Immunity Booster: ಚಳಿಗಾಲದ ಸಮಯದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಇಲ್ಲಿವೆ ಸೂಪರ್ ಫುಡ್​ಗಳು

ಚಳಿಗಾಲದ ಸಮಯದಲ್ಲಿ ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಪದಾರ್ಥಗಳು ಯಾವುವು ಎಂಬುದು ಈ ಕೆಳಗಿನಂತಿದೆ ತಿಳಿಯಿರಿ.

Immunity Booster: ಚಳಿಗಾಲದ ಸಮಯದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಇಲ್ಲಿವೆ ಸೂಪರ್ ಫುಡ್​ಗಳು
ಸಾಂದರ್ಭಿಕ ಚಿತ್ರ
Follow us
TV9 Web
| Updated By: shruti hegde

Updated on: Nov 23, 2021 | 11:26 AM

ಬೆಚ್ಚಗಿನ ವಸ್ತ್ರ ಮತ್ತು ಹೊದಿಕೆಗಳೊಂದಿಗೆ ಚಳಿಗಾಲಕ್ಕೆ ಬೇಕಾಗುವ ಎಲ್ಲಾ ಪರಿಕರಗಳು ಸಿದ್ಧವಾಗಿವೆಯೇ? ಚಳಿಗಾಲದ ಸಮಯದಲ್ಲಿ ನೀವು ಸೇವಿಸುವ ಆಹಾರದ ಬಗ್ಗೆಯೂ ಗಮನವಿರಲಿ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಪದಾರ್ಥಗಳ ಸೇವನೆಯಿಂದ ನೀವು ಶಕ್ತಿಯನ್ನು ಪಡೆಯಬಹುದು. ಚಳಿಗಾಲದ ಸಮಯದಲ್ಲಿ ಆಕ್ರಮಣ ಮಾಡುವ ನೆಗಡಿ, ಕೆಮ್ಮು, ಜ್ವರ, ತಲೆನೋವಿನಂತಹ ಸಮಸ್ಯೆ ಬಾರದಂತೆ ನೋಡಿಕೊಳ್ಳಲು ಈ ಕೆಲವು ಆಹಾರ ಪದಾರ್ಥಗಳ ಸೇವನೆ ಮುಖ್ಯ. ಹಾಗಿರುವಾಗ ಚಳಿಗಾಲದ ಸಮಯದಲ್ಲಿ ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಪದಾರ್ಥಗಳು ಯಾವುವು ಎಂಬುದು ಈ ಕೆಳಗಿನಂತಿದೆ ತಿಳಿಯಿರಿ.

ಚಳಿಗಾಲದ ಸಮಯದಲ್ಲಿ ರೋಗ ನಿರೋಧಕ ಶಕ್ತಿ ಅನಾರೋಗ್ಯಕ್ಕೆ ಒಳಗಾಗದಂತೆ ತಡೆಯಲು ಮಾತ್ರವಲ್ಲದೇ ನಮ್ಮ ಚರ್ಮ, ಕೂದಲು ಮತ್ತು ಕೀಲುಗಳ ಆರೋಗ್ಯವನ್ನು ಕಾಪಾಡುತ್ತದೆ. ತಾಪಮಾನ ಕಡಿಮೆಯಾದಂತೆ ಕೀಲು ನೋವು ಜನರಲ್ಲಿ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಸಂಧಿವಾತ ಸಮಸ್ಯೆಯಿಂದ ಬಳಲುತ್ತಿರುವ ಜನರು ಚಳಿಗಾಲಕ್ಕೆ ತುಂಬಾ ಭಯಪಡುತ್ತಾರೆ. ಹಾಗೆಯೇ ಚರ್ಮದ ಶುಷ್ಕತೆ, ಎಸ್ಜಿಮಾ ಮತ್ತು ಚಳಿಗಾಲದಲ್ಲಿ ಸೋರಿಯಾಸಿಸ್ ಬ್ರೇಕ್ಔಟ್ ಉಲ್ಬಣಗೊಳ್ಳುವ ಸಾಧ್ಯತೆಗಳಿರುತ್ತದೆ ಎಂದು ಲೈಫ್​ಸ್ಟೈಲ್​ ಕೋಚ್ ಹಾಗೂ ಯೂರೇಕ್ ಸಂಸ್ಥಾಪಕರಾದ ಲ್ಯೂಕ್ ಕೌಟಿನೋ ಅವರ ಸಲಹೆಗಳನ್ನು ಹಿಂದುಸ್ತಾನ್ ಟೈಮ್ಸ್ ಉಲ್ಲೇಖಿಸಿದೆ.

ಆಮ್ಲಾ, ತುಪ್ಪ, ಖರ್ಜೂರ, ರಾಗಿ, ಬೀಜಗಳು, ಸಾಸಿವೆ, ತರಕಾರಿಗಳಂಥಹ ಆಹಾರ ಪದಾರ್ಥಗಳು ಚಳಿಗಾಲದಲ್ಲಿ ಆರೋಗ್ಯ ಸಮಸ್ಯೆಯನ್ನು ತಡೆಯುತ್ತವೆ. ನೀವು ಚಳಿಗಾಲವನ್ನು ಆರಾಮವಾಗಿ ನಿಶ್ಚಿಂತೆಯಿಂದ ಕಳೆಯಲು ಇಂತಹ ಆಹಾರ ಪದಾರ್ಥಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ. ಉತ್ತಮ ರುಚಿಯೊಂದಿಗೆ ಈ ಕೆಲವು ಆಹಾರ ಪದಾರ್ಥಗಳು ನಿಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

ತುಪ್ಪ ಶುದ್ಧ ತುಪ್ಪವು ಸುಲಭದಲ್ಲಿ ಜೀರ್ಣವಾಗುವ ಕೊಬ್ಬುಗಳಲ್ಲಿ ಒಂದಾಗಿದೆ. ಇದು ನಿಮ್ಮ ದೇಹವನ್ನು ಬೆಚ್ಚಗಿಡಲು ಸಹಾಯ ಮಾಡುತ್ತದೆ ಹಾಗೂ ದೇಹದಲ್ಲಿ ಶಕ್ತಿ ಉತ್ಪಾದನೆಯ ಸಾಮರ್ಥ್ಯವನ್ನು ಹೊಂದಿದೆ. ತುಪ್ಪದ ಮಿತವಾದ ಸೇವನೆಯಿಂದ ಚರ್ಮ ಶುಷ್ಕ ಹಾಗೂ ಚಪ್ಪಟೆಯಾಗದಂತೆ ತಡೆಯಲು ಸಹಾಯ ಮಾಡುತ್ತದೆ. ಚಳಿಗಾಲದ ಸಮಯದಲ್ಲಿ ರೊಟ್ಟಿ, ಚಪಾತಿ, ಅನ್ನವನ್ನು ಸವಿಯುವಾಗ ತುಪ್ಪವೂ ಇರಲಿ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಸಿಹಿ ಆಲೂಗಡ್ಡೆ ಸಿಹಿ ಆಲೂಗಡ್ಡೆ ಚಳಿಗಾಲದ ಸಮಯದಲ್ಲಿ ನೀವು ಸೇವಿಸಬಹುದಾದ ಆಹಾರ ಪದಾರ್ಥಗಳಲ್ಲಿ ಒಂದು. ವಿಶೇಷವಾಗಿ ಚಳಿಗಾಲದ ಸಮಯದಲ್ಲಿ ಬೇಕಾಗುವ ಫೈಬರ್, ವಿಟಮಿನ್ ಎ ಮತ್ತು ಪೊಟ್ಯಾಶಿಯಂನಿಂದ ಸಮೃದ್ಧವಾಗಿರುತ್ತದೆ. ಜೊತೆಗೆ ಹೆಚ್ಚಿನ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಜೊತೆಗೆ ಉರಿಯೂತವನ್ನು ಕಡಿಮೆ ಮಾಡುತ್ತದೆ.

ಆಮ್ಲಾ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ವಿಟಮಿನ್ ಸಿ ಅಂಶದಿಂದ ನೆಲ್ಲಿಕಾಯಿ ಸಮೃದ್ಧವಾಗಿರುತ್ತದೆ. ವೈರಸ್ ವಿರುದ್ಧ ಹೋರಾಡಲು ಇದು ಸಹಾಯಕ. ಉಪ್ಪಿನಕಾಯಿ, ಚಟ್ನಿ, ಜ್ಯೂಸ್ ಹೀಗೆ ವಿವಿಧ ರೀತಿಯಲ್ಲಿ ನೀವು ನೆಲ್ಲಿಕಾಯಿಯನ್ನು ಸವಿಯಬಹುದು.

ಖರ್ಜೂರ ಖರ್ಜೂರ ತಿನ್ನಲು ರುಚಿ ಜೊತೆಗೆ ಆರೋಗ್ಯ ಪ್ರಯೋಜನವನ್ನೂ ನೀಡುತ್ತದೆ. ಸಂಧಿವಾತ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಖರ್ಜೂರ ಸೇವನೆ ತುಂಬಾ ಪ್ರಯೋಜನಕಾರಿ. ಇದು ಜೀವಸತ್ವಗಳು, ಖನಿಜಗಳು ಮತ್ತು ಫೈಬರ್​ ಅಂಶದ ಉತ್ತಮ ಮೂಲವಾಗಿದೆ. ಕ್ಯಾಲ್ಸಿಯಂನಿಂದ ಸಮೃದ್ಧವಾಗಿರುವ ಖರ್ಜೂರವು ನಿಮ್ಮ ಹಲ್ಲುಗಳನ್ನು ಸದೃಢವಾಗಿಸಲು ಸಹಾಯ ಮಾಡುತ್ತದೆ. ಮೂಳೆ ಸಂಬಂಧಿತ ಸಮಸ್ಯೆಯಿಂದ ನಿಮ್ಮನ್ನು ಸುಧಾರಿಸಲು ಸಹಾಕವಾಗಿದೆ.

ಬೆಲ್ಲ ಕಬ್ಬಿಣಾಂಶದಿಂದ ಸಮೃದ್ಧವಾಗಿರುವ ಬೆಲ್ಲ ರಕ್ತಹೀನತೆ ಸಮಸ್ಯೆಯಿಂದ ಪರಿಹಾರ ಪಡೆಯಲು ಉತ್ತಮ ಆಯ್ಕೆ. ನೀವು ಸದೃಢರಾಗಲು ಜೊತೆಗೆ ಚಳಿಗಾಲದ ಸಮಯದಲ್ಲಿ ಮಾಲಿನ್ಯ, ಹೊಗೆ ವಲಯಗಳಲ್ಲಿ ವಾಸಿಸುವ ಜನರಿಗೆ ಬೆಲ್ಲ ಸೇವನೆ ಪ್ರಯೋಜನಗಳನ್ನು ನೀಡುತ್ತದೆ.

ರಾಗಿ ರಾಗಿಯಲ್ಲಿ ಕಡಿಮೆ ಗ್ಲೈಸೆಮಿಕ್, ಹೆಚ್ಚಿನ ಫೈಬರ್ ಮತ್ತು ಪೋಷಕಾಂಶಗಳು, ಜೀವಸತ್ವಗಳು ಮತ್ತು ಖನಿಜಾಂಶಗಳಿರುತ್ತವೆ. ರಾಗಿ ತೂಕ ನಷ್ಟಕ್ಕೆ ಸಹಾಯಕಾರಿ ಜೊತೆಗೆ ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಉತ್ತಮ ಆಯ್ಕೆ. ರಾಗಿ ಸೇವನೆಯು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ನಿದ್ರಾ ಹೀನತೆ, ಆತಂಕ ಮತ್ತು ಖಿನ್ನತೆ ಸಮಸ್ಯೆಯಿಂದ ಪರಿಹಾರ ನೀಡುತ್ತದೆ. ಫೈಬರ್ ಮತ್ತು ವಿಟಮಿನ್ ಬಿಯಿಂದ ಸಮೃದ್ಧವಾಗಿರುವುದರಿಂದ ಚಳಿಗಾಲದ ಸಮಯದಲ್ಲಿ ಬೆಚ್ಚಗಿರಲು ಸಹಾಯಕವಾಗಿದೆ.

ಬೀಜಗಳು ಉತ್ತಮ ಬೀಜಗಳಾದ ಬಾದಾಮಿ, ಗೋಡಂಬಿ ಸೇವನೆಯು ನರಮಂಡಲದ ಆರೋಗ್ಯವನ್ನು ಸುಧಾರಿಸುತ್ತದೆ. ನಿಮ್ಮ ಹೃದಯದ ಆರೋಗ್ಯ ಸುಧಾರಣೆಗೆ ಒಳ್ಳೆಯದು. ನಿಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯಕವಾಗಿದೆ. ಇದು ಉರಿಯೂತವನ್ನು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ. ಬಾದಾಮಿಯು ವಿಟಮಿನ್ ಎ, ಆಂಟಿಆಕ್ಸಿಡೆಂಟ್​ಗಳು ಮತ್ತು ಮೆಗ್ನೀಶಿಯಂನಿಂದ ಸಮೃದ್ಧವಾಗಿದೆ. ವಾಲ್​ನಟ್ಸ್​ ಒಮೆಗಾ-3 ಅಂಶದ ಉತ್ತಮ ಮೂಲವಾಗಿದೆ.

ಸಾಸಿವೆ ಸಾಮಾನ್ಯವಾಗಿ ಅಡುಗೆ ಒಗ್ಗರಣೆಯಲ್ಲಿ ಸಾಸಿವೆಯನ್ನು ಬಳಸುತ್ತೇವೆ. ಶೀತದ ಸಮಯದಲ್ಲಿ ನಮ್ಮ ದೇಹ ಬೆಚ್ಚಗಿರುವಂತೆ ಮಾಡಲು ಇದು ಸಹಾಯ ಮಾಡುತ್ತದೆ. ಜೊತೆಗೆ ವಿಟಮಿನ್ ಕೆ, ಎ ಮತ್ತು ಸಿ ಅಂಶದಿಂದ ಸಮೃದ್ಧವಾಗಿದೆ. ಉತ್ಕರ್ಷಣ ನಿರೋಧಕವನ್ನು ಹೊಂದಿದ್ದು, ಹೃದ್ರೋಗ, ಅಸ್ತಮಾ ಸಮಸ್ಯೆಗಳ ನಿವಾರಣೆಗೆ ಉತ್ತಮ ಆಯ್ಕೆಯಾಗಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಇದು ಸಹಾಯ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ:

Health Tips: ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಈ 3 ಬಗೆಯ ಆರೋಗ್ಯಕರ ಪಾನೀಯಗಳು ಸಹಾಯಕ

Immunity Booster: ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ನೆಲ್ಲಿಕಾಯಿಯನ್ನು ಈ ರೀತಿ ಸೇವಿಸಿ