
ಪ್ರಸ್ತುತ ದಿನಗಗಳಲ್ಲಿ ಹೆಚ್ಚಿನವರು ಆಯಾಸದಿಂದ (Fatigue) ಬಳಲುತ್ತಿದ್ದಾರೆ. ಸಣ್ಣ ಕೆಲಸ ಮಾಡಿ ಮುಗಿಸುವುದರೊಳಗೆ ಆಲಸ್ಯ ಅನುಭವಕ್ಕೆ ಬರುವಂತಾಗುತ್ತದೆ. ನಾಲ್ಕು ಹೆಜ್ಜೆ ನಡೆದರೆ ಸಾಕು ಸುಸ್ತಾಗುತ್ತೆ. ಸಾಮಾನ್ಯವಾಗಿ ಸರಿಯಾಗಿ ಊಟ ಮಾಡದಿದ್ದಾಗ, ಜ್ವರ ಅಥವಾ ಶೀತದಂತಹ ಕಾರಣಗಳಿಂದ ದಣಿವಾಗುವುದು ಸಾಮಾನ್ಯ. ಆದರೆ ಯಾವುದೇ ಕಾರಣವಿಲ್ಲದೆ ಸುಸ್ತಾಗುತ್ತಿದ್ದರೆ ಅಥವಾ ದೇಹ ದಣಿದ ಅನುಭವವಾಗುತ್ತಿದ್ದಾರೆ, ಆಲಸ್ಯ ಹೆಚ್ಚಾಗಿದ್ದರೆ ಅದು ನಿಮ್ಮ ದೇಹಕ್ಕೆ ಒಳ್ಳೆಯದಲ್ಲ. ಈ ರೀತಿಯ ಲಕ್ಷಣ ಕಂಡುಬಂದಾಗ ಬಹಳ ಜಾಗರೂಕರಾಗಿರಬೇಕು ಮಾತ್ರವಲ್ಲ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ವೈದ್ಯರ ಸಲಹೆ ತೆಗೆದುಕೊಳ್ಳಬೇಕು. ನಿಮಗೂ ಆಗಾಗ ಈ ತರನಾದ ಸಮಸ್ಯೆಗಳು ಕಂಡುಬರುತ್ತಿದ್ದರೆ ಕೆಲವು ಆರೋಗ್ಯ (Health) ಸಮಸ್ಯೆಗಳನ್ನು ಎದುರಿಸುತ್ತಿರಬಹುದು. ಹಾಗಾದರೆ ಯಾವ ರೀತಿಯ ಲಕ್ಷಣ ಒಳ್ಳೆಯದಲ್ಲ? ಈ ರೀತಿಯಾದಾಗ ಏನು ಮಾಡಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಯಾವುದೇ ರೀತಿಯ ಕೆಲಸ ಮಾಡದಿದ್ದರೂ ದೇಹ ದಣಿದ ಅನುಭವವಾಗುತ್ತಿದ್ದರೆ ನೀವು ರಕ್ತಹೀನತೆಯಿಂದ ಬಳಲುತ್ತಿದ್ದೀರಿ ಎಂದರ್ಥ. ರಕ್ತದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೆಂಪು ರಕ್ತ ಕಣಗಳು ಇಲ್ಲದಿದ್ದಾಗ, ದೇಹವು ಬೇಗನೆ ದಣಿಯುತ್ತದೆ. ಏಕೆಂದರೆ ಶ್ವಾಸಕೋಶದಿಂದ ದೇಹದ ಎಲ್ಲಾ ಭಾಗಗಳಿಗೆ ಆಮ್ಲಜನಕವನ್ನು ಸಾಗಿಸಲು ಕೆಂಪು ರಕ್ತ ಕಣಗಳು ಅವಶ್ಯಕವಾಗಿರುತ್ತದೆ ಇದು ಇಲ್ಲದಿದ್ದಾಗ ಬೇಗನೆ ಆಯಾಸ ಉಂಟಾಗುತ್ತದೆ.
ತಜ್ಞರು ಹೇಳುವಂತೆ ಹೈಪೋಥೈರಾಯ್ಡಿಸಮ್ ಕೂಡ ಬೇಗನೆ ಸುಸ್ತಾಗಲು ಒಂದು ಕಾರಣವಾಗಿರುತ್ತದೆ. ದೇಹದಲ್ಲಿ ಥೈರಾಯ್ಡ್ ಹಾರ್ಮೋನುಗಳು ಕಡಿಮೆಯಾದಾಗ, ಆಯಾಸ ಪ್ರಾರಂಭವಾಗುತ್ತದೆ. ಹಾರ್ಮೋನುಗಳ ಕಡಿಮೆ ಬಿಡುಗಡೆಯಾಗುವುದರಿಂದ, ಚಯಾಪಚಯ ಕ್ರಿಯೆ ನಿಧಾನವಾಗುತ್ತದೆ, ಇದನ್ನೇ ಹೈಪೋಥೈರಾಯ್ಡಿಸಮ್ ಎಂದು ಕರೆಯಲಾಗುತ್ತದೆ. ಪರಿಣಾಮವಾಗಿ, ದೇಹದ ಸ್ನಾಯುಗಳಲ್ಲಿ ಆಯಾಸ ಮತ್ತು ದೌರ್ಬಲ್ಯದಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಮಧುಮೇಹದಿಂದ ಬಳಲುತ್ತಿರುವವರು ಬೇಗನೆ ಸುಸ್ತಾಗುವ ಸಾಧ್ಯತೆ ಇರುತ್ತದೆ. ಟೈಪ್ 2 ಮಧುಮೇಹ ಹೊಂದಿರುವವರು ತಮ್ಮ ದೇಹದಲ್ಲಿನ ಗ್ಲೂಕೋಸ್ ಅನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ, ಇದು ಆಯಾಸಕ್ಕೆ ಕಾರಣವಾಗುತ್ತದೆ.
ಬೇಗ ಸುಸ್ತಾಗಲು ಇನ್ನೊಂದು ಕಾರಣ ಖಿನ್ನತೆ. ಇತ್ತೀಚೆಗೆ ಈ ಸಮಸ್ಯೆ ಗಮನಾರ್ಹವಾಗಿ ಹೆಚ್ಚುತ್ತಿದೆ. ದೈಹಿಕ ಪರಿಶ್ರಮಕ್ಕಿಂತ ಹೆಚ್ಚಾಗಿ ಮಾನಸಿಕ ಒತ್ತಡದಿಂದ ಸುಸ್ತಾಗುವವರ ಸಂಖ್ಯೆ ಹೆಚ್ಚುತ್ತಿದೆ. ಒತ್ತಡದಿಂದಾಗಿ ಜನರಿಗೆ ದಣಿದ ಅನುಭವವಾಗುತ್ತದೆ.
ದೇಹವು ಬೇಗನೆ ದಣಿಯಲು ಮತ್ತೊಂದು ಪ್ರಮುಖ ಕಾರಣವೆಂದರೆ ಸಂಧಿವಾತ. ಇದು ದೇಹದ ಆರೋಗ್ಯಕರ ಕೋಶಗಳ ಮೇಲೆ ದಾಳಿ ಮಾಡುತ್ತದೆ ಮತ್ತು ಮೂಳೆಗಳ ಮೇಲೆ ಮಾತ್ರವಲ್ಲದೆ ಜೀವಕೋಶಗಳ ಮೇಲೂ ಪರಿಣಾಮ ಬೀರುವುದರಿಂದ, ದೇಹದಲ್ಲಿ ತ್ವರಿತ ಆಯಾಸದ ಅನುಭವಾಗುತ್ತದೆ.
ಇದನ್ನೂ ಓದಿ: ತುಂಬಾ ಆಯಾಸ, ನಿಶ್ಯಕ್ತಿಯಾಗಿ ದೇಹದಲ್ಲಿ ಹುಮ್ಮಸ್ಸು ಇಲ್ಲದೆ ಇದ್ದರೆ ಈ ಸಲಹೆ ಪಾಲಿಸಿ
ಮನುಷ್ಯನಿಗೆ ನಿದ್ರೆ ಸರಿಯಾಗಿ ಆಗದಿದ್ದರೂ ಕೂಡ ಆರೋಗ್ಯ ಚೆನ್ನಾಗಿರುವುದಿಲ್ಲ. ಹಾಗಾಗಿ ಈ ನಿದ್ರಾಹೀನತೆಯು ಆಯಾಸಕ್ಕೆ ಪ್ರಮುಖ ಕಾರಣ ಎಂದು ತಜ್ಞರು ಹೇಳುತ್ತಾರೆ. ರಾತ್ರಿ ಸರಿಯಾಗಿ ನಿದ್ರೆ ಮಾಡದಿರುವುದು ದಿನವಿಡೀ ನಿಮ್ಮ ಮೇಲೆ ಪರಿಣಾಮ ಬೀರುತ್ತದೆ, ಇದರಿಂದಾಗಿ ನೀವು ಯಾವಾಗಲೂ ದಣಿದಂತೆ ಕಾಣುತ್ತೀರಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ