ಎಸಿಯಲ್ಲಿ ಗಂಟೆಗಟ್ಟಲೆ ಸಮಯ ಕಳೆಯುವವರಿಗೆ ಈ ಸಮಸ್ಯೆ ತಪ್ಪಿದ್ದಲ್ಲ
ಹವಾಮಾನ ಹೇಗೆ ಇರಲಿ ಎಸಿ ಬೇಕೇ ಬೇಕು ಎನ್ನುವವರು ನಮ್ಮ ಮಧ್ಯೆಯೇ ಇದ್ದಾರೆ. ಆಫೀಸ್, ಮನೆ ಹೀಗೆ ಎಲ್ಲೇ ಹೋಗಲಿ ಎಸಿ ಬೇಕು ಎನ್ನುವ ಮನಸ್ಥಿತಿ ಹಲವರದ್ದು. ಹಾಗಾಗಿಯೇ ಫ್ಯಾನ್ ಗಿಂತಲೂ ಎಸಿಗೆ ಬೇಡಿಕೆ ಹೆಚ್ಚುತ್ತಿದೆ. ಆದರೆ ಇದರ ಕೆಳಗೆ ಮನಸ್ಸಿಗೆ ಬಂದಷ್ಟು ಹೊತ್ತು ಕುಳಿತುಕೊಳ್ಳುವುದರಿಂದ ಎಷ್ಟೆಲ್ಲಾ ಸಮಸ್ಯೆಗಳಾಗಬಹುದು ಎಂಬುದು ನಿಮಗೆ ತಿಳಿದಿದೆಯೇ? ಕೆಲವು ಅಧ್ಯಯನಗಳ ಪ್ರಕಾರ ಎಸಿ ಇಷ್ಟ ಪಡುವವರಿಗೆ ಮೂಳೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತದೆ ಎಂದಿದ್ದಾರೆ. ಹಾಗಾದರೆ, ಈ ರೀತಿ ಯಾಕಾಗುತ್ತದೆ? ಇದಕ್ಕೆ ಪರಿಹಾರವೇನು ಎಂಬುದರ ಬಗ್ಗೆ ತಿಳಿದುಕೊಳ್ಳಿ.

ಬಿಸಿಲಾಗಲಿ, ಮಳೆಯಾಗಲಿ, ಚಳಿಯೇ ಇರಲಿ ಕೆಲವರಿಗೆ ಎಸಿ ಬೇಕೇ ಬೇಕು. ಆಫೀಸ್ ಹೋಗಲಿ ಮನೆಯಲ್ಲಿರಲಿ ಎಸಿ ಇಲ್ಲದೆ ಕುಳಿತುಕೊಳ್ಳುವುದೇ ಇಲ್ಲ. ಗಂಟೆಗಟ್ಟಲೆ ಹವಾನಿಯಂತ್ರಣದ(AC) ಕೆಳಗೆ ಕುಳಿತು ವಿಶ್ರಾಂತಿ ಪಡೆದರೂ ಸಾಕು ಎನ್ನುವ ಭಾವನೆ ಬರುವುದೇ ಇಲ್ಲ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಫ್ಯಾನ್ ಬಳಸುವುದಕ್ಕಿಂತಲೂ ಎಸಿ ಬಳಸುವವರ ಸಂಖ್ಯೆ ಬಹಳ ಹೆಚ್ಚಾಗಿಯೇ ಇದೆ. ಆದರೆ ಹೆಚ್ಚು ಹೊತ್ತು ಎಸಿಯಲ್ಲಿ ಕುಳಿತುಕೊಳ್ಳುವುದರಿಂದ ನಮ್ಮ ಆರೋಗ್ಯಕ್ಕೆ ಎಷ್ಟೆಲ್ಲಾ ತೊಂದರೆಗಳಾಗಬಹುದು ಎಂಬುದನ್ನು ಯಾರಾದರೂ ಯೋಚಿಸಿದ್ದೀರಾ? ಕೆಲವು ಅಧ್ಯಯನಗಳ ಪ್ರಕಾರ ಎಸಿ ಇಷ್ಟ ಪಡುವವರಿಗೆ ಮೂಳೆ (Bone Health) ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತದೆ ಎಂದಿದ್ದಾರೆ. ಹಾಗಾದರೆ, ಈ ರೀತಿ ಯಾಕಾಗುತ್ತದೆ? ಇದಕ್ಕೆ ಪರಿಹಾರವೇನು ಎಂಬುದರ ಬಗ್ಗೆ ತಿಳಿದುಕೊಳ್ಳಿ.
ಎಸಿಯಲ್ಲಿ ಇದ್ದು ಇದ್ದು ಅದಕ್ಕೆ ಒಗ್ಗಿ ಹೋಗಿರುವವರು ಸಾಮಾನ್ಯವಾಗಿ ಅದನ್ನೇ ಇಷ್ಟಪಡುತ್ತಾರೆ. ದಿನ ಪೂರ್ತಿ ಹವಾನಿಯಂತ್ರಿತ ಕೊಠಡಿಗಳಲ್ಲಿಯೇ ಇರುತ್ತಾರೆ. ಇದು ಗೊತ್ತಿದ್ದೋ ಗೊತ್ತಿಲ್ಲದೆಯೋ ಮನುಷ್ಯನ ಮೂಳೆಗಳನ್ನು ದುರ್ಬಲಗೊಳಿಸುತ್ತದೆ. ಡಾ. ಶಿವಯ್ ಪೋಟ್ಲಾ ಅವರು ಹೇಳುವ ಪ್ರಕಾರ, “ದೀರ್ಘಕಾಲದ ವರೆಗೆ ಎಸಿಯಲ್ಲಿ ಇರುವುದು ನಿಮ್ಮ ಮೂಳೆಗಳಿಗೆ ಹಾನಿಕಾರಕ. ಏಕೆಂದರೆ ಕಡಿಮೆ ತಾಪಮಾನದಲ್ಲಿ ದೀರ್ಘಕಾಲ ಇರುವುದರಿಂದ ನಮ್ಮ ಮೂಳೆಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಕೀಲು ನೋವಿನ ಸಮಸ್ಯೆಗಳನ್ನು ಹೆಚ್ಚಿಸುತ್ತದೆ” ಎಂದು ಅವರು ಹೇಳಿದ್ದಾರೆ.
ಎಸಿಯಲ್ಲಿರುವವರ ಮೂಳೆ ದುರ್ಬಲಗೊಳ್ಳಲು ಕಾರಣವೇನು?
ನಾವು ನಿರಂತರವಾಗಿ ಅಥವಾ ದೀರ್ಘಕಾಲದ ವರೆಗೆ ಕಡಿಮೆ ತಾಪಮಾನದಲ್ಲಿಯೇ ಇದ್ದಾಗ ದೇಹದ ಚಯಾಪಚಯ ಕ್ರಿಯೆಯು ಕ್ರಮೇಣ ನಿಧಾನವಾಗಲು ಪ್ರಾರಂಭಿಸುತ್ತದೆ. ಇದು ಮೂಳೆಗಳಿಗೆ ರಕ್ತದ ಹರಿವನ್ನು ಕಡಿಮೆ ಮಾಡಿ ಅವುಗಳನ್ನು ಬಲಪಡಿಸಲು ಅಗತ್ಯವಾದ ಪೋಷಕಾಂಶಗಳನ್ನು ಕಡಿಮೆ ಮಾಡುತ್ತದೆ. ಈ ಸ್ಥಿತಿಯಲ್ಲಿ ದೀರ್ಘಕಾಲ ಇರುವುದು ಮೂಳೆಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಕೀಲು ನೋವನ್ನು ಹೆಚ್ಚಿಸುತ್ತದೆ.
ಮೂಳೆಗಳ ಆರೋಗ್ಯ ಕಾಪಾಡಲು ಈ ಸಲಹೆ ಪಾಲಿಸಿ;
ಮೂಳೆಗಳು ಆರೋಗ್ಯವಾಗಿರಲು ಕೆಲವು ಸರಳ ಪರಿಹಾರ ಕ್ರಮಗಳನ್ನು ಅನುಸರಿಸುವುದು ಬಹಳ ಮುಖ್ಯ, ಅಲ್ಲದೆ ಇದು ಮೂಳೆಗಳು ದುರ್ಬಲವಾಗುವುದನ್ನು ತಡೆಯುತ್ತದೆ.
ಹಾಲು ಮತ್ತು ಕ್ಯಾಲ್ಸಿಯಂ ಭರಿತ ಆಹಾರಗಳನ್ನು ಸೇವಿಸಿ:
ಮೂಳೆಗಳನ್ನು ಬಲವಾಗಿಡಲು ಕ್ಯಾಲ್ಸಿಯಂ ಬಹಳ ಮುಖ್ಯ. ಇದಕ್ಕಾಗಿ, ಪ್ರತಿದಿನ ತಪ್ಪದೆ ಹಾಲು ಕುಡಿಯಿರಿ. ಹೆಚ್ಚುವರಿಯಾಗಿ, ಮೊಸರು, ಪನೀರ್ ಮತ್ತು ಇತರ ಡೈರಿ ಉತ್ಪನ್ನಗಳು ಸಹ ಮೂಳೆಗಳಿಗೆ ಪ್ರಯೋಜನಕಾರಿ. ಹಾಗಾಗಿ ನೀವು ಸೇವನೆ ಮಾಡುವ ಆಹಾರದಲ್ಲಿ ಇವುಗಳನ್ನು ಕೂಡ ಸೇರಿಸಿಕೊಳ್ಳಿ.
ಸಾಕಷ್ಟು ನೀರು ಕುಡಿಯಿರಿ:
ದೇಹವನ್ನು ಹೈಡ್ರೀಕರಿಸುವುದು ಬಹಳ ಮುಖ್ಯ. ಸಾಧ್ಯವಾದಷ್ಟು ನೀರು ಕುಡಿಯಲು ಪ್ರಯತ್ನಿಸಿ. ಏಕೆಂದರೆ ನೀರು ದೇಹದ ಚಯಾಪಚಯ ಕ್ರಿಯೆಯನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ ಮತ್ತು ಮೂಳೆಗಳಿಗೆ ಅಗತ್ಯವಾದ ಖನಿಜಗಳ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ.
ಹಸಿರು ತರಕಾರಿಗಳನ್ನು ಸೇವಿಸಿ:
ಪಾಲಕ್ ಮತ್ತು ಬ್ರೊಕೊಲಿಯಂತಹ ಹಸಿರು ತರಕಾರಿಗಳು ನಮ್ಮ ದೇಹಕ್ಕೆ ಕ್ಯಾಲ್ಸಿಯಂ, ಕಬ್ಬಿಣ ಮತ್ತು ಇತರ ಅಗತ್ಯ ಪೋಷಕಾಂಶಗಳನ್ನು ನೀಡುತ್ತದೆ. ಹಾಗಾಗಿ ಈ ಆಹಾರಗಳನ್ನು ಸೇವನೆ ಮಾಡುವುದರಿಂದ ನಮ್ಮ ಮೂಳೆಗಳ ಆರೋಗ್ಯ ಚೆನ್ನಾಗಿರುತ್ತದೆ.
ನಿಯಮಿತವಾಗಿ ವ್ಯಾಯಾಮ ಮಾಡಿ:
ನಮ್ಮ ಮೂಳೆಗಳು ಮತ್ತು ಸ್ನಾಯುಗಳು ಗಟ್ಟಿಯಾಗಿರಬೇಕು ಎಂದರೆ ಪ್ರತಿನಿತ್ಯ ಕನಿಷ್ಠ 30 ನಿಮಿಷಗಳ ಕಾಲ ವಾಕಿಂಗ್ ಅಥವಾ ಲಘು ವ್ಯಾಯಾಮ ಮಾಡಬೇಕು. ಇದು ಮೂಳೆಗಳನ್ನು ಹಿಗ್ಗಿಸಲು ಮತ್ತು ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ.
ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರಿ:
ಸಿಗರೇಟ್ ಮತ್ತು ಮದ್ಯಪಾನ ಸೇವನೆಯು ನಮ್ಮ ಮೂಳೆಗಳನ್ನು ದುರ್ಬಲಗೊಳಿಸುತ್ತದೆ. ಹಾಗಾಗಿ ಈ ರೀತಿಯ ಅಭ್ಯಾಸಗಳನ್ನು ತ್ಯಜಿಸುವ ಮೂಲಕ, ಮೂಳೆಯ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು.
ಇದನ್ನೂ ಓದಿ: Joint Pain: ವಯಸ್ಸಲ್ಲ, ಕೀಲುನೋವು, ಮಂಡಿನೋವಿಗೆ ಕಾರಣವೇ ನಮ್ಮ ಈ ಅಭ್ಯಾಸಗಳು
ಜಂಕ್ ಫುಡ್ ಸೇವನೆ ಮಾಡುವುದನ್ನು ತಪ್ಪಿಸಿ:
ಜಂಕ್ ಫುಡ್ ಮೂಳೆಗಳಿಗೆ ಹಾನಿ ಮಾಡುತ್ತದೆ ಏಕೆಂದರೆ ಈ ರೀತಿಯ ಆಹಾರಗಳಲ್ಲಿ ಪೋಷಣೆಯ ಕೊರತೆ ಇರುತ್ತದೆ ಮತ್ತು ದೇಹದಲ್ಲಿ ಆಮ್ಲೀಯತೆಯನ್ನು ಹೆಚ್ಚಿಸುತ್ತದೆ, ಇದರ ಪರಿಣಾಮ ನಮ್ಮ ಮೂಳೆಗಳಿಗೆ ಹಾನಿ ಉಂಟಾಗುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ