Healthy soups for the Monsoon: ಮಳೆಗಾಲದಲ್ಲಿ ಈ ಸೂಪ್​​ಗಳನ್ನು ಸೇವಿಸಿ, ರೋಗನಿರೋಧಕ ಶಕ್ತಿ ಹೆಚ್ಚಿಸಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 01, 2023 | 3:08 PM

ಮಳೆಗಾಲದ ಸಮಯದಲ್ಲಿ ಸಾಮಾನ್ಯವಾಗಿ ಶೀತ, ಜ್ವರ, ನೆಗಡಿ ಮುಂತಾದ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ರೋಗನಿರೋಧಕ ಶಕ್ತಿ ಕಡಿಮೆಯಾದ ಈ ರೀತಿಯ ಆರೋಗ್ಯ ಸಮಸ್ಯೆಗಳು ಭಾದಿಸುವುದು ಸಹಜ. ಹಾಗಾಗಿ ಈ ಮಳೆಗಾಲದಲ್ಲಿ ಬಜ್ಜಿ, ಬೋಂಡಾ ದಂತಹ ಕರಿದ ಆಹಾರದ ಬದಲಿಗೆ ಆರೋಗ್ಯಕರವಾದ ಬಿಸಿಬಿಸಿ ಹಾಗೂ ರುಚಿಕರವಾದ ಸೂಪ್ ಗಳನ್ನು ಸವಿಯುವ ಮೂಲಕ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿ. ಈ ಮಾನ್ಸೂನ್ ಋತುಮಾನದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಸೂಕ್ತವಾದ ಸೂಪ್​ಗಳ ಪಟ್ಟಿ ಇಲ್ಲಿದೆ.

Healthy soups for the Monsoon: ಮಳೆಗಾಲದಲ್ಲಿ ಈ ಸೂಪ್​​ಗಳನ್ನು ಸೇವಿಸಿ, ರೋಗನಿರೋಧಕ ಶಕ್ತಿ ಹೆಚ್ಚಿಸಿ
ಸಾಂದರ್ಭಿಕ ಚಿತ್ರ
Follow us on

ಮಳೆಗಾಲದ ಸಮಯದಲ್ಲಿ ಬಿಸಿಬಿಸಿಯಾಗಿ ಏನಾದರೂ ತಿನ್ನಬೇಕು ಕುಡಿಯಬೇಕು ಎಂದನಿಸುವುದು ಸಹಜ. ಇದರ ಸಲುವಾಗಿ ಅನೇಕರು ಕರಿದ ತಿಂಡಿಗಳನ್ನು ತಿನ್ನಲು ಇಷ್ಟಪಡುತ್ತಾರೆ. ಇವುಗಳು ಜೀರ್ಣಕ್ರೀಯೆ ಸಮಸ್ಯೆಯನ್ನು ಉಂಟುಮಾಡುವ ಸಾಧ್ಯತೆಯಿದೆ. ಅಲ್ಲದೆ ಈ ಋತುವಿನಲ್ಲಿ ಸ್ವಾಭಾವಿಕವಾಗಿ ರೋಗನಿರೋಧಕ ಶಕ್ತಿ ಕುಂಠಿತವಾಗುತ್ತದೆ. ಇದರಿಂದ ಕೆಮ್ಮು, ನೆಗಡಿ, ಜ್ವರ, ಮಲೇರಿಯಾ, ನ್ಯುಮೋನಿಯಾಂತಹ ರೋಗಗಳು ನಮ್ಮನ್ನು ಬಾಧಿಸುತ್ತದೆ. ಅದಕ್ಕಾಗಿ ದುರ್ಬಲಗೊಂಡ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದು ಬಹಳ ಅವಶ್ಯಕ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸೂಪ್ ಗಳು ಸಹಾಯ ಮಾಡುತ್ತದೆ. ಹಾಗಾಗಿ ಈ ಮಳೆಗಾಲದಲ್ಲಿ ಕರಿದ ಆಹಾರಗಳನ್ನು ಸೇವಿಸುವ ಬದಲು ಇವುಗಳಿಗೆ ಪರ್ಯಾಯವಾಗಿ ಆರೋಗ್ಯಕರ ಸೂಪ್ ಸೇವನೆ ಮಾಡುವ ಮೂಲಕ ದೇಹದ ಪ್ರತಿರಕ್ಷಣಾ ಶಕ್ತಿಯನ್ನು ಬಲಡಿಸಬಹುದು.

ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸು ಆರೋಗ್ಯಕರ ಸೂಪ್:

ಶುಂಠಿ ಮತ್ತು ಕ್ಯಾರೆಟ್ ಸೂಪ್:

ಈ ಮಳೆಗಾಲದಲ್ಲಿ ಬಿಸಿಬಿಸಿಯಾಗಿ ಏನನ್ನಾದರೂ ತಿನ್ನಬೇಕು, ಆದರೆ ಅದು ಆರೋಗ್ಯಕರವಾಗಿರಬೇಕು ಎಂದರೆ ಶುಂಠಿ ಮತ್ತು ಕ್ಯಾರೆಟ್ ಸೂಪ್ ಸವಿಯಲು ಉತ್ತಮವಾಗಿದೆ. ಶುಂಠಿಯು ಜೀರ್ಣಕ್ರಿಯೆಗೆ ಸಹಾಯ ಮಾಡುವುದರ ಜೊತೆಗೆ ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ಕ್ಯಾರೆಟ್ ಗಮನಾರ್ಹ ಪ್ರಮಾಣದ ಆಹಾರದ ಫೈಬರ್ ನ್ನು ಹೊಂದಿದ್ದು, ಅದು ಉತ್ತಮ ಜೀರ್ಣಕಾರಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೆ ಇದು ವಿಟಮಿನ್, ಖನಿಜಗಳು ಮತ್ತು ಆಂಟಿಆಕ್ಸಿಡೆಂಟ್ ಗಳಾದ ಪೊಟ್ಯಾಸಿಯಂ, ಫಾಸ್ಫರಸ್ ಮುಂತಾದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅಂಶಗಳನ್ನು ಒಳಗೊಂಡಿದೆ.

ಕುಂಬಳಕಾಯಿ ಸೂಪ್:

ಸುಲಭವಾಗಿ ತಯಾರಿಸಬಹುದಾದ ಈ ಸೂಪ್ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಕುಂಬಳಕಾಯಿ ಸೂಪ್ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ, ಮತ್ತು ಕಬ್ಬಿಣಾಂಶದಿಂದ ಸಮೃದ್ಧವಾಗಿದೆ. ಇವೆಲ್ಲವೂ ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಬಲವಾಗಿರಲು ಸಹಾಯ ಮಾಡುವ ಅಂಶಗಳಾಗಿವೆ. ಹಾಗಾಗಿ ಈ ಮಳೆಗಾಲದಲ್ಲಿ ಸೇವಿಸಲು ಈ ಸೂಪ್ ಉತ್ತಮವಾಗಿದೆ ಅಂತಾನೆ ಹೇಳಬಹುದು.

ಮಿಶ್ರ ತರಕಾರಿ ಸೂಪ್:

ಮಿಶ್ರ ತರಕಾರಿ ಸೂಪ್ ಆರೋಗ್ಯಕರವಾಗಿದ್ದು, ಎಲ್ಲಾ ಋತುಮಾನಗಳಲ್ಲಿಯೂ ಸೇವಿಸಲು ಇದು ಸೂಕ್ತವಾಗಿದೆ. ಹಲವಾರು ಆರೋಗ್ಯಕರ ತರಕಾರಿಗಳ ಮಿಶ್ರಣದ ಈ ಸೂಪ್ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಕ್ಯಾರೆಟ್, ಬೀನ್ಸ್, ಟೊಮೆಟೊ, ಬಟಾಣಿ ಮುಂತಾದ ತರಕಾರಿಗಳನ್ನು ಸೇರಿಸಿ ಸೂಪ್ ತಯಾರಿಸಬಹುದು. ವಿಶೇಷವಾಗಿ ಟೊಮೆಟೊ ವಿಟಮಿನ್ ಸಿ, ಪೊಟ್ಯಾಸಿಯಂ, ಪೋಲೇಟ್ ಮತ್ತು ವಿಟಮಿನ್ ಕೆ ಯ ಉತ್ತಮ ಮೂಲವಾಗಿದೆ. ಇವೆಲ್ಲವೂ ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸುತ್ತದೆ.

ಇದನ್ನೂ ಓದಿ:Healthy Diet: ಆರೋಗ್ಯಕರವಾಗಿ ನಿಮ್ಮ ದಿನವನ್ನು ಪ್ರಾರಂಭಿಸಲು 3 ಆಹಾರಗಳು

ಜೋಳ ಮತ್ತು ಹೂಕೋಸು ಸೂಪ್:

ಹೂಕೋಸು ಫೈಬರ್ ಮತ್ತು ವಿಟಮಿನ್ ಸಿ ಯ ಅತ್ಯುತ್ತಮ ಮೂಲವಾಗಿದೆ. ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಇವುಗಳು ಬಹಳ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಹಾಗಾಗಿ ಹೂಕೋಸು, ಜೋಳ ಹಾಗೂ ನಿಮ್ಮ ನೆಚ್ಚಿನ ತರಕಾರಿಗಳನ್ನ ಸೇರಿಸಿ ಸೂಪ್ ತಯಾರಿಸಿ ಸೇವಿಸಿ. ಇದು ತೂಕಷ್ಟಕ್ಕೂ ಸಹಕಾರಿಯಾಗಿದೆ.

ನುಗ್ಗೆ ಸೊಪ್ಪು ಸೂಪ್:

ಮಳೆಗಾಲಲ್ಲಿ ಸೇವನೆ ಮಾಡಲು ಆರೋಗ್ಯಕ ಸೂಪ್ ಗಳಲ್ಲಿ ಇದು ಕೂಡಾ ಒಂದು. ನುಗ್ಗೆ ಸೊಪ್ಪು ಕ್ಯಾಲ್ಸಿಯಂ, ವಿಟಮಿನ್ ಸಿ, ಕಬ್ಬಿಣ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಅಲ್ಲದೆ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ರಸಂ:

ದಕ್ಷಿಣ ಭಾರತದ ಪ್ರಧಾನ ಖಾದ್ಯವಾದ ರಸಂ ಮಳೆಗಾಲದಲ್ಲಿ ಸವಿಯಲು ಪರಿಪೂರ್ಣವಾದ ಸೂಪ್ ಅಂತಾನೇ ಹೇಳಬಹುದು. ಈ ರಸಂ ನ್ನು ಸಾಮಾನ್ಯವಾಗಿ ಸಾಕಷ್ಟು ಕರಿ ಮೆಣಸ್ನು ಸೇರಿಸಿ ತಯಾರಿಸಲಾಗುತ್ತದೆ. ಕರಿಮೆಣಸು ವಿಟಮಿನ್ ಬಿ ಮತ್ತು ಕ್ಯಾಲ್ಸಿಯಂ ನಿಂದ ಸಮೃದ್ಧವಾಗಿದೆ. ಜೊತೆಗೆ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ. ಅಲ್ಲದೆ ರಸಂ ಗೆ ಸೇರಿಸಲಾಗುವ ಅರಶಿನ, ಟೊಮೆಟೊ, ಸಾಸಿವೆ, ಕೊತ್ತಂಬರಿ, ಬೆಳ್ಳುಳ್ಳಿ, ಕರಿಬೇವು ಹಾಗೂ ಇನ್ನಿತರ ಮಸಾಲೆ ಪದಾರ್ಥಗಳು ಸಾಮಾನ್ಯ ಜ್ವರ, ಶೀತ, ಗಂಟಲು ನೋವಿನಂತಹ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತವೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ