
ಮಳೆಗಾಲದ (Monsoon) ವಾತಾವರಣ ಬಹಳ ಖುಷಿ ಕೊಡುತ್ತದೆ. ತಂಪಾದ ಗಾಳಿ, ಮೋಡ, ಮಳೆ ಎಲ್ಲವೂ ಮನಸ್ಸಿಗೆ ಹಿತವಾಗಿರುತ್ತದೆ. ಆದರೆ ಈ ಸಮಯದಲ್ಲಿ, ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಕೂಡ ಬಹಳ ಮುಖ್ಯವಾಗುತ್ತದೆ. ಚಿಕ್ಕ ಚಿಕ್ಕ ವಿಷಯಗಳನ್ನು ಕೂಡ ನಿರ್ಲಕ್ಷಿಸುವಂತಿಲ್ಲ. ಅದರಲ್ಲಿಯೂ ಆಹಾರ, ನೀರು ಇವೆಲ್ಲವೂ ಸರಿಯಾದ ರೀತಿಯಲ್ಲಿ ಸೇವನೆ ಮಾಡಬೇಕಾಗುತ್ತದೆ. ಹೇಗೆ, ಬೇಸಿಗೆ ಕಾಲದಲ್ಲಿ ತಣ್ಣೀರನ್ನು ಕುಡಿಯುತ್ತೇವೆಯೋ ಹಾಗೆಯೇ ಮಳೆ ಬರುವ ಸಮಯದಲ್ಲಿ ಬೆಚ್ಚಗಿನ ನೀರನ್ನು ಕುಡಿಯಬೇಕಾಗುತ್ತದೆ. ಆದರೆ ತಂಪಾದ ವಾತಾವರಣದಲ್ಲಿ ಜನರು ಬಾಯಾರಿಕೆ ಆಗುವುದಿಲ್ಲ ಎಂದು ನೀರು ಕುಡಿಯುವುದನ್ನೇ ಕಡಿಮೆ ಮಾಡುತ್ತಾರೆ. ಇನ್ನು ಕೆಲವರು ಬಿಸಿ ನೀರನ್ನು ಕುಡಿಯಲು ಇಷ್ಟಪಡದೆ ಸಿಕ್ಕ ಸಿಕ್ಕಲ್ಲಿ ನೀರು ಕುಡಿಯುತ್ತಾರೆ. ಆದರೆ ನಿಮಗೆ ತಿಳಿದಿರಲಿ ಮಳೆಗಾಲದಲ್ಲಿ ಬೆಚ್ಚಗಿನ ಅಥವಾ ಬಿಸಿಯಾಗಿರುವ ನೀರನ್ನು (Warm Water) ಕುಡಿಯುವುದು ಬಹಳ ಮುಖ್ಯ. ಅದರಲ್ಲಿಯೂ ಬೆಳಿಗ್ಗೆ ಎದ್ದ ತಕ್ಷಣ ಬೆಚ್ಚಗಿನ ನೀರನ್ನು ಕುಡಿಯುವುದು ನಮ್ಮ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂದು ತಜ್ಞರು ಹೇಳುತ್ತಾರೆ. ಹಾಗಾದರೆ ಯಾಕೆ ಮಳೆಗಾಲದಲ್ಲಿ ಬಿಸಿಯಾಗಿರುವ ನೀರನ್ನು ಕುಡಿಯಬೇಕು? ಬಿಸಿನೀರು ಜೀರ್ಣಕ್ರಿಯೆ ಮತ್ತು ಚಯಾಪಚಯ ಕ್ರಿಯೆಗೆ ಹೇಗೆ ಸಹಾಯ ಮಾಡುತ್ತದೆಯೇ? ಬೆಳಿಗ್ಗೆ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಸಿಗುವ ಪ್ರಯೋಜನಗಳೇನು? ಈ ರೀತಿಯ ಆಸಕ್ತಿದಾಯಕ ವಿಷಯಗಳನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಮಳೆಗಾಲದಲ್ಲಿ, ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ, ಬ್ಯಾಕ್ಟೀರಿಯಾ, ವೈರಸ್ ಮತ್ತು ಶಿಲೀಂಧ್ರಗಳು ವೇಗವಾಗಿ ಬೆಳೆಯಲು ಪ್ರಾರಂಭಿಸುತ್ತದೆ. ಈ ಸಮಯದಲ್ಲಿ ಸೋಂಕುಗಳ ಅಪಾಯ ಹೆಚ್ಚಾಗಲು ಇದೇ ಕಾರಣ. ಮಾತ್ರವಲ್ಲ ಶೀತ, ಕೆಮ್ಮು, ಗಂಟಲು ನೋವು, ಹೊಟ್ಟೆ ನೋವು, ಅತಿಸಾರ ಮತ್ತು ವೈರಲ್ ಕಾಯಿಲೆಗಳು ಬೇಗನೆ ಹರಡುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ಬಿಸಿನೀರನ್ನು ಕುಡಿಯುವ ಅಭ್ಯಾಸ ಬೆಳೆಸಿಕೊಂಡರೆ, ಹಲವು ರೋಗಗಳು ಬರುವುದನ್ನು ತಡೆಗಟ್ಟಬಹುದು.
ದೆಹಲಿಯ ಏಮ್ಸ್‌ನ ಗ್ಯಾಸ್ಟ್ರೋ ತಜ್ಞೆ ಡಾ. ಅನನ್ಯ ಗುಪ್ತಾ ಅವರ ಪ್ರಕಾರ, ಮಳೆಗಾಲದಲ್ಲಿ ಬಿಸಿನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುವುದಲ್ಲದೆ, ರೋಗ ನಿರೋಧಕ ಶಕ್ತಿಯೂ ಬಲಗೊಳ್ಳುತ್ತದೆ. ಬಿಸಿನೀರು ಕುಡಿದಾಗ, ಅದು ದೇಹದೊಳಗೆ ಹೋಗಿ ಸಂಗ್ರಹವಾದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದು ಹೊಟ್ಟೆಯನ್ನು ಶುದ್ಧೀಕರಿಸುತ್ತದೆ ಮತ್ತು ಗ್ಯಾಸ್ ಮತ್ತು ಆಮ್ಲೀಯತೆಯಂತಹ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. ಮಳೆಗಾಲದಲ್ಲಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ, ಬಿಸಿನೀರು ತುಂಬಾ ಪ್ರಯೋಜನಕಾರಿಯಾಗಿದೆ.
ಬೆಚ್ಚಗಿನ ನೀರು ಕುಡಿಯುವುದರಿಂದ ಗಂಟಲು ಮತ್ತು ಎದೆಯಲ್ಲಿ ಸಿಲುಕಿರುವ ಲೋಳೆಯ ಅಂಶವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಮಾತ್ರವಲ್ಲ ಇದು ಉಸಿರಾಟವನ್ನು ಸುಲಭಗೊಳಿಸುತ್ತದೆ. ಮಳೆಗಾಲದಲ್ಲಿ ಶೀತ ಮತ್ತು ಕೆಮ್ಮು ಹೆಚ್ಚಾಗಿ ಕಂಡುಬರುವುದರಿಂದ ಇಂತಹ ಸಂದರ್ಭಗಳಲ್ಲಿ, ಬೆಚ್ಚಗಿನ ನೀರು ಕುಡಿಯುವುದು ತುಂಬಾ ಪ್ರಯೋಜನಕಾರಿ. ಇದು ಗಂಟಲಿನ ಆರೋಗ್ಯ ಕಾಪಾಡುತ್ತದೆ ಜೊತೆಗೆ ಸೋಂಕುಗಳು ಉಲ್ಬಣಗೊಳ್ಳುವುದನ್ನು ತಡೆಯುತ್ತದೆ. ಹೆಚ್ಚುವರಿಯಾಗಿ, ಬೆಚ್ಚಗಿನ ನೀರು ಚರ್ಮಕ್ಕೂ ಒಳ್ಳೆಯದು. ದೇಹವು ಒಳಗಿನಿಂದ ಶುದ್ಧವಾಗಿದ್ದಾಗ, ಮುಖದ ಹೊಳಪು ಕೂಡ ಚೆನ್ನಾಗಿರುತ್ತದೆ.
ಇದನ್ನೂ ಓದಿ: ಮಳೆಗಾಲದಲ್ಲೂ ಐಸ್ ಕ್ರೀಮ್ ತಿನ್ನುವವರು ಈ ಸ್ಟೋರಿ ಮಿಸ್ ಮಾಡ್ದೆ ಓದಿ
ಅನೇಕರು ಬೆಳಿಗ್ಗೆ ಎದ್ದ ತಕ್ಷಣ ನಿಂಬೆ ಮತ್ತು ಜೇನುತುಪ್ಪದೊಂದಿಗೆ ಬೆರೆಸಿದ ಬೆಚ್ಚಗಿನ ನೀರನ್ನು ಕುಡಿಯುತ್ತಾರೆ. ಇದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ ಮಾತ್ರವಲ್ಲದೆ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಮಳೆಗಾಲದಲ್ಲಿಯೂ ಈ ಅಭ್ಯಾಸವನ್ನು ಮುಂದುವರಿಸಬಹುದು. ವಿಶೇಷವಾಗಿ ನಾವು ಹೊರಗಿನ ಆಹಾರವನ್ನು ಹೆಚ್ಚಾಗಿ ಸೇವಿಸಿದಾಗ ಅಥವಾ ನಮ್ಮ ಜೀರ್ಣಕ್ರಿಯೆಗೆ ತೊಂದರೆಯಾದಾಗ ಬೆಚ್ಚಗಿನ ನೀರು ಕುಡಿಯುವುದರಿಂದ ಪರಿಹಾರ ಸಿಗುತ್ತದೆ. ಆದರೆ ತುಂಬಾ ಬಿಸಿಯಾಗಿರುವ ನೀರನ್ನು ಕುಡಿಯಬಾರದು ಏಕೆಂದರೆ ಇದು ಗಂಟಲು ಮತ್ತು ಹೊಟ್ಟೆಯ ಒಳಪದರವನ್ನು ಹಾನಿಗೊಳಿಸುತ್ತದೆ. ಆದ್ದರಿಂದ, ಯಾವಾಗಲೂ ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ. ದಿನಕ್ಕೆ ಕನಿಷ್ಠ 2 ರಿಂದ 3 ಬಾರಿ ಬೆಚ್ಚಗಿನ ನೀರನ್ನು ಕುಡಿಯುವುದು ಬಹಳ ಒಳ್ಳೆಯದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ