ರೊಟ್ಟಿ, ಚಪಾತಿಗೆ ತುಪ್ಪ ಹಚ್ಚಿ ತಿನ್ನುವ ಅಭ್ಯಾಸ ನಿಮಗಿದ್ಯಾ? ಹಾಗಿದ್ರೆ ಇದರಿಂದ ಏನೆಲ್ಲಾ ಸಮಸ್ಯೆ ಬರುತ್ತೆ ನೋಡಿ
ಅನೇಕರು ಚಪಾತಿ ಮತ್ತು ರೊಟ್ಟಿ ತಿನ್ನುವಾಗ ಅದರ ಮೇಲೆ ಬೆಣ್ಣೆ ಅಥವಾ ತುಪ್ಪ ಹಚ್ಚಿ ತಿನ್ನಲು ಇಷ್ಟಪಡುತ್ತಾರೆ. ಇನ್ನು ಕೆಲವರು ಅದರ ಮೇಲೆ ಸ್ವಲ್ಪ ಸಕ್ಕರೆಯನ್ನು ಸಿಂಪಡಿಸಿಕೊಂಡು ತಿನ್ನಲು ಇಷ್ಟಪಡುತ್ತಾರೆ. ಹಿಂದೆ ಈ ರೀತಿ ತಿನ್ನುವುದು ಒಳ್ಳೆಯದು ಎಂದು ಹಲವರು ಹೇಳುತ್ತಿದ್ದರು, ಆದರೆ ಈಗ ಈ ರೀತಿ ಸೇವನೆ ಮಾಡಿದರೆ ಆರೋಗ್ಯ ಸಮಸ್ಯೆ ಬರುತ್ತೆ ಎಂದು ಹೇಳಲಾಗುತ್ತಿದೆ. ಇದರ ಬಗ್ಗೆ ಆಚಾರ್ಯ ಬಾಲಕೃಷ್ಣ ಅವರು ಈ ರೀತಿಯ ಅಭ್ಯಾಸ ಒಳ್ಳೆಯದಲ್ಲ ಎಂದಿದ್ದಾರೆ. ಹಾಗಾದರೆ ಇದಕ್ಕೆ ಕಾರಣವೇನು? ಯಾಕೆ ರೊಟ್ಟಿ, ಚಪಾತಿ ಮೇಲೆ ತುಪ್ಪ ಸವರಬಾರದು ಎಂಬುದನ್ನು ತಿಳಿದುಕೊಳ್ಳಿ.

ಕೆಲವರು ಪ್ರತಿನಿತ್ಯ ಒಂದಿಲ್ಲೊಂದು ರೀತಿಯಲ್ಲಿ ಬೆಣ್ಣೆ, ತುಪ್ಪವನ್ನು ಸೇವನೆ ಮಾಡುತ್ತಾರೆ. ಇವುಗಳಲ್ಲಿ ಆರೋಗ್ಯಕರ ಕೊಬ್ಬುಗಳಿರುತ್ತವೆ. ಇದು ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ (Cholesterol) ಅನ್ನು ಹೆಚ್ಚಿಸುತ್ತದೆ. ಮಾತ್ರವಲ್ಲ ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಿಯಮಿತವಾಗಿ ತುಪ್ಪ ಬಳಸುವ ಅಭ್ಯಾಸ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ವಿಟಮಿನ್ ಎ, ಡಿ, ಇ ಮತ್ತು ಕೆ ನಂತಹ ಪೋಷಕಾಂಶಗಳು ದೇಹಕ್ಕೆ ಪ್ರಯೋಜನಕಾರಿಯಾಗಿದೆ. ಇದನ್ನು ಸೇವಿಸುವುದರಿಂದ ದೇಹಕ್ಕೆ ಶಕ್ತಿ ದೊರೆಯುತ್ತದೆ ಮತ್ತು ಹೆಚ್ಚು ಸಮಯದ ವರೆಗೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಕೆಲವು ತಜ್ಞರ ಪ್ರಕಾರ, ಎಣ್ಣೆಯ ಬದಲಿಗೆ ತುಪ್ಪವನ್ನು ಬಳಸುವುದು ಹೆಚ್ಚು ಉತ್ತಮ. ಅದಕ್ಕಾಗಿಯೇ ನಾವು ನಮ್ಮ ಅಡುಗೆಯಲ್ಲಿ ತುಪ್ಪವನ್ನು ಸೇರಿಸುತ್ತೇವೆ. ತುಪ್ಪವನ್ನು ಇಷ್ಟಪಡುವವರು ಇಡ್ಲಿ ಮತ್ತು ದೋಸೆಯಂತಹ ಯಾವುದೇ ತಿಂಡಿಗಳ ಜೊತೆ ಅದನ್ನು ಬಳಕೆ ಮಾಡುತ್ತಾರೆ. ಇನ್ನು ಕೆಲವರಂತೂ ಚಪಾತಿ ಬಿಸಿಯಾಗಿರುವಾಗಲೇ ಅದಕ್ಕೆ ತುಪ್ಪ ಸವರಿಕೊಂಡು ತಿನ್ನುತ್ತಾರೆ. ಇದು ಚಪಾತಿ ಮತ್ತು ರೊಟ್ಟಿಯ ರುಚಿಯನ್ನು ಹೆಚ್ಚಿಸುವುದಲ್ಲದೆ, ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ. ಆದರೆ ಆಚಾರ್ಯ ಬಾಲಕೃಷ್ಣ (Acharya Balakrishna) ಅವರು ಹಂಚಿಕೊಂಡಿರುವ ಮಾಹಿತಿ ಪ್ರಕಾರ, ಈ ರೀತಿಯ ಅಭ್ಯಾಸ ಒಳ್ಳೆಯದಲ್ಲ ಎಂದು ಹೇಳುತ್ತಾರೆ. ಇದಕ್ಕೆ ಕಾರಣವೇನು? ಯಾಕೆ ರೊಟ್ಟಿ, ಚಪಾತಿ ಮೇಲೆ ತುಪ್ಪ ಸವರಬಾರದು ಎಂಬುದನ್ನು ತಿಳಿದುಕೊಳ್ಳಿ.
ಆರೋಗ್ಯ ಪ್ರಯೋಜನ:
ತುಪ್ಪ ಸೇವನೆ ಮಾಡುವುದು ನಮಗೆ ಸಿಕ್ಕಿರುವ ಒಂದು ದೊಡ್ಡ ವರದಾನ. ಇದನ್ನು ಅಡುಗೆಯಲ್ಲಿ ಮಾತ್ರವಲ್ಲದೆ, ಅದರ ಗುಣಗಳಿಂದಾಗಿ, ಇದನ್ನು ಸೌಂದರ್ಯವನ್ನು ಹೆಚ್ಚಿಸಲು ಸಹ ಬಳಸಲಾಗುತ್ತದೆ. ಅನೇಕ ಪ್ರಯೋಜನಗಳನ್ನು ಹೊಂದಿರುವ ತುಪ್ಪವನ್ನು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಮದ್ದಾಗಿ ಬಳಸಬಹುದು. ಇದನ್ನು ಸೇವಿಸುವುದರಿಂದ ಕರುಳಿನ ಆರೋಗ್ಯ ಸುಧಾರಿಸುತ್ತದೆ, ಮೂಳೆಗಳನ್ನು ಬಲಪಡಿಸುತ್ತದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ತೂಕವನ್ನು ಕಾಪಾಡಿಕೊಳ್ಳುವಲ್ಲಿ, ದೀರ್ಘಕಾಲದ ಕಾಯಿಲೆಗಳನ್ನು ಕಡಿಮೆ ಮಾಡುವಲ್ಲಿ ಮತ್ತು ಕೀಲು ಸಮಸ್ಯೆಗಳನ್ನು ದೂರ ಮಾಡಲು ತುಪ್ಪವನ್ನು ಬಳಕೆ ಮಾಡಲಾಗುತ್ತದೆ. ಮಾತ್ರವಲ್ಲ ಇದು ಸ್ಮರಣಶಕ್ತಿ ವರ್ಧಕ ಮತ್ತು ನೋವು ನಿವಾರಕವಾಗಿಯೂ ಕಾರ್ಯನಿರ್ವಹಿಸುತ್ತದೆ.
ಚಪಾತಿಗಳ ಮೇಲೆ ಬೆಣ್ಣೆ ಯಾಕೆ ಹಚ್ಚಬಾರದು?
ಅನ್ನದ ಜೊತೆಗೆ ಚಪಾತಿ ಮತ್ತು ರೊಟ್ಟಿ ಸೇವನೆ ಮಾಡುವುದು ಕೆಲವರ ಆಹಾರದ ಭಾಗ. ಸಾಮಾನ್ಯವಾಗಿ ತೂಕ ಇಳಿಸಿಕೊಳ್ಳಲು ಬಯಸುವವರು ರೊಟ್ಟಿ ಮತ್ತು ಚಪಾತಿಗಳನ್ನು ಹೆಚ್ಚೆಚ್ಚು ತಿನ್ನುತ್ತಾರೆ. ಆದರೆ, ಕೆಲವರು ಅವುಗಳ ಸ್ವಾದ ಹೆಚ್ಚಿಸುವ ಉದ್ದೇಶದಿಂದ ಚಪಾತಿಗಳ ಮೇಲೆ ಸ್ವಲ್ಪ ಬೆಣ್ಣೆ ಅಥವಾ ತುಪ್ಪವನ್ನು ಸವರಿ ತಿನ್ನುತ್ತಾರೆ. ಹಿಂದೆ, ಇದು ಒಳ್ಳೆಯ ಅಭ್ಯಾಸ ಎಂದು ಹೇಳಲಾಗುತ್ತಿತ್ತು. ಆದರೆ ಈಗ, ಇದಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳಿವೆ ಎಂದು ಉಲ್ಲೇಖಿಸಲಾಗುತ್ತಿದೆ.
ಆಚಾರ್ಯ ಬಾಲಕೃಷ್ಣ ಅವರು ಹೇಳಿರುವುದೇನು?
ಪತಂಜಲಿ ಯೋಗಪೀಠದ ಮುಖ್ಯಸ್ಥ ಆಚಾರ್ಯ ಬಾಲಕೃಷ್ಣ ಅವರ ಪ್ರಕಾರ, ಬೆಣ್ಣೆ ಅಥವಾ ತುಪ್ಪವನ್ನು ರೊಟ್ಟಿಗಳ ಮೇಲೆ ಹಾಕಿ ತಿನ್ನುವುದು ಒಳ್ಳೆಯದಲ್ಲ. ಅವರು ಈ ಮಾಹಿತಿಯನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಉಲ್ಲೇಖಿಸಿದ್ದಾರೆ. ತುಪ್ಪ ಮತ್ತು ಬೆಣ್ಣೆ ತಿನ್ನುವುದರಿಂದ ಹಲವು ಪ್ರಯೋಜನಗಳಿವೆ. ಅದೇ ರೀತಿ, ಚಪಾತಿಗಳು ಕೂಡ ನಮ್ಮ ದೇಹಕ್ಕೆ ಒಳ್ಳೆಯದು. ಆದರೆ ಇವೆರಡನ್ನೂ ಒಟ್ಟಿಗೆ ತಿನ್ನುವುದು ಒಳ್ಳೆಯದಲ್ಲ ಎಂದಿದ್ದಾರೆ.
ಇದನ್ನೂ ಓದಿ: ಈ ಆರೋಗ್ಯ ಸಮಸ್ಯೆ ಇರುವವರು ಯಾವ ಕಾರಣಕ್ಕೂ ತುಪ್ಪ ಸೇವಿಸಲೇಬೇಡಿ
ಯಾಕೆ ಒಳ್ಳೆಯದಲ್ಲ?
ಬಾಲಕೃಷ್ಣ ಅವರ ಪ್ರಕಾರ, ರೊಟ್ಟಿಯ ಮೇಲೆ ಬೆಣ್ಣೆಯನ್ನು ಹಚ್ಚುವುದರಿಂದ ಒಂದು ಪದರ ಉಂಟಾಗುತ್ತದೆ. ಇದು ಜೀರ್ಣಿಕ್ರಿಯೆಗೆ ಕಷ್ಟವಾಗುತ್ತದೆ. ಈ ಪದರವು ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳಲು ಬಿಡುವುದಿಲ್ಲ. ಪರಿಣಾಮವಾಗಿ, ಅನಿಲ, ಅಜೀರ್ಣ ಮತ್ತು ಹೊಟ್ಟೆ ಭಾರವಾದ ಭಾವನೆ ಉಂಟು ಮಾಡುತ್ತದೆ. ಈ ರೀತಿ ಸೇವಿಸಿದ ರೊಟ್ಟಿಗಳು ಬೇಗನೆ ಜೀರ್ಣವಾಗುವುದಿಲ್ಲ ಎಂದಿದ್ದಾರೆ.
ಹೇಗೆ ತಿನ್ನಬೇಕು?
ನೀವು ಬೆಣ್ಣೆ ಜೊತೆ ರೊಟ್ಟಿ ತಿನ್ನಲು ಬಯಸಿದರೆ, ಚಪಾತಿಗಳಿಗೆ ಬೆಣ್ಣೆ ಹಾಕದೆ ದಾಲ್ ಮಾಡಿ ಅವುಗಳಿಗೆ ಬೆಣ್ಣೆ ಹಾಕಿ ತಿನ್ನಿರಿ. ಇದರಿಂದ ಯಾವುದೇ ತೊಂದರೆಗಳು ಉಂಟಾಗುವುದಿಲ್ಲ. ಜೀರ್ಣಕ್ರಿಯೆಯ ಸಮಸ್ಯೆಗಳೇ ಉದ್ಭವಿಸುವುದಿಲ್ಲ. ಇದಲ್ಲದೆ, ರುಚಿ ಹಾಗೆಯೇ ಇರುತ್ತದೆ. ಆದರೆ ಹೆಚ್ಚು ಸೇವನೆ ಮಾಡಬೇಡಿ. ಇನ್ನು ರೊಟ್ಟಿಗಳು ಮೃದುವಾಗಲು ಹಿಟ್ಟಿನ ಜೊತೆಗೆ ತುಪ್ಪ ಬೆರೆಸಬಹುದು. ಆದರೆ ರೊಟ್ಟಿ, ಚಪಾತಿಗಳ ಮೇಲೆ ತುಪ್ಪ ಹಚ್ಚುವುದು ಒಳ್ಳೆಯದಲ್ಲ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ