
ಆರೋಗ್ಯ ಪ್ರತಿಯೊಬ್ಬ ಮನುಷ್ಯನಿಗೂ ಅವಶ್ಯಕ. ಇದನ್ನು ಕಾಪಾಡಿಕೊಳ್ಳಲು ಹರಸಾಹಸ ಪಡುವ ಅಗತ್ಯವಿಲ್ಲ. ಆದರೆ ನಾವು ಮಾಡುವಂತಹ ಕೆಲಸಗಳನ್ನು ಸರಿಯಾಗಿ ಮಾಡಿದರೆ ಸಾಕಾಗುತ್ತದೆ. ಹಾಗೆಯೇ ಪ್ರತಿನಿತ್ಯ ಯೋಗ, ವ್ಯಾಯಾಮ (exercise), ಧ್ಯಾನ ಮಾಡುವದರ ಜೊತೆ ಜೊತೆಗೆ ಉತ್ತಮ ಆಹಾರ ಪದ್ದತಿ ಅನುಸರಿಸುವುದು ಕೂಡ ಬಹಳ ಮುಖ್ಯವಾಗುತ್ತದೆ. ಇನ್ನು ನೈಸರ್ಗಿಕ ಆಹಾರಗಳ ಪೈಕಿ ಸಿಹಿ ಕುಂಬಳಕಾಯಿ (pumpkin) ಮನುಷ್ಯನ ಬೆಸ್ಟ್ ಫ್ರೆಂಡ್ ಎಂದರೆ ತಪ್ಪಾಗಲಾರದು. ಆದರೆ ಇವುಗಳ ಬಗ್ಗೆ ಸರಿಯಾದ ಮಾಹಿತಿ ಇರದ ಕಾರಣ ಇವುಗಳ ಸೇವನೆ ಮಾಡುವುದಕ್ಕೆ ಜನ ಅಷ್ಟು ಮುತುವರ್ಜಿ ವಹಿಸುವುದಿಲ್ಲ. ಕೆಲವೆಡೆ ಚೀನಿಕಾಯಿ ಎಂದೂ ಕರೆಯಲ್ಪಡುವ ಸಿಹಿ ಕುಂಬಳಕಾಯಿ ವರ್ಷಪೂರ್ತಿ ಲಭ್ಯವಿದ್ದು ಪೋಷಕಾಂಶಗಳಿಂದ ಕೂಡಿರುತ್ತವೆ. ನಿಜ ಹೇಳಬೇಕೆಂದರೆ ಇದರಿಂದ ಪುರುಷರ ಆರೋಗ್ಯಕ್ಕೆ (Men’s Health) ಹೆಚ್ಚು ಪ್ರಯೋಜನ ಸಿಗುತ್ತದೆ. ಹೇಗೆ ಅಂತೀರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಸಿಹಿ ಕುಂಬಳಕಾಯಿ ಅಥವಾ ಕೆಂಪು ಕುಂಬಳಕಾಯಿ ಇದು ಪೌಷ್ಟಿಕಾಂಶ ಭರಿತ ತರಕಾರಿಯಾಗಿದೆ. ಇದು ಕಣ್ಣುಗಳ ಆರೋಗ್ಯಕ್ಕೆ ಒಳ್ಳೆಯದು ಮತ್ತು ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಅಲ್ಲದೆ, ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಇದು ಸಹಕಾರಿ. ಮಾತ್ರವಲ್ಲ ಪುರುಷರ ಫಲವತ್ತತೆ ಹೆಚ್ಚಿಸಲು ಕೂಡ ಇದು ಸಹಾಯ ಮಾಡುತ್ತದೆ. ಇಂಡಿಯನ್ ಜರ್ನಲ್ ಆಫ್ ಯೂರಾಲಜಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಸಿಹಿ ಕುಂಬಳಕಾಯಿ ಬೀಜ ಸೇವನೆಯು ಪ್ರಾಸ್ಟೇಟ್ ಆರೋಗ್ಯವನ್ನು ಹೆಚ್ಚಿಸುತ್ತದೆ. ಇದು ಪುರುಷರ ಲೈಂಗಿಕ ಆರೋಗ್ಯಕ್ಕೆ ಬಹಳ ಮುಖ್ಯವಾಗಿದ್ದು ಇದನ್ನು ಸಾಮಾನ್ಯವಾಗಿ ಪ್ರಾಸ್ಟೇಟ್ ಗ್ರಂಥಿಯನ್ನು ಬಲಪಡಿಸಲು ಮತ್ತು ಪುರುಷರಲ್ಲಿನ ಆರೋಗ್ಯಕರ ಹಾರ್ಮೋನ್ ಕಾರ್ಯವನ್ನು ಉತ್ತೇಜಿಸಲು ಬಳಸಲಾಗುತ್ತದೆ.
ಸಿಹಿ ಕುಂಬಳಕಾಯಿಯಲ್ಲಿರುವ ಬೀಟಾ ಕ್ಯಾರೋಟಿನ್ ಕಣ್ಣುಗಳ ಆರೋಗ್ಯಕ್ಕೆ ಒಳ್ಳೆಯದು.
ಸಿಹಿ ಕುಂಬಳಕಾಯಿ ಬೀಜಗಳಲ್ಲಿ ಉತ್ಕರ್ಷಣ ನಿರೋಧಕಗಳು ಹೇರಳವಾಗಿರುವುದರಿಂದ, ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
ಇದರಲ್ಲಿರುವ ಪೊಟ್ಯಾಸಿಯಮ್ ಮತ್ತು ಕರಗುವ ನಾರುಗಳು ಹೃದಯದ ಆರೋಗ್ಯವನ್ನು ಸುಧಾರಿಸುತ್ತವೆ.
ಸಿಹಿ ಕುಂಬಳಕಾಯಿ ಬೀಜಗಳು ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.
ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡಲು ಸಹಕಾರಿಯಾಗಿದೆ.
ಇದನ್ನೂ ಓದಿ: Pumpkin Benefits: ಕಣ್ಣಿನ ಸಮಸ್ಯೆಯಿಂದ ರೋಗನಿರೋಧಕ ಶಕ್ತಿಯವರೆಗೆ; ಚೀನಿಕಾಯಿಯ ಉಪಯೋಗಗಳಿವು
ಸಿಹಿ ಕುಂಬಳಕಾಯಿ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಹಾಗಾಗಿ ಸಿಹಿ ಕುಂಬಳಕಾಯಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಹಾಗಂತ ಅಗತ್ಯಕ್ಕಿಂತ ಹೆಚ್ಚು ಇದರ ಸೇವನೆ ಮಾಡಬೇಡಿ. ಬದಲಾಗಿ ನಿಯಮಿತವಾಗಿ ಇದರ ಸೇವನೆ ಮಾಡಿ. ಇದರಿಂದ ಸಿಗುವ ಪ್ರಯೋಜನಗಳನ್ನು ಪಡೆದುಕೊಳ್ಳಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ