
ನೀವು ಕೂಡ ಆಫೀಸ್ ನಲ್ಲಿ ಕುಳಿತು ಗಂಟೆಗಟ್ಟಲೆ ಕೆಲಸ ಮಾಡುತ್ತೀರಾ? ಮನೆಗೆ ಬಂದರೂ ಕೆಲಸ ಮುಗಿಯೋದಿಲ್ವಾ? ಇದು ಒಬ್ಬರಿಬ್ಬರ ಸಮಸ್ಯೆಯಲ್ಲ. ಇತ್ತೀಚಿಗೆ, ಸಮಯದ ಪರಿವಿಲ್ಲದೆ ಕೆಲಸ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಇದರ ಪರಿಣಾಮ ಅವರ ಪೂರ್ತಿ ಜೀವನಶೈಲಿ (Lifestyle) ಬದಲಾಗಿರುತ್ತದೆ. ಆದರೆ ಈ ರೀತಿಯ ಅಭ್ಯಾಸವು ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಬೀರುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ಜೊತೆಗೆ, ದೀರ್ಘಕಾಲ ಕುಳಿತುಕೊಂಡಿರುವುದರಿಂದ ಹೃದಯದ ಆರೋಗ್ಯ (Heart health) ಹಾಳಾಗುತ್ತದೆ. ಇದರ ಪರಿಣಾಮ ಸೈಲೆಂಟ್ ಆಗಿ ಸಂಭವಿಸುವ ಹೃದಯಾಘಾತದ (Silent Heart Attack) ಅಪಾಯ ಹೆಚ್ಚಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ನಿರಂತರವಾಗಿ ಕುಳಿತುಕೊಳ್ಳುವುದನ್ನು ಧೂಮಪಾನ ಮಾಡಿದಷ್ಟೇ ಹಾನಿ ಮಾಡುತ್ತದೆ ಎಂಬುದನ್ನು ಮರೆಯಬಾರದು. ಹಾಗಾದರೆ ದೀರ್ಘಕಾಲ ಕುಳಿತುಕೊಂಡಿರುವ ಅಭ್ಯಾಸ ಹೃದಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ? ಯಾಕೆ ಒಳ್ಳೆಯದಲ್ಲ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ತುಂಬಾ ಸಮಯದ ವರೆಗೆ ಚಲನೆ ಇಲ್ಲದೆಯೇ, ಕುಳಿತಲ್ಲಿಯೇ ಕುಳಿತುಕೊಳ್ಳುವುದರಿಂದ ರಕ್ತ ಪರಿಚಲನೆ ನಿಧಾನವಾಗುತ್ತದೆ, ಇದರ ಪರಿಣಾಮವಾಗಿ, ರಕ್ತ ಮತ್ತು ಆಮ್ಲಜನಕ ಹೃದಯವನ್ನು ಸರಿಯಾಗಿ ತಲುಪುವುದಿಲ್ಲ. ಈ ಸ್ಥಿತಿಯು ಹೃದಯಾಘಾತ ಮತ್ತು ಪಾರ್ಶ್ವವಾಯುವಿನ ಅಪಾಯವನ್ನು ಹೆಚ್ಚಿಸುತ್ತದೆ. ಮಾತ್ರವಲ್ಲ ಈ ರೀತಿ ನಿರಂತರವಾಗಿ ಕುಳಿತುಕೊಳ್ಳುವುದರಿಂದ ಬೊಜ್ಜು, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಬೆನ್ನು ನೋವು ಮುಂತಾದ ಸಮಸ್ಯೆಗಳಿಗೂ ಕಾರಣವಾಗಬಹುದು. ಕುಳಿತುಕೊಳ್ಳುವುದರಿಂದ ಹೃದಯಾಘಾತವಾಗದಿದ್ದರೂ ಆ ಅಪಾಯವನ್ನು ಹೆಚ್ಚಿಸುತ್ತದೆ, ಅದರಲ್ಲಿಯೂ ಈಗಾಗಲೇ ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಈ ರೀತಿಯ ಅಪಾಯ ಕಂಡುಬರುವುದು ಹೆಚ್ಚಾಗಿರುತ್ತದೆ.
ಸಾಮಾನ್ಯವಾಗಿ ಸೈಲೆಂಟ್ ಹಾರ್ಟ್ ಅಟ್ಯಾಕ್ ಅನ್ನು ಮೌನ ಹೃದಯಾಘಾತ ಎಂದು ಕರೆಯಲಾಗುತ್ತದೆ. ಇದರಲ್ಲಿ ಎದೆ ನೋವು, ಬೆವರುವುದು ಮತ್ತು ಉಸಿರಾಟದ ತೊಂದರೆಯಂತಹ ಸ್ಪಷ್ಟ ಲಕ್ಷಣಗಳು ಕಂಡುಬರುವುದಿಲ್ಲ. ಬದಲಾಗಿ ಈ ರೀತಿಯ ಲಕ್ಷಣಗಳು ಬಹಳ ಸೌಮ್ಯವಾಗಿರಬಹುದು ಅಥವಾ ಕಾಣಿಸಿಕೊಳ್ಳದೆಯೇ ಇರಬಹುದು. ಹೃದಯಕ್ಕೆ ರಕ್ತದ ಹರಿವು ನಿಂತಿದ್ದರೂ ಸಹ, ದೇಹವು ಗಮನಾರ್ಹ ಎಚ್ಚರಿಕೆಗಳನ್ನು ನೀಡುವುದಿಲ್ಲ. ಅನೇಕ ಜನರು ಇದನ್ನು ಆಯಾಸ ಅಥವಾ ಒತ್ತಡ ಎಂದು ಭಾವಿಸಿ ನಿರ್ಲಕ್ಷಿಸುತ್ತಾರೆ.
ಸೈಲೆಂಟ್ ಹಾರ್ಟ್ ಅಟ್ಯಾಕ್ ದೊಡ್ಡ ಸಮಸ್ಯೆ ಎಂದರೆ ರೋಗಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಇದರಿಂದ ರೋಗಿಗೆ ಸಕಾಲಿಕ ವೈದ್ಯಕೀಯ ನೆರವು ಸಿಗುವುದಿಲ್ಲ. ಹೃದಯವು ತೀವ್ರವಾಗಿ ಹಾನಿಗೊಳಗಾದ ನಂತರವೇ ಇದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಹಾಗಾಗಿ ಇದು ಸಾವಿನ ಅಪಾಯವನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ: ಪ್ರತಿದಿನ ಈ 6 ಆಹಾರ ಸೇವನೆ ಮಾಡಿ, ಹೃದಯಕ್ಕೆ ರಕ್ಷಣೆಯಾಗಿ ನಿಲ್ಲುತ್ತದೆ
ಈ ಅಪಾಯವನ್ನು ಕಡಿಮೆ ಮಾಡಲು, ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡುವುದು ಅವಶ್ಯಕ. ಪ್ರತಿದಿನ ಲಘು ವ್ಯಾಯಾಮ ಮತ್ತು ವಾಕಿಂಗ್ ಮಾಡುವುದನ್ನು ಮರೆಯಬೇಡಿ. ಜೊತೆಗೆ ಪ್ರತಿನಿತ್ಯ ಸಮತೋಲಿತ ಆಹಾರವನ್ನು ಸೇವನೆ ಮಾಡಿ. ಪ್ರತಿ 30 ರಿಂದ 40 ನಿಮಿಷಗಳಿಗೊಮ್ಮೆ ಎದ್ದು ಸ್ವಲ್ಪ ನಡೆದಾಡುವುದು ಒಳ್ಳೆಯದು. ಸಾಧ್ಯವಾದಷ್ಟು ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರಿ. ಕನಿಷ್ಠ 7- 8 ಗಂಟೆಗಳ ಕಾಲ ನಿದ್ರೆ ಮಾಡಿ. ನಿಯಮಿತ ತಪಾಸಣೆ ಮಾಡಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ