
ಮಲಗುವ ಮುನ್ನ ಪಾದಗಳಿಗೆ ಮಸಾಜ್ (Massage) ಮಾಡುವುದು ಹಲವರ ಅಭ್ಯಾಸ. ಕೆಲವರು ತೆಂಗಿನ ಎಣ್ಣೆಯಿಂದ ಮಾಡಿದರೆ, ಇನ್ನು ಕೆಲವರು ತುಪ್ಪ ಬಳಸುತ್ತಾರೆ. ಈ ರೀತಿ ಮಸಾಜ್ ಮಾಡುವುದರಿಂದ ಹಲವು ರೀತಿಯ ಪ್ರಯೋಜನಗಳಿವೆ. ಅದರಲ್ಲಿಯೂ ತುಪ್ಪದಿಂದ ಪಾದಗಳಿಗೆ ಮಸಾಜ್ ಮಾಡುವುದರಿಂದ ಮತ್ತಷ್ಟು ಪ್ರಯೋಜನಗಳನ್ನು ಪಡೆಯಬಹುದು. ಆದರೆ ಇತ್ತೀಚಿನ ದಿನಗಳಲ್ಲಿ, ಈ ಪ್ರಾಚೀನ ಪದ್ದತಿಗೆ ಯಾರೂ ಕೂಡ ಹೆಚ್ಚಿನ ಗಮನ ನೀಡುತ್ತಿಲ್ಲ. ಆದರೆ ಒಂದು ಕಾಲದಲ್ಲಿ, ಜನರು ಪ್ರತಿರಾತ್ರಿ ಮಲಗುವ ಮೊದಲು ಪಾದಗಳಿಗೆ ತುಪ್ಪ (Ghee) ಹಚ್ಚುವ ಅಭ್ಯಾಸವನ್ನು ಪಾಲನೆ ಮಾಡುತ್ತಿದ್ದರು ಇದು ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದು ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಹಾಗಾದರೆ ಇದು ಯಾವ ರೀತಿಯ ಸಮಸ್ಯೆಗೆ ಪ್ರಯೋಜನಕಾರಿ? ಯಾಕೆ ಈ ಪ್ರಾಚೀನ ಪದ್ಧತಿಯನ್ನು ಅನುಸರಿಸಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಪಾದಗಳಿಗೆ ತುಪ್ಪ ಹಚ್ಚುವುದರಿಂದ ದೇಹದಲ್ಲಿರುವ ವಿಷಕಾರಿ ಅಂಶ ಹೊರಹೋಗುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಹೆಚ್ಚುವರಿಯಾಗಿ, ತುಪ್ಪದಲ್ಲಿರುವ ವಿಟಮಿನ್ ಎ, ಡಿ, ಇ, ಇತ್ಯಾದಿಗಳು ರೋಗನಿರೋಧಕ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಲು ಪೂರಕವಾಗಿ ಕೆಲಸ ಮಾಡುತ್ತದೆ. ಅದೇ ರೀತಿ, ಅಗತ್ಯವಾದ ಕೊಬ್ಬಿನಾಮ್ಲಗಳು, ಉತ್ಕರ್ಷಣ ನಿರೋಧಕಗಳು ಮತ್ತು ಜೀವಸತ್ವಗಳು ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದಲ್ಲದೆ, ಕಾಯಿಲೆಗಳು ಮತ್ತು ಸೋಂಕುಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಾದಾಗ, ಕಾಲೋಚಿತ ಶೀತ ಮತ್ತು ಜ್ವರಗಳಂತಹ ಅನೇಕ ಸಮಸ್ಯೆಗಳು ದೂರವಿಡುತ್ತವೆ.
ನಮ್ಮ ಪಾದಗಳು ಹೆಚ್ಚಾಗಿ ನೆಲದ ಮೇಲೆಯೇ ಇರುವುದರಿಂದ ಪರಿಸರ ಅಂಶಗಳಿಂದಾಗಿ ಚರ್ಮವು ನಿಯಮಿತವಾಗಿ ಒಣಗುತ್ತದೆ ಮತ್ತು ಒರಟಾಗಿರುತ್ತದೆ. ತುಪ್ಪವು ಅಂತಹ ಸಮಸ್ಯೆಗಳಿಗೆ ಉತ್ತಮ ಪರಿಹಾರ ನೀಡುತ್ತದೆ. ಇದು ತೇವಾಂಶ ಹೆಚ್ಚಿಸುವ ಗುಣವನ್ನು ಹೊಂದಿದ್ದು, ಚರ್ಮಕ್ಕೆ ಪೋಷಣೆಯನ್ನು ಒದಗಿಸುತ್ತದೆ. ಹೆಚ್ಚುವರಿಯಾಗಿ, ಇದು ಚರ್ಮವನ್ನು ಮೃದುಗೊಳಿಸುತ್ತದೆ. ಮಾತ್ರವಲ್ಲ ಬಿರುಕು ಬಿಟ್ಟ ಹಿಮ್ಮಡಿ ಸಮಸ್ಯೆಗಳಿದ್ದಲ್ಲಿ ತುಪ್ಪದಿಂದ ಮಸಾಜ್ ಮಾಡುವುದರಿಂದ ಹಿಮ್ಮಡಿ ಬಿರುಕನ್ನು ಕಡಿಮೆ ಮಾಡಬಹುದು. ಇದು ಪಾದಗಳ ಮೇಲಿನ ಚರ್ಮವನ್ನು ಮೃದು ಮತ್ತು ನಯವಾಗಿಸುತ್ತದೆ. ಇದಕ್ಕಾಗಿ, ಮೊದಲು ಪಾದಗಳನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆದು ಒಣಗಿಸಿ. ಅವು ಸಂಪೂರ್ಣವಾಗಿ ಒಣಗುವ ಮೊದಲು, ಸ್ವಲ್ಪ ತುಪ್ಪವನ್ನು ತೆಗೆದುಕೊಂಡು ಅದನ್ನು ಪಾದಗಳಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡುವುದು ಒಳ್ಳೆಯದು.
ಇದನ್ನೂ ಓದಿ: ರೊಟ್ಟಿ, ಚಪಾತಿಗೆ ತುಪ್ಪ ಹಚ್ಚಿ ತಿನ್ನುವ ಅಭ್ಯಾಸ ನಿಮಗಿದ್ಯಾ? ಹಾಗಿದ್ರೆ ಇದರಿಂದ ಏನೆಲ್ಲಾ ಸಮಸ್ಯೆ ಬರುತ್ತೆ ನೋಡಿ
ನಮ್ಮ ಪಾದಗಳ ಅಡಿಭಾಗದಲ್ಲಿರುವ ನರ ತುದಿಗಳು ಮತ್ತು ರಿಫ್ಲೆಕ್ಸೋಲಜಿ ತಾಣಗಳು ನಮ್ಮ ದೇಹದ ವಿವಿಧ ವ್ಯವಸ್ಥೆಗಳು ಮತ್ತು ಅಂಗಗಳಿಗೆ ಸಂಪರ್ಕ ಹೊಂದಿವೆ. ಅಡಿಭಾಗಗಳನ್ನು ಮಸಾಜ್ ಮಾಡಿದಾಗ, ಆ ಒತ್ತಡದ ಬಿಂದುಗಳು ಉತ್ತೇಜಿಸಲ್ಪಡುತ್ತವೆ, ದೇಹದಾದ್ಯಂತ ರಕ್ತ ಪರಿಚಲನೆ ಸುಧಾರಿಸುತ್ತದೆ. ವರ್ಧಿತ ರಕ್ತ ಪರಿಚಲನೆಯು ಜೀವಕೋಶಗಳು ಮತ್ತು ಅಂಗಾಂಶಗಳಿಗೆ ಆಮ್ಲಜನಕ ಮತ್ತು ಅಗತ್ಯ ಪೋಷಕಾಂಶಗಳು ಸರಿಯಾಗಿ ಸಿಗುತ್ತದೆ. ಮಾತ್ರವಲ್ಲ ಪಾದಗಳಿಗೆ ತುಪ್ಪವನ್ನು ಹಚ್ಚಿ ಮಸಾಜ್ ಮಾಡುವುದರಿಂದ ಒತ್ತಡ ಕಡಿಮೆಯಾಗಿ ಮನಸ್ಸು ಶಾಂತ ಮತ್ತು ನಿರಾಳವಾಗಲು ಸಹಾಯ ಮಾಡುತ್ತದೆ.
ಮನುಷ್ಯನಿಗೆ ನಿದ್ರೆ ನಮಗೆ ಬಹಳ ಮುಖ್ಯ. ಸರಿಯಾಗಿ ನಿದ್ರೆ ಬರದಿದ್ದರೆ ರಾತ್ರಿ ಸಮಯದಲ್ಲಿ ನಿಮ್ಮ ಪಾದಗಳನ್ನು ಬೆಣ್ಣೆ ಅಥವಾ ತುಪ್ಪ ಹಚ್ಚುವ ಮೂಲಕ ಮಸಾಜ್ ಮಾಡುವುದು ಒಳ್ಳೆಯದು. ಇದು ಒಳ್ಳೆಯ ನಿದ್ರೆ ಮಾಡುವುದಕ್ಕೆ ಸಹಾಯ ಮಾಡುತ್ತದೆ. ದೇಹದ ಶಕ್ತಿಯೂ ಸಮತೋಲನದಲ್ಲಿರುತ್ತದೆ. ಒತ್ತಡ ಕಡಿಮೆಯಾಗಿ ನರಮಂಡಲವು ವಿಶ್ರಾಂತಿ ಪಡೆಯುತ್ತದೆ. ಪರಿಣಾಮವಾಗಿ, ನೀವು ಯಾವುದೇ ರೀತಿಯ ಆಲೋಚನೆಗಳಿಲ್ಲದೆ ನಿದ್ರಿಸಬಹುದು. ಮಾತ್ರವಲ್ಲ ಮಾಲಿನ್ಯದಿಂದಾಗಿ ವಿವಿಧ ವಿಷಗಳು ನಮ್ಮ ದೇಹವನ್ನು ಪ್ರವೇಶಿಸುವುದರಿಂದ ಇದರಿಂದ ಪರಿಹಾರ ಪಡೆಯಲು ಪಾದಗಳಿಗೆ ಮಸಾಜ್ ಮಾಡುವುದು ಒಳ್ಳೆಯದು. ಇದರಿಂದ ದೇಹದಲ್ಲಿರುವ ಹಾನಿಕಾರಕ ಅಂಶ ಹೊರಹೋಗುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ