
ನಡಿಗೆ (Walking) ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅದರಲ್ಲಿಯೂ ಊಟ ಮಾಡಿದ ನಂತರ 15 ನಿಮಿಷ ನಡೆದಾಡುವುದು (Post‑Meal Walk) ಇನ್ನೂ ಉತ್ತಮ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಈ ಅಭ್ಯಾಸದಿಂದ ಅನೇಕ ರೀತಿಯ ಸಮಸ್ಯೆಗಳನ್ನು ತಡೆಗಟ್ಟಬಹುದು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ನಿಯಮಿತವಾಗಿ ಇದನ್ನು ಮಾಡುವುದರಿಂದ ರಕ್ತ ಪರಿಚಲನೆ ಮತ್ತು ಜೀರ್ಣಾಂಗ ವ್ಯವಸ್ಥೆಯಲ್ಲಿ ಕಾಲಾನಂತರದಲ್ಲಿ ಗಮನಾರ್ಹ ಬದಲಾವಣೆಗಳು ಕಂಡುಬಂದಿವೆ ಎಂದು ಸಂಶೋಧಕರು ಹೇಳುತ್ತಾರೆ. ಇದೊಂದು ಸಣ್ಣ ಅಭ್ಯಾಸವಾದರೂ ಕೂಡ ಅನೇಕ ಪ್ರಯೋಜನಗಳನ್ನು ಹೊಂದಿದೆ. ಹಾಗಾದರೆ ಇದರಿಂದ ಯಾವ ರೀತಿಯ ಲಾಭಗಳಿವೆ, ಯಾಕೆ ಒಳ್ಳೆಯದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಊಟದ ನಂತರ ನಡಿಗೆ ಅಥವಾ ವಾಕಿಂಗ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿರಿಸುತ್ತದೆ. ನಡೆಯುವುದರಿಂದ ಸ್ನಾಯುಗಳು ಕಾರ್ಯನಿರತವಾಗುತ್ತವೆ ಮತ್ತು ರಕ್ತದಲ್ಲಿನ ಸಕ್ಕರೆಯ ಏರಿಕೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಮಧುಮೇಹ ಇರುವವರಿಗೆ ಅಥವಾ ಇನ್ಸುಲಿನ್ ಪ್ರತಿರೋಧದಿಂದ ಬಳಲುತ್ತಿರುವವರಿಗೆ ಇದು ಪ್ರಯೋಜನಕಾರಿಯಾಗಿದೆ. ಅಷ್ಟೇ ಅಲ್ಲ ಜೀರ್ಣಕ್ರಿಯೆಯ ಸಮಸ್ಯೆಯನ್ನು ಕೂಡ ನಿವಾರಿಸುತ್ತದೆ, ಊತ ಮತ್ತು ಹೊಟ್ಟೆಯ ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ: ಗಂಟೆಗಟ್ಟಲೆ ಕುಳಿತು ಕೆಲಸ ಮಾಡಿ ಮತ್ತೆ ವಾಕ್ ಮಾಡಿದ್ರೆ ಪ್ರಯೋಜನವಿಲ್ಲ ಎನ್ನುತ್ತಾರೆ ಡಾ. ಸುಮಿತ್!
ನಡಿಗೆಯು ಹೃದಯದ ಆರೋಗ್ಯವನ್ನು ಸುಧಾರಿಸಿ ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಬರುವ ಅಪಾಯವನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲ, ಸೌಮ್ಯವಾದ ನಡಿಗೆ ರಾತ್ರಿ ಒಳ್ಳೆ ನಿದ್ರೆ ಮಾಡಲು ಅನುವುಮಾಡಿಕೊಡುತ್ತದೆ. ಜೊತೆಗೆ ಒತ್ತಡವನ್ನು ಕಡಿಮೆ ಮಾಡುತ್ತದೆ ಇದರಿಂದ ಕಾರ್ಟಿಸೋಲ್ ಮಟ್ಟ ಕಡಿಮೆಯಾಗಿ, ಮನಸ್ಸು ಶಾಂತವಾಗಿರುತ್ತದೆ. ದೇಹಕ್ಕೆ ವಿಶ್ರಾಂತಿ ನೀಡಲು ಇದೊಂದು ನೈಸರ್ಗಿಕ ಮಾರ್ಗವಾಗಿದ್ದು ಊಟ ಮಾಡಿದ ನಂತರ ನಡೆಯುವುದರಿಂದ ಹೆಚ್ಚುವರಿ ಕ್ಯಾಲೊರಿಯೂ ಕಡಿಮೆಯಾಗುತ್ತದೆ. ಇದು ದೇಹದಲ್ಲಿನ ಕೊಬ್ಬಿನ ಶೇಖರಣೆಯನ್ನು ಕಡಿಮೆ ಮಾಡಿ ಕ್ರಮೇಣ, ತೂಕ ಇಳಿಸಿಕೊಳ್ಳಲು ಕೂಡ ತುಂಬಾ ಸಹಕಾರಿಯಾಗಿದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ