20, 40, 60 ವರ್ಷಗಳಲ್ಲಿ ಪುರುಷರ ಆಹಾರ ಹೇಗಿರಬೇಕು? ವಯಸ್ಸಿಗೆ ತಕ್ಕಂತೆ ತಿನ್ನುವ ಕ್ರಮ ತಿಳಿಯಿರಿ

ಪುರುಷರ ವಯಸ್ಸು ಹೆಚ್ಚಾದಂತೆ ದೇಹದ ಪೌಷ್ಟಿಕಾಂಶಗಳ ಅಗತ್ಯವೂ ಬದಲಾಗುತ್ತದೆ. 20 ಮತ್ತು 30ರ ವಯಸ್ಸಿನಲ್ಲಿ ಪ್ರೋಟೀನ್, ಹಣ್ಣು, ತರಕಾರಿಗಳಿಗೆ ಆದ್ಯತೆ ನೀಡಬೇಕು. 40ರ ನಂತರ ಹೃದಯದ ಆರೋಗ್ಯದ ಬಗ್ಗೆ ಗಮನ ಹರಿಸಬೇಕು. 50 ಮತ್ತು 60ರ ವಯಸ್ಸಿನಲ್ಲಿ ಸ್ನಾಯುಗಳ ಬಲ ಕಾಪಾಡಲು ಪ್ರೋಟೀನ್ ಸಮೃದ್ಧ ಆಹಾರ, ಆರೋಗ್ಯಕರ ಕೊಬ್ಬು, ವಿಟಮಿನ್ ಹಾಗೂ ಖನಿಜಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಬಹಳ ಮುಖ್ಯ.

20, 40, 60 ವರ್ಷಗಳಲ್ಲಿ ಪುರುಷರ ಆಹಾರ ಹೇಗಿರಬೇಕು? ವಯಸ್ಸಿಗೆ ತಕ್ಕಂತೆ ತಿನ್ನುವ ಕ್ರಮ ತಿಳಿಯಿರಿ
Age Wise Diet For Men
Image Credit source: Getty Images

Updated on: Nov 19, 2026 | 8:43 PM

ವಯಸ್ಸು ಹೆಚ್ಚಾದಂತೆ ದೇಹದ ಕಾರ್ಯನಿರ್ವಹಣೆ, ಚಯಾಪಚಯ ಕ್ರಿಯೆ, ಸ್ನಾಯುಗಳ ಬಲ ಮತ್ತು ಹಾರ್ಮೋನುಗಳಲ್ಲಿ ಹಲವು ಬದಲಾವಣೆಗಳು ಕಂಡುಬರುತ್ತವೆ. ಹೀಗಾಗಿ 20ನೇ ವಯಸ್ಸಿನಲ್ಲಿ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು ಮತ್ತು 40, 50 ಅಥವಾ 60ನೇ ವಯಸ್ಸಿನಲ್ಲಿ ಬೇಕಾಗುವ ಪೋಷಕಾಂಶಗಳ ಪ್ರಮಾಣ ಒಂದೇ ಆಗಿರುವುದಿಲ್ಲ. ಪುರುಷರು ವಯಸ್ಸಿಗೆ ತಕ್ಕಂತೆ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಂಡರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ. ಹಾಗಾದರೆ ಯಾವ ವಯಸ್ಸಿನಲ್ಲಿ ಯಾವ ರೀತಿಯ ಆಹಾರ ಸೇವಿಸಬೇಕು ಮತ್ತು ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

20 ಮತ್ತು 30ರ ವಯಸ್ಸಿನಲ್ಲಿ ಆಹಾರ ಹೇಗಿರಬೇಕು?

ಈ ವಯಸ್ಸಿನಲ್ಲಿ ಉದ್ಯೋಗ, ಓದು, ಸ್ನೇಹಿತರೊಂದಿಗೆ ಹೊರಗೆ ಊಟ, ರಾತ್ರಿ ತಡವಾಗಿ ಮಲಗುವ ಅಭ್ಯಾಸಗಳಿಂದ ಆಹಾರ ಕ್ರಮದಲ್ಲಿ ವ್ಯತ್ಯಾಸವಾಗಬಹುದು. ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವ ಆಹಾರ ಸೇವಿಸುವುದು ಮುಖ್ಯ. ಹಣ್ಣುಗಳು, ತರಕಾರಿಗಳು, ಮೊಟ್ಟೆ, ಮೀನು, ಚಿಕನ್, ಹಾಲು, ಮೊಸರು, ಬೇಳೆ, ಕಡಲೆ, ರಾಜ್ಮಾ ಮತ್ತು ಇತರ ದ್ವಿದಳ ಧಾನ್ಯಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಿ. ಇವು ಪ್ರೋಟೀನ್, ವಿಟಮಿನ್ ಮತ್ತು ಖನಿಜಗಳನ್ನು ಒದಗಿಸುತ್ತವೆ. ಜೊತೆಗೆ ನಿಯಮಿತ ವ್ಯಾಯಾಮ ಮತ್ತು ಉತ್ತಮ ನಿದ್ರೆಯ ಅಭ್ಯಾಸ ಬೆಳೆಸಿಕೊಳ್ಳಿ.

Loading...

40ರ ವಯಸ್ಸಿನಲ್ಲಿ ಆಹಾರ ಹೇಗಿರಬೇಕು?

ಸಾಮಾನ್ಯವಾಗಿ 40 ವರ್ಷ ದಾಟಿದ ಬಳಿಕ ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟದ ಬಗ್ಗೆ ಹೆಚ್ಚಿನ ಗಮನ ನೀಡುವುದು ಅಗತ್ಯ. ಈ ವಯಸ್ಸಿನಲ್ಲಿ ಹೃದಯದ ಆರೋಗ್ಯ ಕಾಪಾಡುವ ಆಹಾರ ಪದ್ಧತಿಗೆ ಆದ್ಯತೆ ನೀಡಬೇಕು. ವಾಲ್‌ನಟ್ಸ್, ಬೀನ್ಸ್, ಜಾಮೂನು, ಹಸಿರು ಚಹಾ, ಬದನೆಕಾಯಿ, ಹಾಲು ಮತ್ತು ಡಾರ್ಕ್ ಚಾಕೊಲೇಟ್ ಮುಂತಾದವುಗಳನ್ನು ಮಿತವಾಗಿ ಸೇವಿಸಬಹುದು. ಆದರೆ ಡಾರ್ಕ್ ಚಾಕೊಲೇಟ್ ಆಯ್ಕೆ ಮಾಡುವಾಗ ಸಕ್ಕರೆ ಪ್ರಮಾಣ ಕಡಿಮೆ ಇರುವ ಉತ್ಪನ್ನಗಳಿಗೆ ಆದ್ಯತೆ ನೀಡಿ. ಉಪ್ಪು, ಸಕ್ಕರೆ ಮತ್ತು ಹೆಚ್ಚು ಕೊಬ್ಬಿನ ಆಹಾರಗಳ ಸೇವನೆಯನ್ನು ಕಡಿಮೆ ಮಾಡುವುದು ಉತ್ತಮ.

50ರ ನಂತರ ಸ್ನಾಯುಗಳ ಬಲಕ್ಕೆ ಒತ್ತು ನೀಡಿ

ಸಾಮಾನ್ಯವಾಗಿ 50 ವರ್ಷ ದಾಟಿದ ಬಳಿಕ ಸ್ನಾಯುಗಳ ಬಲ ಮತ್ತು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ವಯಸ್ಸಿನೊಂದಿಗೆ ಚಯಾಪಚಯ ಕ್ರಿಯೆ ನಿಧಾನವಾಗಬಹುದು ಮತ್ತು ದೈಹಿಕ ಚಟುವಟಿಕೆ ಕಡಿಮೆಯಾದರೆ ತೂಕ ಹೆಚ್ಚಾಗುವ ಸಾಧ್ಯತೆಯೂ ಇರುತ್ತದೆ.

ಈ ಹಂತದಲ್ಲಿ ದೇಹಕ್ಕೆ ಅಗತ್ಯವಿರುವಷ್ಟು ಪ್ರೋಟೀನ್, ವಿಟಮಿನ್ ಮತ್ತು ಖನಿಜಗಳನ್ನು ಒದಗಿಸುವ ಆಹಾರ ಸೇವಿಸಿ. ಸಾಲ್ಮನ್ ಸೇರಿದಂತೆ ಕೊಬ್ಬಿನಾಂಶವಿರುವ ಮೀನುಗಳು, ಮೊಟ್ಟೆ, ಬೇಳೆ, ಹಾಲು ಮತ್ತು ಬೀಜಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬಹುದು.

60 ವರ್ಷ ದಾಟಿದ ಪುರುಷರು ಏನನ್ನು ತಿನ್ನಬೇಕು?

ವಯಸ್ಸಾದಂತೆ ಸ್ನಾಯುಗಳ ಪ್ರಮಾಣ ಮತ್ತು ಬಲ ಕಡಿಮೆಯಾಗುವ ಸ್ಥಿತಿಯನ್ನು ಸಾರ್ಕೋಪೀನಿಯಾ ಎಂದು ಕರೆಯಲಾಗುತ್ತದೆ. ಇದು ನಡೆಯುವುದು, ಮೆಟ್ಟಿಲು ಹತ್ತುವುದು ಮತ್ತು ದೈನಂದಿನ ಕೆಲಸಗಳನ್ನು ಮಾಡುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ 60 ವರ್ಷ ದಾಟಿದ ಪುರುಷರು ಪ್ರೋಟೀನ್ ಸಮೃದ್ಧ ಆಹಾರ, ನಾರಿನಂಶವಿರುವ ಹಣ್ಣು ಮತ್ತು ತರಕಾರಿಗಳು ಹಾಗೂ ಆರೋಗ್ಯಕರ ಕೊಬ್ಬುಗಳನ್ನು ಸೇವಿಸಬೇಕು. ಹೆಚ್ಚು ಕೊಬ್ಬು, ಉಪ್ಪು ಮತ್ತು ಸಕ್ಕರೆಯಿರುವ ಆಹಾರಗಳನ್ನು ಕಡಿಮೆ ಮಾಡಿ, ವೈದ್ಯರ ಸಲಹೆಯಂತೆ ವ್ಯಾಯಾಮ ಮಾಡುವುದು ಉತ್ತಮ. ಒಟ್ಟಿನಲ್ಲಿ, ವಯಸ್ಸಿಗೆ ತಕ್ಕ ಆಹಾರ ಪದ್ಧತಿ, ನಿಯಮಿತ ದೈಹಿಕ ಚಟುವಟಿಕೆ ಮತ್ತು ಆರೋಗ್ಯ ತಪಾಸಣೆ ಪುರುಷರು ದೀರ್ಘಕಾಲ ಆರೋಗ್ಯವಾಗಿರಲು ನೆರವಾಗಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Loading...
Unable to load recommendations.
Follow Us