
ಋತುಚಕ್ರ (Menstrual Cycle) ಅಥವಾ ಮುಟ್ಟಿನ ದಿನಗಳು ಪ್ರತಿಯೊಬ್ಬ ಹೆಣ್ಣಿಗೂ ಒಂದು ಸಮಯದ ವರೆಗೆ ಪ್ರತಿ ತಿಂಗಳು ಬಂದೆ ಬರುತ್ತದೆ. ಹೆಣ್ಣಿಗೆ ಈ ದಿನಗಳು ಸವಾಲಿನ ಸಮಯ. ಏಕೆಂದರೆ ಪಿರಿಯಡ್ಸ್ ಜೊತೆಗೆ ಆಯಾಸ, ತಲೆ ತಿರುಗುವಿಕೆ, ಕಿರಿಕಿರಿ, ದೌರ್ಬಲ್ಯ, ನೋವು ಇವೆಲ್ಲವೂ ಸಾಲಾಗಿ ಬರುತ್ತದೆ. ಇದರ ಜೊತೆ ಜೊತೆಗೆ, ದೈನಂದಿನ ಕೆಲಸಗಳನ್ನು ಕೂಡ ನಿರ್ವಹಿಸುವ ಜವಾಬ್ದಾರಿ ಹೆಗಲೇರಿರುತ್ತದೆ. ಇಂತಹ ಸಂದರ್ಭಗಳಲ್ಲಿ, ತ್ವರಿತ ಶಕ್ತಿ ಮತ್ತು ಹೊಸ ಉಲ್ಲಾಸ ನೀಡುವ ಆಹಾರಗಳು ದೇಹಕ್ಕೆ ಅವಶ್ಯಕವಾಗಿರುತ್ತದೆ. ನಿಮಗೂ ಕೂಡ ಋತುಚಕ್ರದ ಸಮಯದಲ್ಲಿ ತುಂಬಾ ದಣಿವಾಗಿ, ಶಕ್ತಿ ಕಡಿಮೆಯಿದ್ದು ಯಾವ ಕೆಲಸ ಮಾಡುವುದಕ್ಕೂ ಆಗದಿದ್ದಾಗ ಕೆಲವು ಸಾಮಾನ್ಯ ಸೂಪರ್‌ಫುಡ್‌ಗಳು ನಿಮಗೆ ಸಹಕಾರಿಯಾಗುತ್ತದೆ. ಇವು ಎಲ್ಲರಿಗೂ ಸುಲಭವಾಗಿ ಲಭ್ಯವಿದ್ದು ಇವುಗಳಿಂದ ಸಿಗುವ ಲಾಭಗಳು ದೇಹ ಮತ್ತು ಮನಸ್ಸಿನ ಮೇಲೆ ತ್ವರಿತವಾಗಿ ಕಾರ್ಯನಿರ್ವಹಿಸುತ್ತವೆ. ಮಾತ್ರವಲ್ಲ ಮುಟ್ಟಿನ ಸಮಯದಲ್ಲಿ (periods) ಕಂಡುಬರುವ ನೋವು (Menstrual Cramps) ಸೇವನೆ ಮಾಡುವ ಆಹಾರದ ಮೇಲೂ ಅವಲಂಬಿತವಾಗಿರುವುದರಿಂದ ಯಾವ ರೀತಿಯ ಆಹಾರ ಸೇವನೆ ಮಾಡುತ್ತೇವೆ ಎಂಬುದು ಮುಖ್ಯವಾಗುತ್ತದೆ. ಹಾಗಾದರೆ ಮುಟ್ಟಿನ ದಿನಗಳಲ್ಲಿ ಯಾವ ರೀತಿಯ ಆಹಾರಗಳ ಸೇವನೆ ಮಾಡಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ನೆಲ್ಲಿಕಾಯಿ: ಇದು ದೇಹವನ್ನು ಒಳಗಿನಿಂದ ಬಲಪಡಿಸುತ್ತದೆ. ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು ಹಾರ್ಮೋನುಗಳ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಮಾತ್ರವಲ್ಲ ರಕ್ತವನ್ನು ಶುದ್ಧೀಕರಿಸಲು ಕೂದಲು ಮತ್ತು ಚರ್ಮವನ್ನು ಆರೋಗ್ಯವಾಗಿಟ್ಟುಕೊಳ್ಳಲು ಸಹಾಯ ಮಾಡುತ್ತದೆ, ಇದನ್ನು ಕಚ್ಚಾ, ರಸವಾಗಿ, ಪುಡಿಯಾಗಿ ಅಥವಾ ಸಂರಕ್ಷಿತ ರೂಪದಲ್ಲಿ ಸೇವಿಸಬಹುದು.
ಖರ್ಜೂರ: ಸಾಮಾನ್ಯವಾಗಿ ಇದರ ಸೇವನೆಯು ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ. ಪ್ರತಿದಿನ ಬೆಳಿಗ್ಗೆ 2 ರಿಂದ 3 ಖರ್ಜೂರ ಸೇವನೆ ಮಾಡುವುದರಿಂದ ಶಕ್ತಿ ಹೆಚ್ಚಾಗುತ್ತದೆ ಮತ್ತು ಕಬ್ಬಿಣ ಅಂಶದ ಕೊರತೆಯೂ ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲ, ರಕ್ತಹೀನತೆ, ದೌರ್ಬಲ್ಯ ಮತ್ತು ಮುಟ್ಟಿನ ಆಯಾಸದಿಂದ ಪರಿಹಾರವನ್ನು ನೀಡುತ್ತವೆ.
ಎಳ್ಳು: ದೇಹದಲ್ಲಿನ ನೋವನ್ನು ಕಡಿಮೆ ಮಾಡಲು ಎಳ್ಳು ಸಹಾಯ ಮಾಡುತ್ತದೆ. ಅವು ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ನಿಂದ ಸಮೃದ್ಧವಾಗಿದ್ದು, ಮೂಳೆಗಳು ಮತ್ತು ಸ್ನಾಯುಗಳನ್ನು ಬಲಪಡಿಸುವುದಕ್ಕೆ ನೆರವಾಗುತ್ತದೆ. ಮುಟ್ಟಿನ ಚಕ್ರಕ್ಕೆ 15 ದಿನಗಳ ಮೊದಲು ಪ್ರತಿದಿನ 1 ಟೀ ಚಮಚ ಹುರಿದ ಎಳ್ಳನ್ನು ಸೇವಿಸುವುದರಿಂದ ಮುಟ್ಟಿನ ಸಮಯದಲ್ಲಿ ಬರುವ ನೋವು ಮತ್ತು ತಲೆ ತಿರುಗುವಿಕೆ ಕೂಡ ಕಡಿಮೆಯಾಗುತ್ತದೆ.
ಇದನ್ನೂ ಓದಿ: ಮುಟ್ಟಿನ ಸಮಯದಲ್ಲಿ ಬರುವ ವಾಕರಿಕೆ, ಹೊಟ್ಟೆ ನೋವಿನ ಸಮಸ್ಯೆಯಿಂದ ಮುಕ್ತಿ ಪಡೆಯಲು ಓಂ ಕಾಳನ್ನು ಈ ರೀತಿ ಬಳಸಿ
ತೆಂಗಿನಕಾಯಿ: ಸಾಮಾನ್ಯವಾಗಿ ಇದು ತಂಪು ಮತ್ತು ಪೋಷಣೆಯನ್ನು ನೀಡುತ್ತದೆ. ತೆಂಗಿನಕಾಯಿ ದೇಹವನ್ನು ತಂಪಾಗಿಸುತ್ತದೆ ಮತ್ತು ದೌರ್ಬಲ್ಯವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ. ನೀವು ಪ್ರತಿದಿನ ತಾಜಾ ತೆಂಗಿನಕಾಯಿ, ತೆಂಗಿನ ನೀರು ಅಥವಾ ಒಂದು ಸಣ್ಣ ತುಂಡು ತೆಂಗಿನಕಾಯಿಯನ್ನು ಕೂಡ ತಿನ್ನಬಹುದು. ಇದು ಥೈರಾಯ್ಡ್ ಮತ್ತು ಮೂಳೆಗಳಿಗೂ ಒಳ್ಳೆಯದು.
ಕಪ್ಪು ಒಣದ್ರಾಕ್ಷಿ: ಇದು ರಕ್ತದ ಗುಣಮಟ್ಟವನ್ನು ಸುಧಾರಿಸುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 10 ರಿಂದ 12 ನೆನೆಸಿದ ಕಪ್ಪು ಒಣದ್ರಾಕ್ಷಿಗಳನ್ನು ತಿನ್ನುವುದು ತುಂಬಾ ಪ್ರಯೋಜನಕಾರಿ. ಅಷ್ಟೇ ಅಲ್ಲ, ಕಬ್ಬಿಣದ ಮಟ್ಟವನ್ನು ಹೆಚ್ಚಿಸುತ್ತದೆ, ದೇಹವನ್ನು ರಿಫ್ರೆಶ್ ಮಾಡುತ್ತದೆ ಮತ್ತು ಚರ್ಮವನ್ನು ಕಾಂತಿಯುತವಾಗಿ ಕಾಣುವಂತೆ ಮಾಡುತ್ತದೆ.
ಇವುಗಳ ಜೊತೆಗೆ ಶುಂಠಿ, ಬಾಳೆಹಣ್ಣು, ಹಸಿರು ತರಕಾರಿಗಳು, ಮೊಸರು, ಡಾರ್ಕ್ ಚಾಕೊಲೇಟ್ ಮತ್ತು ಸೀಡ್ಸ್ ಗಳ ಸೇವನೆಯೂ ಕೂಡ ದೇಹಕ್ಕೆ ಪೋಷಣೆಯನ್ನು ನೀಡುತ್ತದೆ. ಮಾತ್ರವಲ್ಲ, ಮುಟ್ಟಿನ ನೋವು ಮತ್ತು ಅಸ್ವಸ್ಥತೆಯಿಂದ ಗಮನಾರ್ಹವಾದ ಪರಿಹಾರ ನೀಡುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ