ಮಳೆಗಾಲದಲ್ಲಿ ನಿಮ್ಮ ರೋಗ ನಿರೋಧಕ ಶಕ್ತಿಯು ಕಡಿಮೆಯಾಗಿ ಅನೇಕ ರೋಗಗಳು ನಿಮ್ಮನ್ನು ಆವರಿಸುವ ಸಾಧ್ಯತೆ ಹೆಚ್ಚಿದೆ. ನಿಮ್ಮಲ್ಲಿ ಶಕ್ತಿಯನ್ನು ತುಂಬಿ ಚೈತನ್ಯವನ್ನು ಮರಳುವಂತೆ ಮಾಡುವ ಹಣ್ಣುಗಳಲ್ಲಿ ಸ್ಟಾರ್ ಫ್ರೂಟ್ ಕೂಡಾ ಒಂದು. ಕ್ಯಾರಂಬೋಲಾ ಅಥಾವಾ ಸ್ಟಾರ್ ಫ್ರೂಟ್ ಅಥವಾ ಕಮ್ರಖ್ ಎಂದು ಕೂಡ ಇದನ್ನು ಕರೆಯುತ್ತಾರೆ. ಇದು ಹುಳಿಮಿಶ್ರಿತ ಸಿಹಿ ಹಣ್ಣಾಗಿದ್ದು, ಈ ಹಣ್ಣಿನಲ್ಲಿ ಅನೇಕ ಪೋಷಕಾಂಶಗಳಿವೆ.
ಇದು ದೇಹವನ್ನು ದೀರ್ಘಕಾಲದವರೆಗೆ ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಸ್ಟಾರ್ ಹಣ್ಣು ಅನೇಕ ಔಷಧೀಯ ಗುಣಗಳನ್ನು ಹೊಂದಿದ್ದು, ಹಲವು ರೀತಿಯಲ್ಲಿ ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ.
ಕಡಿಮೆ ಕ್ಯಾಲೊರಿ
ಈ ಹಣ್ಣಿನಲ್ಲಿ ಕಡಿಮೆ ಕ್ಯಾಲೋರಿ ಇದ್ದು, ಹಾಗೆಯೇ ಹೆಚ್ಚಿನ ಫೈಬರ್ ಅಂಶ ಕಂಡು ಬರುತ್ತವೆ. ಅದೇ ರೀತಿ ವಿಟಮಿನ್ ಬಿ, ವಿಟಮಿನ್ ಸಿ, ಸೋಡಿಯಂ, ಪೊಟ್ಯಾಸಿಯಮ್, ಕಬ್ಬಿಣ ಮತ್ತು ಅನೇಕ ಪ್ರಮುಖ ಉತ್ಕರ್ಷಣ ನಿರೋಧಕಗಳಿಂದ ಈ ಹಣ್ಣು ಸಮೃದ್ಧವಾಗಿದೆ. ಈ ಹಣ್ಣಿನ ಸೇವನೆಯಿಂದ ಸಿಗುವ ಕೆಲ ಪ್ರಯೋಜನಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಸೋಂಕಿನ ವಿರುದ್ಧ ಹೋರಾಡಲು ಸಹಕಾರಿ: ಈ ಹಣ್ಣು ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಹಾಗೆಯೇ ಹೃದಯವನ್ನು ಜೋಪಾನವಾಗಿಡುತ್ತದೆ.
ತೂಕ ಇಳಿಕೆಗೆ ಸಹಕಾರಿ: ಈ ಸ್ಟಾರ್ ಫ್ರೂಟ್ನಲ್ಲಿ ಕ್ಯಾಲೊರಿ ಕಡಿಮೆ ಇರುವ ಕಾರಣ ತೂಕ ಇಳಿಕೆಗೆ ಸಹಾಯ ಮಾಡುತ್ತದೆ.
ಉರಿಯೂತ ಕಡಿಮೆ ಮಾಡುತ್ತದೆ: ಸ್ಟಾರ್ ಫ್ರೂಟ್ ವಿಟಮಿನ್ ಸಿ ಯ ಉತ್ತಮ ಮೂಲವಾಗಿದೆ. ಜ್ವರ ಮತ್ತು ನೆಗಡಿಯ ಸಮಸ್ಯೆಯನ್ನು ದೂರ ಮಾಡುತ್ತದೆ. ವಿಟಮಿನ್ ಸಿ ದೇಹದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಹಾಗೆಯೇ ಇದು ಚರ್ಮದ ಉರಿಯೂತವನ್ನು ಕಡಿಮೆ ಮಾಡಲು ಸಹಾಯಕ.
ಹೃದಯ ಆರೊಗ್ಯ ಕಾಪಾಡುತ್ತೆ: ಸ್ಟಾರ್ ಹಣ್ಣು ರಕ್ತದೊತ್ತಡವನ್ನು ನಿಯಂತ್ರಿಸುವ ಸೋಡಿಯಂ ಮತ್ತು ಪೊಟ್ಯಾಸಿಯಮ್ನಂತಹ ಪ್ರಮುಖ ಖನಿಜಗಳಿಂದ ಸಮೃದ್ಧವಾಗಿದೆ. ಇದು ಕ್ಯಾಲ್ಸಿಯಂ ಅನ್ನು ಸಹ ಹೊಂದಿದ್ದು, ಹೃದಯಕ್ಕೆ ತುಂಬಾ ಪ್ರಯೋಜನಕಾರಿ.
ಉಸಿರಾಟವನ್ನು ಸುಗಮಗೊಳಿಸುತ್ತದೆ: ಗಂಟಲು ನೋವು ಕಡಿಮೆ ಮಾಡಿ, ಉಸಿರಾಟ ವ್ಯವಸ್ಥೆಯನ್ನು ಸುಗಮಗೊಳಿಸಲು ಸಹಾಯ ಮಾಡುತ್ತದೆ.
ಜೀರ್ಣಕ್ರಿಯೆ ಸುಧಾರಿಸುತ್ತದೆ: ಈ ಹಣ್ಣು ನಿಮ್ಮ ದೇಹದಲ್ಲಿ ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ.
ಬಹಳಷ್ಟು ಫೈಬರ್ ಇದ್ದು, ಇದು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ನಿಮ್ಮ ಮಲಬದ್ಧತೆಯ ಸಮಸ್ಯೆಯನ್ನು ಪರಿಹರಿಸಲು ಇದು ಸಹಕಾರಿಯಾಗಿದೆ.