Lower Stomach Pain
ಮಹಿಳೆಯರಲ್ಲಿ ಕೆಲವೊಮ್ಮೆ ಕೆಳ ಹೊಟ್ಟೆ ಭಾಗದಲ್ಲಿ ನೋವು (Lower Stomach Pain) ಕಾಣಿಸಿಕೊಳ್ಳುವುದು ಸಾಮಾನ್ಯ. ವಿಶೇಷವಾಗಿ ಮಾಸಿಕ ಚಕ್ರದ (Periods) ಸಮಯದಲ್ಲಿ ಈ ನೋವು ಕಾಣಿಸಿಕೊಳ್ಳಬಹುದು. ಆದರೆ ಪೀರಿಯಡ್ಸ್ ಇಲ್ಲದ ಸಮಯದಲ್ಲೂ ನಿರಂತರವಾಗಿ ನೋವು ಕಾಣಿಸಿದರೆ ಅದನ್ನು ಲಘುವಾಗಿ ತೆಗೆದುಕೊಳ್ಳುವುದು ಅಪಾಯಕಾರಿ ಎಂದು ತಜ್ಞರು ಎಚ್ಚರಿಸುತ್ತಾರೆ. ಹೌದು ಹೊಟ್ಟೆಯ ಕೆಳಭಾಗದಲ್ಲಿ ನೋವು ಕಂಡುಬರುವುದು ಗಂಭೀರ ಕಾಯಿಲೆ ಬರುವ ಲಕ್ಷಣವಾಗಿರಬಹುದು. ಹಾಗಾಗಿ ಬಹಳ ಎಚ್ಚರಿಕೆ ವಹಿಸುವುದು ಅನಿವಾರ್ಯವಾಗಿದೆ. ಹಾಗಾದರೆ ಈ ರೀತಿಯಾಗುವುದು ಯಾವ ಕಾಯಿಲೆ ಬರುವ ಮುನ್ಸೂಚನೆ, ಈ ಆರೋಗ್ಯ ಸಮಸ್ಯೆ ತಡೆಯಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಯಾವ ಕಾಯಿಲೆಗಳ ಸೂಚನೆ ಇರಬಹುದು?
- ತಜ್ಞರ ಪ್ರಕಾರ, ಕೆಳ ಹೊಟ್ಟೆ ನೋವು ಹಲವು ಆರೋಗ್ಯ ಸಮಸ್ಯೆಗಳ ಸೂಚನೆಯಾಗಿರಬಹುದು. ಪ್ರಮುಖವಾಗಿ ಪೆಲ್ವಿಕ್ ಇನ್ಫ್ಲಮೇಟರಿ ಡಿಸೀಸ್ (PID) ಎನ್ನುವ ಸೋಂಕಿನಿಂದ ಕೆಳ ಹೊಟ್ಟೆ ಮತ್ತು ನಾಭಿಯ ಸುತ್ತ ನೋವು ಕಾಣಿಸಬಹುದು. ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಈ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
- ಇದೇ ರೀತಿ, ಒವೆರಿಯನ್ ಸಿಸ್ಟ್ ಸಮಸ್ಯೆಯೂ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ವಿಶೇಷವಾಗಿ PCOD ಮತ್ತು PCOS ಇರುವವರಲ್ಲಿ ಈ ಸಮಸ್ಯೆ ಸಾಮಾನ್ಯ. ಇದರ ಪರಿಣಾಮವಾಗಿ ಕೆಳ ಹೊಟ್ಟೆ ಭಾಗದಲ್ಲಿ ನಿರಂತರ ನೋವು ಕಾಣಿಸಬಹುದು. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ ಇದು ಗಂಭೀರವಾಗಬಹುದು.
- ಮತ್ತೊಂದು ಗಂಭೀರ ಸಮಸ್ಯೆ ಎಂಡೋಮೆಟ್ರಿಯೊಸಿಸ್. ಈ ಸ್ಥಿತಿಯಲ್ಲಿ ಗರ್ಭಾಶಯದ ಒಳಗಿನ ಪದರ ಹೊರಭಾಗದಲ್ಲೂ ಬೆಳೆಯಲು ಪ್ರಾರಂಭಿಸುತ್ತದೆ. ಇದರಿಂದ ಪೀರಿಯಡ್ಸ್ ಸಮಯದಲ್ಲಿ ತೀವ್ರ ನೋವು ಮತ್ತು ಕೆಳ ಹೊಟ್ಟೆಯಲ್ಲಿ ನಿರಂತರ ಅಸ್ವಸ್ಥತೆ ಉಂಟಾಗಬಹುದು. ಚಿಕಿತ್ಸೆ ವಿಳಂಬವಾದರೆ ಸಂತಾನಹೀನತೆಯ ಅಪಾಯವೂ ಹೆಚ್ಚುತ್ತದೆ.
- ಉರಿಯೂತ, ಪದೇಪದೇ ಮೂತ್ರ ವಿಸರ್ಜನೆ ಮತ್ತು ಕೆಳ ಹೊಟ್ಟೆ ನೋವು ಯೂರಿನ್ ಇನ್ಫೆಕ್ಷನ್ ಲಕ್ಷಣಗಳಾಗಿರಬಹುದು. ವೈಯಕ್ತಿಕ ಸ್ವಚ್ಛತೆ ಕೊರತೆಯಿಂದ ಈ ಸಮಸ್ಯೆ ಉಂಟಾಗುತ್ತದೆ.
ಇದನ್ನೂ ಓದಿ: ಋತುಚಕ್ರದ ಸಮಯದಲ್ಲಿ ಈ ಆಹಾರಗಳನ್ನು ಕಡ್ಡಾಯವಾಗಿ ಸೇವಿಸಬೇಕು!
ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?
ಕೆಳ ಹೊಟ್ಟೆ ನೋವು ಹಲವು ದಿನಗಳವರೆಗೆ ಮುಂದುವರಿದರೆ, ನೋವು ತೀವ್ರವಾಗಿದ್ರೆ ಅಥವಾ ಜೊತೆಗೆ ಬೇರೆ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ. ಸ್ವಯಂ ಚಿಕಿತ್ಸೆ ಮಾಡುವುದನ್ನು ತಪ್ಪಿಸಬೇಕು.
ತಡೆಗಟ್ಟುವ ಕ್ರಮಗಳು:
- ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಿ
- ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ
- ಯಾವುದೇ ನೋವನ್ನು ನಿರ್ಲಕ್ಷಿಸಬೇಡಿ
ತಜ್ಞರ ಅಭಿಪ್ರಾಯದಂತೆ, ಸಮಯಕ್ಕೆ ಸರಿಯಾದ ಪರೀಕ್ಷೆ ಮತ್ತು ಚಿಕಿತ್ಸೆ ಪಡೆಯುವುದರಿಂದ ಗಂಭೀರ ಸಮಸ್ಯೆಗಳನ್ನು ತಪ್ಪಿಸಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ