ನಿಮಗೆ ಗೊತ್ತಿರಬಹುದು ಕೆಲವೊಮ್ಮೆ ಸಣ್ಣ ಪುಟ್ಟ ದೇಹದ ಸಮಸ್ಯೆಗಳಿಗೆ ಯಾವ ವೈದ್ಯರು ಕೂಡ ನೀಡದ ಔಷಧವನ್ನು ಮನೆಮದ್ದು ನೀಡುತ್ತದೆ. ತಲೆನೋವು ಅಥವಾ ಜೀರ್ಣಕಾರಿ ಸಮಸ್ಯೆಯಾಗಿರಲಿ ನಿಮಗೆ ತಕ್ಷಣವಲ್ಲದಿದ್ದರೂ ನಿಧಾನವಾಗಿ ಪರಿಹಾರ ಸಿಗುತ್ತದೆ. ಹಾಗಾಗಿ ನಿಮಗೆ ಜೀರ್ಣಕಾರಿ ಸಮಸ್ಯೆಗಳಿದ್ದಲ್ಲಿ ನೀವು ಪ್ರಯತ್ನಿಸಬೇಕಾದ ಒಂದು ಮನೆ ಮದ್ದಿನ ಬಗ್ಗೆ ಹಾಗೂ ಅದರ ಪ್ರಯೋಜನಗಳ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕು. ರಾತ್ರಿಯಲ್ಲಿ ರುಚಿಕರವಾದ ಆಹಾರ ಸೇವನೆ ಮಾಡಿ ಆನಂದ ಪಡುವ ಸಂದರ್ಭದಲ್ಲಿ ನೀವು ಜೀರ್ಣಕಾರಿ ಸಮಸ್ಯೆಗಳನ್ನು ಎದುರಿಸಬಹುದು. ಇತ್ತೀಚಿನ ದಿನಗಳಲ್ಲಿ ಹೊಟ್ಟೆ ಉಬ್ಬರ ಮತ್ತು ಗ್ಯಾಸ್ ಜನರಲ್ಲಿ ಸಾಮಾನ್ಯ ಸಮಸ್ಯೆಗಳಾಗಿವೆ, ಹಾಗಾಗಿ ಈ ರೀತಿ ಅನುಭವವಾದಾಗ ಟ್ಯಾಬ್ಲೆಟ್ ಮೊರೆ ಹೋಗುವ ಬದಲು ಯಾವುದೇ ಅಡ್ಡ ಪರಿಣಾಮಗಳು ಇಲ್ಲದಿರುವ ಮತ್ತು ದೇಹಕ್ಕೆ ಉತ್ತಮ ಎನಿಸುವ ಮನೆಮದ್ದುಗಳನ್ನು ಪ್ರಯತ್ನಿಸಬಹುದು. ಅದೇನೆಂದರೆ ಒಂದು ಲೋಟ ಜೀರಿಗೆ ನೀರನ್ನು ಕುಡಿಯುವುದು. ಇದು ಎಲ್ಲರಿಗೂ ಉತ್ತಮವೇ? ಜೀರ್ಣಕಾರಿ ಸಮಸ್ಯೆಗಳಿಗೆ ಜೀರಾ ನೀರನ್ನು ಕುಡಿಯುವುದು ಎಲ್ಲರಿಗೂ ಕೆಲಸ ಮಾಡುತ್ತದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ತಜ್ಞರು ಕೆಲವು ಮಾಹಿತಿ ನೀಡಿದ್ದಾರೆ.
ಜೀರಿಗೆ ಭಾರತೀಯ ಪಾಕಪದ್ಧತಿಯಲ್ಲಿ ಪ್ರಧಾನವಾಗಿವೆ. ಜೊತೆಗೆ, ಇದು ದಶಕಗಳಿಂದ ಆಯುರ್ವೇದ ಮತ್ತು ಸಾಂಪ್ರದಾಯಿಕ ಭಾರತೀಯ ಅಭ್ಯಾಸಗಳ ಒಂದು ಭಾಗವಾಗಿದೆ. ಪಲ್ಯ ಹಾಗೂ ಇನ್ನಿತರ ಪದಾರ್ಥಗಳಿಗೆ ಮುಖ್ಯವಾಗಿದೆ. ಅವುಗಳ ವಿಶಿಷ್ಟ ಸುವಾಸನೆ, ಖಾದ್ಯಕ್ಕೆ ಸ್ವಲ್ಪ ಹೆಚ್ಚುವರಿ ರುಚಿಯನ್ನು ಸೇರಿಸುತ್ತದೆ. ಆದರೆ ಇದೆಲ್ಲಕ್ಕಿಂತ ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ಜೀರಿಗೆ ಹೊಂದಿದೆ ಎಂಬುದು ನಿಮಗೆ ತಿಳಿದಿದೆಯಾ? ಇದು ಜೀರ್ಣಕಾರಿ ಸಮಸ್ಯೆಗಳು ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ತೊಡೆದು ಹಾಕಲು ಸಹಾಯ ಮಾಡುವ ಗುಣಲಕ್ಷಣಗಳನ್ನು ಹೊಂದಿರುತ್ತದೆ. ರಾತ್ರಿಯಲ್ಲಿ ಇದನ್ನು ಕುಡಿಯುವುದು ನಿಮ್ಮ ಜೀರ್ಣಕ್ರಿಯೆಗೆ ಪ್ರಯೋಜನಕಾರಿಯಾಗಿದೆ ಏಕೆಂದರೆ ಇದು ಹೊಟ್ಟೆ ಉಬ್ಬರ ಮತ್ತು ಗ್ಯಾಸ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಮುಂಬೈನ ನಾನಾವತಿ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನೋಂದಾಯಿತ ಆಹಾರ ತಜ್ಞ ಮತ್ತು ಕ್ಲಿನಿಕಲ್ ನ್ಯೂಟ್ರಿಷನಿಸ್ಟ್ ಡಾ. ಉಷಾಕಿರಣ್ ಸಿಸೋಡಿಯಾ ಹೇಳುತ್ತಾರೆ.
ಮಿಡಲ್ ಈಸ್ಟ್ ಜರ್ನಲ್ ಆಫ್ ಡೈಜೆಸ್ಟಿವ್ ಇಶ್ಯೂಸ್ನಲ್ಲಿ ಪ್ರಕಟವಾದ ಅಧ್ಯಯನವು ಜೀರಿಗೆಯು ನೋವಿನ ಸೆಳೆತ, ವಾಕರಿಕೆ, ಉಬ್ಬರ ಮತ್ತು ಜೀರ್ಣಕಾರಿ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ ಎಂದು ಕಂಡು ಹಿಡಿದಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಹೊಟ್ಟೆ ಉಬ್ಬರ ಮತ್ತು ಗ್ಯಾಸ್ ನಂತಹ ಜೀರ್ಣಕಾರಿ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ಪರಿಣಾಮಕಾರಿ ಮನೆಮದ್ದಾಗಿದೆ.
ಜೀರಾ ನೀರು ನಿಮ್ಮ ಜೀರ್ಣಕಾರಿ ಸಮಸ್ಯೆಗಳಿಗೆ ಅದ್ಭುತ ಪ್ರಯೋಜನಗಳನ್ನು ನೀಡಬಹುದಾದರೂ, ರಾತ್ರಿಯಲ್ಲಿ ಈ ನೀರನ್ನು ಕುಡಿಯುವುದರಿಂದ ಇತರ ವಿಷಯಗಳಲ್ಲಿಯೂ ಪ್ರಯೋಜನಕಾರಿಯಾಗಿದೆ. ಇದು ಮೆಗ್ನೀಸಿಯಮ್ ಅನ್ನು ಸಹ ಹೊಂದಿರುತ್ತದೆ, ಜೊತೆಗೆ ಉತ್ತಮ ನಿದ್ರೆ ಪಡೆಯಲು ಸಹಾಯ ಮಾಡುತ್ತದೆ ಮತ್ತು ನೈಸರ್ಗಿಕ ನಿರ್ವಿಷೀಕರಣವಾಗಿದೆ, ಇದು ದೇಹಕ್ಕೆ ವಿಷವನ್ನು ಹೊರಹಾಕಲು ಮತ್ತು ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.
ವಾಸ್ತವವಾಗಿ, ಜೀರಿಗೆ ನೀರನ್ನು ಕುಡಿಯುವುದು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಉತ್ತಮ ಚಿಕಿತ್ಸೆಯಾಗಿದೆ. ಏಕೆಂದರೆ ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ಅದರ ಫೈಬರ್ ಅಂಶ ನಿಮ್ಮ ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ, ಜೊತೆಗೆ ಹೊಟ್ಟೆ ತುಂಬಿದ ಭಾವನೆಯನ್ನು ನೀಡುತ್ತದೆ ಮತ್ತು ನಿಮ್ಮನ್ನು ಹೆಚ್ಚು ಸಮಯದವರೆಗೆ ಹಸಿವಾಗದಿರುವಂತೆ ನೋಡಿಕೊಳ್ಳುತ್ತದೆ. ಆದರೆ ಇದು ತೂಕ ಇಳಿಸಿಕೊಳ್ಳಲು ಅಥವಾ ಯಾವುದಕ್ಕೂ ಮ್ಯಾಜಿಕ್ ಪಾನೀಯವಾಗಿ ಕೆಲಸ ಮಾಡುವುದಿಲ್ಲ. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮವನ್ನು ಕೂಡ ನಿಮ್ಮ ದೈನಂದಿನ ಚಟುವಟಿಕೆಯಲ್ಲಿ ಸೇರಿಸಿಕೊಳ್ಳಬೇಕು.
ಇದನ್ನೂ ಓದಿ:ಹೊಟ್ಟೆ ಉಬ್ಬರ ಮತ್ತು ಅಸಿಡಿಟಿ ಸಮಸ್ಯೆಗಳಿದ್ದರೆ ಪ್ರಯತ್ನಿಸಿ ಬಾಳೆ ಹಣ್ಣಿನ ಕಷಾಯ; ಇಲ್ಲಿದೆ ಮಾಡುವ ವಿಧಾನ
ಜೀರಿಗೆ ನೀರನ್ನು ಕುಡಿಯುವುದು ಸಾಮಾನ್ಯವಾಗಿ ಹೆಚ್ಚಿನ ಜನರಿಗೆ ಸುರಕ್ಷಿತವಾಗಿದ್ದರೂ, ಇದು ಕೆಲವು ಜನರಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆಗಳಿಗೆ ಕಾರಣವಾಗಬಹುದು. ಮಸಾಲೆಗಳಿಗೆ ಅಲರ್ಜಿಯಿಂದ ಬಳಲುತ್ತಿರುವವರು ಜೀರಾ ನೀರನ್ನು ಕುಡಿಯುವುದನ್ನು ತಪ್ಪಿಸಬೇಕು. ನಿಮ್ಮ ದೇಹಕ್ಕೆ ಅಗತ್ಯವಿದ್ದರೆ ಅದನ್ನು ಮಿತವಾಗಿ ತೆಗೆದುಕೊಳ್ಳಿ. ಇದಕ್ಕೆ ಸಂಬಂಧಪಟ್ಟಂತೆ ಯಾವುದೇ ರೋಗಲಕ್ಷಣಗಳನ್ನು ನೀವು ಗಮನಿಸಿದರೆ, ಅದನ್ನು ಸೇವಿಸುವುದನ್ನು ನಿಲ್ಲಿಸಿ ಮತ್ತು ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 3:52 pm, Fri, 20 October 23