ಈ ಆಹಾರಗಳ ಸೇವನೆಯಿಂದ ನಿಮ್ಮ ಹಲ್ಲುಗಳಿಗೆ ಹಾನಿಯಾಗಬಹುದು
ಹಲ್ಲಿನ ರಕ್ಷಣೆ ನಾವು ತಿನ್ನುವ ಆಹಾರದ ಮೇಲೆ ಅವಲಂಬಿತವಾಗಿದೆ. ಆದ್ದರಿಂದ ತಿನ್ನುವ ಆಹಾರದೆಡೆಗೆ ಗಮನವಿರಲಿ. ಅದೇ ರೀತಿ ದಿನಕ್ಕೆ ಎರಡು ಬಾರಿ ಹಲ್ಲನ್ನು ಉಜ್ಜುವ ಅಭ್ಯಾಸ ಒಳ್ಳೆಯದು.
ದಿನನಿತ್ಯದ ಒತ್ತಡದ ಬದುಕಿನಲ್ಲಿ ಹಲ್ಲುಗಳೆಡೆಗೆ ಹೆಚ್ಚು ಗಮನ ಕೊಡುವುದನ್ನು ಮರೆತುಬಿಡಬಹುದು. ಇದರಿಂದ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳೇ ಹೆಚ್ಚು ಎನ್ನುವುದು ನೆನಪಿರಲಿ. ಹಲ್ಲುಗಳ ರಕ್ಷಣೆ ಮಾಡಿಕೊಳ್ಳುವುದು ಅತೀ ಮುಖ್ಯವಾಗಿದೆ. ಕೆಟ್ಟ ಹಲ್ಲುಗಳು ನಿಮ್ಮ ಮುಖದ ಅಂದವನ್ನೇ ಕೆಡಿಸಬಹುದು. ಕೆಲವೊಮ್ಮೆ ಹಲ್ಲುಬಿಟ್ಟು ನಗಲು ಮುಜುಗರವಾಗುವಂತೆ ಮಾಡಬಹುದು. ಹೀಗಾಗಿ ಹಲ್ಲುಗಳ ಸ್ವಚ್ಛತೆ ದಿನನಿತ್ಯದ ಒಂದು ಭಾಗವಗಿದ್ದರೆ ಸುಂದರವಾಗಿರುವ ಬಿಳಿಯ ಹಲ್ಲುಗಳನ್ನು ಪಡೆಯಬಹುದು. ಹಲ್ಲಿನ ರಕ್ಷಣೆ ನಾವು ತಿನ್ನುವ ಆಹಾರದ ಮೇಲೆ ಅವಲಂಬಿತವಾಗಿದೆ. ಆದ್ದರಿಂದ ತಿನ್ನುವ ಆಹಾರದೆಡೆಗೆ ಗಮನವಿರಲಿ. ಅದೇ ರೀತಿ ದಿನಕ್ಕೆ ಎರಡು ಬಾರಿ ಹಲ್ಲನ್ನು ಉಜ್ಜುವ ಅಭ್ಯಾಸ ಒಳ್ಳೆಯದು.
ಈ ಆಹಾರಗಳ ಸೇವನೆಯಿಂದ ನಿಮ್ಮ ಹಲ್ಲುಗಳಿಗೆ ಹೆಚ್ಚು ಹಾನಿಯಾಗಲಿದೆ.
ಸಕ್ಕರೆಯಿಂದ ತಯಾರಿಸಿದ ಪಾನೀಯಗಳು ಹಲ್ಲುಗಳಲ್ಲಿ ಕ್ಯಾವಿಟಿಗಳು ಕಂಡುಬರಲು ಮುಖ್ಯ ಕಾರಣ ಎಂದರೆ ಸಕ್ಕರೆ ಅಂಶ. ಹೀಗಾಗಿ ಸಕ್ಕರೆ ಅಂಶ ಹೆಚ್ಚಿರುವ ಪಾನೀಯಗಳ ಸೇವನೆ ಒಳ್ಳೆಯದಲ್ಲ ಎನ್ನುತ್ತಾರೆ ದಂತವೈದ್ಯರು. ಸಕ್ಕರೆಯುತ ಪಾನೀಯ ಅಥವಾ ತಿನಸುಗಳನ್ನು ತಿನ್ನುವುದರಿಂದ ಕೇವಲ ಹಲ್ಲುಗಳ ಅನಾರೋಗ್ಯ ಮಾತ್ರವಲ್ಲ ನಿಮ್ಮ ದೇಹದ ತೂಕ ಹೆಚ್ಚಲೂ ಕಾರಣವಾಗಬಹುದು. ಹೀಗಾಗಿ ಸಕ್ಕರೆ ಬೆರೆತ ಜ್ಯೂಸ್, ತಂಪುಪಾನೀಯಗಳ ಬಳಕೆ ಕಡಿಮೆಯಿರಲಿ
ಆಲೂಗಡ್ಡೆ ಚಿಪ್ಸ್ ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವ ಕರಿದ ಪದಾರ್ಥಗಳ ಪಟ್ಟಿಯಲ್ಲಿ ಆಲೂಗಡ್ಡೆ ಚಿಪ್ಸ್ ಮುಂಚೂಣಿಯಲ್ಲಿ ಸಿಗುತ್ತದೆ. ಪಿಷ್ಟಯುಕ್ತ ಆಹಾರ ಪದಾರ್ಥಗಳ ಸೇವನೆಯಿಂದ ಅವು ಹಲ್ಲಿನಲ್ಲಿ ಸಿಲುಕಿ ಕ್ಯಾವಿಟೀಸ್ ಉಂಟಾಗುವಂತೆ ಮಾಡುತ್ತದೆ. ಹೀಗಾಗಿ ಅತಿಯಾಗಿ ಆಲೂಗಡ್ಡೆ ಚಿಪ್ಸ್ ಸೇವನೆ ಒಳ್ಳೆಯದಲ್ಲ. ದೇಹಕ್ಕೆ ಮಾತ್ರವಲ್ಲ, ಹಲ್ಲಿಗೂ ಆಲೂಗಡ್ಡೆ ಚಿಪ್ಸ್ ಹಾನಿಮಾಡುತ್ತದೆ.
ಒಣಹಣ್ಣುಗಳು ಆರೋಗ್ಯಕ್ಕೆ ಒಳ್ಳೆಯದು ಎಂದು ಸೇವಿಸುವ ಒಣಹಣ್ಣುಗಳು ನಿಮ್ಮ ಹಲ್ಲುಗಳಿಗೆ ಹಾನಿಯುಂಟುಮಾಡುತ್ತವೆ. ಅಂಟಿನ ಅಂಶವಿರುವ ಒಣದ್ರಾಕ್ಷಿ, ಅಂಜೂರದಂತಹ ಹಣ್ಣುಗಳನ್ನು ಸೇವಿಸಿದಾಗ ಹಲ್ಲುಗಳ ನಡುವೆ ಸಿಲುಕಿ ಹಾಗೆಯೇ ಉಳಿದುಕೊಂಡು ಹಲ್ಲುಗಳನ್ನು ಹಾಳುಮಾಡುತ್ತವೆ. ಹೀಗಾಗಿ ಡ್ರೈ ಫ್ರೂಟ್ಸ್ ಸೇವನೆಯ ಬಳಿಕ ಹಲ್ಲನ್ನು ಸ್ವಚ್ಛಗೊಳಿಸುವುದನ್ನು ಮರೆಯದಿರಿ.
ವೈನ್ ದೇಹವನ್ನು ಬೆಚ್ಚಗಿರಿಸಿಲು ಸೇವಿಸುವ ವೈನ್ ನಿಮ್ಮ ಹಲ್ಲುಗಳ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ನಿರಂತರ ವೈನ್ ಸೇವನೆಯಿಂದ ದಂತಕ್ಷಯ ಅಥವಾ ದಂತದ ಸವೆತ ಉಂಟಾಗುತ್ತದೆ. ಕೇವಲ ವೈನ್ ಮಾತ್ರವಲ್ಲ. ನೀವು ದಿನನಿತ್ಯ ಸೇವಿಸುವ ಕಾಫಿ, ಟೀನಂತಹ ಪಾನೀಯಗಳೂ ಕೂಡ ನಿಮ್ಮ ಹಲ್ಲುಗಳಿಗೆ ಸುರಕ್ಷಿತವಲ್ಲ. ಆದ್ದರಿಂದ ವೈನ್ ಸೇವನೆ ಮಿತಿಯಲ್ಲಿರಲಿ. ಅದೇ ರೀತಿ ಇತರ ಪಾನೀಯಗಳ ಸೇವನೆ ಬಳಿಕವೂ ಬಾಯಿ ಮುಕ್ಕಳಿಸಿ.
ಕ್ಯಾಂಡಿ, ಮಿಠಾಯಿ, ಚಾಕೊಲೇಟ್ ಕ್ಯಾಂಡಿ, ಮಿಠಾಯಿ, ಚಾಕೊಲೇಟ್ ಅತಿ ಹೆಚ್ಚು ಸಕ್ಕರೆಯನ್ನು ಬಳಸಿ ತಯಾರಿಸುವ ಸಿಹಿ ತಿನಿಸುಗಳು. ಸಾಮಾನ್ಯವಾಗಿ ಮಕ್ಕಳಲ್ಲಿ ಕ್ಯಾವಿಟಿ ಸಮಸ್ಯೆ ಕಾಣಲು ಕ್ಯಾಂಡಿಯಂತಹ ಸಿಹಿ ತಿನಿಸುಗಳೇ ಕಾರಣ ಹೀಗಾಗಿ ಅವುಗಳಿಂದ ಆದಷ್ಟು ದೂರವಿರಿ ಎನ್ನುತ್ತಾರೆ ದಂತ ವೈದ್ಯರು. ಅಂಟಾದ ಚಾಕೋಲೇಟ್ಗಳು ನಿಮ್ಮ ಹಲ್ಲಿನಲ್ಲಿ ಉಳಿದುಕೊಂಡು ದೀರ್ಘಕಾಲದ ಸಮಸ್ಯೆಗೆ ಕಾರಣವಾಗುತ್ತದೆ. ಆದ್ದರಿಂದ ಆದಷ್ಟು ಚಾಕೋಲೇಟ್ ಅಥವಾ ಉಳಿದ ಸಿಹಿ ತಿನಿಸುಗಳ ಸೇವನೆಗೆ ಕಡಿವಾಣವಿರಲಿ.
ಇದನ್ನೂ ಓದಿ:
Women Health: ಹೆರಿಗೆಯ ನಂತರ ತಲೆ ಕೂದಲು ಉದುರುವ ಸಮಸ್ಯೆ ಎದುರಾಗಿದೆಯೇ; ಇಲ್ಲಿದೆ ಸೂಕ್ತ ಪರಿಹಾರ
ಉಗುರು ಬೆಳೆಯುವ ಮುನ್ನವೇ ತುಂಡಾಗುತ್ತಿದೆಯೇ? ನಿರ್ಲಕ್ಷ್ಯ ಬೇಡ, ಇದು ಈ ಕಾಯಿಲೆಗಳ ಸಂಕೇತ