ಸಮಾಲೋಚಿಸುವುದು ಉತ್ತಮ.

ಇಲ್ಲಿ ತಿಳಿಸಿರುವ ವಿಷಯಗಳು ನಿಮ್ಮ ಮಾಹಿತಿಗಾಗಿ ಮಾತ್ರ. ಯಾವುದೇ ರೀತಿಯ ಸಂದೇಹವಿದ್ದರೂ ಮೊದಲು ತಜ್ಞರನ್ನು ಸಂಪರ್ಕಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ