
ಚಳಿಗಾಲದಲ್ಲಿ ಕೆಮ್ಮು, ಗಂಟಲು ಕೆರತ ಮತ್ತು ಕಫದ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಹವಾಮಾನದಲ್ಲಿನ ಬದಲಾವಣೆ, ವೈರಸ್ ಸೋಂಕುಗಳು ಹಾಗೂ ಒಣ ಗಾಳಿಯಿಂದ ಗಂಟಲು ಕಿರಿಕಿರಿ ಉಂಟಾಗಬಹುದು. ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಹಲವರು ಈ ಸಮಸ್ಯೆಯಿಂದ ಬಳಲುತ್ತಾರೆ. ಇಂತಹ ಸಂದರ್ಭಗಳಲ್ಲಿ ಕೆಲವು ಸರಳ ಮನೆಮದ್ದುಗಳು ಗಂಟಲಿನ ಕಿರಿಕಿರಿ ಮತ್ತು ಕೆಮ್ಮಿನಿಂದ ತಾತ್ಕಾಲಿಕ ಉಪಶಮನ ನೀಡಬಹುದು. ಹಾಗಾದರೆ ಅವು ಯಾವವು ಮತ್ತು ಅದನ್ನು ಬಳಸುವುದು ಹೇಗೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಸಾಮಾನ್ಯವಾಗಿ ಕೆಮ್ಮನ್ನು ಒಣ ಕೆಮ್ಮು ಮತ್ತು ಕಫದ ಕೆಮ್ಮು ಎಂದು ಎರಡು ವಿಧಗಳಾಗಿ ವಿಂಗಡಿಸಲಾಗುತ್ತದೆ. ಒಣ ಕೆಮ್ಮಿನಲ್ಲಿ ಗಂಟಲಿನಲ್ಲಿ ತುರಿಕೆ ಅಥವಾ ಕಿರಿಕಿರಿ ಕಾಣಿಸಿಕೊಳ್ಳಬಹುದು. ಕಫದ ಕೆಮ್ಮಿನಲ್ಲಿ ಶ್ವಾಸನಾಳದಲ್ಲಿ ಸಂಗ್ರಹವಾಗಿರುವ ಕಫ ಅಥವಾ ಸಿಂಬಳ ಹೊರಬರಲು ಕೆಮ್ಮು ಉಂಟಾಗುತ್ತದೆ. ಹಾಗಾಗಿ ಕೆಮ್ಮಿನ ಕಾರಣವನ್ನು ತಿಳಿದುಕೊಂಡು ಸೂಕ್ತ ಆರೈಕೆ ಮಾಡುವುದು ಬಹಳ ಮುಖ್ಯ.
ಸಾಂಪ್ರದಾಯಿಕವಾಗಿ ಅಳಲೆಕಾಯಿ, ಸಂಸ್ಕೃತದಲ್ಲಿ ಇದನ್ನು ಹರೀತಕಿ (Haritaki) ಎಂದು ಕರೆಯಲಾಗುತ್ತದೆ. ಇದನ್ನು ಗಂಟಲು ಸಂಬಂಧಿತ ಸಮಸ್ಯೆಗಳಿಗೆ ಮನೆಮದ್ದಾಗಿ ಬಳಸಲಾಗುತ್ತದೆ. ಅಳಲೆಕಾಯಿಯ ಸಣ್ಣ ತುಂಡನ್ನು ಜಗಿಯುವ ಪದ್ಧತಿಯೂ ಇದೆ. ಆದರೆ ಇದು ಕೆಮ್ಮನ್ನು ಗುಣಪಡಿಸುತ್ತದೆ ಎಂಬುದಕ್ಕೆ ಸಾಕಷ್ಟು ವೈಜ್ಞಾನಿಕ ಸಾಕ್ಷ್ಯಗಳಿಲ್ಲ. ಇದನ್ನು ಬಳಸುವ ಮೊದಲು ಅದರ ಸುರಕ್ಷತೆಯ ಬಗ್ಗೆ ತಿಳಿದುಕೊಳ್ಳುವುದು ಉತ್ತಮ.
ಇದನ್ನೂ ಓದಿ: ಬಾಯಿ ಹುಣ್ಣು ಸಮಸ್ಯೆಗೆ ಜೇನುತುಪ್ಪ, ತುಪ್ಪ, ಅರಿಶಿನ ಬಳಸಬಹುದೇ? ಈ ಮನೆಮದ್ದುಗಳ ಬಗ್ಗೆ ತಿಳಿಯಿರಿ
ಲವಂಗವನ್ನು ಹಿಂದಿನಿಂದಲೂ ಗಂಟಲಿನ ಕಿರಿಕಿರಿ ನಿವಾರಣೆಗೆ ಬಳಸಲಾಗುತ್ತದೆ. ಲವಂಗದಲ್ಲಿರುವ ಕೆಲವು ಸಂಯುಕ್ತಗಳು ಉರಿಯೂತದ ಗುಣಗಳನ್ನು ಹೊಂದಿದ್ದರೂ, ಲವಂಗವನ್ನು ಜಗಿಯುವುದರಿಂದ ಕೆಮ್ಮು ಸಂಪೂರ್ಣ ಗುಣವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅತಿಯಾಗಿ ಲವಂಗ ಸೇವಿಸುವುದನ್ನು ತಪ್ಪಿಸಬೇಕು.
ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸುವುದರಿಂದ ಗಂಟಲಿನ ನೋವು ಮತ್ತು ಕಿರಿಕಿರಿಗೆ ತಾತ್ಕಾಲಿಕ ಉಪಶಮನ ದೊರೆಯಬಹುದು. ಈ ವಿಧಾನವನ್ನು ವಯಸ್ಕರು ಮತ್ತು ಸುರಕ್ಷಿತವಾಗಿ ಮುಕ್ಕಳಿಸಿ ಉಗುಳಬಲ್ಲ ಮಕ್ಕಳು ಮಾತ್ರ ಅನುಸರಿಸಬೇಕು.
ಸಾಮಾನ್ಯವಾಗಿ ತುಳಸಿ ಮತ್ತು ಜೇನುತುಪ್ಪವನ್ನು ಸಾಂಪ್ರದಾಯಿಕವಾಗಿ ಕೆಮ್ಮಿನ ಆರೈಕೆಗೆ ಬಳಸಲಾಗುತ್ತದೆ. ಜೇನುತುಪ್ಪ ಗಂಟಲಿನ ಕಿರಿಕಿರಿಯನ್ನು ಕಡಿಮೆ ಮಾಡಲು ಮತ್ತು ಕೆಮ್ಮಿನ ತೀವ್ರತೆಯನ್ನು ತಾತ್ಕಾಲಿಕವಾಗಿ ತಗ್ಗಿಸಲು ನೆರವಾಗಬಹುದು. ವೀಳ್ಯದೆಲೆಗೆ ಜೇನುತುಪ್ಪ ಹಚ್ಚಿ ಸೇವಿಸುವ ಪದ್ಧತಿಯೂ ಇದೆ, ಆದರೆ ಈ ಸಂಯೋಜನೆಯ ಪರಿಣಾಮ ಎಲ್ಲರಲ್ಲಿಯೂ ಒಂದೇ ರೀತಿಯಾಗಿರುವುದಿಲ್ಲ.
ಸೂಚನೆ: ಒಂದು ವರ್ಷದೊಳಗಿನ ಮಕ್ಕಳಿಗೆ ಜೇನುತುಪ್ಪ ನೀಡಬಾರದು. ಕೆಮ್ಮು ದೀರ್ಘಕಾಲ ಮುಂದುವರಿದರೆ, ಉಸಿರಾಟದ ತೊಂದರೆ, ಎದೆನೋವು, ಹೆಚ್ಚಿನ ಜ್ವರ ಅಥವಾ ರಕ್ತದೊಂದಿಗೆ ಕೆಮ್ಮು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ